
ನವದೆಹಲಿ: ಆಧುನಿಕ ಜಗತ್ತಿನಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಎಷ್ಟೇ ಮುಂದುವರೆದಿದ್ದರೂ ಅವರ ಮೇಲಿನ ಕಿರುಕುಳ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಈ ಬಗ್ಗೆ ವಿಶ್ವಸಂಸ್ಥೆ ಕೂಡ ಆತಂಕ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯ (United Nation) ಸೆಕ್ರೆಟರಿ ಆಂಟೋನಿಯೊ ಗುಟೆರೆಸ್ (Antonio Guterres) ಈ ಬಗ್ಗೆ ಆತಂಕಕಾರಿ ಸಂಗತಿಯನ್ನು ಹಂಚಿಕೊಂಡಿದ್ದು, ಪ್ರತಿ 11 ನಿಮಿಷಗಳಿಗೊಮ್ಮೆ ಮಹಿಳೆ ಅಥವಾ ಹುಡುಗಿಯನ್ನು ಆಕೆಯ ಆಪ್ತ ಸಂಗಾತಿ ಅಥವಾ ಕುಟುಂಬದ ಸದಸ್ಯರೇ ಹತ್ಯೆ ಮಾಡುತ್ತಾರೆ. ಮಹಿಳೆಯರು ಮತ್ತು ಬಾಲಕಿಯರ ಮೇಲಿನ ದೌರ್ಜನ್ಯವು ವಿಶ್ವದ ಅತ್ಯಂತ ವ್ಯಾಪಕವಾದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ (Human Rights Violation) ಎಂದು ಹೇಳಿದ್ದಾರೆ.
ಪ್ರತಿ ವರ್ಷ ನವೆಂಬರ್ 25ರಂದು ಆಚರಿಸಲಾಗುವ “ಅಂತಾರಾಷ್ಟ್ರೀಯ ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆ ದಿನ”ದ ಹಿನ್ನೆಲೆಯಲ್ಲಿ ಗುಟೆರೆಸ್ ಈ ಹೇಳಿಕೆಗಳನ್ನು ನೀಡಿದ್ದಾರೆ. ಯುಎನ್ ಸೆಕ್ರೆಟರಿ ಜನರಲ್ ಗುಟೆರಸ್, 2026ರ ವೇಳೆಗೆ ಮಹಿಳಾ ಹಕ್ಕುಗಳ ಸಂಘಟನೆಗಳು ಮತ್ತು ಚಳುವಳಿಗಳಿಗೆ ಶೇ. 50ರಷ್ಟು ಹಣವನ್ನು ಹೆಚ್ಚಿಸಲು ಸರ್ಕಾರಗಳನ್ನು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Murder: ಮಾಜಿ ಪ್ರೇಮಿಯಿಂದ ಮಹಿಳೆಯ ಬರ್ಬರ ಹತ್ಯೆ; ತಲೆ ಕತ್ತರಿಸಿ, ದೇಹ ತುಂಡು ಮಾಡಿ ಎಸೆದ ಹಂತಕ
ಸ್ತ್ರೀದ್ವೇಷದ ಭಾಷಣ, ಲೈಂಗಿಕ ಕಿರುಕುಳ, ಚಿತ್ರ ನಿಂದನೆ ಮುಂತಾದವುಗಳ ಮೂಲಕ ಮಹಿಳೆಯರು ಮತ್ತು ಹುಡುಗಿಯರು ಆನ್‌ಲೈನ್‌ನಲ್ಲಿ ಹಿಂಸೆಯನ್ನು ಎದುರಿಸುತ್ತಿದ್ದಾರೆ. ಈ ಘಟನೆಗಳು ಸಮಾಜದಲ್ಲಿ ಮಹಿಳೆಯರ ಭಾಗವಹಿಸುವಿಕೆ ಮತ್ತು ಆರ್ಥಿಕ ಮತ್ತು ಸುಸ್ಥಿರ ಬೆಳವಣಿಗೆಯನ್ನು ಹತ್ತಿಕ್ಕುತ್ತಿವೆ. ದೌರ್ಜನ್ಯ ಮತ್ತು ತಾರತಮ್ಯದ ಮೂಲಕ ಮಹಿಳೆಯರ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ನಿಯಂತ್ರಿಸಲಾಗುತ್ತಿದೆ ಎಂದು ಗುಟೆರಸ್ ಹೇಳಿದ್ದಾರೆ.
ಕಳೆದ ವರ್ಷದಲ್ಲಿ 15ರಿಂದ 49 ವರ್ಷದೊಳಗಿನ ಪ್ರತಿ 10 ಮಹಿಳೆಯರು ಮತ್ತು ಹುಡುಗಿಯರಲ್ಲಿ 1ಕ್ಕಿಂತ ಹೆಚ್ಚು ಜನರು ನಿಕಟ ಪಾಲುದಾರರಿಂದ ಲೈಂಗಿಕ ಅಥವಾ ದೈಹಿಕ ಹಿಂಸೆಗೆ ಒಳಗಾಗಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಮನೆಯೊಳಗಿನ ಸಂಘರ್ಷಗಳು, ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ ಎನ್ನಲಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವ ಕಾನೂನುಗಳನ್ನು ಎಲ್ಲೆಡೆ ಜಾರಿಗೊಳಿಸಲು ಕನಿಷ್ಠ 2 ದಶಕಗಳಾದರೂ ಬೇಕು ಎಂದು ವರದಿ ತಿಳಿಸಿದೆ.