Delhi Murder Case: ದೆಹಲಿ ಕೊಲೆ ಪ್ರಕರಣ; ಶ್ರದ್ಧಾಳ ದೇಹದ 13 ಭಾಗ ಪತ್ತೆ; ತಲೆ, ಹತ್ಯೆಯ ಆಯುಧಕ್ಕಾಗಿ ಹುಡುಕಾಟ
Shraddha Walkar Murder: ಈಗಾಗಲೇ ಶ್ರದ್ಧಾಳ ದೇಹದ 13 ಭಾಗಗಳು ಪತ್ತೆಯಾಗಿದ್ದು, ಆಕೆಯ ತಲೆ ಹಾಗೂ ಅಫ್ತಾಬ್ ಆಕೆಯ ಮೃತದೇಹವನ್ನು ತುಂಡು ಮಾಡಲು ಬಳಸಿದ್ದ ಆಯುಧ ಪತ್ತೆಯಾಗಿಲ್ಲ.
ನವದೆಹಲಿ: ದೆಹಲಿಯ ಅಪಾರ್ಟ್ಮೆಂಟ್ನಲ್ಲಿ ತನ್ನೊಂದಿಗೆ ವಾಸವಾಗಿದ್ದ ಲಿವ್-ಇನ್ ಪಾರ್ಟನರ್ ಶ್ರದ್ಧಾ ವಾಕರ್ (Shraddha Walkar) ಎಂಬ 26 ವರ್ಷದ ಯುವತಿಯನ್ನು ಅಫ್ತಾಬ್ (Aftab) ಎಂಬ ಯುವಕ ಕತ್ತು ಹಿಸುಕಿ ಕೊಂದು, ಆಕೆಯ ದೇಹವನ್ನು 35 ಭಾಗಗಳಾಗಿ ತುಂಡು ಮಾಡಿ, ದೆಹಲಿ ಹಾಗೂ ಸುತ್ತಮುತ್ತ ಬಿಸಾಡಿದ್ದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. 6 ತಿಂಗಳ ಹಿಂದೆ ಅಂದರೆ ಕಳೆದ ಮೇನಲ್ಲಿ ನಡೆದ ಕೊಲೆ (Murder) ವಿಷಯ ಇದೀಗ ಬೆಳಕಿಗೆ ಬಂದಿದ್ದು, ಅಫ್ತಾಬ್ ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡ ಬಳಿಕ ಪೊಲೀಸರು ಶ್ರದ್ಧಾಳ ಶವದ (Shraddha Murder) 35 ಭಾಗಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಈಗಾಗಲೇ ಆಕೆಯ ದೇಹದ 13 ಭಾಗಗಳು ಪತ್ತೆಯಾಗಿದ್ದು, ಆಕೆಯ ತಲೆ ಹಾಗೂ ಅಫ್ತಾಬ್ ಆಕೆಯ ಮೃತದೇಹವನ್ನು ತುಂಡು ಮಾಡಲು ಬಳಸಿದ್ದ ಆಯುಧ ಪತ್ತೆಯಾಗಿಲ್ಲ.
ಪ್ರೇಯಸಿಯನ್ನು ಕೊಂದ ಆರೋಪದಲ್ಲಿ ಬಂಧಿತನಾದ 28 ವರ್ಷದ ಆಫ್ತಾಬ್ ಅಮೀನ್ ಪೂನಾವಾಲಾನನ್ನು ದಕ್ಷಿಣ ದೆಹಲಿಯ ಛತ್ತರ್‌ಪುರದ ಅರಣ್ಯ ಪ್ರದೇಶಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಅವನು ಶ್ರದ್ಧಾ ವಾಕರ್ ಅವರ ದೇಹದ ಕೆಲವು ಭಾಗಗಳನ್ನು ಎಸೆದಿದ್ದ. ಉಳಿದ ಭಾಗಗಳನ್ನು ಪತ್ತೆಹಚ್ಚಲು ಆತನನ್ನು ಕರೆದುಕೊಂಡು ಪೊಲೀಸರು ತಿರುಗಾಡುತ್ತಿದ್ದಾರೆ. ಇದೀಗ ಸಿಕ್ಕಿರುವ 13 ಭಾಗಗಳು ಶ್ರದ್ಧಾಳದೇ ಎಂಬುದು ಫಾರೆನ್ಸಿಕ್ ಪರೀಕ್ಷೆಯ ನಂತರ ಗೊತ್ತಾಗಲಿದೆ. ಅದಕ್ಕಾಗಿ ಈಗಾಗಲೇ ಶ್ರದ್ಧಾಳ ತಂದೆ-ತಾಯಿಯ ಡಿಎನ್ಎಯನ್ನು ಪಡೆಯಲಾಗಿದೆ.
ಮೃತ ಶ್ರದ್ಧಾ ಮತ್ತು ಅಫ್ತಾಬ್ ಬಂಬಲ್ ಎಂಬ ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದರು. ಹೀಗಾಗಿ, ಆರೋಪಿ ಅಫ್ತಾಬ್ ಅವರನ್ನು ಭೇಟಿ ಮಾಡಿದ ಮಹಿಳೆಯರ ವಿವರಗಳನ್ನು ಕಂಡುಹಿಡಿಯಲು ದೆಹಲಿ ಪೊಲೀಸರು ಡೇಟಿಂಗ್ ಆ್ಯಪ್ ಬಂಬಲ್‌ಗೆ ಪತ್ರ ಬರೆಯುವ ಸಾಧ್ಯತೆಯಿದೆ. ಬಂಬಲ್‌ನ ಪ್ರಧಾನ ಕಛೇರಿಯು ಅಮೆರಿಕಾದ ಟೆಕ್ಸಾಸ್‌ನಲ್ಲಿದೆ.
ಇದನ್ನೂ ಓದಿ: ದೆಹಲಿ ಶ್ರದ್ಧಾ ಕೊಲೆ ಪ್ರಕರಣ: ಹಂತಕ ಅಫ್ತಾಬ್ ಬಾಯ್ಬಿಟ್ಟ ಕ್ರೂರ ಸತ್ಯಕ್ಕೆ ಬೆಚ್ಚಿಬಿದ್ದ ಪೊಲೀಸ್
ತಮ್ಮ ಮಗಳನ್ನು ಇಷ್ಟು ಹೀನಾಯವಾಗಿ ಕೊಂದಿರುವ ಅಫ್ತಾಬ್ಗೆ ಮರಣ ದಂಡನೆ ವಿಧಿಸಬೇಕು. ಅಥವಾ ತಮ್ಮ ಕೈಗೆ ಒಪ್ಪಿಸಬೇಕೆಂದು ಶ್ರದ್ಧಾಳ ತಂದೆ ಒತ್ತಾಯಿಸಿದ್ದಾರೆ.
ಇದಕ್ಕೂ ಮೊದಲೇ ಕೊಲೆ ಯತ್ನ ಮಾಡಿದ್ದ ಅಫ್ತಾಬ್: ಮದುವೆಯಾಗೆಂದು ಪೀಡಿಸುತ್ತಿದ್ದ ಶ್ರದ್ಧಾಳನ್ನು ಕೊಲ್ಲಲು ಇದಕ್ಕೂ ಮೊದಲೇ ಅಫ್ತಾಬ್ ಪ್ಲಾನ್ ಮಾಡಿದ್ದ ಎನ್ನುವ ವಿಚಾರವೂ ತನಿಖೆ ವೇಳೆ ಬಯಲಾಗಿದೆ. ಈ ಬಗ್ಗೆ ದೆಹಲಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿರುವ ಅಫ್ತಾಬ್ ಅಮೀನ್ ಪೂನ್‌ವಾಲಾ, ತಾನು ಮೊದಲು ಕೂಡ ಅವಳನ್ನು ಕೊಲ್ಲಲು ಪ್ರಯತ್ನಿಸಿದ್ದೆ. ಆದರೆ ಅವಳು ಜೋರಾಗಿ ಅತ್ತು, ಎಮೋಷನಲ್ ಆಗಿ ಮಾತನಾಡಿದ್ದರಿಂದ ಸುಮ್ಮನಾಗಿದ್ದೆ. ಆದರೆ, ಮೇ 18ರ ರಾತ್ರಿ ಜಗಳ ವಿಕೋಪಕ್ಕೆ ಹೋಗಿ ಆಕೆಯನ್ನು ಕೊಲೆ ಮಾಡಿದ್ದೆ ಎಂದು ಅಫ್ತಾಬ್ ಒಪ್ಪಿಕೊಂಡಿದ್ದಾನೆ.
ಶೆಫ್ ಆಗಿದ್ದ ಅಫ್ತಾಬ್ ಶ್ರದ್ಧಾಳ ದೇಹದಲ್ಲಿ ಲಿವರ್ ಮತ್ತು ಯಕೃತ್ತನ್ನು ಮೊದಲು ಕತ್ತರಿಸಿ, ಅದನ್ನು ಮೊದಲೆರಡು ದಿನ ದೆಹಲಿಯಲ್ಲಿ ಬಿಸಾಡಿದ್ದ. ಅದಾದ ನಂತರ ದಿನವೂ ಒಂದೊಂದೇ ಅಂಗವನ್ನು ಎಸೆದು ಬರುತ್ತಿದ್ದ. ದೆಹಲಿ ಪೊಲೀಸರು ಅಪರಾಧದ ದೃಶ್ಯವನ್ನು ಮರುಸೃಷ್ಟಿಸಲು ಶ್ರದ್ಧಾ ಮತ್ತು ಅಫ್ತಾಬ್ ವಾಸಿಸುತ್ತಿದ್ದ ದೆಹಲಿಯ ಫ್ಲಾಟ್‌ಗೆ ಅಫ್ತಾಬ್‌ನನ್ನು ಕರೆದೊಯ್ದಾಗ ಆತ ತಾನು ಮಾಡಿದ ಕೃತ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.
ಇದನ್ನೂ ಓದಿ: Shraddha Murder: ದೆಹಲಿಯನ್ನು ಬೆಚ್ಚಿ ಬೀಳಿಸಿದ ಶ್ರದ್ಧಾ ಕೊಲೆ ಪ್ರಕರಣ; ಆ ನಿಗೂಢ ರಾತ್ರಿ ನಡೆದಿದ್ದೇನು?
ಏನಿದು ಘಟನೆ?:
28 ವರ್ಷದ ಶ್ರದ್ಧಾ ಹಾಗೂ ಆಕೆಯ ಪ್ರೇಮಿ ಅಫ್ತಾಬ್ 3 ವರ್ಷದಿಂದ ಒಂದೇ ಮನೆಯಲ್ಲಿ ಲಿವ್-ಇನ್ ರಿಲೇಷನ್ಶಿಪ್ನಲ್ಲಿದ್ದರು. ಅಪ್ಪ-ಅಮ್ಮನ ಮಾತು ಕೇಳದೆ ಅವರೊಂದಿಗೆ ಜಗಳವಾಡಿಕೊಂಡು ಅಫ್ತಾಬ್ ಜೊತೆ ಇರಲು ಬಂದಿದ್ದ ಶ್ರದ್ಧಾಗೆ ತಮ್ಮ ಸಂಬಂಧಕ್ಕೊಂದು ಹೆಸರು ಬೇಕಿತ್ತು. ಹೀಗಾಗಿ, ತನ್ನನ್ನು ಮದುವೆಯಾಗೆಂದು ಶ್ರದ್ಧಾ ಅಫ್ತಾಬ್ ಬಳಿ ಹಠ ಮಾಡುತ್ತಲೇ ಇದ್ದಳು. ಆದರೆ, ಆಕೆಯನ್ನು ಮದುವೆಯಾಗಲು ಅಫ್ತಾಬ್ಗೆ ಒಪ್ಪಿಗೆ ಇರಲಿಲ್ಲ. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಜಗಳ ನಡೆದು ಕಳೆದ ಮೇ ತಿಂಗಳಲ್ಲಿ ಅಫ್ತಾಬ್ ಶ್ರದ್ಧಾಳ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ಆಮೇಲೆ ಏನು ಮಾಡುವುದೆಂದು ತೋಚದೆ ಆ ಶವವನ್ನು ಬೆಡ್ರೂಮಿನಲ್ಲಿಟ್ಟುಕೊಂಡು ಕುಳಿತಿದ್ದಾಗ ಆ ಶವವನ್ನು ಯಾರಿಗೂ ಗೊತ್ತಾಗದಂತೆ ವಿಲೇವಾರಿ ಮಾಡಬೇಕೆಂಬ ಯೋಚನೆ ಬಂದಿತ್ತು. ಕೊಲೆ ಮಾಡಿದ ರಾತ್ರಿ ಕುಳಿತು ಅಮೇರಿಕನ್ ಕ್ರೈಂ ಥ್ರಿಲ್ಲರ್ ವೆಬ್ ಸೀರೀಸ್ ಡೆಕ್ಸ್ಟರ್ ಸೇರಿದಂತೆ ಅನೇಕ ಕ್ರೈಂ ಸಿನಿಮಾಗಳನ್ನು ನೋಡಿದ್ದ ಅಫ್ತಾಬ್ ಶ್ರದ್ಧಾಳ ದೇಹವನ್ನು ಹಾಗೇ ಬಿಸಾಡುವ ಬದಲು ಸಣ್ಣ ತುಂಡುಗಳಾಗಿ ಕೊಚ್ಚಿ ಬಿಸಾಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ನಿರ್ಧರಿಸಿದ್ದ.
ಅಫ್ತಾಬ್ ತನ್ನ ಪ್ರೇಯಸಿ ಶ್ರದ್ಧಾಳನ್ನು ಕೊಂದ ನಂತರ ಆಕೆಯ ಶವವನ್ನು ಇಟ್ಟುಕೊಂಡು ಅದೇ ರೂಮಿನಲ್ಲಿ ಒಂದು ದಿನವನ್ನು ಕಳೆದಿದ್ದ. ಮಾರನೇ ದಿನ ಹೊಸ ಫ್ರಿಡ್ಜ್ ಖರೀದಿಸಿ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ಆ ಫ್ರಿಡ್ಜ್ನಲ್ಲಿ ಇರಿಸಿದ್ದ. ನಂತರ 18 ದಿನಗಳವರೆಗೆ ಪ್ರತಿ ರಾತ್ರಿ 12 ಗಂಟೆಯ ನಂತರ ಮನೆಯಿಂದ ಹೊರಗೆ ಹೋಗಿ, ದೆಹಲಿ ಮತ್ತು ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ಆಕೆಯ ದೇಹದ ಒಂದೊಂದೇ ಭಾಗಗಳನ್ನು ಬಿಸಾಡಿ ಬರುತ್ತಿದ್ದ. ಇದರಿಂದಾಗಿ ಆ ಶವ ಯಾರದ್ದು ಎಂದು ಯಾರಿಗೂ ಗೊತ್ತಾಗುವುದಿಲ್ಲ ಎಂಬುದು ಅವನ ಪ್ಲಾನ್ ಆಗಿತ್ತು.
18 ದಿನಗಳ ಕಾಲ ಶವದ ತುಂಡುಗಳನ್ನು ಫ್ರಿಡ್ಜ್ನಲ್ಲಿ ಇಟ್ಟಿದ್ದರಿಂದ ಮತ್ತು ಮನೆಯಲ್ಲಿ ಸ್ವಲ್ಪ ರಕ್ತದ ವಾಸನೆ ಹಾಗೇ ಉಳಿದಿದ್ದರಿಂದ ಮನೆಯ ವಾಸನೆಯನ್ನು ಕಡಿಮೆ ಮಾಡಲು ರೂಂ ಫ್ರೆಷನರ್ಗಳನ್ನು ತಂದಿದ್ದ. ಹಾಗೇ, ದಿನವೂ ಊದುಬತ್ತಿ ಹೊತ್ತಿಸಿ ಇಡುತ್ತಿದ್ದ. ಮುಂಬೈನ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಶ್ರದ್ಧಾ ವಾಕರ್ ಹಾಗೂ ಅಫ್ತಾಬ್ ಮುಂಬೈನಲ್ಲಿ ಡೇಟಿಂಗ್ ಅಪ್ಲಿಕೇಶನ್ ಮೂಲಕ ಭೇಟಿಯಾಗಿದ್ದರು. ಅವರು 3 ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿದ್ದರು. ಮನೆಯವರು ಅದಕ್ಕೆ ಒಪ್ಪದಿದ್ದಾಗ ಅವರಿಬ್ಬರೂ ದೆಹಲಿಗೆ ಬಂದು ಫ್ಲಾಟ್ನಲ್ಲಿ ವಾಸವಾಗಿದ್ದರು. ಆಗ ಶ್ರದ್ಧಾ ತನ್ನನ್ನು ಮದುವೆಯಾಗುವಂತೆ ಅಫ್ತಾಬ್ಗೆ ಒತ್ತಡ ಹೇರಲು ಪ್ರಾರಂಭಿಸಿದಳು. ಇದೇ ಕಾರಣಕ್ಕೆ ಈ ಕೊಲೆ ನಡೆದಿದೆ.
ಕೊಲೆ ವಿಷಯ ಬಯಲಾಗಿದ್ದು ಹೇಗೆ?:
ಮಹಾರಾಷ್ಟ್ರದ ಪಾಲ್ಘರ್ ನಿವಾಸಿಯಾದ ಶ್ರದ್ಧಾಳ ತಂದೆ ವಿಕಾಸ್ ಮದನ್ ವಾಕರ್ ನವೆಂಬರ್‌ನಲ್ಲಿ ಪೊಲೀಸರನ್ನು ಸಂಪರ್ಕಿಸಿ ತನ್ನ ಮಗಳು ಮೇ ತಿಂಗಳಿಂದ ನಾಪತ್ತೆಯಾಗಿದ್ದಾಳೆ, ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ, ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ದೂರು ನೀಡಿದ್ದರು. ಅದರ ಬೆನ್ನತ್ತಿ ತನಿಖೆ ಮಾಡಲಾರಂಭಿಸಿದ ಪೊಲೀಸರಿಗೆ ನಿಗೂಢ ಕೊಲೆಯ ಸುಳಿವು ಸಿಕ್ಕಿತ್ತು. ಆರಂಭಿಕ ತನಿಖೆಯಲ್ಲಿ ಶ್ರದ್ಧಾಳ ಮೊಬೈಲ್ ಕೊನೆಯ ಬಾರಿ ಎಲ್ಲಿ ಸಿಗ್ನಲ್ ಸಿಕ್ಕಿದೆ ಎಂಬುದು ಪತ್ತೆಯಾಗಿತ್ತು. ಆ ತನಿಖೆಯ ಸಂದರ್ಭದಲ್ಲಿ ಅಫ್ತಾಬ್ ಮತ್ತು ಶ್ರದ್ಧಾ ದೆಹಲಿಗೆ ಬಂದು ಛತ್ತರ್‌ಪುರ ಪಹಾಡಿ ಪ್ರದೇಶದಲ್ಲಿ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ವಾಸಿಸಲು ಪ್ರಾರಂಭಿಸಿದ್ದಾರೆ ಎಂದು ಗೊತ್ತಾಗಿತ್ತು. ಅಲ್ಲಿ ಹೋಗಿ ಅಫ್ತಾಬ್‌ನನ್ನು ವಿಚಾರಣೆ ಮಾಡಿದಾಗ ಆತ ಶ್ರದ್ಧಾಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಮೇ ತಿಂಗಳಲ್ಲಿ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದು, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿ ಮತ್ತು ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ವಿಲೇವಾರಿ ಮಾಡಿರುವುದಾಗಿ ಅಫ್ತಾಬ್ ಒಪ್ಪಿಕೊಂಡಿದ್ದ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:07 pm, Wed, 16 November 22