
ವಾಷಿಂಗ್ಟನ್, ಆಗಸ್ಟ್ 06: ತಾವು ಮಾಡುವುದು ಅನಾಚಾರ, ಬೇರೆಯವರಿಗೆ ಆಚಾರದ ಪಾಠ. ಭಾರತಕ್ಕೆ ರಷ್ಯಾ(Russia)ದಿಂದ ತೈಲ ಆಮದು ಮಾಡಿಕೊಳ್ಳಬೇಡಿ ಎಂದು ಎಚ್ಚರಿಕೆ ನೀಡುತ್ತಾ ಒಳಗಿಂದೊಳಗೆ ಅಲ್ಲಿಂದಲೇ ಅಮೆರಿಕವು ರಾಸಾಯನಿಕ ಹಾಗೂ ರಸಗೊಬ್ಬರಗಳನ್ನು ಆಮದು ಮಾಡಿಕೊಳ್ಳುತ್ತಿದೆ ಎನ್ನುವ ಸುದ್ದಿ ಕೇಳಿಬಂದಿದೆ. ಆದರೆ ಈ ಪ್ರಶ್ನೆಗೆ ಟ್ರಂಪ್ ಇದರ ಬಗ್ಗೆ ತಮಗೇನೂ ಗೊತ್ತೇ ಇಲ್ಲ, ವಿಚಾರಿಸಿ ಹೇಳುತ್ತೇನೆ ಎಂದು ಮುಗ್ದನಂತೆ ಉತ್ತರ ನೀಡಿದ್ದಾರೆ. ರಷ್ಯಾದಿಂದ ಭಾರತವು ತೈಲವನ್ನು ಆಮದು ಮಾಡಿಕೊಳ್ಳುವ ವಿಚಾರವಾಗಿ ಭಾರತದ ವಿರುದ್ಧ ತಿರುಗಿ ಬಿದ್ದಿರುವ ಟ್ರಂಪ್ ನೀವು ಆಮದು ನಿಲ್ಲಿಸದಿದ್ದರೆ ಹೆಚ್ಚು ಸುಂಕ ವಿಧಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಆದರೆ ಬೆನ್ನ ಹಿಂದೆ ರಹಸ್ಯವಾಗಿ ಅದೇ ದೇಶದಿಂದ ರಾಸಾಯನಿಕಗಳು ಹಾಗೂ ರಸಗೊಬ್ಬರವನ್ನು ಅಮೆರಿಕ ಆಮದು ಮಾಡಿಕೊಳ್ಳುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಆದರೆ ಇದರ ಬಗ್ಗೆ ತನಗೇನೂ ತಿಳಿದಿಲ್ಲ ಎಂದು ಟ್ರಂಪ್ ಉತ್ತರ ನೀಡಿದ್ದಾರೆ. ಆದರೆ ಒಂದು ರಾಷ್ಟ್ರದ ಅಧ್ಯಕ್ಷರಾಗಿ ಯಾವ ರಾಷ್ಟ್ರಗಳಿಂದ ಯಾವುದನ್ನು ಆಮದು ಮಾಡಿಕೊಳ್ಳುತ್ತೇವೆ ಯಾವುದು ರಫ್ತು ಮಾಡಿಕೊಳ್ಳುತ್ತಿದ್ದೇವೆ ಎನ್ನುವ ಅರಿವಿರುವುದಿಲ್ಲವೇ ಎಂದು ಹಲವರು ಪ್ರಶ್ನಿಸಿದ್ದಾರೆ.
ಭಾರತವು ಬೃಹತ್ ಪ್ರಮಾಣದಲ್ಲಿ ರಷ್ಯಾದ ತೈಲವನ್ನು ಖರೀದಿಸುವುದಲ್ಲದೆ, ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿದ ತೈಲದ ಹೆಚ್ಚಿನ ಭಾಗವನ್ನು ಭಾರಿ ಲಾಭಕ್ಕೆ ಮಾರಾಟ ಮಾಡುತ್ತಿದೆ. ರಷ್ಯಾದ ಯುದ್ಧ ಯಂತ್ರದಿಂದ ಉಕ್ರೇನ್‌ನಲ್ಲಿ ಎಷ್ಟು ಜನರು ಕೊಲ್ಲಲ್ಪಡುತ್ತಿದ್ದಾರೆ ಎಂಬುದು ಅವರಿಗೆ ಲೆಕ್ಕವಿಲ್ಲ. ಅದಕ್ಕಾಗಿಯೇ ಭಾರತವು ಅಮೆರಿಕಕ್ಕೆ ಪಾವತಿಸುವ ಸುಂಕವನ್ನು ನಾನು ಗಣನೀಯವಾಗಿ ಹೆಚ್ಚಿಸುತ್ತೇನೆ ಎಂದು ಟ್ರಂಪ್ ಹೇಳಿದ್ದರು.
ಮತ್ತಷ್ಟು ಓದಿ: ಭಾರತದಂತಹ ಬಲಿಷ್ಠ ರಾಷ್ಟ್ರದೊಂದಿಗೆ ಸಂಬಂಧ ಹಾಳು ಮಾಡಿಕೊಳ್ಳಬೇಡಿ: ಟ್ರಂಪ್ಗೆ ನಿಕ್ಕಿ ಹ್ಯಾಲಿ ಸಲಹೆ
ಅಮೆರಿಕ ಅಧ್ಯಕ್ಷರ ಹೇಳಿಕೆಯನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ಭಾರತವನ್ನು ಗುರಿಯಾಗಿಸಿಕೊಂಡಿರುವುದು ಅನ್ಯಾಯ ಮತ್ತು ಅಜಾಗರೂಕ ಕ್ರಮ ಎಂದು ವಿದೇಶಾಂಗ ಸಚಿವಾಲಯ ಬಣ್ಣಿಸಿದೆ. ರಷ್ಯಾದಿಂದ ಆಮದು ಮಾಡಿಕೊಳ್ಳುವ ಆಮದುಗಳು ಮಾರುಕಟ್ಟೆ ಅಗತ್ಯತೆಗಳು ಮತ್ತು ಇಂಧನ ಭದ್ರತೆಯನ್ನು ಆಧರಿಸಿವೆ ಎಂದು ಭಾರತ ಹೇಳಿದೆ.
ಭಾರತದ ಆಮದುಗಳ ಉದ್ದೇಶ ಭಾರತೀಯ ಗ್ರಾಹಕರಿಗೆ ಊಹಿಸಬಹುದಾದ ಮತ್ತು ಕೈಗೆಟುಕುವ ಇಂಧನ ವೆಚ್ಚಗಳನ್ನು ಖಚಿತಪಡಿಸಿಕೊಳ್ಳುವುದು. ಜಾಗತಿಕ ಮಾರುಕಟ್ಟೆ ಪರಿಸ್ಥಿತಿಯಿಂದಾಗಿ ಇದು ಅತ್ಯಗತ್ಯ ಅವಶ್ಯಕತೆಯಾಗಿದೆ. ಆದಾಗ್ಯೂ, ಭಾರತವನ್ನು ಟೀಕಿಸುವ ದೇಶಗಳು ಸ್ವತಃ ರಷ್ಯಾದೊಂದಿಗೆ ವ್ಯಾಪಾರ ಮಾಡುತ್ತಿವೆ ಎಂದು ತಿಳಿದುಬಂದಿದೆ ಎಂದು ಭಾರತ ಹೇಳಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ