ಶಾಂತಿ ಘೋಷಣೆಗೆ ಸಹಿ ಹಾಕಿದ ಟ್ರಂಪ್, ಜಿನ್‌ಪಿಂಗ್, ಪುಟಿನ್; ಸಭೆಯಲ್ಲಿ ಮಾಡಿದ 4 ಪ್ರತಿಜ್ಞೆಗಳೇನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ತಮ್ಮ ನಡುವಿನ ಐತಿಹಾಸಿಕ ತ್ರಿಪಕ್ಷೀಯ ಸಭೆಯ ನಂತರ "ಜಂಟಿ ಶಾಂತಿ ಘೋಷಣೆ" ಹೊರಡಿಸಿದ್ದಾರೆ. ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗಸಭೆಯ ನೇಪಥ್ಯದಲ್ಲಿ ಇಂದು ಶೆನ್‌ಝೆನ್‌ನ ಕೈಲಿನ್ ವಿಲ್ಲಾದಲ್ಲಿ ಈ ಮೂವರು ನಾಯಕರು 90 ನಿಮಿಷಗಳ ಕಾಲ ಸುದೀರ್ಘ ಚರ್ಚೆ ನಡೆಸಿದರು. ಈ ಮೂವರು ರಾಷ್ಟ್ರಾಧ್ಯಕ್ಷರು ಈ ಹಿಂದೆ ಪರಸ್ಪರ ಮುಖಾಮುಖಿ ಸಭೆಗಳನ್ನು ನಡೆಸಿದ್ದರೂ, ಇದೇ ಮೊದಲ ಬಾರಿಗೆ ತ್ರಿಪಕ್ಷೀಯ ಮಾತುಕತೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ವಿವರ ಇಲ್ಲಿದೆ.

ಶಾಂತಿ ಘೋಷಣೆಗೆ ಸಹಿ ಹಾಕಿದ ಟ್ರಂಪ್, ಜಿನ್‌ಪಿಂಗ್, ಪುಟಿನ್; ಸಭೆಯಲ್ಲಿ ಮಾಡಿದ 4 ಪ್ರತಿಜ್ಞೆಗಳೇನು?
ಟ್ರಂಪ್, ಪುಟಿನ್, ಷಿ ಜಿನ್‌ಪಿಂಗ್
Image Credit source: AP

Updated on: Nov 19, 2026 | 6:28 PM

ಶೆನ್‌ಝೆನ್, ನವೆಂಬರ್ 19: ಚೀನಾದ ಶೆನ್‌ಝೆನ್‌ನಲ್ಲಿ ನಡೆದ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆಯ ನೇಪಥ್ಯದಲ್ಲಿ ಇಂದು ನಡೆದ ಐತಿಹಾಸಿಕ ತ್ರಿಪಕ್ಷೀಯ ಸಭೆಯ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ‘ಶಾಂತಿಯ ಜಂಟಿ ಘೋಷಣೆ’ ಹೊರಡಿಸಿದ್ದು, ಜಾಗತಿಕ ಭದ್ರತೆ ಮತ್ತು ಸ್ಥಿರತೆಗೆ ಸಂಬಂಧಿಸಿದಂತೆ 4 ಪ್ರಮುಖ ಪ್ರತಿಜ್ಞೆಗಳನ್ನು ಮಾಡಿದ್ದಾರೆ. ಸುಮಾರು 90 ನಿಮಿಷಗಳ ಕಾಲ ಸುದೀರ್ಘ ಸಭೆ ನಡೆಸಿದ ಮೂವರು ನಾಯಕರು, ಕಾರ್ಯತಂತ್ರದ ಸ್ಥಿರತೆ ಮತ್ತು ಅಂತಾರಾಷ್ಟ್ರೀಯ ಭದ್ರತೆಯನ್ನು ಕಾಪಾಡಿಕೊಳ್ಳಲು ಬದ್ಧರಾಗಿರುವುದಾಗಿ ಘೋಷಿಸಿದ್ದಾರೆ.

ಮೂವರು ನಾಯಕರ 4 ಪ್ರತಿಜ್ಞೆಗಳು:

Loading...

ವಿಶ್ವಸಂಸ್ಥೆಯ ಸುಧಾರಣೆಗೆ ಬದ್ಧತೆ:

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳಾಗಿರುವ ಚೀನಾ, ರಷ್ಯಾ ಮತ್ತು ಅಮೆರಿಕ ದೇಶಗಳು ವಿಶ್ವಸಂಸ್ಥೆಯಲ್ಲಿ ಅಗತ್ಯ ಸುಧಾರಣೆಗಳನ್ನು ತರಲು ಬದ್ಧವಾಗಿವೆ. ಇದರಿಂದ ವಿಶ್ವಸಂಸ್ಥೆಯು ಜಾಗತಿಕ ಸವಾಲುಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಸ್ಪಂದಿಸಲು ಮತ್ತು ಅಂತಾರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಯನ್ನು ಕಾಪಾಡುವ ತನ್ನ ಮೂಲಭೂತ ಧ್ಯೇಯವನ್ನು ಪೂರೈಸಲು ಸಾಧ್ಯವಾಗಲಿದೆ ಎಂದು ಘೋಷಣೆಯಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ: ‘ಮಾತುಕತೆಯಿಲ್ಲದೆ ಶಾಂತಿ ಸ್ಥಾಪನೆಯಾಗುವುದಿಲ್ಲ’; ಷಿ ಜಿನ್‌ಪಿಂಗ್, ಪುಟಿನ್ ಜೊತೆಗಿನ ಸಭೆ ಬಳಿಕ ಟ್ರಂಪ್ ಪ್ರತಿಪಾದನೆ

ಇಂಧನ ಪೂರೈಕೆ ಸ್ಥಿರತೆ ಮತ್ತು ಪೆಟ್ರೋಲಿಯಂ ಉತ್ಪಾದನೆ ಹೆಚ್ಚಳ:

ವಿಶ್ವದ ಎಲ್ಲಾ ರಾಷ್ಟ್ರಗಳ ಹಿತದೃಷ್ಟಿಯಿಂದ ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸಲು ಮೂರೂ ದೇಶಗಳು ಯೋಜನೆ ರೂಪಿಸಿವೆ. ಅಲ್ಲದೆ, ಜಾಗತಿಕ ಮಟ್ಟದಲ್ಲಿ ಸ್ಥಿರವಾದ ಇಂಧನ ಪೂರೈಕೆಯನ್ನು ಕಾಯ್ದುಕೊಳ್ಳುವ ಮಹತ್ವವನ್ನು ನಾಯಕರು ಪುನರುಚ್ಚರಿಸಿದ್ದಾರೆ.


ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ವ್ಯಾಪ್ತಿ ದುರುಪಯೋಗಕ್ಕೆ ತಡೆ:

ರಾಷ್ಟ್ರಗಳ ಸಮ್ಮತಿ ಮತ್ತು ಸರ್ಕಾರಿ ಉನ್ನತ ಅಧಿಕಾರಿಗಳ ವಿನಾಯಿತಿಗೆ ಗೌರವ ನೀಡುವ ತತ್ವವು ಅತ್ಯಂತ ಮಹತ್ವದ್ದಾಗಿದೆ ಎಂದು ಮೂವರು ರಾಷ್ಟ್ರಾಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ. ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ಮತ್ತು ಅಂತಹ ಇತರ ಸಂಸ್ಥೆಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಮೂವರೂ ಸಹಮತ ವ್ಯಕ್ತಪಡಿಸಿದ್ದಾರೆ.


ಪರಮಾಣು ಯುದ್ಧ ತಡೆ ಮತ್ತು ನಿಶಸ್ತ್ರೀಕರಣ ಮಾತುಕತೆ:

“ಪರಮಾಣು ಯುದ್ಧವನ್ನು ಎಂದಿಗೂ ಗೆಲ್ಲಲು ಸಾಧ್ಯವಿಲ್ಲ ಮತ್ತು ಅದನ್ನು ಎಂದಿಗೂ ನಡೆಸಬಾರದು” ಎಂಬ ತತ್ವವನ್ನು ಮೂವರು ನಾಯಕರು ಪುನರುಚ್ಚರಿಸಿದ್ದಾರೆ. ಪರಮಾಣು ಅಪಾಯಗಳನ್ನು ಕಡಿಮೆ ಮಾಡಲು ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣವನ್ನು ತಡೆಯಲು ಮೂರೂ ರಾಷ್ಟ್ರಗಳು ನಿರಂತರ ಮಾತುಕತೆ ನಡೆಸಲಿವೆ ಎಂದು ಪ್ರತಿಜ್ಞೆ ಮಾಡಲಾಗಿದೆ.

ಇದನ್ನೂ ಓದಿ: ಆವತ್ತು ಭಾರತಕ್ಕೆ ಶಾಪ ಹಾಕಿದ್ದ ಟ್ರಂಪ್ ಇವತ್ತು ಮಾಡಿದ್ದೇನು? ಅಮೆರಿಕ, ರಷ್ಯಾ, ಚೀನಾ ನಾಯಕರ ಭೇಟಿ ಮತ್ತು ಟ್ರಂಪ್ ಸೋಗಲಾಡಿತನ

ಇತಿಹಾಸ ನಿರ್ಮಿಸಿದ ಶೃಂಗಸಭೆ:

ಶೆನ್‌ಝೆನ್‌ನ ಕೈಲಿನ್ ವಿಲ್ಲಾದಲ್ಲಿ ಇಂದು ನಡೆದ ಈ ಸಭೆಯನ್ನು ಟ್ರಂಪ್ “ಐತಿಹಾಸಿಕ” ಎಂದು ಬಣ್ಣಿಸಿದರೆ, ಷಿ ಜಿನ್‌ಪಿಂಗ್ “ಇದೊಂದು ಮೈಲಿಗಲ್ಲು” ಎಂದಿದ್ದಾರೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಮೂರೂ ರಾಷ್ಟ್ರಗಳು ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ್ದನ್ನು ಸ್ಮರಿಸಿದ ಷಿ ಜಿನ್​ಪಿಂಗ್, ಕಷ್ಟಪಟ್ಟು ಗಳಿಸಿದ ಶಾಂತಿಯನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು.

 

ಉಕ್ರೇನ್ ಬಿಕ್ಕಟ್ಟಿನ ಚರ್ಚೆ:

ಇನ್ನು, ಈ ಸಭೆಯಲ್ಲಿ ರಷ್ಯಾ-ಉಕ್ರೇನ್ ಯುದ್ಧದ ಕುರಿತು ಪ್ರಮುಖವಾಗಿ ಚರ್ಚೆ ನಡೆದಿದೆ ಎಂದು ರಷ್ಯಾ ಅಧ್ಯಕ್ಷ ಪುಟಿನ್ ತಿಳಿಸಿದ್ದಾರೆ. ಆದರೆ ಈ ಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅಥವಾ ಯುರೋಪಿಯನ್ ಪ್ರತಿನಿಧಿಗಳು ಭಾಗವಹಿಸದಿರುವುದು ಕೈವ್ ಮತ್ತು ಯುರೋಪಿಯನ್ ರಾಷ್ಟ್ರಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

 

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 6:27 pm, Thu, 19 November 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us