ಬೀಜಿಂಗ್: ತೈವಾನ್ ವಿಚಾರದಲ್ಲಿ ಯಾವುದೇ ಮೂರನೇ ದೇಶ ಮಧ್ಯ ಪ್ರವೇಶ ಮಾಡುವುದನ್ನು ಸಹಿಸುವುದಿಲ್ಲ ಎಂಬ ತನ್ನ ನಿಲುವನ್ನು ಚೀನಾ ಪುನರುಚ್ಚರಿಸಿದೆ. ತೈವಾನ್ (Taiwal) ಮೇಲೆ ಚೀನಾ (China) ದಾಳಿಯನ್ನು ಅಮೆರಿಕ (America) ವಿರೋಧಿಸುತ್ತದೆ ಎನ್ನುವ ಅಧ್ಯಕ್ಷ ಜೋ ಬೈಡೆನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚೀನಾ ಸರ್ಕಾರವು, ‘ನಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ’ ಎಂದು ಹೇಳಿದೆ. ಚೀನಾ ಕಮ್ಯುನಿಸ್ಟ್ ಪಕ್ಷವು ಎಂದಿಗೂ ತೈವಾನ್ ಮೇಲೆ ಆಡಳಿತ ನಡೆಸಿಲ್ಲ. ತೈವಾನ್ ಸ್ವತಂತ್ರವಾಗಿಯೇ ಆಡಳಿತ ನಿರ್ವಹಿಸಿಕೊಳ್ಳುತ್ತಿದೆ. ತೈವಾನ್ ದ್ವೀಪವು ಚೀನಾದ ಅವಿಭಾಜ್ಯ ಅಂಗ ಎಂದೇ ಚೀನಾ ಸದಾ ಭಾವಿಸುತ್ತದೆ. ಇಂದಲ್ಲದಿದ್ದರೆ ನಾಳೆ ಬಲ ಪ್ರಯೋಗದಿಂದಲಾದರೂ ತೈವಾನ್ ವಶಪಡಿಸಿಕೊಳ್ಳಲಾಗುವುದು ಎಂದು ಚೀನಾ ಹೇಳಿದೆ.
ಕ್ವಾಡ್ ಸಮಾವೇಶಕ್ಕಾಗಿ ಜಪಾನ್ಗೆ ಬಂದಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ‘ಚೀನಾ ದೇಶವು ಅಪಾಯದೊಂದಿಗೆ ಚೆಲ್ಲಾಟವಾಡುತ್ತಿದೆ. ಮಿಲಿಟರಿ ಬಲದಿಂದ ತೈವಾನ್ ಅತಿಕ್ರಮಣಕ್ಕೆ ಚೀನಾ ಮುಂದಾದರೆ ಅಮೆರಿಕ ಸುಮ್ಮನಿರುವುದಿಲ್ಲ’ ಎಂದು ಎಚ್ಚರಿಸಿದ್ದರು. ಅಮೆರಿಕ ಅಧ್ಯಕ್ಷರ ಹೇಳಿಕೆಯನ್ನು ಚೀನಾ ಸಾರಾಸಗಟಾಗಿ ತಳ್ಳಿ ಹಾಕಿದೆ. ‘ಹಿಂದೆಯೂ ತೈವಾನ್ ಚೀನಾದ ಭಾಗವಾಗಿಯೇ ಇತ್ತು. ಈಗಲೂ ಹಾಗೆಯೇ ಇದೆ’ ಎಂದು ಚೀನಾ ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ವಾಂಗ್ ವೆನ್ಬಿನ್ ಹೇಳಿದರು.
‘ತೈವಾನ್ ವಿದ್ಯಮಾನವು ಸಂಪೂರ್ಣವಾಗಿ ಚೀನಾದ ಆಂತರಿಕ ವಿಚಾರ. ಚೀನಾದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಸಂಬಂಧಿಸಿದ ಅಂಶ. ಈ ವಿಚಾರಗಳಲ್ಲಿ ಯಾವುದೇ ರಾಜಿ ಅಥವಾ ಸಂಧಾನಕ್ಕೆ ಚೀನಾ ಒಪ್ಪುವುದಿಲ್ಲ’ ಎಂದು ಚೀನಾ ಸರ್ಕಾರದ ನಿಲುವು ಸ್ಪಷ್ಟಪಡಿಸಿದರು. 140 ಕೋಟಿ ಜನಸಂಖ್ಯೆಯ ಬಲ ಹೊಂದಿರುವ ಚೀನಾ, ತನ್ನ ಹಿತಾಸಕ್ತಿಗಳನ್ನು ಸದಾ ಕಾಪಾಡಿಕೊಳ್ಳುತ್ತದೆ ಎಂದು ವಾಂಗ್ ನುಡಿದರು.
ಉಕ್ರೇನ್ ಮೇಲೆ ರಷ್ಯಾ ದಾಳಿಯ ಮಾದರಿಯಲ್ಲಿ ತೈವಾನ್ ಮೇಲೆ ಚೀನಾದ ಅತಿಕ್ರಮಣ ನಡೆಯಬಹುದು ಎಂಬ ಅಭಿಪ್ರಾಯದ ಕುರಿತು ಪ್ರತಿಕ್ರಿಯಿಸುವಾಗ ಜೋ ಬೈಡೆನ್, ‘ತೈವಾನ್ಗೆ ಅಮೆರಿಕದ ಬೆಂಬಲವಿದೆ’ ಎಂದು ಹೇಳಿದ್ದರು.
Published On - 2:50 pm, Mon, 23 May 22