AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

550 ವರ್ಷ ಹಳೆಯ ಈ ಅದ್ಭುತವನ್ನು ನೀವಿನ್ನು ನೋಡಲಾಗದು; ಸಮುದ್ರದೊಳಗೆ ಕುಸಿದುಬಿತ್ತು ಹವಾಯಿಯ ಪ್ರಸಿದ್ಧ ‘ಹೊಲೇ ಸೀ ಆರ್ಚ್’

ಹವಾಯಿಯ ಅತ್ಯಂತ ಪ್ರಸಿದ್ಧ ಹಾಗೂ ಬಿಗ್ ಐಲ್ಯಾಂಡ್‌ನಲ್ಲಿರುವ 'ಹವಾಯಿ ಜ್ವಾಲಾಮುಖಿ ರಾಷ್ಟ್ರೀಯ ಉದ್ಯಾನವನ'ದ ದಕ್ಷಿಣ ಕರಾವಳಿ ತೀರದಲ್ಲಿದ್ದ 'ಹೋಲೆ ಸೀ ಆರ್ಚ್' ನೈಸರ್ಗಿಕ ಲಾವಾ-ಬಂಡೆಯ ಕಮಾನು ಸಂಪೂರ್ಣವಾಗಿ ಪೆಸಿಫಿಕ್ ಸಾಗರಕ್ಕೆ ಕುಸಿದು ಬಿದ್ದಿದೆ. ಸುಮಾರು 550 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದ ಈ ನೈಸರ್ಗಿಕ ವಿಸ್ಮಯದ ಕಣ್ಮರೆಯೊಂದಿಗೆ, ಹವಾಯಿಯ ಪ್ರಮುಖ ಪ್ರವಾಸಿ ಹಾಗೂ ಫೋಟೋಗ್ರಫಿಯ ಆಕರ್ಷಣೆಗಳಲ್ಲಿ ಒಂದಾಗಿದ್ದ ತಾಣದ ಅಂತ್ಯವಾಗಿದೆ.

550 ವರ್ಷ ಹಳೆಯ ಈ ಅದ್ಭುತವನ್ನು ನೀವಿನ್ನು ನೋಡಲಾಗದು; ಸಮುದ್ರದೊಳಗೆ ಕುಸಿದುಬಿತ್ತು ಹವಾಯಿಯ ಪ್ರಸಿದ್ಧ 'ಹೊಲೇ ಸೀ ಆರ್ಚ್'
ಹೋಲೆ ಸೀ ಆರ್ಚ್Image Credit source: TV9
ಸುಷ್ಮಾ ಚಕ್ರೆ
|

Updated on: Oct 03, 2026 | 3:14 PM

Share

ಹವಾಯಿ, ಅಕ್ಟೋಬರ್ 3: ಯುಎಸ್​ಎಯ ಹವಾಯಿಯ ಅತ್ಯಂತ ಪ್ರಸಿದ್ಧ ಹಾಗೂ ಸುಮಾರು 550 ವರ್ಷಗಳ ಹಿಂದೆ ಲಾವಾರಸದ ಕಲ್ಲುಗಳಿಂದ ರೂಪುಗೊಂಡಿತ್ತು ಎನ್ನಲಾದ ‘ಹೋಲೆ ಸೀ ಆರ್ಚ್’ ನೈಸರ್ಗಿಕ ಕಮಾನು ಪೆಸಿಫಿಕ್ ಸಾಗರಕ್ಕೆ ಕುಸಿದು ಬಿದ್ದಿದೆ. ಇದರೊಂದಿಗೆ ದ್ವೀಪದ ಕರಾವಳಿ ತೀರದ ಅತ್ಯಂತ ಹೆಚ್ಚು ಫೋಟೋ ತೆಗೆಸಿಕೊಳ್ಳಲ್ಪಡುತ್ತಿದ್ದ ಸುಂದರ ನೈಸರ್ಗಿಕ ತಾಣವೊಂದು ಅಂತ್ಯಗೊಂಡಂತಾಗಿದೆ. ಸುಮಾರು 90 ಅಡಿ ಎತ್ತರವಿದ್ದ ಈ ನೈಸರ್ಗಿಕ ಕಮಾನು ಬಿಗ್ ಐಲ್ಯಾಂಡ್‌ನಲ್ಲಿರುವ ‘ಹವಾಯಿ ಜ್ವಾಲಾಮುಖಿ ರಾಷ್ಟ್ರೀಯ ಉದ್ಯಾನವನ’ದ ‘ಚೇನ್ ಆಫ್ ಕ್ರೇಟರ್ಸ್ ರೋಡ್’ ತುದಿಯಲ್ಲಿ ರೂಪ ತಳೆದಿತ್ತು. ಯುಎಸ್ ನ್ಯಾಷನಲ್ ಪಾರ್ಕ್ ಸರ್ವಿಸ್ (NPS) ಪ್ರಕಾರ, ಈ ಕಮಾನು ಸೆಪ್ಟೆಂಬರ್ 23ರವರೆಗೆ ಕರಾವಳಿಯಿಂದ ಗೋಚರಿಸುತ್ತಿತ್ತು. ಆದರೆ ಸೆಪ್ಟೆಂಬರ್ 27ರ ವೇಳೆಗೆ ಸಂಪೂರ್ಣವಾಗಿ ಕಣ್ಮರೆಯಾಗಿದೆ. ಈ ಕಮಾನು ಕುಸಿದ ನಿಖರ ಸಮಯ ತಿಳಿದುಬಂದಿಲ್ಲ.

‘ನೋಲೋ’ ಉಷ್ಣವಲಯದ ಚಂಡಮಾರುತದ ಕಾರಣದಿಂದಾಗಿ ಈ ಉದ್ಯಾನವನವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಅದೇ ಅವಧಿಯಲ್ಲಿ ಬೃಹತ್ ಅಲೆಗಳ ಹೊಡೆತಕ್ಕೆ ಈ ನೈಸರ್ಗಿಕ ಕಮಾನು ಕುಸಿದಿರಬಹುದು ಎಂದು ಶಂಕಿಸಲಾಗಿದೆ. ಹೋಲೆ ಸೀ ಆರ್ಚ್ ಕಮಾನು ಕಳೆದ ಕೆಲವು ವರ್ಷಗಳಿಂದಲೇ ಶಿಥಿಲಗೊಳ್ಳುವ ಲಕ್ಷಣಗಳನ್ನು ತೋರಿಸುತ್ತಿತ್ತು. ನಿರಂತರ ಸಮುದ್ರದ ಅಲೆಗಳು ಮತ್ತು ಮಣ್ಣಿನ ಸವೆತದಿಂದಾಗಿ ಕರಾವಳಿಯ ಈ ಭಾಗವು ಕ್ರಮೇಣ ದುರ್ಬಲಗೊಳ್ಳುತ್ತಿದ್ದು, ಇದು ಎಂದಾದರೂ ಒಂದು ದಿನ ಸಮುದ್ರಕ್ಕೆ ಕುಸಿಯುತ್ತದೆ ಎಂದು 2021ರಲ್ಲೇ ಎನ್‌ಪಿಎಸ್ ಎಚ್ಚರಿಸಿತ್ತು.

ಇದನ್ನೂ ಓದಿ: ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿದು ವಾಹನ ಸವಾರರ ಪರದಾಟ 

ಹೋಲೆ ಸೀ ಆರ್ಚ್ ಕುಸಿಯಲು ಕಾರಣಗಳೇನು?:

  1. 2018ರ ಕಿಲೌಯಾ ಜ್ವಾಲಾಮುಖಿ ಸ್ಫೋಟ ಮತ್ತು ನಂತರದ ಜ್ವಾಲಾಮುಖಿ ಶಿಖರ ಕುಸಿತದಿಂದ ಸಂಭವಿಸಿದ ಭೂಕಂಪಗಳು ಈ ಭಾಗದ ಬಂಡೆಗಳಿಗೆ ಹಾನಿ ಉಂಟುಮಾಡಿದ್ದವು.
  2. ಜನವರಿ 2020ರಲ್ಲಿ ಬಿರುಕುಗಳು ಮತ್ತು ಅಸ್ಥಿರತೆಯ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಎನ್‌ಪಿಎಸ್ ಮೂಲ ವೀಕ್ಷಣಾ ಪ್ರದೇಶವನ್ನು ಮುಚ್ಚಿತ್ತು. ನಂತರ ಪ್ರವಾಸಿಗರ ಸುರಕ್ಷತೆಗಾಗಿ ದೂರದಲ್ಲಿ ಹೊಸ ವೀಕ್ಷಣಾ ತಾಣವನ್ನು ತೆರೆಯಲಾಗಿತ್ತು.
  3. ಅದೇ ವರ್ಷ ಉಷ್ಣವಲಯದ ಚಂಡಮಾರುತದ ಭಾರಿ ಅಲೆಗಳು ಈ ಕಮಾನಿನ ತಳಭಾಗದ ಕಲ್ಲುಗಳನ್ನು ಕೊಚ್ಚಿಕೊಂಡು ಹೋಗಿದ್ದವು. ಪ್ರಸ್ತುತ ಸಂಭವಿಸಿದ ಸಂಪೂರ್ಣ ಕುಸಿತವು ಕರಾವಳಿಯ ನೈಸರ್ಗಿಕ ಬದಲಾವಣೆಯ ಭಾಗವಾಗಿದೆ ಎಂದು ಎನ್‌ಪಿಎಸ್ ತಿಳಿಸಿದೆ.
  4. 5 ಶತಮಾನಗಳಿಗೂ ಹೆಚ್ಚು ಕಾಲ ಸಾಗರದ ಉಪ್ಪು ನೀರು ಮತ್ತು ನಿರಂತರ ಅಲೆಗಳ ಹೊಡೆತದಿಂದಾಗಿ ಲಾವಾರಸದ ಬಂಡೆಗಳು ಒಳಗಿನಿಂದ ಟೊಳ್ಳಾಗಿದ್ದವು. ಜಿಯೋಲಾಜಿಕಲ್ ಪ್ರಕ್ರಿಯೆಯಂತೆ ಇಂತಹ ‘ಸೀ ಆರ್ಚ್‌ಗಳು’ ಹುಟ್ಟಿದಂತೆಯೇ ಒಂದು ದಿನ ಸಂಪೂರ್ಣವಾಗಿ ಸವೆಯುವುದು ನಿಸರ್ಗದ ನಿಯಮವಾಗಿದೆ.
  5. ಹೋಲೆ ಸೀ ಆರ್ಚ್ ‘ಹವಾಯಿ ಜ್ವಾಲಾಮುಖಿ ರಾಷ್ಟ್ರೀಯ ಉದ್ಯಾನವನ’ಕ್ಕೆ ಭೇಟಿ ನೀಡುವ ಪ್ರವಾಸಿಗರು ಮತ್ತು ಛಾಯಾಗ್ರಾಹಕರ ನೆಚ್ಚಿನ ತಾಣವಾಗಿತ್ತು. ಎನ್‌ಪಿಎಸ್ ಈ ಕಮಾನು ಕುಸಿದಿರುವ ಸುದ್ದಿ ಪ್ರಕಟಿಸಿದ ಬೆನ್ನಲ್ಲೇ, ಸಾವಿರಾರು ಪ್ರವಾಸಿಗರು ತಾವು ಈ ಹಿಂದೆ ತೆಗೆಸಿಕೊಂಡಿದ್ದ ಫೋಟೋಗಳು ಹಾಗೂ ನೆನಪುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಬೇಸರ ಹೊರಹಾಕಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More