Murder: ಮಾಜಿ ಪ್ರೇಮಿಯಿಂದ ಮಹಿಳೆಯ ಬರ್ಬರ ಹತ್ಯೆ; ತಲೆ ಕತ್ತರಿಸಿ, ದೇಹ ತುಂಡು ಮಾಡಿ ಎಸೆದ ಹಂತಕ
ಈ ವರ್ಷದ ಫೆಬ್ರವರಿಯಲ್ಲಿ ಮಹಿಳೆಗೆ ವಿವಾಹವಾಗಿತ್ತು. ತನ್ನನ್ನು ಪ್ರೀತಿಸಿ, ಬೇರೆಯವರನ್ನು ಮದುವೆಯಾಗಿದ್ದಕ್ಕೆ ಆಕೆಯ ಮಾಜಿ ಪ್ರೇಮಿ ಕೋಪಗೊಂಡಿದ್ದ.
ಅಜಂಗಢ: ದೆಹಲಿಯಲ್ಲಿ ನಡೆದ ದೇಶವನ್ನೇ ಬೆಚ್ಚಿ ಬೀಳಿಸಿರುವ ಶ್ರದ್ಧಾ ವಾಕರ್ (Shraddha Walkar Murder) ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಉತ್ತರ ಪ್ರದೇಶದ (Uttar Pradesh) ಅಜಂಗಢದಲ್ಲಿ ಇಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಭಾನುವಾರ ಅಜಂಗಢದ ಕೆರೆಯಲ್ಲಿ ಮಹಿಳೆಯ ಶವ ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಹಿಳೆಯ ಮಾಜಿ ಪ್ರೇಮಿಯೇ ಈ ಕೊಲೆ (Murder) ಮಾಡಿದ್ದಾನೆ ಎಂದು ಶಂಕಿಸಲಾಗಿದೆ.
ಅಜಂಗಢ ಜಿಲ್ಲೆಯ ಅಹ್ರೌಲಾ ಪೊಲೀಸ್ ಠಾಣೆ ವ್ಯಾಪ್ತಿಯ ಪಶ್ಚಿಮ್ ಪಟ್ಟಿ ಗ್ರಾಮದಲ್ಲಿ ಮಹಿಳೆಯ ಛಿದ್ರಗೊಂಡ ಶವ ಪತ್ತೆಯಾಗಿದೆ. ಉತ್ತರ ಪ್ರದೇಶ ಪೊಲೀಸರ ಪ್ರಕಾರ, ಹಳೇ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿದೆ ಎನ್ನಲಾಗುತ್ತಿದೆ.
ಈಗಾಗಲೇ ಮೃತ ಮಹಿಳೆಯ ಮಾಜಿ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದು, ಇತರ ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ವರ್ಷದ ಫೆಬ್ರವರಿಯಲ್ಲಿ ಮಹಿಳೆಗೆ ವಿವಾಹವಾಗಿತ್ತು. ತನ್ನನ್ನು ಪ್ರೀತಿಸಿ, ಬೇರೆಯವರನ್ನು ಮದುವೆಯಾಗಿದ್ದಕ್ಕೆ ಆಕೆಯ ಮಾಜಿ ಪ್ರೇಮಿ ಕೋಪಗೊಂಡಿದ್ದ.
ಇದನ್ನೂ ಓದಿ: Delhi Murder Case: ದೆಹಲಿ ಕೊಲೆ ಪ್ರಕರಣ; ಶ್ರದ್ಧಾಳ ದೇಹದ 13 ಭಾಗ ಪತ್ತೆ; ತಲೆ, ಹತ್ಯೆಯ ಆಯುಧಕ್ಕಾಗಿ ಹುಡುಕಾಟ
ಆ ಮದುವೆ ಮುರಿದುಕೊಂಡು, ಗಂಡನನ್ನು ಬಿಟ್ಟು ತನ್ನೊಡನೆ ಬರುವಂತೆ ಆಕೆಯ ಮನವೊಲಿಸಲು ಪ್ರಯತ್ನಿಸಿದ್ದ. ಅದಕ್ಕೆ ಆಕೆ ಒಪ್ಪಿರಲಿಲ್ಲ. ಹೀಗಾಗಿ, ಆಕೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದ್ದ ಎನ್ನಲಾಗಿದೆ. ಗಂಡನನ್ನು ಬಿಟ್ಟು ತನ್ನ ಜೊತೆ ಬರಲು ಒಪ್ಪದ ಮಹಿಳೆಯ ಕತ್ತು ಹಿಸುಕಿ ಆತ ಕೊಲೆ ಮಾಡಿದ್ದಾನೆ. ನಂತರ ಆಕೆಯ ಕತ್ತು ಕತ್ತರಿಸಿ, ಬಾವಿ ಮತ್ತು ಕೆರೆಯಲ್ಲಿ ಹಾಕಿದ್ದಾನೆ.
“ಬಾವಿಯಲ್ಲಿ ಮಹಿಳೆಯ ಶಿರಚ್ಛೇದಿತ ಶವ ಪತ್ತೆಯಾಗಿದೆ. ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇತರ 8 ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ವಿಚಾರಣೆಯಿಂದ ಆರೋಪಿಯು ಮೃತ ಮಹಿಳೆಯೊಂದಿಗೆ ಈ ಹಿಂದೆ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿದೆ. ಆರೋಪಿಗಳು ಮೃತಳ ದೇಹವನ್ನು ತುಂಡುಗಳಾಗಿ ಕತ್ತರಿಸಿ ಆ ತುಂಡುಗಳ ಜೊತೆ ಆಕೆಯ ಬಟ್ಟೆಗಳನ್ನು ಬಾವಿಯಲ್ಲಿ ಹಾಕಿದ್ದಾನೆ. ನಂತರ ಆಕೆಯ ಕತ್ತರಿಸಿದ ತಲೆಯನ್ನು ಕೆರೆಯಲ್ಲಿ ಎಸೆದಿದ್ದಾನೆ. ಇದರಿಂದ ಆಕೆಯ ಶವ ಸಿಕ್ಕರೂ ಅದು ಯಾರದ್ದೆಂದು ಯಾರಿಗೂ ಗೊತ್ತಾಗುವುದಿಲ್ಲ ಎಂದು ಆತ ಊಹಿಸಿದ್ದ ಎಂದು ಅಜಂಗಢದ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ಹೇಳಿದ್ದಾರೆ.
ಇದನ್ನೂ ಓದಿ: Bangla Murder: ಬಾಂಗ್ಲಾದಲ್ಲೂ ಶ್ರದ್ಧಾ ವಾಕರ್ ಮಾದರಿಯ ಮತ್ತೊಂದು ಕೊಲೆ, ಶ್ರದ್ಧಾ ಕೊಲೆ ಆರೋಪಿ ಕೂಡ ಬಾಂಗ್ಲಾದವನೇ
‘‘ಮೃತ ಮಹಿಳೆ ಈ ವರ್ಷದ ಫೆಬ್ರವರಿಯಲ್ಲಿ ಆರೋಪಿ ವಿದೇಶಕ್ಕೆ ಹೋಗಿದ್ದಾಗ ಬೇರೊಬ್ಬನ ಜೊತೆ ವಿವಾಹವಾಗಿದ್ದಳು. ಆತ ವಾಪಾಸ್ ಬಂದ ನಂತರ ಆಕೆ ಬೇರೊಬ್ಬನನ್ನು ಮದುವೆಯಾಗಿರುವ ವಿಷಯ ಗೊತ್ತಾಗಿತ್ತು. ಆಕೆಯ ಮನವೊಲಿಸಿ ಮದುವೆ ಮುರಿದುಕೊಳ್ಳಲು ಹೇಳಿದ್ದ. ಅದಕ್ಕೆ ಆಕೆ ಒಪ್ಪದಿದ್ದಾಗ ನ.10ರಂದು ದೇವಸ್ಥಾನಕ್ಕೆ ಹೋಗೋಣ ಎಂದು ಹೇಳಿ ಆಕೆಯನ್ನು ಹೊರಗೆ ಕರೆದೊಯ್ದಿದ್ದ. ನಂತರ ಆಕೆಯನ್ನು ಗದ್ದೆಗೆ ಕರೆದೊಯ್ದು ಕತ್ತು ಹಿಸುಕಿ ಸಾಯಿಸಿದ್ದ. ಅದಾದ ಬಳಿಕ ಆಕೆಯ ತಲೆ, ದೇಹವನ್ನು ಬೇರ್ಪಡಿಸಿ, ಗೆಳೆಯರ ಸಹಾಯದಿಂದ ಆಕೆಯ ದೇಹವನ್ನು ತುಂಡು ಮಾಡಿ ಬೇರೆ ಬೇರೆ ಕಡೆ ಎಸೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:28 am, Mon, 21 November 22