ಮತ್ತೆ ಬಾಲ ಬಿಚ್ಚಿದ ಪಾಕಿಸ್ತಾನ; ಕದನ ವಿರಾಮ ಉಲ್ಲಂಘಿಸಿ ಭಾರತದ ಗಡಿಯಲ್ಲಿ ಗುಂಡಿನ ದಾಳಿ
ಜಮ್ಮು ಮತ್ತು ಕಾಶ್ಮೀರದ ಎಲ್‌ಒಸಿಯಲ್ಲಿ ಪಾಕಿಸ್ತಾನ ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿದೆ. ಪಾಕಿಸ್ತಾನ ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿ ನಡೆದಿದ್ದು, ಅದಕ್ಕೆ ಭಾರತೀಯ ಸೇನೆಯಿಂದ ಪ್ರತಿದಾಳಿ ನಡೆಸಲಾಗಿದೆ. 15 ನಿಮಿಷಗಳ ಕಾಲ ಗುಂಡಿನ ಚಕಮಕಿ ಮುಂದುವರೆದಿದೆ. ಭಯೋತ್ಪಾದಕರು ಒಳನುಸುಳಲು ಪ್ರಯತ್ನಿಸುತ್ತಿರಬಹುದು ಎಂಬ ಮಾಹಿತಿ ಇರುವುದರಿಂದ ಎಲ್‌ಒಸಿಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.

ಶ್ರೀನಗರ, ಆಗಸ್ಟ್ 5: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ್ದ ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆ ನಡೆದು 3 ತಿಂಗಳಾಗಿದೆ. ಭಾರತೀಯ ಸೇನೆಯ ದಾಳಿಗೆ ಹೆದರಿ ಪಾಕಿಸ್ತಾನವೇ ಕದನವಿರಾಮಕ್ಕೆ (Ceasefire) ಮನವಿ ಮಾಡಿತ್ತು. ಆದರೆ, ಕದನವಿರಾಮ ಘೋಷಿಸಿದ ದಿನ ಸಂಜೆಯೇ ಮತ್ತೆ ದಾಳಿ ನಡೆಸುವ ಮೂಲಕ ಪಾಕಿಸ್ತಾನ (Pakistan) ತನ್ನ ನರಿಬುದ್ಧಿಯನ್ನು ತೋರಿಸಿತ್ತು. ಇದೀಗ ಮತ್ತೊಮ್ಮೆ ಪಾಕ್ ಕದನವಿರಾಮ ಉಲ್ಲಂಘಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಎಲ್‌ಒಸಿಯಲ್ಲಿ ಗುಂಡಿನ ದಾಳಿ ನಡೆಸಿದೆ. ಕದನ ವಿರಾಮ ಉಲ್ಲಂಘಿಸಿರುವ ಪಾಕ್ ಸೇನೆ ಪೂಂಚ್ ವಲಯದಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.
ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆಗೆ ಭಾರತೀಯ ಸೇನೆಯೂ ಬಲವಾಗಿ ಪ್ರತಿದಾಳಿ ನಡೆಸಿದೆ. ಎರಡೂ ಸೇನೆಗಳ ನಡುವೆ ಗುಂಡಿನ ಚಕಮಕಿ 15 ನಿಮಿಷಗಳ ಕಾಲ ಮುಂದುವರೆಯಿತು. ಇಲ್ಲಿಯವರೆಗೆ ಯಾವುದೇ ಸಾವುನೋವು ಸಂಭವಿಸಿದ ವರದಿಯಾಗಿಲ್ಲ ಎಂದು ಸೇನಾ ಅಧಿಕಾರಿ ತಿಳಿಸಿದ್ದಾರೆ. ಪಾಕಿಸ್ತಾನ ಸೇನೆಯಿಂದ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಲಾಗಿತ್ತು ಎಂದು ಸೇನಾಧಿಕಾರಿ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತೀಯ ಸೇನೆಯು ಪ್ರತಿದಾಳಿ ನಡೆಸಿತು. ಈಗ ಗುಂಡಿನ ದಾಳಿ ನಿಂತಿದೆ. ಆದರೆ, ಭಯೋತ್ಪಾದಕರು ಒಳನುಸುಳಲು ಪ್ರಯತ್ನಿಸುತ್ತಿರಬಹುದು ಎಂಬ ಮಾಹಿತಿ ಇರುವುದರಿಂದ ಎಲ್‌ಒಸಿಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ: ಜಗತ್ತಿನ ಯಾವುದೇ ದೇಶದ ನಾಯಕರು ಆಪರೇಷನ್ ಸಿಂಧೂರ್ ತಡೆಯುವ ಪ್ರಯತ್ನ ಮಾಡಿಲ್ಲ: ಮೋದಿ
ಏಪ್ರಿಲ್ 22ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದಕ್ಕೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ಮೇ 7ರಂದು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಪಾಕ್ ಮನವಿಯ ಮೇರೆಗೆ ಕದನ ವಿರಾಮ ಘೋಷಿಸಲಾಗಿತ್ತು. ಈ ದಾಳಿಯಲ್ಲಿ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದ ಭಯೋತ್ಪಾದಕರು ಪಹಲ್ಗಾಮ್ನಲ್ಲಿ 26 ಜನರನ್ನು ಕೊಂದಿದ್ದರು. ಆ ದಾಳಿಯ ಸಂಚು ರೂಪಿಸಿದ್ದ ಮೂವರು ಉಗ್ರರನ್ನು ಈಗಾಗಲೇ ಎನ್ಕೌಂಟರ್ ಮಾಡಲಾಗಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಸಂಘರ್ಷದ ನಡುವೆಯೇ ಈ ಹಿಂದಿನ ಕದನ ವಿರಾಮ ಉಲ್ಲಂಘನೆ ಮೇ 9ರಂದು ನಡೆದಿತ್ತು. ಪಾಕಿಸ್ತಾನ ರೇಂಜರ್‌ಗಳು ಶುಕ್ರವಾರ ತಡರಾತ್ರಿ ಜಮ್ಮು ಸೆಕ್ಟರ್‌ನ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪೋಸ್ಟ್‌ಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದರು. ಮೇ 10ರ ಘಟನೆಯು 3,323 ಕಿ.ಮೀ ಭಾರತ-ಪಾಕಿಸ್ತಾನ ಗಡಿಯನ್ನು ಕಾಯಲು ನಿಯೋಜಿಸಲಾದ ಭಾರತದ ಗಡಿ ಕಾವಲು ಪಡೆ ಬಿಎಸ್‌ಎಫ್‌ನಿಂದ ತೀಕ್ಷ್ಣ ಪ್ರತಿಕ್ರಿಯೆಯನ್ನು ಪಡೆಯಿತು.
ಇದನ್ನೂ ಓದಿ: ಪಹಲ್ಗಾಮ್ ಉಗ್ರರ ಹುಟ್ಟಡಗಿಸಲು ಭಾರತೀಯ ಸೇನೆ ಆಪರೇಷನ್ ಮಹಾದೇವ್ ಎಂದು ಹೆಸರಿಟ್ಟಿದ್ದೇಕೆ?
ಪಾಕಿಸ್ತಾನದಿಂದ ಒಂದುವೇಳೆ ಮತ್ತೆ ಕದನವಿರಾಮ ಉಲ್ಲಂಘನೆಯಾದರೆ ಭಾರತೀಯ ಸೇನೆ ಆಪರೇಷನ್ ಸಿಂಧೂರವನ್ನು ಮತ್ತೆ ಆರಂಭಿಸುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದರು. ಪ್ರಧಾನಿ ಮೋದಿ ಕೂಡ ಆಪರೇಷನ್ ಸಿಂಧೂರ ಸಂಪೂರ್ಣವಾಗಿ ಸ್ಥಗಿತವಾಗಿಲ್ಲ ಎಂದು ಸುಳಿವು ನೀಡಿದ್ದರು. ಇದೀಗ ಮತ್ತೆ ಬಾಲ ಬಿಚ್ಚಿರುವ ಪಾಕಿಸ್ತಾನಕ್ಕೆ ಭಾರತ ತಕ್ಕ ತಿರುಗೇಟು ನೀಡುವ ಸಾಧ್ಯತೆ ಹೆಚ್ಚಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




