ತನ್ನ ದುಬಾರಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಕಾರಿನ ಮೇಲೆ ಹಕ್ಕಿಯೊಂದು ಮೊಟ್ಟೆ ಇಟ್ಟಿರುವುದರಿಂದ, ಆ ಹಕ್ಕಿಗೆ ಯಾವುದೆ ತೊಂದರೆಯಾಗದಂತೆ ನೋಡಿಕೊಳ್ಳಲು ನಿಶ್ಚಯಿಸಿರುವ ದುಬೈನ ಕ್ರೌನ್ ಪ್ರಿನ್ಸ್, ತಮ್ಮ ಕಾರನ್ನು ಬಳಸದೆ ಇರಲು ನಿರ್ಧರಿಸಿದ್ದಾರೆ. ಈ ವಿಚಾರ ಸಾಮಾಜಿಕ ತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಕ್ರೌನ್ ಪ್ರಿನ್ಸ್ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಪ್ರಾಣಿಪ್ರಿಯ ಹಾಗೂ ಪರಿಸರವಾದಿ ಎಂದು ಖ್ಯಾತಿಯಾಗಿರುವ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ತಮ್ಮ ಕಾರಿನ ಮೇಲೆ ಮಾಮ ಹಕ್ಕಿಯು ಮೊಟ್ಟೆ ಇಟ್ಟಿರುವುದರಿಂದ ಆ ಕಾರನ್ನು ಬಳಸದಿರಲು ನಿಶ್ಚಯಿಸಿದ್ದಾರೆ.
ಜೊತೆಗೆ ಆ ಪಕ್ಷಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದಕ್ಕಾಗಿ ಯಾರು ಸಹ ಆ ಪಕ್ಷಿಯ ಹತ್ತಿರ ಸುಳಿಯಬಾರದು ಎಂದು ಪ್ರಿನ್ಸ್ ತಮ್ಮ ಸಿಬ್ಬಂದಿಗೆ ಎಚ್ಚರಿಸಿ, ತಿಳಿಸಿದ್ದಾರೆ. ಈ ವಿಚಾರವನ್ನು ಸ್ವತಹ ಪ್ರಿನ್ಸ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಫಜ್ಜಾ ಎಂದು ಜನಪ್ರಿಯವಾಗಿರುವ ದುಬೈನ ಕ್ರೌನ್ ಪ್ರಿನ್ಸ್ ಕೆಲವು ದಿನಗಳ ನಂತರ ಮತ್ತೆ ಇನ್ಸ್ಟಾಗ್ರಾಂ ಖಾತೆಯಲ್ಲಿ ಮೊಟ್ಟೆಗಳಿಂದ ಹೊರಬಂದಿರುವ ತನ್ನ ಮಕ್ಕಳನ್ನು ಮಾಮ ಹಕ್ಕಿಯು ಐಷಾರಾಮಿ ವಾಹನದ ಮೇಲೆ ನೋಡಿಕೊಳ್ಳುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
Published On - 2:51 pm, Fri, 14 August 20