Donald Trump: 2ನೇ ಬಾರಿ ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣವಚನ ಸ್ವೀಕಾರ
ಅಮೆರಿಕ ಅಧ್ಯಕ್ಷರಾಗಿ 78 ವರ್ಷದ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾರತದಿಂದ ಸಚಿವ ಎಸ್. ಜೈಶಂಕರ್, ಉದ್ಯಮಿಗಳಾದ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಕೂಡ ಭಾಗಿಯಾಗಿದ್ದಾರೆ. ವಿಶ್ವದ ಮೂವರು ಶ್ರೀಮಂತ ವ್ಯಕ್ತಿಗಳಾದ ಎಲಾನ್ ಮಸ್ಕ್, ಜೆಫ್ ಬೆಜೋಸ್ ಮತ್ತು ಮಾರ್ಕ್ ಜುಕರ್‌ಬರ್ಗ್ ಕೂಡ ಟ್ರಂಪ್ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ 78 ವರ್ಷದ ಡೊನಾಲ್ಡ್ ಟ್ರಂಪ್ 2ನೇ ಅವಧಿಗೆ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಮೆರಿಕದ ಕಾಲಮಾನದ ಪ್ರಕಾರ ಮಧ್ಯಾಹ್ನ 12.30ಕ್ಕೆ (ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 10.30ಕ್ಕೆ) ಟ್ರಂಪ್ ಪ್ರಮಾಣವಚನ ಸಮಾರಂಭ ನಡೆದಿದ್ದು, ಇದರಲ್ಲಿ ಪಾಲ್ಗೊಳ್ಳಲು ಇಂದು ಮುಂಜಾನೆಯಿಂದಲೇ ಜನರು ಕಿಕ್ಕಿರಿದು ಸೇರಿದ್ದರು. ಭಾರತ ಸರ್ಕಾರದ ಪರವಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಮೆರಿಕದಲ್ಲಿ ನಡೆದ ಡೊನಾಲ್ಡ್ ಟ್ರಂಪ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಅವರು ಟ್ರಂಪ್ಗೆ ಮೋದಿ ಬರೆದು ಕಳುಹಿಸಿದ ಶುಭಾಶಯ ಪತ್ರವನ್ನು ನೀಡಿದ್ದಾರೆ.
ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೇರೆ ದೇಶಗಳ ನಾಯಕರನ್ನು ಅಮೆರಿಕದ ಅಧ್ಯಕ್ಷರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ. ಇದಕ್ಕೂ ಮುನ್ನ ಅಮೆರಿಕದ ಮಾಜಿ ಅಧ್ಯಕ್ಷ ಜೈ ಬೈಡೆನ್ ಮತ್ತು ಜಿಲ್ ಬಿಡೆನ್ ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಅವರಿಗೆ ಚಹಾ ಪಾರ್ಟಿ ಆಯೋಜಿಸಿದ್ದರು. ಇದಾದ ನಂತರ ನಾಲ್ಕೂ ಜನ ಒಟ್ಟಿಗೇ ಕ್ಯಾಪಿಟಲ್‌ಗೆ ನಡೆದ ಸಮಾರಂಭಕ್ಕೆ ಪ್ರಯಾಣಿಸಿದ್ದರು.
ಇದನ್ನೂ ಓದಿ: ಅಮೆರಿಕ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಟ್ರಂಪ್ಗೆ ಪತ್ರ ಬರೆದು ಕಳುಹಿಸಿದ ಮೋದಿ
ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಟ್ರಂಪ್-ವ್ಯಾನ್ಸ್ ಉದ್ಘಾಟನಾ ಸಮಿತಿಯ ಆಹ್ವಾನದ ಮೇರೆಗೆ ಅವರು ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಮೋದಿ ಮಾತ್ರವಲ್ಲದೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಅಭಿನಂದನೆ ಸಲ್ಲಿಸಿದ್ದಾರೆ.
The 60th Presidential Inauguration Ceremony https://t.co/kTB4w2VCdI
— Donald J. Trump (@realDonaldTrump) January 20, 2025
ವಿಶ್ವದ ದೊಡ್ಡಣ್ಣ ಅಮೆರಿಕದ ನೂತನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್ ಅವರಿಗೆ ಎಕ್ಸ್ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಅಮೆರಿಕದ 47 ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ವಹಿಸಿಕೊಂಡ ನನ್ನ ಆತ್ಮೀಯ ಗೆಳೆಯ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಭಿನಂದನೆಗಳು! ನಮ್ಮ ಎರಡೂ ದೇಶಗಳಿಗೆ ಪ್ರಯೋಜನವಾಗುವಂತೆ ಮತ್ತು ಜಗತ್ತಿಗೆ ಉತ್ತಮ ಭವಿಷ್ಯವನ್ನು ರೂಪಿಸಲು ಮತ್ತೊಮ್ಮೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ. ಮುಂದಿನ ಅವಧಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ! ಎಂದು ಪೋಸ್ಟ್ ಮಾಡಿದ್ದಾರೆ.
Congratulations my dear friend President @realDonaldTrump on your historic inauguration as the 47th President of the United States! I look forward to working closely together once again, to benefit both our countries, and to shape a better future for the world. Best wishes for a…
— Narendra Modi (@narendramodi) January 20, 2025
– ಜೋ ಬೈಡೆನ್ ಅವರನ್ನು ಹಿಂದಿಕ್ಕಿ ಪ್ರಮಾಣವಚನ ಸ್ವೀಕರಿಸಿದ ಅತ್ಯಂತ ಹಿರಿಯ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಇತಿಹಾಸ ನಿರ್ಮಿಸಿದ್ದಾರೆ.
– ಟ್ರಂಪ್ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಸುಮಾರು 100 ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Donald Trump Swearing-in Ceremony Live: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣವಚನದ ನೇರಪ್ರಸಾರ
– ಇವುಗಳಲ್ಲಿ ಮೆಕ್ಸಿಕೊದೊಂದಿಗಿನ ದಕ್ಷಿಣ ಯುಎಸ್ ಗಡಿಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸುವುದು, ತೈಲ ಕೊರೆಯುವಿಕೆಯ ಕುರಿತು ಜೋ ಬೈಡೆನ್ ಆಡಳಿತದ ನಿರ್ದೇಶನಗಳನ್ನು ರದ್ದುಗೊಳಿಸುವುದು ಸೇರಿವೆ.
– ಟ್ರಂಪ್ ಗಲ್ಫ್ ಆಫ್ ಮೆಕ್ಸಿಕೋ ಹೆಸರನ್ನು ಗಲ್ಫ್ ಆಫ್ ಅಮೆರಿಕಾ ಎಂದು ಬದಲಾಯಿಸುವ ಸಾಧ್ಯತೆಯಿದೆ.
– ಟ್ರಂಪ್ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸುವ ಅತಿಥಿಗಳಲ್ಲಿ ಅಮೆರಿಕದ ಮಾಜಿ ಅಧ್ಯಕ್ಷರಾದ ಬಿಲ್ ಕ್ಲಿಂಟನ್, ಜಾರ್ಜ್ ಡಬ್ಲ್ಯೂ. ಬುಷ್ ಮತ್ತು ಬರಾಕ್ ಒಬಾಮಾ ಮತ್ತು ಅವರ ಪತ್ನಿಯರು ಕೂಡ ಇದ್ದಾರೆ.
-2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಸೋಲಿಸಿದ ಹಿಲರಿ ಕ್ಲಿಂಟನ್ ಮತ್ತು ಅಮೆರಿಕದ ಮಾಜಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ಇಂದಿನ ಕಾರ್ಯಕ್ರಮದಲ್ಲಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:41 pm, Mon, 20 January 25