ಹೊಸದಾಗಿ ನಿರ್ಮಿಸುತ್ತಿರುವ ಬಾಹ್ಯಾಕಾಶ ನಿಲ್ದಾಣಕ್ಕೆ ಮೂವರು ಗಗನಯಾತ್ರಿಗಳನ್ನು ಹೊತ್ತ ಚೀನಾದ ರಾಕೆಟ್ ಗುರುವಾರ ಬೆಳಿಗ್ಗೆ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಚೀನಾದ ಮೊದಲ ಮಾನವ ಸಹಿತ ಬಾಹ್ಯಾಕಾಶಕ್ಕೆ ಇಬ್ಬರು ಅನುಭವಿ ಹಾಗೂ ಮತ್ತೋರ್ವ ಹೊಸ ಗಗನಯಾತ್ರಿ ತಲುಪಿದ್ದಾರೆ. ನಿಯೆ ಹೈಶೆಂಗ್, ಲಿಯು ಬೋಮಿಂಗ್ ಮತ್ತು ಟ್ಯಾಂಗ್ ಹಾಂಗ್ಬೊ ಎಂಬ ಮೂವರು ಗಗನಯಾತ್ರಿಗಳನ್ನು ಹೊತ್ತ ಶೆನ್ಶಾವ್-12 ಆಕಾಶನೌಕೆ ಗುರುವಾರ ಬೆಳಿಗ್ಗೆ ಸರಿಸುಮಾರು 9:22ರ ಸಮಯಕ್ಕೆ ಉಡಾವಣೆಗೊಂಡಿದೆ.
ಬಾಹ್ಯಾಕಾಶದಲ್ಲಿ ಹೊಸದಾದ ಮೈಲುಗಲ್ಲು ಸಾಧಿಸುವ ಉದ್ದೇಶದಿಂದಾಗಿ ಈ ಮೂವರು ಗಗನಯಾತ್ರಿಗಳನ್ನು ಕಳುಹಿಸಿಕೊಡುವುದಾಗಿ ಚೀನಾ ಮ್ಯಾನ್ಡ್ ಸ್ಪೇಸ್ ಏಜಿನ್ಸಿ ಈ ಹಿಂದೆ ಹೇಳಿತ್ತು. ಹಾಗೆಯೇ ಮೂವರು ಗಗನಯಾತ್ರಿಗಳ ಪರಿಚಯವನ್ನು ಕೂಡಾ ಮಾಡಿಕೊಟ್ಟಿತ್ತು. ಆ ಸಂದರ್ಭದಲ್ಲಿ ಗಗನಯಾತ್ರಿ ನಿಯೆ ಹೈಶೆಂಗ್ ಅವರು ಮಾತನಾಡಿ, ಈ ಯೋಜನೆಯು ಸವಾಲಿನದ್ದಾಗಿದೆ. ನಾವು ಮೂವರು ಕೂಡಿ ಸವಾಲುಗಳನ್ನು ಎದುರಿಸಿ ಬಾಹ್ಯಾಕಾಶ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದ್ದರು.
2008ರಲ್ಲಿ ಸ್ಪೇಸ್ ವಾಕ್ ಮಾಡಿದ ಮೊದಲ ಚೀನಾದ ಗಗನಯಾತ್ರಿ ಲಿಯು ಬೋಮಿಂಗ್ ಮಾತನಾಡಿ, ಹಲವು ಬಾರಿ ಸ್ಪೇಸ್ ವಾಕ್ ಮಾಡಲು ಅವಕಾಶ ಸಿಗಲಿದೆ. ಮುಂದಿನ ವರ್ಷ ಚೀನಾ ಬಾಹ್ಯಾಕಾಶ ಸಂಸ್ಥೆ ಕಳುಹಿಸಲಿರುವ ಎರಡು ಮಾಡ್ಯೂಲ್ಗಳನ್ನು ಜೋಡಿಸುವ ಸಿದ್ಧತೆಯನ್ನು ಮಾಡಬೇಕಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದರು. ಹೊಸಬರಾದ ಟ್ಯಾಂಗ್ ಹಾಂಗ್ಬೊ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಿದ್ದಾರೆ. ಕಳೆದ ಹಲವು ವರ್ಷಗಳಿಂದ ತರಬೇತಿಯನ್ನು ಪಡೆದಿದ್ದೇನೆ ನನ್ನ ತಂಡದ ಮೇಲೆ ಸಂಪೂರ್ಣವಾದ ವಿಶ್ವಾಸ ನನಗಿದೆ ಎಂದು ಮಾತನಾಡಿದ್ದರು.
ಈ ಮೂವರು ಗಗನಯಾತ್ರಿಗಳು ಮೂರು ತಿಂಗಳುಗಳ ಕಾಲ ಹೊಸ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿಯಲಿದ್ದಾರೆ ಎಂಬುದರ ಕುರಿತಾಗಿ ಸಿಎಮ್ಎಸ್ಎ ನಿರ್ದೇಶಕ ಉಡಾವಣಾ ಕೇಂದ್ರಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಅಮೇರಿಕ ಮತ್ತು ರಷ್ಯಾ ಬಳಿಕ ಸ್ವಂತ ಬಾಹ್ಯಾಕಾಶ ನೌಕೆಯಲ್ಲಿ ಗಗನಯಾತ್ರಿಗಳನ್ನು ಕಳುಹಿಸಿಕೊಟ್ಟ ಮೂರನೇ ದೇಶ ಚೀನಾವಾಗಿದೆ. ಈ ಹಿಂದೆ 2003ರಲ್ಲಿ ಗಗನಯಾತ್ರಿಗಳನ್ನು ಕಳುಹಿಸಿಕೊಟ್ಟಿತ್ತು.
ಇದನ್ನೂ ಓದಿ:
Published On - 1:32 pm, Thu, 17 June 21