Population Shrink: ಚೀನಾದಲ್ಲಿ ಜನಸಂಖ್ಯೆ ಕುಸಿತ; ಏನು ಕಾರಣ? ಭಾರತದ ಮೇಲೆ ಏನು ಪರಿಣಾಮ?

|

Updated on: May 31, 2022 | 8:55 AM

ವಿಶ್ವದ ಆರನೇ ಒಂದರಷ್ಟು ಜನಸಂಖ್ಯೆ ಇರುವ ಚೀನಾದಲ್ಲಿ ಮಕ್ಕಳ ಜನನ ಪ್ರಮಾಣ ಕಡಿಮೆಯಾಗಿರುವುದು ಜಾಗತಿಕ ಮಟ್ಟದಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ. ಈ ಮಹತ್ವದ ಬೆಳವಣಿಗೆಯ ಬಗ್ಗೆ ನೀವು ತಿಳಿಯಬೇಕಾದ 10 ಮುಖ್ಯ ಸಂಗತಿಗಳಿವು...

Population Shrink: ಚೀನಾದಲ್ಲಿ ಜನಸಂಖ್ಯೆ ಕುಸಿತ; ಏನು ಕಾರಣ? ಭಾರತದ ಮೇಲೆ ಏನು ಪರಿಣಾಮ?
ಚೀನಾದಲ್ಲಿ ಜನಸಂಖ್ಯೆ ಕುಸಿಯುತ್ತಿದೆ.
Follow us on

ಚೀನಾ ದೇಶದಲ್ಲಿ ದಾಖಲಾಗಿರುವ ಬೆಳವಣಿಗೆಯೊಂದನ್ನು ಇಡೀ ಜಗತ್ತು ಬೆರಗು ಕಣ್ಣುಗಳಿಂದ ಗಮನಿಸುತ್ತಿದೆ. ವಿಶ್ವದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎನಿಸಿರುವ ಚೀನಾದಲ್ಲಿ ಇದೀಗ ಜನಸಂಖ್ಯೆ ತೀವ್ರಗತಿಯಲ್ಲಿ ಕಡಿಮೆಯಾಗುತ್ತಿದೆ (China Population Shrink). ಕಳೆದ 40 ವರ್ಷಗಳಲ್ಲಿ 60 ಕೋಟಿಯಿಂದ 140 ಕೋಟಿಗೆ ಚೀನಾದ ಜನಸಂಖ್ಯೆ ಏರಿಕೆಯಾಗಿತ್ತು. 1959-60ರಲ್ಲಿ ಕಾಣಿಸಿಕೊಂಡಿದ್ದ ಭೀಕರ ಬರಗಾಲದ ನಂತರ ಇದೇ ಮೊದಲ ಬಾರಿಗೆ ಅಲ್ಲಿನ ಜನಸಂಖ್ಯೆ ಕುಸಿದಿದೆ. 2021ರಲ್ಲಿ ಚೀನಾದಲ್ಲಿ ದಾಖಲಾದ ಒಟ್ಟು ಜನನಗಳ ಸಂಖ್ಯೆ ಕೇವಲ 4,80,000 (4.80 ಲಕ್ಷ) ಮಾತ್ರ. ಚೀನಾದಲ್ಲಿ ಕೇವಲ ಒಂದು ದಶಕದ ಹಿಂದೆ ವರ್ಷಕ್ಕೆ ಸರಾಸರಿ ಸುಮಾರು 80 ಲಕ್ಷ ಮಕ್ಕಳು ಜನಿಸುತ್ತಿದ್ದವು. ಅದಕ್ಕೆ ಹೋಲಿಸಿದರೆ ಈ ಬಾರಿಯ ಜನನಗಳ ಪ್ರಮಾಣವೂ ಅತ್ಯಂತ ಕಡಿಮೆ ಎನಿಸಿದೆ. ವಿಶ್ವದ ಆರನೇ ಒಂದರಷ್ಟು (1/6) ಜನಸಂಖ್ಯೆ ಇರುವ ಚೀನಾದಲ್ಲಿ ಮಕ್ಕಳ ಜನನ ಪ್ರಮಾಣ ಕಡಿಮೆಯಾಗಿರುವುದು ಜಾಗತಿಕ ಮಟ್ಟದಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ.

ಈ ಮಹತ್ವದ ಬೆಳವಣಿಗೆಯ ಬಗ್ಗೆ ನೀವು ತಿಳಿಯಬೇಕಾದ 10 ಮುಖ್ಯ ಸಂಗತಿಗಳಿವು…

  1. ಏನು ಕಾರಣ: ಜನಸಂಖ್ಯೆ ಹೆಚ್ಚಾಗುತ್ತಿರುವುದು ಚೀನಾಕ್ಕೆ ದೊಡ್ಡ ಸಮಸ್ಯೆಯಾಗಿತ್ತು. ಇದಕ್ಕೆ ಕಡಿವಾಣ ಹಾಕಲು ಒಂದು ಕುಟುಂಬಕ್ಕೆ ಒಂದೇ ಮಗು ಎನ್ನುವ ನೀತಿಯನ್ನು ಚೀನಾ ಸರ್ಕಾರ ಜಾರಿಗೊಳಿಸಿತು. ಹಣದುಬ್ಬರದ ಹೆಚ್ಚಳ, ಜೀವನಾವಶ್ಯಕ ವಸ್ತುಗಳ ಬೆಲೆಏರಿಕೆ ಸೇರಿದಂತೆ ಹಲವು ಕಾರಣಗಳಿಂದಾಗಿ ಚೀನಾದ ಪೋಷಕರು ಮಕ್ಕಳನ್ನು ಹೊಂದಲು ಹಿಂಜರಿದರು.
  2. ಕೊವಿಡ್ ಪಿಡುಗು: ಇಡೀ ಜಗತ್ತನ್ನು ವ್ಯಾಪಿಸಿದ್ದ ಕೊವಿಡ್ ಪಿಡುಗಿನ ಪರಿಣಾಮವೂ ಇದರಲ್ಲಿದೆ. ಕೊವಿಡ್ ಹತ್ತಿಕ್ಕಲು ಚೀನಾ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳೂ ಅಲ್ಲಿನ ಕುಟುಂಬಗಳಲ್ಲಿ ಹೆದರಿಕೆ ಉಂಟು ಮಾಡಿದವು. ಈ ಅವಧಿಯಲ್ಲಿ ಮಕ್ಕಳನ್ನು ಹೊಂದಲು ಬಹುತೇಕ ಕುಟುಂಬಗಳು ಹಿಂಜರಿದವು.
  3. ಎಷ್ಟು ಕುಸಿತ: ಯಾವುದೇ ದೇಶದಲ್ಲಿ ಜನಸಂಖ್ಯೆಯ ಯಥಾಸ್ಥಿತಿ ಕಾಪಾಡಲು, ಸಾವಿನ ಪ್ರಮಾಣವನ್ನು ಸರಿದೂಗಿಸಲು ಮಹಿಳೆಯರ ಫಲವಂತಿಕೆಯ ಸರಾಸರಿ ಪ್ರಮಾಣವು ಶೇ 2.1 ಇರಬೇಕು. 1980ರಲ್ಲಿ ಚೀನಾದ ಮಹಿಳೆಯರ ಫಲವಂತಿಕೆಯ ಸರಾಸರಿಯು ಶೇ 2.6 ಇತ್ತು. 1994ರಲ್ಲಿ ಇದು ಶೇ 1.6ಕ್ಕೆ ಇಳಿಯಿತು. 2020ರ ಹೊತ್ತಿಗೆ ಇದು ಶೇ 1.15ಕ್ಕೆ ಇಳಿಯಿತು. 2030ರ ಹೊತ್ತಿಗೆ ಚೀನಾ ಮಹಿಳೆಯರ ಫಲವಂತಿಕೆ ಪ್ರಮಾಣವು ಶೇ 1.1ಕ್ಕೆ ಕುಸಿದು, 2100ರವರೆಗೆ ಇದೇ ಪ್ರಮಾಣದಲ್ಲಿ ಮುಂದುವರಿಯಲಿದೆ ಎಂದು ಅಂದಾಜಿಸಲಾಗಿದೆ.
  4. ಮಕ್ಕಳನ್ನು ಹೆರಲು ಚೀನಾ ಮಹಿಳೆಯರ ನಿರಾಕರಣೆ: ಚೀನಾದ ಸರ್ಕಾರವು ಮೂರು ಮಕ್ಕಳನ್ನು ಹೊಂದುವ ಕುಟುಂಬಗಳಿಗೆ ತೆರಿಗೆ ವಿನಾಯ್ತಿಯೂ ಸೇರಿದಂತೆ ಸಾಕಷ್ಟು ಉತ್ತೇಜಕಗಳನ್ನು ಪ್ರಕಟಿಸಿದೆ. ಆದರೂ ಜೀವನ ನಿರ್ವಹಣೆಯ ವೆಚ್ಚ ಹೆಚ್ಚು ಎನ್ನುವ ಕಾರಣಕ್ಕೆ ಅಲ್ಲಿನ ಮಹಿಳೆಯರು ಹೆಚ್ಚು ಮಕ್ಕಳನ್ನು ಹೊಂದಲು ಹಿಂಜರಿಯುತ್ತಿದ್ದಾರೆ.
  5. ಸ್ತ್ರೀಯರ ಸಂಖ್ಯೆ ಕೊರತೆ: ಚೀನಾ ಸರ್ಕಾರವು ಬಹುಕಾಲ ಒಂದು ಮಗು ನೀತಿಯನ್ನು ಅಲ್ಲಿನ ಕುಟುಂಬಗಳ ಮೇಲೆ ಹೇರಿತ್ತು. ಈ ಅವಧಿಯಲ್ಲಿ ಸ್ತ್ರೀಭ್ರೂಣ ಹತ್ಯೆಯೂ ಹೆಚ್ಚಾಯಿತು. ಅದರ ಪರಿಣಾಮವಾಗಿ ಮಗು ಹೆರುವ ವಯೋಮಾನ ಮತ್ತು ಸಾಮರ್ಥ್ಯವಿರುವ ಸ್ತ್ರೀಯರ ಸಂಖ್ಯೆ ಇದೀಗ ಕಡಿಮೆಯಾಗಿದೆ. ಅಲ್ಲಿ ಈಗ ಮದುವೆ ವಯಸ್ಸಿನ ಸುಮಾರು 130 ಯುವಕರಿಗೆ ಪ್ರತಿಯಾಗಿ 100 ಯುವತಿಯರು ಇದ್ದಾರೆ.
  6. ಜಾಗತಿಕ ಪರಿಣಾಮ: ಚೀನಾದಲ್ಲಿ ಜನಸಂಖ್ಯೆ ಪ್ರಮಾಣ ಕಡಿಮೆಯಾಗುತ್ತಿರುವುದರ ಪರಿಣಾಮ ಜಾಗತಿಕ ಮಟ್ಟದಲ್ಲಿ ಗೋಚರಿಸುತ್ತದೆ. 2014ರಲ್ಲಿ ಚೀನಾದಲ್ಲಿ ದುಡಿಯುವ ವಯಸ್ಸಿನವರ ಜನರ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿತ್ತು. 2100ರ ಹೊತ್ತಿಗೆ ಪ್ರತಿ ಒಬ್ಬರು ದುಡಿಯುವ ಜನರಿಗೆ, ಮೂವರು ಅವಲಂಬಿತರು ಇರುತ್ತಾರೆ ಎಂದು ವಿಶ್ಲೇಷಿಸಲಾಗಿದೆ. 2080ರ ಹೊತ್ತಿಗೆ ಚೀನಾದಲ್ಲಿ 65 ವರ್ಷ ದಾಟಿದವರ ಪ್ರಮಾಣ ಹೆಚ್ಚಾಗಲಿದೆ.
  7. ಕುಸಿತದ ಪ್ರಮಾಣ: ಚೀನಾದಲ್ಲಿ ವಾರ್ಷಿಕ ಸರಾಸರಿ ಜನನ ಪ್ರಮಾಣದ ಕುಸಿತವು ಶೇ 1.73ರಷ್ಟಿದೆ. ದೇಶದಲ್ಲಿ ವಯಸ್ಸಾದವರ ಪ್ರಮಾಣ ಹೆಚ್ಚಾಗಿ, ದುಡಿಯುವ ವಯಸ್ಸಿನವರ ಪ್ರಮಾಣ ಕಡಿಮೆಯಾದಂತೆ ಆರ್ಥಿಕ ಪ್ರಗತಿಗೆ ಧಕ್ಕೆ ಒದಗುತ್ತಿದೆ. ಅಲ್ಲಿನ ಸರ್ಕಾರವು ಜನರ ವೈದ್ಯಕೀಯ ಸೇವೆಗೆ ಮತ್ತು ಸಮಾಜ ಕಲ್ಯಾಣಕ್ಕೆ ಮಾಡುವ ವೆಚ್ಚವೂ ಹೆಚ್ಚಾಗುತ್ತದೆ.
  8. ಕಾರ್ಮಿಕರ ಕೊರತೆ: ಚೀನಾ ಇಂದು ಜಗತ್ತಿನ ಕಾರ್ಖಾನೆ ಎನಿಸಿದೆ. ಅಲ್ಲಿ ಕಡಿಮೆ ಸಂಬಳಕ್ಕೆ ಕಾರ್ಮಿಕರು ಸಿಗುತ್ತಿದ್ದುದು ಇದಕ್ಕೆ ಮುಖ್ಯ ಕಾರಣ. ಆದರೆ ಚೀನಾದಲ್ಲಿ ಜನಸಂಖ್ಯೆ ಕುಸಿತದ ನಂತರ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವ ಭಾರತ, ಬಾಂಗ್ಲಾದೇಶ ಮತ್ತು ವಿಯೆಟ್ನಾಂ ದೇಶಗಳು ಮುಂಚೂಣಿಗೆ ಬರಲಿವೆ.
  9. ಅರ್ಥ ವ್ಯವಸ್ಥೆಯ ಪಲ್ಲಟ: ಚೀನಾಕ್ಕೆ ನೈಸರ್ಗಿಕ ಸಂಪನ್ಮೂಲಗಳನ್ನು ಹೆಚ್ಚಾಗಿ ರಫ್ತು ಮಾಡುವ ದೇಶವಾಗಿರುವ ಆಸ್ಟ್ರೇಲಿಯಾ ಮತ್ತು ಚೀನಾದಿಂದ ಸಿದ್ಧ ಉತ್ಪನ್ನಗಳನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುವ ದೇಶವಾಗಿರುವ ಅಮೆರಿಕ ಇತರ ದೇಶಗಳತ್ತ ಗಮನ ಹರಿಸಲಿವೆ. ಜಾಗತಿಕವಾಗಿ ಚೀನಾ ಹೊಂದಿರುವ ಪ್ರಾಬಲ್ಯ ಸಹಜವಾಗಿಯೇ ಕಡಿಮೆಯಾಗಲಿದ್ದು, ಪರ್ಯಾಯವಾಗಿ ಹಲವು ದೇಶಗಳು ಮುಂಚೂಣಿಗೆ ಬರಲಿವೆ.
  10. ಭಾರತಕ್ಕೆ ಅನುಕೂಲ: ಚೀನಾದಲ್ಲಿ ದುಡಿಯುವ ವಯೋಮಾನದ ಜನಸಂಖ್ಯೆ ಕಡಿಮೆಯಾದರೆ ಉಂಟಾಗುವ ಆರ್ಥಿಕ ಪಲ್ಲಟಗಳಿಂದಾಗಿ ಜನಸಂಖ್ಯೆಯ ಪ್ರಮಾಣ ಹೆಚ್ಚಾಗಿರುವ ಮತ್ತೊಂದು ದೇಶ ಭಾರತಕ್ಕೆ ಮುಂದಿನ ದಶಕಗಳಲ್ಲಿ ಹೆಚ್ಚು ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:54 am, Tue, 31 May 22