Pakistan Crisis: ನೀವು ಕುಸಿಯಲು ನಾವು ಬಿಡುವುದಿಲ್ಲ; ಆರ್ಥಿಕ ಸಂಕಷ್ಟದ ಸುಳಿಯಲ್ಲಿರುವ ಪಾಕಿಸ್ತಾನಕ್ಕೆ ಚೀನಾ ಅಭಯ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 08, 2022 | 8:31 AM

ಪಾಕಿಸ್ತಾನಕ್ಕೆ 9 ಶತಕೋಟಿ ಡಾಲರ್ ಮೊತ್ತದಷ್ಟು ನೆರವು ಘೋಷಿಸಿರುವ ಚೀನಾ ಹಳೆಯ ಸಾಲವನ್ನೂ ಮನ್ನಾ ಮಾಡಿದೆ.

Pakistan Crisis: ನೀವು ಕುಸಿಯಲು ನಾವು ಬಿಡುವುದಿಲ್ಲ; ಆರ್ಥಿಕ ಸಂಕಷ್ಟದ ಸುಳಿಯಲ್ಲಿರುವ ಪಾಕಿಸ್ತಾನಕ್ಕೆ ಚೀನಾ ಅಭಯ
ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಚೀನಾ ಅಧ್ಯಕ್ಷ ಷೀ ಜಿನ್​ಪಿಂಗ್
Follow us on

ಬೀಚಿಂಗ್: ನೈಸರ್ಗಿಕ ವಿಪತ್ತು, ರಾಜಕೀಯ ಸಂಕಷ್ಟ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿರುವ ಪಾಕಿಸ್ತಾನದ (Pakistan Economy Crisis) ನೆರವಿಗೆ ಚೀನಾ ಮತ್ತೊಮ್ಮೆ ಧಾವಿಸಿದೆ. ಪಾಕಿಸ್ತಾನಕ್ಕೆ 9 ಶತಕೋಟಿ ಡಾಲರ್ ಮೊತ್ತದಷ್ಟು ನೆರವು ಘೋಷಿಸಿರುವ ಚೀನಾ (China), ಸಾಲಮನ್ನಾ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದೆ. ‘ಪಾಕಿಸ್ತಾನದ ಆರ್ಥಿಕ ಸ್ಥಿತಿ ಸ್ಥಿರತೆಗೆ ಮರಳಲು ಅಗತ್ಯವಿರುವ ಇನ್ನಷ್ಟು ನೆರವು ಒದಗಿಸಲಾಗುವುದು’ ಎಂದು ಹೇಳಿದೆ. ಚೀನಾ ಮತ್ತು ಸೌದಿ ಅರೇಬಿಯಾಗಳಿಂದ ಪಾಕಿಸ್ತಾನವು ಆರ್ಥಿಕ ನೆರವು ಯಾಚಿಸುತ್ತಿದೆ. ಇದೇ ವರ್ಷ ಮರುಪಾವತಿ ಗಡುವು ಸಮೀಪಿಸಲಿರುವ ಸಾಲಗಳಿಗೆ ಅವಧಿ ವಿಸ್ತರಿಸಬೇಕು ಎಂದು ಪಾಕಿಸ್ತಾನ ಕೋರಿದೆ. 35 ಶತಕೋಟಿ ಡಾಲರ್​ ಮೊತ್ತದಷ್ಟು ಸಾಲ ಮತ್ತು ಬಾಧ್ಯತೆಯ ಅವಧಿ ವಿಸ್ತರಣೆಯನ್ನು ಪಾಕಿಸ್ತಾನ ಕೋರಿದೆ. ಪಾಕಿಸ್ತಾನವು ಚೀನಾದಿಂದ 9 ಶತಕೋಟಿ ಡಾಲರ್ ಮತ್ತು ಸೌದಿ ಅರೇಬಿಯಾದಿಂದ 4 ಶತಕೋಟಿ ಡಾಲರ್ ನೆರವು ಪಡೆಯಲಿದೆ. ದಿನದಿಂದ ದಿನಕ್ಕೆ ವಿಷಮಿಸುತ್ತಿರುವ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವುದು ಅಲ್ಲಿನ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.

ಕಳೆದ ನವೆಂಬರ್ 3ರಂದು ಚೀನಾಕ್ಕೆ ಪಾಕಿಸ್ತಾನದ ಪ್ರಧಾನಿ ಶೆಹ್​ಬಾಜ್ ಷರೀಫ್ ಭೇಟಿ ನೀಡಿದ್ದರು. ಈ ವೇಳೆ ಚೀನಾ ಅಧ್ಯಕ್ಷ ಷೀ ಜಿನ್​ಪಿಂಗ್, ‘ಹೆದರಬೇಡಿ, ನಾವು ನಿಮ್ಮ ಕೈಹಿಡಿಯುತ್ತೇವೆ. ಕುಸಿಯಲು ಬಿಡುವುದಿಲ್ಲ’ ಎಂಬ ಭರವಸೆ ನೀಡಿದ್ದರು. ‘ಪಾಕಿಸ್ತಾನಕ್ಕೆ ನಾವು ಈಗಾಗಲೇ ಸಾಕಷ್ಟು ನೆರವು ನೀಡಿದ್ದೇವೆ. ಮುಂದಿನ ದಿನಗಳಲ್ಲಿಯೂ ಮತ್ತಷ್ಟು ನೆರವು ನೀಡುವುದನ್ನು ಮುಂದುವರಿಸುತ್ತೇವೆ. ಪಾಕಿಸ್ತಾನವನ್ನು ಆರ್ಥಿಕ ಸಂಕಷ್ಟದಿಂದ ಹೊರಗೆ ತರಲು ಮುಂದಿನ ದಿನಗಳಲ್ಲಿಯೂ ಮತ್ತಷ್ಟು ನೆರವು ನೀಡುವುದು ವಿಸ್ತರಿಸುತ್ತೇವೆ’ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಝಾವೊ ಲಿಜಿಯನ್ ಹೇಳಿದರು.

ಪಾಕಿಸ್ತಾನದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ರಾಜಕೀಯ ಸಂಘರ್ಷಗಳ ಬಗ್ಗೆ ಪ್ರತಿಕ್ರಿಯಿಸಲು ಝಾವೊ ನಿರಾಕರಿಸಿದರು. ‘ಪಾಕಿಸ್ತಾನದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ನಮಗೆ ಅರಿವಿದೆ. ಆದರೆ ಇದು ಅವರ ಆಂತರಿಕ ವಿದ್ಯಮಾನ. ಇಮ್ರಾನ್ ಖಾನ್ ಅವರಿಗೆ ನಮ್ಮ ಸಹಾನುಭೂತಿಯಿದೆ. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಬಯಸುತ್ತೇವೆ’ ಎಂದು ಹೇಳಿದರು. ಪಾಕಿಸ್ತಾನದ ವಾಝಿರಾಬಾದ್​ ಪ್ರದೇಶದಲ್ಲಿ ಜಾಥಾ ನಡೆಸುತ್ತಿದ್ದ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆದಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಸಕಾಲದಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾದರು.

‘ಪ್ಯಾರಿಸ್​ ಕ್ಲಬ್’ ಎಂದು ಕರೆಯಲಾಗುವ ವಿಶ್ವದ ಪ್ರಮುಖ ಸಾಲದಾತ ದೇಶಗಳಿಗೆ ಪಾಕಿಸ್ತಾನವು 10.7 ಶತಕೋಟಿ ಡಾಲರ್ ಮೊತ್ತದಷ್ಟು ಬಾಕಿ ನೀಡಬೇಕಿದೆ. ವಿಶ್ವ ಹಣಕಾಸು ನಿಧಿಯ (International Monetary Fund – IMF) ಪ್ರಕಾರ ಪಾಕಿಸ್ತಾನವು ‘ಪ್ಯಾರಿಸ್ ಕ್ಲಬ್’ ಹೊರತಾದ ದೇಶಗಳಿಗೆ 27 ಶತಕೋಟಿ ಡಾಲರ್​ಗಳಷ್ಟು ಸಾಲ ಮರುಪಾವತಿಸಬೇಕಿದೆ. ಈ ಪೈಕಿ ಚೀನಾ ಒಂದಕ್ಕೇ 23 ಶತಕೋಟಿ ನೀಡಬೇಕಿದೆ. ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರ ಚೀನಾ ಭೇಟಿಯ ವೇಳೆ ಚೀನಾದ ಉನ್ನತ ನಾಯಕತ್ವವು 4 ಶತಕೋಟಿ ಡಾಲರ್​ನಷ್ಟು ಸಾಲ ನೀಡುವ ಭರವಸೆ ನೀಡಿತ್ತು. ಇದರ ಜೊತೆಗೆ ಚೀನಾದ ಬ್ಯಾಂಕ್​ಗಳು ನೀಡಿರುವ 3.3 ಶತಕೋಟಿ ಡಾಲರ್ ಮೊತ್ತದ ಮರುಪಾವತಿ ಅವಧಿ ವಿಸ್ತರಿಸಲಾಗುವುದು. ಕರೆನ್ಸಿ ಸ್ವ್ಯಾಪ್ಸ್​ (ನಿರ್ದಿಷ್ಟ ಸರಕು ಅಥವಾ ಸೇವೆಗಳಿಗೆ ತೆರಬಹುದಾದ ಮೊತ್ತ) ಮೀಲಕ 1.45 ಶತಕೋಟಿ ಡಾಲರ್ ನೆರವು ನೀಡಲಾಗುವುದು ಎಂದು ಹೇಳಿತ್ತು.

ಚೀನಾದಲ್ಲಿ ಇತ್ತೀಚೆಗಷ್ಟೇ ಕಮ್ಯುನಿಸ್ಟ್​ ಪಾರ್ಟಿಯ 20ನೇ ಮಹಾಧಿವೇಶನ ನಡೆದಿತ್ತು. ಮಹಾಧಿವೇಷನದ ನಂತರ ಚೀನಾ ಅಧ್ಯಕ್ಷ ಷೀ ಜಿನ್​ಪಿಂಗ್ ಮೂರನೇ ಅವಧಿಗೆ ಅಧಿಕಾರ ಪಡೆದುಕೊಂಡಿದ್ದಾರೆ. ಈ ಬೆಳವಣಿಗೆಯ ನಂತರ ಚೀನಾಕ್ಕೆ ಭೇಟಿ ನೀಡಿದ ಮೊದಲ ಪ್ರಮುಖ ವಿದೇಶಿ ಅತಿಥಿ ಪಾಕಿಸ್ತಾನದ ಅಧ್ಯಕ್ಷ ಶಹಬಾಜ್ ಷರೀಫ್. ಇದೀಗ 69ನೇ ವಯಸ್ಸಿನಲ್ಲಿರುವ ಷೀ ಜಿನ್​ಪಿಂಗ್ ಕಳೆದ 10 ವರ್ಷಗಳಿಂದ ಚೀನಾದ ಅಧ್ಯಕ್ಷರಾಗಿದ್ದಾರೆ.

Published On - 8:31 am, Tue, 8 November 22