ಬೀಜಿಂಗ್: ಭಾರತ ಹಾಗೂ ಚೀನಾ ಗಡಿಯಲ್ಲಿ ನಿರ್ಮಾಣವಾದ ಉದ್ವಿಗ್ನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಭಾರತದ ವಿರುದ್ಧ ಕಾಲ್ಕೆರುದುಕೊಂಡು ಜಗಳಕ್ಕೆ ಬರುತ್ತಿದ್ದ ಚೀನಾ ಈಗ ಕೊಂಚ ಶಾಂತವಾದಂತೆ ಕಾಣುತ್ತಿದೆ. ಹೀಗಿರುವಾಗಲೇ ಚೀನಾ ಅಚ್ಚರಿಯ ನಿರ್ಧಾರವನ್ನು ತೆಗೆದುಕೊಂಡಿದೆ. 30 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಭಾರತದಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳಲು ಚೀನಾ ಮುಂದಾಗಿದೆ.
ಅಕ್ಕಿ ರಫ್ತಿನಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದರೆ, ಆಮದಿನಲ್ಲಿ ಚೀನಾ ಮೊದಲಿದೆ. ಈ ರಾಷ್ಟ್ರ ಪ್ರತಿ ವರ್ಷ 40 ಲಕ್ಷ ಟನ್ ಅಕ್ಕಿ ಆಮದು ಮಾಡಿಕೊಳ್ಳುತ್ತಿದೆ. ಆದರೆ, ಭಾರತದಿಂದ ಅಕ್ಕಿ ಖರೀದಿ ಮಾಡಲು ಚೀನಾ ಮನಸ್ಸು ಮಾಡಿರಲಿಲ್ಲ. 30 ವರ್ಷಗಳ ನಂತರದಲ್ಲಿ ಚೀನಾ ತನ್ನ ನಿರ್ಧಾರ ಬದಲಿಸಿದೆ.
ಭಾರತದ ಅಕ್ಕಿಯ ಗುಣಮಟ್ಟ ಉತ್ತಮವಾಗಿದೆ ಎನ್ನುವುದನ್ನು ಚೀನಾಗೆ ಮನದಟ್ಟಾಗಿದೆ. ಅಲ್ಲದೆ, ಚೀನಾಕ್ಕೆ ಭಾರತ ಕಡಿಮೆ ಬೆಲೆಯಲ್ಲಿ ಅಕ್ಕಿ ನೀಡಲು ನಿರ್ಧರಿಸಿದೆ. ಈ ಕಾರಣಕ್ಕೆ ಚೀನಾ, ಭಾರತದಿಂದ ಅಕ್ಕಿಯನ್ನು ಕೊಂಡುಕೊಳ್ಳುತ್ತಿದೆ. ಡಿಸೆಂಬರ್ನಿಂದ ಫೆಬ್ರವರಿ ಅವಧಿಯಲ್ಲಿ 1 ಲಕ್ಷ ಟನ್ ಅಕ್ಕಿಯನ್ನು ಭಾರತದಿಂದ ಚೀನಾ ಕೊಂಡುಕೊಳ್ಳುತ್ತಿದೆ. ಪ್ರತಿ ಟನ್ ಅಕ್ಕಿಗೆ ಚೀನಾ 22 ಸಾವಿರ ರೂಪಾಯಿ ಪಾವತಿಸುತ್ತಿದೆ.
ಚೀನಾಗೆ ಥೈಲ್ಯಾಂಡ್, ವಿಯೆಟ್ನಾಂ, ಮ್ಯಾನ್ಮಾರ್ ಹಾಗೂ ಪಾಕಿಸ್ತಾನ ಅಕ್ಕಿ ರಫ್ತು ಮಾಡುತ್ತವೆ. ಆದರೆ, ಇವು ಅಕ್ಕಿ ರಫ್ತಿಗೆ ಕಡಿವಾಣ ಹಾಕುವ ನಿರ್ಧಾರಕ್ಕೆ ಬಂದಿವೆ. ಹೀಗಾಗಿ, ಚೀನಾಗೆ ಅಗತ್ಯಮಟ್ಟದಲ್ಲಿ ಅಕ್ಕಿ ಪೂರೈಕೆ ಆಗುತ್ತಿಲ್ಲ. ಹೀಗಾಗಿ, ಭಾರತದಿಂದ ಅಕ್ಕಿ ಖರೀದಿಸುವ ಅನಿವಾರ್ಯತೆ ಚೀನಾಗೆ ಎದುರಾಗಿದೆ.
ಜೂನ್ ತಿಂಗಳಲ್ಲಿ ಲಡಾಕ್ ಭಾಗದಲ್ಲಿ ಭಾರತ ಹಾಗೂ ಚೀನಾ ನಡುವೆ ಗಡಿ ಬಿಕ್ಕಟ್ಟು ಉಂಟಾಗಿತ್ತು. ಭಾರತದ ಗಡಿ ಭಾಗಕ್ಕೆ ನುಗ್ಗಿದ್ದ ಚೀನಾ ಸೈನಿಕರು 20 ಭಾರತೀಯ ಸೈನಿಕರನ್ನು ಹತ್ಯೆ ಮಾಡಿದ್ದರು. ಈ ಘಟನೆ ನಂತರದಲ್ಲಿ ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನ ವಾತಾವರಣ ಮುಂದುವರಿದಿದೆ. ಶಾಂತಿ ಸ್ಥಾಪನೆಗೆ ಎರಡೂ ರಾಷ್ಟ್ರಗಳ ನಡುವೆ ಸಾಕಷ್ಟು ಮಾತುಕತೆ ನಡೆದಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ.
ಬ್ರಹ್ಮಪುತ್ರಾ ನದಿಯಲ್ಲಿ ಜಲವಿದ್ಯುತ್ ಯೋಜನೆ ಪ್ರಾರಂಭಕ್ಕೆ ಮುಂದಾದ ಚೀನಾ: ಭಾರತ-ಬಾಂಗ್ಲಾ ಕಳವಳ
Published On - 4:01 pm, Wed, 2 December 20