ಜಾಗತಿಕವಾಗಿ ಕೊರೊನಾ ವೈರಸ್ ಪ್ರಮಾಣ ಸ್ವಲ್ಪ ಇಳಿಮುಖವಾಗುತ್ತಿದೆ ಎನ್ನುವಾಗಲೇ ಮತ್ತೆ ಹಲವು ರಾಷ್ಟ್ರಗಳಲ್ಲಿ ಸೋಂಕು ಜಾಸ್ತಿಯಾಗಿದೆ. ಚೀನಾ, ದಕ್ಷಿಣ ಕೊರಿಯಾ, ಸಿಂಗಾಪುರ, ಯುಕೆ, ಯುಎಸ್ಗಳಲ್ಲಿ ಮತ್ತೆ ನಿತ್ಯದ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಸದ್ಯ ಒಮಿಕ್ರಾನ್ ರೂಪಾಂತರಿ ವೈರಾಣುವಿನಿಂದಲೇ ಕೊವಿಡ್ 19 ಮತ್ತೆ ಹೆಚ್ಚಾಗುತ್ತಿದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಅದರಲ್ಲೂ ಕೊರೊನಾ ಮೊಟ್ಟಮೊದಲಿಗೆ ಹುಟ್ಟಿದ ದೇಶವಾದ ಚೀನಾದಲ್ಲಿ ಮತ್ತೆ ಕೊರೊನಾ ಅಲೆ ಎದ್ದಿದ್ದು, ಈ ಬಾರಿ ಜಾಸ್ತಿ ಪ್ರಮಾಣದಲ್ಲಿಯೇ ತೊಂದರೆಕೊಡುತ್ತಿದೆ. ಅದರಲ್ಲೂ ಕೊರೊನಾ ವೈರಸ್ನಿಂದ ಇಂದು ಇಬ್ಬರು ಮೃತಪಟ್ಟಿದ್ದಾಗಿ ವರದಿಯಾಗಿದ್ದು, 2021ರ ಜನವರಿಯ ಬಳಿಕ ಇದೇ ಮೊದಲ ಬಾರಿಗೆ ಒಂದೇ ದಿನ ಇಬ್ಬರು ಕೊವಿಡ್ 19ನಿಂದ ಸತ್ತಿದ್ದಾರೆ.
ಚೀನಾದಲ್ಲಿ ಸದ್ಯ ಕೊರೊನಾದ ಸಮುದಾಯ ಪ್ರಸರಣ ಶುರುವಾಗಿದ್ದು, ಇಂದು ಕೊಟ್ಟು 2157 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಅದರಲ್ಲಿ ಅತ್ಯಂತ ಹೆಚ್ಚು ಸೋಂಕಿತರು ಇರುವುದು ಜಿಲಿನ್ ಪ್ರಾಂತ್ಯದಲ್ಲಿ. ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚೀನಾದ ಹಲವು ಕಡೆಗಳಲ್ಲಿ ಲಾಕ್ಡೌನ್, ಸೀಲ್ಡೌನ್ಗಳನ್ನು ಮಾಡಲಾಗಿದೆ. ಅಷ್ಟೇ ಅಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನಿರ್ಬಂಧ, ಹೊರ ಜಗತ್ತಿನೊಂದಿಗೆ ಸಂಪರ್ಕ ಕಡಿತದಂಥ ಕ್ರಮಗಳಲ್ಲಿ ಯಾವುದೇ ಸಡಿಲಿಕೆ ಇಲ್ಲ ಎಂದೂ ಸ್ಪಷ್ಟಪಡಿಸಿದೆ. ಇದೀಗ ಕೊರೊನಾದಿಂದ ಮೃತಪಟ್ಟ ಇಬ್ಬರೂ ಜಿಲಿನ್ ಪ್ರಾಂತ್ಯದವರೇ ಆಗಿದ್ದು, ಒಟ್ಟಾರೆ ಸಾವಿನ ಸಂಖ್ಯೆ 4,638ಕ್ಕೆ ಏರಿಕೆಯಾಗಿದೆ.
ಮೊಟ್ಟಮೊದಲು ಚೀನಾದ ವುಹಾನ್ನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡು, ಅದು ಶೀಘ್ರದಲ್ಲೇ ಇಡಿ ಜಗತ್ತನ್ನು ವ್ಯಾಪಿಸಿ, ಒಂದಾದ ಬಳಿಕ ಒಂದು ಅಲೆ ಏಳುತ್ತಲೇ ಇದೆ. ಜಗತ್ತಿನ ರಾಷ್ಟ್ರಗಳೆಲ್ಲ ಕೊರೊನಾ ನಿಯಂತ್ರಣಕ್ಕೆ ತಮ್ಮದೇ ಆದ ನೀತಿ, ನಿಯಮ ರೂಪಿಸಿಕೊಂಡಿವೆ. ಹಾಗೇ ಚೀನಾ ಕೊವಿಡ್ 19 ನಿಯಂತ್ರಕ್ಕಾಗಿ ಶೂನ್ಯ ಕೊವಿಡ್ ತಂತ್ರ ರೂಪಿಸಿದೆ. ಸಾಮೂಹಿಕ ತಪಾಸಣೆ, ಕಟ್ಟುನಿಟ್ಟಿನ ಲಾಕ್ಡೌನ್ ಮತ್ತಿತರ ನಿಯಮಗಳನ್ನು ಈ ಶೂನ್ಯ ಕೊವಿಡ್ 19 ಕಾರ್ಯತಂತ್ರ ಒಳಗೊಂಡಿದೆ. ಲಾಕ್ಡೌನ್ ಅದೆಷ್ಟು ಕಠಿಣವಾಗಿರುತ್ತದೆಯೆಂದರೆ, ಜನರು ಮನೆ ಬಿಟ್ಟು ಹೊರಗಡೆ ಬರುವಂತೆಯೇ ಇರುವುದಿಲ್ಲ. ಈ ನೀತಿ ಸ್ವಲ್ಪ ಮಟ್ಟಿಗೆ ಟೀಕೆಗೆ ಒಳಗಾಗಿದ್ದರೂ ಚೀನಾ ಮಾತ್ರ ಅದನ್ನು ಸಡಿಲಿಕೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿಬಿಟ್ಟಿದೆ.
ಚೀನಾದ ಮುಖ್ಯ ಭೂಭಾಗ ಮತ್ತು ವಿಶೇಷ ಆಡಳಿತ ಪ್ರದೇಶವಾದ ಹಾಂಗ್ಕಾಂಗ್ಗಳ ಕೊರೊನಾ ದತ್ತಾಂಶಗಳನ್ನು ಪ್ರತ್ಯೇಕವಾಗಿಯೇ ರೂಪಿಸಲಾಗುತ್ತಿದೆ. ಇದೀಗ ಎರಡೂ ಭಾಗಗಳಲ್ಲೂ ಕೊರೊನಾದಲ್ಲಿ ಹೆಚ್ಚಳ ಕಂಡುಬಂದಿದೆ. ಚೀನಾದಲ್ಲಿ ಅತ್ಯಂತ ಹೆಚ್ಚು ಜನರು ಮೃತಪಟ್ಟಿದ್ದೇ ಈ ಹಾಂಗ್ಕಾಂಗ್ನಲ್ಲಿ. ಇಲ್ಲಿನ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1,016,944 ಕ್ಕೆ ತಲುಪಿದೆ.
ಇದನ್ನೂ ಓದಿ: ಪತಿ ಸ್ಯಾಡಿಸ್ಟ್ ಸೈಕೊ ಎಂದು ಆರೋಪಿಸಿ ಪತ್ನಿ ಆತ್ಮಹತ್ಯೆ, ಮತ್ತೊಂದೆಡೆ ಗಂಡ ಕೈಕೊಟ್ಟಿದ್ದಕ್ಕೆ ಹೆಂಡತಿ ಪ್ರತಿಭಟನೆ
Published On - 10:47 am, Sat, 19 March 22