
ಕೆನಡಾ, ಜೂನ್ 19: ಕೆನಡಾ(Canada)ದಲ್ಲಿ ಖಲಿಸ್ತಾನಿ(Khalistani)ಗಳು ಭಾರತದ ವಿರುದ್ಧ ಹಿಂಸಾಚಾರವನ್ನು ಉತ್ತೇಜಿಸುತ್ತಿರುವುದು ಹೌದು ಎಂದು ಕೆನಡಾ ಮೊದಲ ಬಾರಿಗೆ ಒಪ್ಪಿಕೊಂಡಿದೆ. ಕೆನಡಾ ಗುಪ್ತಚರ ಸಂಸ್ಥೆಗಳು ನೀಡಿರುವ ಮಾಹಿತಿ ಪ್ರಕಾರ, ಖಲಿಸ್ತಾನಿಗಳು ಹಾಗೂ ಪಾಕಿಗಳು ಭಾರತದಲ್ಲಿ ಹಿಂಸಾಚಾರ ಸೃಷ್ಟಿಸಲು ಕೆನಡಾ ನೆಲವನ್ನು ಬಳಸಿವೆ ಎಂದು ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಜಿ7 ಶೃಂಗಸಭೆಯಲ್ಲಿ ಕೆನಡಾದ ನೂತನ ಪ್ರಧಾನಿ ಮಾರ್ಕ್ ಕಾರ್ನಿ ಅವರನ್ನು ಭೇಟಿಯಾದಾಗ ಈ ವಿಚಾರದ ಕುರಿತು ಚರ್ಚೆ ನಡೆಸಿದ್ದಾರೆ .ಈ ಸಭೆಯ ಮರುದಿನವೇ ಈ ಗುಪ್ತಚರ ಸಂಸ್ಥೆ ವರದಿ ಹೊರಬಂದಿದ್ದು, ಇದು ಭಾರತ ಮತ್ತು ಕೆನಡಾ ನಡುವಿನ ಉದ್ವಿಗ್ನ ಸಂಬಂಧಗಳನ್ನು ಮತ್ತೆ ಚರ್ಚೆಗೆ ತಂದಿದೆ. ಹಾಗೆಯೇ ಕೆನಡಾದಲ್ಲಿ ಪಾಕಿಸ್ತಾನದ ಹಸ್ತಕ್ಷೇಪದ ಕುರಿತು ಕೂಡ ಕೆಲವು ಮಾಹಿತಿ ನೀಡಿದ್ದಾರೆ.
ಪ್ರತ್ಯೇಕ ಖಲಿಸ್ತಾನಿ ರಾಷ್ಟ್ರ
ಗುಪ್ರಚರ ಸಂಸ್ಥೆಗಳ ವರದಿಯು ಸ್ಪಷ್ಟವಾಗಿ ಹೇಳುವಂತೆ, 1980 ರ ದಶಕದಿಂದಲೂ, ಕೆನಡಾದಲ್ಲಿರುವ ಖಾಲಿಸ್ತಾನಿ ಉಗ್ರಗಾಮಿಗಳು ಭಾರತದ ಪಂಜಾಬ್‌ನಲ್ಲಿ ಪ್ರತ್ಯೇಕ ಖಾಲಿಸ್ತಾನ ರಾಷ್ಟ್ರವನ್ನು ರಚಿಸಲು ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಈ ಉಗ್ರಗಾಮಿಗಳು ಕೆನಡಾವನ್ನು ತಮ್ಮ ಚಟುವಟಿಕೆಗಳ ನೆಲೆಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಅಲ್ಲಿಂದ ಅವರು ಹಿಂಸೆಯನ್ನು ಉತ್ತೇಜಿಸುತ್ತಾರೆ, ನಿಧಿ ಸಂಗ್ರಹಿಸುತ್ತಾರೆ ಮತ್ತು ದಾಳಿಗಳನ್ನು ಯೋಜಿಸುತ್ತಾರೆ. 2024 ರಲ್ಲಿ ಕೆನಡಾದಲ್ಲಿ ಅಂತಹ ಯಾವುದೇ ಹಿಂಸಾತ್ಮಕ ಘಟನೆ ನಡೆದಿಲ್ಲವಾದರೂ, ಈ ಉಗ್ರಗಾಮಿಗಳ ಚಟುವಟಿಕೆಗಳು ಕೆನಡಾದ ರಾಷ್ಟ್ರೀಯ ಭದ್ರತೆ ಮತ್ತು ಭಾರತದ ಹಿತಾಸಕ್ತಿಗಳಿಗೆ ಬೆದರಿಕೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಖಲಿಸ್ತಾನಿಗಳಿಗೆ ಬೆಂಬಲ ನೀಡಿದವರು ಉಗ್ರಗಾಮಿಗಳಲ್ಲ
ಖಲಿಸ್ತಾನವನ್ನು ಶಾಂತಿಯುತವಾಗಿ ಬೆಂಬಲಿಸುವ ಕೆನಡಾದ ನಾಗರಿಕರನ್ನು ಉಗ್ರಗಾಮಿಗಳೆಂದು ಪರಿಗಣಿಸಲಾಗುವುದಿಲ್ಲ ಎಂದು ವರದಿ ಹೇಳಿದೆ. ಆದರೆ ಹಿಂಸಾಚಾರವನ್ನು ಆಶ್ರಯಿಸುವ ಒಂದು ಸಣ್ಣ ಗುಂಪು ಇದೆ ಮತ್ತು ಈ ಗುಂಪು ಭಾರತಕ್ಕೆ ಕಳವಳಕಾರಿಯಾಗಿದೆ. ಇದರರ್ಥ ಭಾರತವು ತನ್ನ ಭದ್ರತೆಗಾಗಿ ಕೆನಡಾದಲ್ಲಿ ಸಕ್ರಿಯವಾಗಿರುವ ಈ ಅಂಶಗಳ ಮೇಲೆ ನಿಗಾ ಇಡಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮತ್ತಷ್ಟು ಓದಿ: ಪಾಕಿಸ್ತಾನದಲ್ಲಿ ಉಗ್ರರಿಂದ ಪ್ಯಾಸೆಂಜರ್ ರೈಲು ಹೈಜಾಕ್; 11 ಸೈನಿಕರ ಹತ್ಯೆ, 182 ಜನರು ಒತ್ತೆಯಾಳು
ಗುಪ್ತಚರ ಸಂಸ್ಥೆ ನೀಡಿರುವ ಈ ಮಾಹಿತಿ ಭಾರತಕ್ಕೆ ಸಿಕ್ಕ ಪ್ರಮುಖ ರಾಜತಾಂತ್ರಿಕ ವಿಜಯವೆಂದು ಪರಿಗಣಿಸಲಾಗುತ್ತಿದೆ.ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಖಾಲಿಸ್ತಾನಿ ಉಗ್ರಗಾಮಿಗಳಿಗೆ ಕೆನಡಾ ಆಶ್ರಯ ನೀಡುತ್ತಿದೆ ಎಂದು ಭಾರತ ಬಹಳ ದಿನಗಳಿಂದ ಹೇಳುತ್ತಿದೆ. 2023 ರಲ್ಲಿ ಖಾಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಉತ್ತುಂಗಕ್ಕೇರಿತು.
ಆ ಸಮಯದಲ್ಲಿ, ಆಗಿನ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ನಿಜ್ಜರ್ ಹತ್ಯೆಯಲ್ಲಿ ಭಾರತ ಭಾಗಿಯಾಗಿದೆ ಎಂದು ಆರೋಪಿಸಿದರು, ಇದನ್ನು ಭಾರತ ಅಸಂಬದ್ಧ ಮತ್ತು ರಾಜಕೀಯ ಪ್ರೇರಿತ ಎಂದು ಕರೆದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತ ಕೆನಡಾದಿಂದ ತನ್ನ ಆರು ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಂಡಿತು.
ಹೊಸ ಹೈಕಮಿಷನರ್ ನೇಮಕ
ಪ್ರಧಾನಿ ಮೋದಿ ಮತ್ತು ಮಾರ್ಕ್ ಕಾರ್ನಿ ನಡುವಿನ ಇತ್ತೀಚಿನ ಸಭೆಯಲ್ಲಿ, ಇಬ್ಬರೂ ನಾಯಕರು ಉದ್ವಿಗ್ನತೆಯನ್ನು ಕಡಿಮೆ ಮಾಡುವತ್ತ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಮಾತನಾಡಿದರು. ಈ ಸಭೆಯಲ್ಲಿ, ಎರಡೂ ದೇಶಗಳು ಹೊಸ ಹೈಕಮಿಷನರ್ ಅನ್ನು ನೇಮಿಸಲು ಮತ್ತು ಸ್ಥಗಿತಗೊಂಡ ವ್ಯಾಪಾರ ಮಾತುಕತೆಗಳನ್ನು ಪುನರಾರಂಭಿಸಲು ಒಪ್ಪಿಕೊಂಡವು. ಈ ಸಭೆಯ ನಂತರ CSIS ನ ಈ ವರದಿ ಬಂದಿದ್ದು, ಕೆನಡಾ ಈಗ ತನ್ನ ತಪ್ಪುಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಿದೆ ಎಂಬುದು ಸ್ಪಷ್ಟವಾಗಿ ತೋರುತ್ತದೆ.
ಕೆನಡಾದಲ್ಲಿ ಖಲಿಸ್ತಾನಿ ಚಟುವಟಿಕೆಗಳು ಚರ್ಚೆಗೆ ಬರುತ್ತಿರುವುದು ಇದೇ ಮೊದಲಲ್ಲ. 1985 ರಲ್ಲಿ, ಖಲಿಸ್ತಾನಿ ಭಯೋತ್ಪಾದಕರು ಏರ್ ಇಂಡಿಯಾ ವಿಮಾನ ಸಂಖ್ಯೆ AI 182 ಮೇಲೆ ಬಾಂಬ್ ದಾಳಿ ಮಾಡಿ 329 ಜನರನ್ನು ಕೊಂದಿದ್ದರು.
ಇದು ಕೆನಡಾದ ಇತಿಹಾಸದಲ್ಲಿಯೇ ಅತಿದೊಡ್ಡ ಭಯೋತ್ಪಾದಕ ದಾಳಿಯಾಗಿತ್ತು. ಇದರ ಹೊರತಾಗಿಯೂ, ಕೆನಡಾ ಸರ್ಕಾರಗಳು ಖಲಿಸ್ತಾನಿ ಬೆಂಬಲಿಗರ ಬಗ್ಗೆ ಮೃದು ಧೋರಣೆಯನ್ನು ಅಳವಡಿಸಿಕೊಂಡವು, ಇದನ್ನು ಭಾರತ ಯಾವಾಗಲೂ ಟೀಕಿಸುತ್ತಿತ್ತು.ದೇಶದ ಒಟ್ಟು ಜನಸಂಖ್ಯೆಯ ಶೇ. 2.1 ರಷ್ಟಿರುವ ಕೆನಡಾದ ಸಿಖ್ ಜನಸಂಖ್ಯೆಯು ದೇಶದ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ