ನವದೆಹಲಿ, ಅಕ್ಟೋಬರ್ 21: ಕೆನಡಾದ (Canada) 41 ಮಂದಿ ರಾಜತಾಂತ್ರಿಕರು ಭಾರತದಿಂದ (India) ಹಿಂದಿರುಗಿದ ನಂತರ ಉಭಯ ದೇಶಗಳ ನಡುವಣ ವಾಕ್ಸಮರ ಹೆಚ್ಚಾಗಿದೆ. ಎರಡೂ ದೇಶಗಳು ಮತ್ತೊಮ್ಮೆ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿಕೊಂಡಿವೆ. ಭಾರತ ಕೈಗೊಂಡಿರುವ ಕ್ರಮ ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಆರೋಪಿಸಿದ್ದಾರೆ. ಇದು ಭಾರತದ ಏಕಪಕ್ಷೀಯ ನಿರ್ಧಾರ. ಇದು ವಿಯೆನ್ನಾ ಒಪ್ಪಂದದ ಉಲ್ಲಂಘನೆಯಾಗಿದೆ. ಈ ನಿರ್ಧಾರದಿಂದ ಭಾರತ ಸರ್ಕಾರ ಕೋಟ್ಯಂತರ ಜನರ ಜೀವನವನ್ನು ಕಷ್ಟಕರವಾಗಿಸಿದೆ ಎಂದು ಪ್ರಧಾನಿ ಟ್ರುಡೊ ಹೇಳಿದ್ದಾರೆ. ಈ ಬಗ್ಗೆ ಎಲ್ಲಾ ದೇಶಗಳು ಯೋಚಿಸಬೇಕು ಎಂದೂ ಅವರು ಹೇಳಿದ್ದಾರೆ. ಕೆನಡಾ ಪ್ರಧಾನಿ ಹೇಳಿಕೆಗೆ ಭಾರತ ತಿರುಗೇಟು ನೀಡಿದೆ.
ಟ್ರುಡೊ ಮಾಡಿರುವ ಅಂತರರಾಷ್ಟ್ರೀಯ ಮಾನದಂಡಗಳ ಉಲ್ಲಂಘನೆಯ ಆರೋಪವನ್ನು ಭಾರತ ತಿರಸ್ಕರಿಸಿದೆ. ಭಾರತದಲ್ಲಿ ಸಮಾನ ಸಂಖ್ಯೆಯ ಕೆನಡಾದ ರಾಜತಾಂತ್ರಿಕರು ಇರುವುದನ್ನು ಖಚಿತಪಡಿಸಿಕೊಳ್ಳುವುದು ಅಂತರರಾಷ್ಟ್ರೀಯ ಮಾನದಂಡಗಳ ಉಲ್ಲಂಘನೆಯಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ವಿಯೆನ್ನಾ ಒಪ್ಪಂದದ 11.1 ನೇ ವಿಧಿಯೊಂದಿಗೆ ನಮ್ಮ ಹೆಜ್ಜೆ ಸಂಪೂರ್ಣವಾಗಿ ಸ್ಥಿರವಾಗಿದೆ ಎಂದು ಭಾರತ ಹೇಳಿದೆ.
ಒಂಟಾರಿಯೊದ ಬ್ರಾಂಪ್ಟನ್‌ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಟ್ರೂಡೊ, ಭಾರತ ಸರ್ಕಾರವು ಲಕ್ಷಾಂತರ ಜನರ ಜೀವನವನ್ನು ಕಷ್ಟಕರವಾಗಿಸಿದೆ ಎಂದು ಹೇಳಿದ್ದಾರೆ. ಅಲ್ಲದೆ, ಭಾರತದವರು ಅಂತರರಾಷ್ಟ್ರೀಯ ಕಾನೂನು ಮತ್ತು ರಾಜತಾಂತ್ರಿಕ ತತ್ವಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೆನಡಾದ ಆರೋಪವನ್ನು ಭಾರತ ತಳ್ಳಿಹಾಕಿದೆ ಮತ್ತು ಸಮಾನ ಸಂಖ್ಯೆಯ ಕೆನಡಾದ ರಾಜತಾಂತ್ರಿಕರನ್ನು ಖಚಿತಪಡಿಸಿಕೊಳ್ಳುವುದು ಅಂತರರಾಷ್ಟ್ರೀಯ ಮಾನದಂಡಗಳ ಉಲ್ಲಂಘನೆಯಲ್ಲ ಎಂದು ಹೇಳಿದೆ. ಈ ನಿರ್ಧಾರದ ಬಗ್ಗೆ ಕೆನಡಾಕ್ಕೆ ಮೊದಲೇ ತಿಳಿಸಿದ್ದೆವು. ಕೆನಡಾದ ರಾಜತಾಂತ್ರಿಕರಿಗೆ ದೇಶ ತೊರೆಯುವಂತೆ ಭಾರತ ಅಕ್ಟೋಬರ್ 10ರವರೆಗೆ ಗಡುವು ನೀಡಿತ್ತು. ಅವಧಿ ಮುಗಿದ ನಂತರವೂ ಅವರು ಹಾಗೆ ಮಾಡಲು ಸಾಧ್ಯವಾಗದಿದ್ದಾಗ, ಭಾರತವು ಕೆನಡಾಕ್ಕೆ ಇನ್ನೂ 10 ದಿನಗಳ ಅವಕಾಶ ನೀಡಿತ್ತು.
ಇದನ್ನೂ ಓದಿ: ಭಾರತದಲ್ಲಿ ‘ಬೆದರಿಕೆ ಅಥವಾ ಕಿರುಕುಳ’ದ ಸಾಧ್ಯತೆಯ ಬಗ್ಗೆ ತಮ್ಮ ನಾಗರಿಕರಿಗೆ ಎಚ್ಚರಿಕೆ ನೀಡಿದ ಕೆನಡಾ
ಅಕ್ಟೋಬರ್ 20 ರವರೆಗೆ ಗಡುವನ್ನು ವಿಸ್ತರಿಸಲಾಗಿತ್ತು. ಇದರ ನಂತರ, ಕೆನಡಾ ತನ್ನ 41 ರಾಜತಾಂತ್ರಿಕರನ್ನು ಅಕ್ಟೋಬರ್ 20 ರಂದು ವಾಪಸ್ ಕರೆಸಿಕೊಂಡಿತು. 41 ರಾಜತಾಂತ್ರಿಕರು ಹಿಂದಿರುಗಿದ ನಂತರ ಕೆನಡಾ ದೇಶವು ಚಂಡೀಗಢ, ಮುಂಬೈ ಮತ್ತು ಬೆಂಗಳೂರಿನಲ್ಲಿರುವ ತನ್ನ ಕಾನ್ಸುಲೇಟ್‌ಗಳಲ್ಲಿ ಎಲ್ಲಾ ವೈಯಕ್ತಿಕ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ.
ಭಾರತದಿಂದ ರಾಜತಾಂತ್ರಿಕರನ್ನು ವಾಪಸ್ ಕಳುಹಿಸಿರುವ ವಿಚಾರವಾಗಿ ಅಮೆರಿಕ ಮತ್ತು ಬ್ರಿಟನ್ ಕೆನಡಾ ಬೆಂಬಲಕ್ಕೆ ನಿಂತಿವೆ. ಭಾರತವು ಕೆನಡಾ ರಾಜತಾಂತ್ರಿಕ ಉಪಸ್ಥಿತಿಯನ್ನು ಕಡಿಮೆ ಮಾಡಬಾರದು ಎಂದು ಹೇಳಿರುವ ಅಮೆರಿಕ ಮತ್ತು ಬ್ರಿಟನ್ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ರಾಜತಾಂತ್ರಿಕ ಉಪಸ್ಥಿತಿಯನ್ನು ಗಣನೀಯವಾಗಿ ಕಡಿಮೆ ಮಾಡಲು ಭಾರತ ಮುಂದಾದ ಬಳಿಕ ಕೆನಡಾದ ರಾಜತಾಂತ್ರಿಕರು ಭಾರತದಿಂದ ನಿರ್ಗಮಿಸಿರುವ ಬಗ್ಗೆ ನಾವು ಕಳವಳಗೊಂಡಿದ್ದೇವೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ.
ಕೆನಡಾದ ರಾಜತಾಂತ್ರಿಕರು ಭಾರತವನ್ನು ತೊರೆಯಲು ಕಾರಣವಾದ ಭಾರತ ಸರ್ಕಾರದ ನಿರ್ಧಾರಗಳನ್ನು ನಾವು ಒಪ್ಪುವುದಿಲ್ಲ ಎಂದು ಎಂದು ಬ್ರಿಟನ್ ವಿದೇಶಾಂಗ ಕಚೇರಿಯ ವಕ್ತಾರರು ತಿಳಿಸಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:05 am, Sat, 21 October 23