ಪ್ಯಾರೀಸ್: ರಫೇಲ್ ಯುದ್ಧವಿಮಾನಗಳ ತಯಾರಕರಾದ ಡಸ್ಸಾ (Dassault) ಕಂಪನಿಯು 2016ರಲ್ಲಿ ವಿಮಾನ ಖರೀದಿ ಒಪ್ಪಂದದ ನಂತರ ಭಾರತೀಯ ಮಧ್ಯವರ್ತಿಗಳಿಗೆ 10 ಲಕ್ಷ ಯೂರೋ ಪಾವತಿಗೆ ಒಪ್ಪಿಕೊಂಡಿತ್ತು ಎಂಬ ಸಂಗತಿಯನ್ನು ಫ್ರೆಂಚ್ ಮಾಧ್ಯಮ ಸಂಸ್ಥೆ ಮೀಡಿಯಾಪಾರ್ಟ್ ಬಹಿರಂಗಪಡಿಸಿದೆ. 2017ರ ಡಸ್ಸಾ ಸಮೂಹದ ಲೆಕ್ಕಪತ್ರಗಳನ್ನು ಪರಿಶೀಲಿಸಿದಾಗ 5,08,925 ಯೂರೋ ಮೊತ್ತದಷ್ಟು ಹಣವನ್ನು ‘ಗ್ರಾಹಕರಿಗೆ ಗಿಫ್ಟ್’ ಲೆಕ್ಕಶೀರ್ಷಿಕೆಯಡಿ ವ್ಯಯಿಸಿರುವುದು ಪತ್ತೆಯಾಗಿದೆ. ಫ್ರಾನ್ಸ್ ದೇಶದ ಭ್ರಷ್ಟಾಚಾರ ನಿಗ್ರಹ ದಳವಾದ ಏಜೆನ್ಸ್ ಫ್ರಾನ್ಸೈಸ್ ಆ್ಯಂಟಿಕರಪ್ಷನ್ (ಎಎಫ್ಎ) ಡಸ್ಸಾ ಸಂಸ್ಥೆಯ ಲೆಕ್ಕಪತ್ರ ತಪಾಸಣೆ ನಡೆಸಿದ ವೇಳೆ ಈ ಅಂಶವು ಪತ್ತೆಯಾಗಿದೆ.
‘ರಫೇಲ್ ಯುದ್ಧ ವಿಮಾನಗಳ 50 ಬೃಹತ್ ಪ್ರತಿರೂಪಗಳನ್ನು ತಯಾರಿಸಲು ಈ ಹಣ ಬಳಕೆಯಾಗಿದೆ’ ಎಂದು ಡಸ್ಸಾ ಸಮೂಹವು ಹೇಳಿದೆ. ಆದರೆ ಇಂಥ ಪ್ರತಿರೂಪಗಳನ್ನು ತಯಾರಿಸಲಾಗಿತ್ತು ಎಂದು ಸಾಬೀತುಪಡಿಸುವ ಯಾವುದೇ ಸಾಕ್ಷ್ಯವನ್ನು ತನಿಖಾಧಿಕಾರಿಗಳಿಗೆ ನೀಡಿಲ್ಲ’ ಎಂಬ ಸಂಗತಿ ಗೌಪ್ಯವರದಿಯಲ್ಲಿದೆ ಎಂದು ಮೀಡಿಯಾಪಾರ್ಟ್ ತಿಳಿಸಿದೆ.
ಕಂಪನಿಯ ಇತರ ಲೆಕ್ಕಪತ್ರಗಳನ್ನು ಗಮನಿಸಿದಾಗ ಈ ಮೊತ್ತದ ವೆಚ್ಚಕ್ಕೆ ನೀಡಿರುವ ಆಧಾರಗಳು ಸಮರ್ಪಕವಾಗಿಲ್ಲ ಎನಿಸುತ್ತದೆ. ಆದರೆ ಫ್ರಾನ್ಸ್ ಭ್ರಷ್ಟಾಚಾರ ನಿಗ್ರಹ ದಳವು (ಎಎಫ್ಎ) ಈವರೆಗೆ ಈ ವ್ಯವಹಾರದಲ್ಲಿ ಅಕ್ರಮ ನಡೆದಿರಬಹುದು ಎಂದು ಸರ್ಕಾರದ ಗಮನಕ್ಕೆ ಅಧಿಕೃತವಾಗಿ ತಂದಿಲ್ಲ. ಇದರಿಂದಾಗಿ ಫ್ರಾನ್ಸ್ನ ನ್ಯಾಯಾಂಗ ಮತ್ತು ರಾಜಕೀಯ ಅಧಿಕಾರ ಸ್ಥಾನಗಳ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ ಎಂದು ಫ್ರೆಂಚ್ ಮಾಧ್ಯಮಸಂಸ್ಥೆ ಮೀಡಿಯಾಪಾರ್ಟ್ ಹೇಳಿದೆ.
ರಫೇಲ್ ವ್ಯವಹಾರದಲ್ಲಿ ಅಕ್ರಮ ನಡೆದಿರಬಹುದು ಎಂಬ ಆರೋಪದ ಬಗ್ಗೆ ಸುಳಿವೊಂದನ್ನು ಫ್ರಾನ್ಸ್ನ ಹಣಕಾಸು ಅಪರಾಧಗಳ ವಿಭಾಗದ ಪಬ್ಲಿಕ್ ಪ್ರಾಸಿಕ್ಯೂಷನ್ ಸರ್ವೀಸ್ ಅಕ್ಟೋಬರ್ 2018ರಲ್ಲಿ ಪಡೆದುಕೊಂಡಿತ್ತು. ಮೀಡಿಯಾಪಾರ್ಟ್ಗೆ ಸಿಕ್ಕಿರುವ ಎಎಫ್ಎ ವರದಿಯು ಡಸ್ಸಾ ಕಂಪನಿಯು ಈ ‘ಸಾಮಾನ್ಯಕ್ಕಿಂತಲೂ ದೊಡ್ಡದಾದ ಗಿಫ್ಟ್’ ನೀಡಿರುವುದನ್ನು ಡೆಫ್ಸಿಸ್ ಸಲ್ಯೂಷನ್ಸ್ ಎಂಬ ಭಾರತೀಯ ಕಂಪನಿಯಿಂದ ಪಡೆದುಕೊಂಡ ಇನ್ವಾಯ್ಸ್ (ರಸೀದಿ) ಮೂಲಕ ಸಮರ್ಥಿಸಿಕೊಳ್ಳಲು ಯತ್ನಿಸುತ್ತಿದೆ.
ಮಾರ್ಚ್ 30, 2017ರ ದಿನಾಂಕದ ಈ ಇನ್ವಾಯ್ಸ್ ಪ್ರಕಾರ ರಫೇಲ್ ಜೆಟ್ಗಳ 50 ಡಮ್ಮಿ ಮಾದರಿಗಳನ್ನು ಸಿದ್ಧಪಡಿಸಲು ಡೆಫ್ಸಿಸ್ ಸಲ್ಯೂಷನ್ಸ್ಗೆ 10,17,850 ಯೂರೊ ನೀಡಲಾಗಿದೆ. ಪ್ರತಿ ಮಾದರಿಗೂ 20,357 ಯೂರೊಗಳಷ್ಟು ದೊಡ್ಡ ಮೊತ್ತವನ್ನು ನಿಗದಿಪಡಿಸಲಾಗಿದೆ ಎಂದು ಎಎಫ್ಎ ವರದಿ ತಿಳಿಸಿದೆ. ಈ ರೀತಿಯ ಮಾದರಿಗಳು ಅಸ್ತಿತ್ವದಲ್ಲಿರುವ ಬಗ್ಗೆ ಎಎಫ್ಎ ಇನ್ಸ್ಪೆಕ್ಟರ್ಗಳು ಈ ಸಂಬಂಧ ಕೇಳಿದ ಯಾವುದೇ ದಾಖಲೆಗಳನ್ನು ಒದಗಿಸಲು ಡಸ್ಸಾ ಗ್ರೂಪ್ಗೆ ಸಾಧ್ಯವಾಗಿಲ್ಲ. ಈ ವೆಚ್ಚವನ್ನು ಗ್ರಾಹಕರಿಗೆ ನೀಡಿದ ಕೊಡುಗೆಗಳು ವಿಭಾಗದಡಿ ಏಕೆ ಪಟ್ಟಿಮಾಡಲಾಯಿತು ಎಂಬ ಪ್ರಶ್ನೆಗೂ ಡಸ್ಸಾ ಉತ್ತರಿಸಿಲ್ಲ.
ವಿವಾದಾತ್ಮಕ ವ್ಯಾಪಾರಿ ಸುಶೇನ್ ಗುಪ್ತ ಅವರು ಮುಖ್ಯಸ್ಥಾನದಲ್ಲಿರುವ ಡೆಫ್ಸಿಸ್ ಸಲ್ಯೂಷನ್ಸ್ ಭಾರತದಲ್ಲಿ ಡಸ್ಸಾ ಕಂಪನಿಯ ಮುಖ್ಯ ಉಪಗುತ್ತಿಗೆದಾರ ಸಂಸ್ಥೆಯಾಗಿದೆ. ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ಈ ಹಿಂದೆ ಸುಶೇನ್ ಗುಪ್ತ ಅವರನ್ನು ಬಂಧಿಸಲಾಗಿತ್ತು. ಅತಿಗಣ್ಯವ್ಯಕ್ತಿಗಳ ಹಾರಾಟಕ್ಕೆಂದು ಅಗಸ್ಟಾ ವೆಸ್ಟ್ಲೆಂಡ್ ಕಂಪನಿಯಿಂದ ಹೆಲಿಕಾಪ್ಟರ್ಗಳ ಖರೀದಿವೇಳೆ ಕೆಲವರಿಗೆ ಕಮಿಷನ್ ನೀಡಲೆಂದು ಸುಶೇನ್ ಗುಪ್ತ ಅಕ್ರಮ ಹಣ ವರ್ಗಾವಣೆ ಯೋಜನೆಯೊಂದನ್ನು ರೂಪಿಸಿದ್ದ ಬಗ್ಗೆ ಜಾರಿ ನಿರ್ದೇಶನಾಲಯ ಆರೋಪ ಮಾಡಿತ್ತು. ಇದೀಗ ಬೆಳಕಿಗೆ ಬಂದಿರುವ ರಫೇಲ್ ಖರೀದಿ ಅವ್ಯವಹಾರದ ಬಗ್ಗೆಯೂ ಡಸ್ಸಾ ಮತ್ತು ಡೆಫ್ಸಿಸ್ ಈವರೆಗೆ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ.
ಡಸ್ಸಾ ಸಂಸ್ಥೆಯ ಅವ್ಯವಹಾರವನ್ನು ಬಯಲಿಗೆಳೆದ ಮೀಡಿಯಾಪಾರ್ಟ್ ವರದಿಗಾರ ಯಾನ್ ಫಿಲಿಪಿನ್ ಭಾರತೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಮೂರು ಕಂತುಗಳ ವರದಿಯ ಮೊದಲ ಕಂತು ಮಾತ್ರ ಇದೀಗ ಪ್ರಕಟವಾಗಿದೆ. ವರದಿಯ 3ನೇ ಕಂತಿನಲ್ಲಿ ಅತಿಮುಖ್ಯ ಮಾಹಿತಿಯಿದೆ ಎಂದು ಹೇಳಿದ್ದಾರೆ.
2016ರಲ್ಲಿ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ಭಾರತ ಮತ್ತು ಫ್ರಾನ್ಸ್ ಸರ್ಕಾರಗಳ ನಡುವೆ 7.8 ಶತಕೋಟಿ ಶಾಲರ್ ಮೊತ್ತದ ಒಪ್ಪಂದ ಆಗಿದೆ. ಅಂಬಾಲಾ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆಯು ಈಗಾಗಲೇ ರಫೇಲ್ ಜೆಟ್ಗಳ ಮೊದಲ ಸ್ಕ್ವಾರ್ಡನ್ ಸ್ಥಾಪಿಸಿದೆ. ಪಶ್ಚಿಮ ಬಂಗಾಳದ ಹಾಸಿಮಾರಾದಲ್ಲಿ 2ನೇ ಸ್ಕ್ವಾರ್ಡನ್ ಸ್ಥಾಪಿಸಲು ಭಾರತೀಯ ವಾಯುಪಡೆ ಉದ್ದೇಶಿಸಿದೆ.
(Dassault paid 1 million euro as gift to Indian middleman in Rafale deal report mediapart citing France anti corruption bureau report)
ಇದನ್ನೂ ಓದಿ: ರೋಮಾಂಚಕಾರಿ ‘ವರ್ಟಿಕಲ್ ಚಾರ್ಲಿ’ ಹಾಗೂ ‘ಏಕಲವ್ಯ’ ಪ್ರದರ್ಶನ ತೋರಿದ ರಫೇಲ್ ಜೆಟ್ ವಿಮಾನ
ಇದನ್ನೂ ಓದಿ: ಭಾರತಕ್ಕೆ ಬಂದಿಳಿಯಿತು ಇನ್ನೂ 3 ರಫೇಲ್ ಯುದ್ಧ ವಿಮಾನ
Published On - 3:03 pm, Mon, 5 April 21