ಮಾಡಿದ್ದುಣ್ಣೋ ಮಾರಾಯ ಜೈಸಿ ಕರ್ನಿ ವೈಸಿ ಭರ್ನಿ ಅಂತ ಹೇಳುವುದನ್ನು ನಾವು ಕೇಳುತ್ತಿರುತ್ತೇವೆ. ಮೇಲಿನ ಪೋಟೋನಲ್ಲಿ ಕಾಣುತ್ತಿರುವ ವೃದ್ಧ ಮಹಿಳೆಯನ್ನು ನೋಡಿ. 72-ವರ್ಷ ವಯಸ್ಸಿನ ಈ ಅಮೇರಿಕನ್ (American) ಮಹಿಳೆಯ ಹೆಸರು ಶರ್ಲೀನ್ ಹೆರ್ನಾಂಡೆಸ್ (Sherlene Hernandez). ಅವರ ಮುಖದಲ್ಲಿ ನಿಮಗೆ ಕಪ್ಪು ಕಲೆ ಮತ್ತುಗಾಯಗಳು ಕಾಣುತ್ತಿವೆ. ಒಬ್ಬ ಕಾರುಕಳ್ಳ (carjacker) ಹೆರ್ನಾಂಡೆಸ್ ಅವರಿಂದ ಕಾರು ಕೀ ಕಸಿದುಕೊಂಡು ಅಲ್ಲಿಂದ ಪರಾರಿಯಾಗುವ ಮೊದಲು ಮುಖದ ಮೇಲೆಲ್ಲ ಬಲವಾಗಿ ಗುದ್ದಿದ್ದಾನೆ. ಆದರೆ ಇಷ್ಟು ವಯಸ್ಸಾಗಿದ್ದರೂ ಹೆರ್ನಾಂಡೆಸ್ ಗಟ್ಟಿಗಿತ್ತಿ. ಕಳ್ಳನ ಹಲ್ಲೆಯಿಂದ ವಿಚಲಿತರಾದರೂ ಈಗ ಚೇತರಿಸಿಕೊಂಡಿದ್ದಾರೆ. ವೃದ್ಧ ಮಹಿಳೆ ಮೇಲೆ ಹಲ್ಲೆ ನಡೆಸಿ ಕಾರು ಕಿತ್ತುಕೊಂಡು ಪರಾರಿಯಾದವ ಏನಾಗಿದ್ದಾನೆ ಗೊತ್ತಾ? ಸತ್ತು ಮಸಣ ಸೇರಿದ್ದಾನೆ!
ಅಂದಹಾಗೆ, ಘಟನೆ ನಡೆದಿದ್ದು ಟೆಕ್ಸಾಸ್ ನ ಸ್ಯಾನ್ ಅಂಟಿನಿಯೋನಲ್ಲಿ. ಹೆರ್ನಾಂಡೆಸ್ ಡಯಟ್ ಕೋಕ್ ಕೊಳ್ಳಲು ತಮ್ಮ ಕಾರಲ್ಲಿ ಗ್ಯಾಸ್ ಸ್ಟೇಶನ್ ಒಂದಕ್ಕೆ ಹೋಗುವಾಗ ಕಾರುಕಳ್ಳ ಅವರನ್ನು ಅಡ್ಡಗಟ್ಟಿ ಕಾರನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಕಾರಿನ ಕೀ ಅವನಿಗೆ ಕೊಡದಿರಲು ಹೆರ್ನಾಂಡೆಸ್ ಹೆಣಗಾಡಿದ್ದಾರೆ. ಆಗಲೇ ಅವನು ಹಲ್ಲೆ ಮಾಡಿ ಅದನ್ನು ಕಸಿದುಕೊಂಡಿದ್ದಾನೆ. ಮೂರು ಜನ ವೃದ್ಧೆಯ ನೆರವಿಗೆ ಧಾವಿಸಿದರಾದರೂ ಅಷ್ಟರಲ್ಲಿ ಅವನು ಕಾರು ಹತ್ತಿ ಪರಾರಿಯಾಗಿದ್ದಾನೆ.
ಪೊಲೀಸ್ ನೀಡಿರುವ ಹೇಳಿಕೆ ಪ್ರಕಾರ ತಪ್ಪಿಸಿಕೊಳ್ಳುವ ಭರದಲ್ಲಿ ವೇಗವಾಗಿ ಹೆದ್ದಾರಿ ಕಡೆ ಕಾರನ್ನು ಓಡಿಸಿಕೊಂಡು ಹೋಗಿರುವ ಕಳ್ಳ ಗ್ಯಾಸ್ ಸ್ಟೇಶನ್ಗೆ ಸ್ವಲ್ಪ ದೂರದಲ್ಲೇ ಅಪಘಾತಕ್ಕೆ ಸಿಕ್ಕು ಮಾರಣಾಂತಿಕವಾಗಿ ಗಾಯಗೊಂಡು ಕಾರಲ್ಲೇ ಕೊನೆಯುಸಿರೆಳೆದಿದ್ದಾನೆ. ಅದಕ್ಕೇ ನಾವು ಹೇಳಿದ್ದು ಮಾಡಿದ್ದುಣ್ಣೋ ಮಾರಾಯಾ!
‘ನಾವು ಮಾಡಿದ್ದನ್ನೇ ಅನುಭವಿಸುತ್ತೇವೆ, ಪ್ರಾಯಶಃ ಇದನ್ನೇ ಕರ್ಮ ಅಂತ ಕರೆಯುತ್ತಿರಬಹುದು. ಆದರೆ ಹಾಗೆ ಆಗಲಿ ಅಂತ ನಾನು ಖಂಡಿತ ಅಂದುಕೊಂಡಿರಲಿಲ್ಲ. ಅವನು ಸತ್ತಿರುವುದಕ್ಕೆ ದುಃಖವಾಗುತ್ತಿದೆ. ಒಂದು ಮಾತಂತೂ ನಿಜ ಅವನು ನನ್ನನ್ನು ಹೊಡೆದು ಗಾಯಗೊಳಿಸಿದ, ಆದರೆ ದೇವರು ನನ್ನ ಪರವಾಗಿ ನ್ಯಾಯ ತೀರಿಸಿದ್ದಾನೆ,’ ಎಂದು ಡಬ್ಲ್ಯೂಬಿ ಆರ್ ಸಿ ಚ್ಯಾನೆಲ್ ನೊಂದಿಗೆ ಮಾತಾಡುವಾಗ ಹೆರ್ನಾಂಡೆಸ್ ಹೇಳಿದ್ದಾರೆ.
ಹೆರ್ನಾಂಡೆಸ್ ತಮಗಾದ ಗಾಯಗಳಿಂದ ಚೇತರಿಸಿಕೊಳ್ಳುತ್ತಿರುವುದು ನಿಜವಾದರೂ ಮುಖದಲ್ಲಿ ಮತ್ತು ದೇಹದಲ್ಲಿ ಇನ್ನೂ ನೋವಿದೆ ಹಾಗೂ ಮುಖದ ಮೇಲಿನ ಗಾಯಗಳು ಇನ್ನೂ ವಾಸಿಯಾಗಿಲ್ಲ. ಆದರೆ ಕಾರು ಇಲ್ಲದ ಕಾರಣ ಕೆಲಸಕ್ಕೆ ಹೋಗಲು ಅವರಿಗೆ ಸಾಧ್ಯವಾಗುತ್ತಿಲ್ಲ.
ಅವರ ಸ್ಥಿತಿಯನ್ನು ಕಂಡು ಮರುಗಿರುವ ಸ್ಥಳೀಯರು GoFundMe ಹೆಸರಲ್ಲಿ ಒಂದು ಆನ್ ಲೈನ್ ಅಭಿಯಾನ ನಡೆಸಿ ಹೆರ್ನಾಂಡೆಸ್ ಮತ್ತೊಂದು ಕಾರು ಕೊಳ್ಳಲು ಇಲ್ಲವೇ ಕಳುವಾಗಿದ್ದ ಕಾರನ್ನು ಬದಲಾಯಿಸಿಕೊಳ್ಳಲು ಹಣ ಸಂಗ್ರಹಿಸುತ್ತಿದ್ದಾರೆ.
ಈ ಅಭಿಯಾನದ ಮೂಲಕ ಅವರು ರೂ. 4 ಲಕ್ಷ ಸಂಗ್ರಹಿಸುವ ಗುರಿ ಹೊಂದಿದ್ದರು. ಆದರೆ, ಮಂಗಳವಾರ ಸಾಯಂಕಾಲದ ಹೊತ್ತಿಗೆ ರೂ. 21 ಲಕ್ಷಕ್ಕಿಂತ ಹೆಚ್ಚು ಹಣ ಸಂಗ್ರಹವಾಗಿತ್ತು.
ಇದನ್ನೂ ಓದಿ: MEA Dr S Jaishankar: ಭಾರತದ ವಿದೇಶಾಂಗ ಸಚಿವ ಜೈಶಂಕರ್ ನಿಜವಾದ ದೇಶಭಕ್ತ -ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಪ್ರಶಂಸೆ
Published On - 7:56 am, Thu, 21 April 22