ದುಬೈ ಜುಲೈ 17: ದಂಪತಿಗಳು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ ಎರಡು ತಿಂಗಳ ನಂತರ, ದುಬೈ (Dubai) ರಾಜಕುಮಾರಿ ಶೈಖಾ ಮಹ್ರಾ ಮೊಹಮ್ಮದ್ ರಶೆದ್ ಅಲ್ ಮಕ್ತೂಮ್ (Shaikha Mahra Mohammed Rashed Al Maktoum) ಅವರು ತಮ್ಮ ಪತಿ ಶೇಖ್ ಮನ ಬಿನ್ ಮೊಹಮ್ಮದ್ ಬಿನ್ ರಶೀದ್ ಬಿನ್ ಮನಾ ಅಲ್ ಮಕ್ತೌಮ್‌ಗೆ ಇನ್‌ಸ್ಟಾಗ್ರಾಮ್‌ನಲ್ಲಿ ‘ವಿವಾಹ ವಿಚ್ಛೇದನ’ ನೀಡಿದ್ದಾರೆ. ಜುಲೈ 16 ರಂದು ರಾಜಕುಮಾರಿ ತಮ್ಮ ಇನ್‌ಸ್ಟಾಗ್ರಾಮ್ (Instagram) ಪೋಸ್ಟ್‌ನಲ್ಲಿ, ತನ್ನ ಪತಿ ನನಗೆ ದ್ರೋಹವೆಸಗಿದ ಕಾರಣ ವಿಚ್ಛೇದನ ನೀಡುತ್ತಿರುವುದಾಗಿ ಹೇಳಿದ್ದಾರೆ. “ಪ್ರೀತಿಯ ಗಂಡ, ನೀವು ಇತರ ಸಂಗಾತಿಯೊಂದಿಗೆ ನಿರತರಾಗಿರುವ ಹೊತ್ತಲ್ಲೇ ನಾನು ಈ ಮೂಲಕ ನಮ್ಮ ವಿಚ್ಛೇದನವನ್ನು ಘೋಷಿಸುತ್ತೇನೆ. ನಾನು ನಿಮಗೆ ವಿಚ್ಛೇದನ ನೀಡುತ್ತಿದ್ದೇನೆ. ಕಾಳಜಿ ವಹಿಸಿ. ನಿಮ್ಮ ಮಾಜಿ ಪತ್ನಿ,” ಎಂದು ರಾಜಕುಮಾರಿ ಪೋಸ್ಟ್ ಮಾಡಿದ್ದಾರೆ.
ಇಸ್ಲಾಮಿಕ್ ಕಾನೂನಿನಲ್ಲಿ, ತ್ವರಿತ ವಿಚ್ಛೇದನದ ಪ್ರಕ್ರಿಯೆಯನ್ನು “ತಲಾಕ್-ಎ-ಬಿದ್ದತ್” ಎಂದು ಕರೆಯಲಾಗುತ್ತದೆ. ಅಲ್ಲಿ ಪತಿ ತಕ್ಷಣವೇ ಮದುವೆಯನ್ನು ರದ್ದು ಮಾಡಲು “ತಲಾಕ್” ಅನ್ನು ಮೂರು ಬಾರಿ ಹೇಳುತ್ತಾರೆ. ಸಾಂಪ್ರದಾಯಿಕವಾಗಿ, ಇಸ್ಲಾಮಿಕ್ ಕಾನೂನಿನ ಅನೇಕ ವ್ಯಾಖ್ಯಾನಗಳಲ್ಲಿ ಪುರುಷರು ಮಾತ್ರ ತಲಾಖ್ ಹೇಳಬಹುದು. ಮತ್ತೊಂದೆಡೆ, ಮಹಿಳೆಯರು “ಖುಲಾ” ಎಂದು ಕರೆಯಲ್ಪಡುವ ವಿಭಿನ್ನ ಪ್ರಕ್ರಿಯೆಯ ಮೂಲಕ ವಿಚ್ಛೇದನವನ್ನು ಪಡೆಯುವ ಆಯ್ಕೆಯನ್ನು ಹೊಂದಿದ್ದಾರೆ. ಅಲ್ಲಿ ಅವರು ತಮ್ಮ ಪತಿ ಅಥವಾ ನ್ಯಾಯಾಲಯದಿಂದ ವಿಚ್ಛೇದನವನ್ನು ಕೋರುತ್ತಾರೆ. ಕೆಲವು ನ್ಯಾಯವ್ಯಾಪ್ತಿಗಳಲ್ಲಿ, ಮಹಿಳೆಯರು ತಮ್ಮ ವಿವಾಹ ಒಪ್ಪಂದದಲ್ಲಿ (ನಿಕಾಹ್ ನಾಮಾ) ತಲಾಖ್ ಹೇಳುವ ಹಕ್ಕನ್ನು ನೀಡುವ ಷರತ್ತನ್ನು ಸಹ ಸೇರಿಸಬಹುದು.
ಏತನ್ಮಧ್ಯೆ, ರಾಜಕುಮಾರಿಯ ಪೋಸ್ಟ್‌ಗೆ ಅವರ ಹಿತೈಷಿಗಳು ಕಾಮೆಂಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕೆ ಪತಿಯೊಂದಿಗೆ ಇದ್ದ ಚಿತ್ರಗಳನ್ನ ಡಿಲೀಟ್ ಮಾಡಿದ್ದು ಅವರಿಬ್ಬರೂ ಸಹ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದಾರೆ.
ಶೈಖಾ ಮಹ್ರಾ ಅವರು ಕೈಗಾರಿಕೋದ್ಯಮಿ ಶೇಖ್ ಮನ ಬಿನ್ ಮೊಹಮ್ಮದ್ ಬಿನ್ ರಶೀದ್ ಬಿನ್ ಮನ ಅಲ್ ಮಕ್ತೌಮ್ ಅವರನ್ನು ಮೇ 2023 ರಲ್ಲಿ ವಿವಾಹವಾದರು. ಮದುವೆ ಆಗಿ ಒಂದು ವರ್ಷದ ನಂತರ ಮಗಳು ಜನಿಸಿದ್ದಳು.
ಇದನ್ನೂ ಓದಿ: ಯುಕೆಯ ಲೇಬರ್ ಪಾರ್ಟಿಯ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದ ಕನ್ನಡಿಗ ಡಾ. ನೀರಜ್ ಪಾಟೀಲ್
ಜೂನ್‌ನಲ್ಲಿ ಶೈಖಾ ಮಹ್ರಾ ಅವರು ತಮ್ಮ ಮಗುವನ್ನು ಅಪ್ಪಿಕೊಂಡಿರುವ ಪೋಸ್ಟ್ ಅನ್ನು Instagram ನಲ್ಲಿ ಹಂಚಿಕೊಂಡಿದ್ದರು. “ನಾವಿಬ್ಬರು ಮಾತ್ರ, ಎಂದು ಆ ಪೋಸ್ಟ್‌ಗೆ ಅವರು ಶೀರ್ಷಿಕೆ ನೀಡಿದ್ದರು. ಶೇಖ್ ಮಹ್ರಾ ಮೊಹಮ್ಮದ್ ರಶೆದ್ ಅಲ್ ಮಕ್ತೌಮ್ ಅವರು ಪ್ರಸ್ತುತ ದುಬೈ ಆಡಳಿತಗಾರರಾಗಿರುವ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಪುತ್ರಿ. ಇವರು ಉಪಾಧ್ಯಕ್ಷರು ಮತ್ತು ಪ್ರಧಾನ ಮಂತ್ರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ