Shraddha Murder: ದೆಹಲಿಯನ್ನು ಬೆಚ್ಚಿ ಬೀಳಿಸಿದ ಶ್ರದ್ಧಾ ಕೊಲೆ ಪ್ರಕರಣ; ಆ ನಿಗೂಢ ರಾತ್ರಿ ನಡೆದಿದ್ದೇನು?

TV9 Digital Desk

| Edited By: Sushma Chakre

Updated on:Nov 15, 2022 | 11:55 AM

Delhi Murder Case: ಕೊಲೆ ಮಾಡಿದ ರಾತ್ರಿ ಕುಳಿತು ಅಮೇರಿಕನ್ ಕ್ರೈಂ ಥ್ರಿಲ್ಲರ್ ವೆಬ್ ಸೀರೀಸ್​ ಡೆಕ್ಸ್ಟರ್ ನೋಡಿದ್ದ ಅಫ್ತಾಬ್​ ಶ್ರದ್ಧಾಳ ದೇಹವನ್ನು ಹಾಗೇ ಬಿಸಾಡುವ ಬದಲು ಸಣ್ಣ ತುಂಡುಗಳಾಗಿ ಕೊಚ್ಚಿ ಎಸೆದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ನಿರ್ಧರಿಸಿದ್ದ.

Shraddha Murder: ದೆಹಲಿಯನ್ನು ಬೆಚ್ಚಿ ಬೀಳಿಸಿದ ಶ್ರದ್ಧಾ ಕೊಲೆ ಪ್ರಕರಣ; ಆ ನಿಗೂಢ ರಾತ್ರಿ ನಡೆದಿದ್ದೇನು?
ಅಫ್ತಾಬ್- ಶ್ರದ್ಧಾ

ನವದೆಹಲಿ: 6 ತಿಂಗಳ ಹಿಂದೆ ದೆಹಲಿಯಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣ (Delhi Murder Case) ಇದೀಗ ಬಯಲಿಗೆ ಬಂದಿದ್ದು, ಆ ಕೊಲೆಯನ್ನು ಮಾಡಿರುವ ರೀತಿ ಎಂಥವರನ್ನೂ ಭಯ ಬೀಳಿಸುವಂತಿದೆ. ಪ್ರೀತಿಸಿದ ಹುಡುಗನಿಗಾಗಿ ತನ್ನ ತಂದೆ-ತಾಯಿಯನ್ನು ಬಿಟ್ಟು ಬಂದಿದ್ದ 28 ವರ್ಷದ ಶ್ರದ್ಧಾ ವಾಕರ್ (Shraddha Walker) ಯಾರೂ ಊಹಿಸದ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ. ಕಳೆದ ಮೇ ತಿಂಗಳಲ್ಲಿಯೇ ಆಕೆಯನ್ನು ಕೊಲೆ ಮಾಡಿದ್ದ ಆಕೆಯ ಲಿನ್-ಇನ್ ಪಾರ್ಟನರ್ ಅಫ್ತಾಬ್ ಅಮಿನ್ ಪೂನಾವಾಲ (Aaftab Amin Poonawala) ಇಷ್ಟು ದಿನವೂ ಏನೂ ನಡೆದೇ ಇಲ್ಲವೆಂಬಂತೆ ಆರಾಮಾಗಿ ಓಡಾಡಿಕೊಂಡಿದ್ದ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಈ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ತನ್ನ ಪ್ರೇಯಸಿ ಶ್ರದ್ಧಾಳನ್ನು ಕೊಂದಿದ್ದು ಏಕೆ? ಹೇಗೆ? ಮೇ 18ರ ರಾತ್ರಿ ನಡೆದಿದ್ದೇನು? ಎಂಬ ಪೂರ್ತಿ ಮಾಹಿತಿ ಇಲ್ಲಿದೆ.

28 ವರ್ಷದ ಶ್ರದ್ಧಾ ಹಾಗೂ ಆಕೆಯ ಪ್ರೇಮಿ ಅಫ್ತಾಬ್ ಒಂದೇ ಮನೆಯಲ್ಲಿ ಲಿವ್-ಇನ್ ರಿಲೇಷನ್​ಶಿಪ್​ನಲ್ಲಿದ್ದರು. ಅಪ್ಪ-ಅಮ್ಮನ ಮಾತು ಕೇಳದೆ ಅವರೊಂದಿಗೆ ಜಗಳವಾಡಿಕೊಂಡು ಅಫ್ತಾಬ್​ ಜೊತೆ ಇರಲು ಬಂದಿದ್ದ ಶ್ರದ್ಧಾಗೆ ತಮ್ಮ ಸಂಬಂಧಕ್ಕೊಂದು ಹೆಸರು ಬೇಕಿತ್ತು. ಹೀಗಾಗಿ, ತನ್ನನ್ನು ಮದುವೆಯಾಗೆಂದು ಶ್ರದ್ಧಾ ಅಫ್ತಾಬ್ ಬಳಿ ಹಠ ಮಾಡುತ್ತಲೇ ಇದ್ದಳು. ಆದರೆ, ಆಕೆಯನ್ನು ಮದುವೆಯಾಗಲು ಅಫ್ತಾಬ್​ಗೆ ಒಪ್ಪಿಗೆ ಇರಲಿಲ್ಲ. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಜಗಳ ನಡೆದು ಕಳೆದ ಮೇ ತಿಂಗಳಲ್ಲಿ ಅಫ್ತಾಬ್​ ಶ್ರದ್ಧಾಳ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ಆಮೇಲೆ ಏನು ಮಾಡುವುದೆಂದು ತೋಚದೆ ಆ ಶವವನ್ನು ಬೆಡ್​ರೂಮಿನಲ್ಲಿಟ್ಟುಕೊಂಡು ಕುಳಿತಿದ್ದಾಗ ಆ ಶವವನ್ನು ಯಾರಿಗೂ ಗೊತ್ತಾಗದಂತೆ ವಿಲೇವಾರಿ ಮಾಡಬೇಕೆಂಬ ಯೋಚನೆ ಬಂದಿತ್ತು.

ಕೊಲೆ ಮಾಡಿದ ರಾತ್ರಿ ಕುಳಿತು ಅಮೇರಿಕನ್ ಕ್ರೈಂ ಥ್ರಿಲ್ಲರ್ ವೆಬ್ ಸೀರೀಸ್​ ಡೆಕ್ಸ್ಟರ್ ಸೇರಿದಂತೆ ಅನೇಕ ಕ್ರೈಂ ಸಿನಿಮಾಗಳನ್ನು ನೋಡಿದ್ದ ಅಫ್ತಾಬ್​ ಶ್ರದ್ಧಾಳ ದೇಹವನ್ನು ಹಾಗೇ ಬಿಸಾಡುವ ಬದಲು ಸಣ್ಣ ತುಂಡುಗಳಾಗಿ ಕೊಚ್ಚಿ ಬಿಸಾಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ನಿರ್ಧರಿಸಿದ್ದ.

ಇದನ್ನೂ ಓದಿ: ಸೆನ್ಸೇಷನಲ್ ಕ್ರೈಮ್ ಕತೆಗಳು: ಕೊಲೆಯಾದ ಮಹಿಳೆಯೇ ಪ್ರೇತಾತ್ಮವಾಗಿ ಹಂತಕನನ್ನು ಹಿಡಿದುಕೊಟ್ಟ ನಂಬಲಸದಳ ಕತೆಯಿದು!

ಅಫ್ತಾಬ್ ತನ್ನ ಪ್ರೇಯಸಿ ಶ್ರದ್ಧಾಳನ್ನು ಕೊಂದ ನಂತರ ಆಕೆಯ ಶವವನ್ನು ಇಟ್ಟುಕೊಂಡು ಅದೇ ರೂಮಿನಲ್ಲಿ ಒಂದು ದಿನವನ್ನು ಕಳೆದಿದ್ದ. ಮಾರನೇ ದಿನ ಹೊಸ ಫ್ರಿಡ್ಜ್ ಖರೀದಿಸಿ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ಆ ಫ್ರಿಡ್ಜ್​ನಲ್ಲಿ ಇರಿಸಿದ್ದ. ನಂತರ 18 ದಿನಗಳವರೆಗೆ ಪ್ರತಿ ರಾತ್ರಿ 12 ಗಂಟೆಯ ನಂತರ ಮನೆಯಿಂದ ಹೊರಗೆ ಹೋಗಿ, ದೆಹಲಿ ಮತ್ತು ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ಆಕೆಯ ದೇಹದ ಒಂದೊಂದೇ ಭಾಗಗಳನ್ನು ಬಿಸಾಡಿ ಬರುತ್ತಿದ್ದ. ಇದರಿಂದಾಗಿ ಆ ಶವ ಯಾರದ್ದು ಎಂದು ಯಾರಿಗೂ ಗೊತ್ತಾಗುವುದಿಲ್ಲ ಎಂಬುದು ಅವನ ಪ್ಲಾನ್ ಆಗಿತ್ತು.

18 ದಿನಗಳ ಕಾಲ ಶವದ ತುಂಡುಗಳನ್ನು ಫ್ರಿಡ್ಜ್​ನಲ್ಲಿ ಇಟ್ಟಿದ್ದರಿಂದ ಮತ್ತು ಮನೆಯಲ್ಲಿ ಸ್ವಲ್ಪ ರಕ್ತದ ವಾಸನೆ ಹಾಗೇ ಉಳಿದಿದ್ದರಿಂದ ಮನೆಯ ವಾಸನೆಯನ್ನು ಕಡಿಮೆ ಮಾಡಲು ರೂಂ ಫ್ರೆಷನರ್​ಗಳನ್ನು ತಂದಿದ್ದ. ಹಾಗೇ, ದಿನವೂ ಊದುಬತ್ತಿ ಹೊತ್ತಿಸಿ ಇಡುತ್ತಿದ್ದ.

ಮುಂಬೈನ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಶ್ರದ್ಧಾ ವಾಕರ್ ಹಾಗೂ ಅಫ್ತಾಬ್ ಮುಂಬೈನಲ್ಲಿ ಡೇಟಿಂಗ್ ಅಪ್ಲಿಕೇಶನ್ ಮೂಲಕ ಭೇಟಿಯಾಗಿದ್ದರು. ಅವರು 3 ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿದ್ದರು. ಮನೆಯವರು ಅದಕ್ಕೆ ಒಪ್ಪದಿದ್ದಾಗ ಅವರಿಬ್ಬರೂ ದೆಹಲಿಗೆ ಬಂದು ಫ್ಲಾಟ್​ನಲ್ಲಿ ವಾಸವಾಗಿದ್ದರು. ಆಗ ಶ್ರದ್ಧಾ ತನ್ನನ್ನು ಮದುವೆಯಾಗುವಂತೆ ಅಫ್ತಾಬ್​ಗೆ ಒತ್ತಡ ಹೇರಲು ಪ್ರಾರಂಭಿಸಿದಳು. ಇದೇ ಕಾರಣಕ್ಕೆ ಈ ಕೊಲೆ ನಡೆದಿದೆ.

ಇದನ್ನೂ ಓದಿ: ಲಿವ್ ಇನ್ ಸಂಗಾತಿಯನ್ನು ಕೊಲೆಗೈದು 35 ತುಂಡು ಮಾಡಿ ಬಿಸಾಡಿದ ಪ್ರಿಯಕರ, ದೆಹಲಿಯಲ್ಲಿ ನಡೆಯಿತು ಆಘಾತಕಾರಿ ಘಟನೆ

ನಾನು ಮಗಳೆಂಬುದನ್ನೇ ಮರೆತುಬಿಡಿ: ಅಫ್ತಾಬ್​ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ ಶ್ರದ್ಧಾ ವಾಕರ್ 2019ರಲ್ಲಿ ತನ್ನ ಮನೆಯವರಿಗೆ ಈ ವಿಷಯ ತಿಳಿಸಿದ್ದಳು. ಆದರೆ, ಆತ ಮುಸ್ಲಿಂ ಆಗಿದ್ದರಿಂದ ಸಂಪ್ರದಾಯಸ್ಥ ಹಿಂದೂ ಮನೆತನದ ಶ್ರದ್ಧಾಳ ಅಪ್ಪ-ಅಮ್ಮ ಈ ಸಂಬಂಧಕ್ಕೆ ಒಪ್ಪಿಗೆ ನೀಡಲಿಲ್ಲ. ಅಂತರ್ಜಾತಿ, ಅಂತರ್ ಧರ್ಮ ಮದುವೆಯನ್ನು ಮಾಡಿಕೊಡಲು ಸಾಧ್ಯವಿಲ್ಲವೆಂದು ಅವರು ಶ್ರದ್ಧಾಗೆ ಹೇಳಿದ್ದರು. ಇದರಿಂದ ಕೋಪಗೊಂಡಿದ್ದ ಶ್ರದ್ಧಾ ‘ನನಗೆ ಈಗ 25 ವರ್ಷ ವಯಸ್ಸಾಗಿದೆ. ನನ್ನ ನಿರ್ಧಾರಗಳನ್ನು ತೆಗೆದುಕೊಳ್ಳುವ ಎಲ್ಲಾ ಹಕ್ಕು ನನಗಿದೆ. ನಾನು ಅಫ್ತಾಬ್ ಅಮೀನ್ ಪೂನಾವಾಲಾ ಜೊತೆ ಲಿವ್-ಇನ್ ರಿಲೇಷನ್​ಶಿಪ್​ನಲ್ಲಿ ಇರುತ್ತೇನೆ. ಇವತ್ತಿನಿಂದ ನಾನು ನಿಮ್ಮ ಮಗಳು ಎಂಬುದನ್ನು ಮರೆತುಬಿಡಿ’ ಎಂದು ಹೇಳಿ ತನ್ನ ಬಟ್ಟೆಗಳನ್ನು ತೆಗೆದುಕೊಂಡು ಅಫ್ತಾಬ್ ಜೊತೆ ವಾಸಿಸಲು ಮನೆ ಬಿಟ್ಟು ಹೋಗಿದ್ದಳು. ಆದರೆ, ಆಕೆಯ ಆ ನಿರ್ಧಾರವೇ ಆಕೆಯ ಪ್ರಾಣವನ್ನು ಬಲಿ ಪಡೆದುಕೊಂಡಿತು.

ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?: ಮಹಾರಾಷ್ಟ್ರದ ಪಾಲ್ಘರ್ ನಿವಾಸಿಯಾದ ಶ್ರದ್ಧಾಳ ತಂದೆ ವಿಕಾಸ್ ಮದನ್ ವಾಕರ್ ನವೆಂಬರ್‌ನಲ್ಲಿ ಪೊಲೀಸರನ್ನು ಸಂಪರ್ಕಿಸಿ ತನ್ನ ಮಗಳು ಮೇ ತಿಂಗಳಿಂದ ನಾಪತ್ತೆಯಾಗಿದ್ದಾಳೆ, ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ, ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ದೂರು ನೀಡಿದ್ದರು. ಅದರ ಬೆನ್ನತ್ತಿ ತನಿಖೆ ಮಾಡಲಾರಂಭಿಸಿದ ಪೊಲೀಸರಿಗೆ ನಿಗೂಢ ಕೊಲೆಯ ಸುಳಿವು ಸಿಕ್ಕಿತ್ತು. ಆರಂಭಿಕ ತನಿಖೆಯಲ್ಲಿ ಶ್ರದ್ಧಾಳ ಮೊಬೈಲ್ ಕೊನೆಯ ಬಾರಿ ಎಲ್ಲಿ ಸಿಗ್ನಲ್ ಸಿಕ್ಕಿದೆ ಎಂಬುದು ಪತ್ತೆಯಾಗಿತ್ತು. ಅದನ್ನು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರಿಗೆ ಆಕೆಯ ಲಿವ್-ಇನ್ ಪಾರ್ಟನರ್ ಅಫ್ತಾಬ್ ಮೇಲೆ ಅನುಮಾನ ಮೂಡಿತ್ತು. ಆದರೆ, ಆತನನ್ನು ವಿಚಾರಣೆ ಮಾಡಿದಾಗ ತನಗೇನೂ ಗೊತ್ತಿಲ್ಲವೆಂದು ಅಮಾಯಕನಂತೆ ನಟಿಸಿದ್ದ. ಆತನ ವಿರುದ್ಧ ಸಾಕ್ಷಿಗಳೂ ಸಿಕ್ಕಿರಲಿಲ್ಲ. ಕೊನೆಗೆ ಈ ಪ್ರಕರಣವನ್ನು ದೆಹಲಿ ಪೊಲೀಸರಿಗೆ ವರ್ಗಾಯಿಸಲಾಯಿತು. ಆ ತನಿಖೆಯ ಸಂದರ್ಭದಲ್ಲಿ ಅಫ್ತಾಬ್ ಮತ್ತು ಶ್ರದ್ಧಾ ದೆಹಲಿಗೆ ಬಂದು ಛತ್ತರ್‌ಪುರ ಪಹಾಡಿ ಪ್ರದೇಶದಲ್ಲಿ ಬಾಡಿಗೆ ಅಪಾರ್ಟ್​ಮೆಂಟ್‌ನಲ್ಲಿ ವಾಸಿಸಲು ಪ್ರಾರಂಭಿಸಿದ್ದಾರೆ ಎಂದು ಗೊತ್ತಾಗಿತ್ತು. ಅಲ್ಲಿ ಹೋಗಿ ಪರಿಶೀಲಿಸಿದಾಗ ಆ ಫ್ಲಾಟ್​ನಲ್ಲಿ ಸಿಕ್ಕ ಕೆಲವು ಸುಳಿವುಗಳನ್ನು ಆಧರಿಸಿ ಮತ್ತೊಮ್ಮೆ ಅಫ್ತಾಬ್​ನನ್ನು ವಿಚಾರಣೆ ಮಾಡಿದಾಗ ಆತ ಶ್ರದ್ಧಾಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಮೇ ತಿಂಗಳಲ್ಲಿ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದು, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿ ಮತ್ತು ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ವಿಲೇವಾರಿ ಮಾಡಿರುವುದಾಗಿ ಅಫ್ತಾಬ್ ಒಪ್ಪಿಕೊಂಡಿದ್ದ. ಆತ ಕೊಲೆ ಮಾಡಿ, ಆ ಶವವನ್ನು ಬಿಸಾಡಿದ ರೀತಿಯನ್ನು ಕೇಳಿದ ಸ್ವತಃ ಪೊಲೀಸರೇ ಶಾಕ್ ಆಗಿದ್ದರು. ಕೊಲೆ ನಡೆದು 6 ತಿಂಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಅಫ್ತಾಬ್​ ಇದೀಗ ಜೈಲಿನಲ್ಲಿದ್ದಾನೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada