ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿದು ವಾಹನ ಸವಾರರ ಪರದಾಟ
ಕರ್ನಾಟಕದಲ್ಲಿ ಸುರಿದ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಡ್ಯ ನಗರದ ಹಲವು ರಸ್ತೆಗಳು ಜಲಾವೃತವಾಗಿದ್ದು, ಮನೆಗಳಿಗೂ ನೀರು ನುಗ್ಗಿದೆ. ಚಾಮರಾಜನಗರದ ಹನೂರಿನಲ್ಲಿ ಅಪಾರ ಮಳೆಯಾಗಿದ್ದು, ಮಲೆ ಮಹದೇಶ್ವರ ಬೆಟ್ಟದಲ್ಲಿ ಭೂಕುಸಿತ ಸಂಭವಿಸಿ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. ಜನರು ಮಳೆ ಅವಾಂತರದಿಂದ ತೀವ್ರ ತೊಂದರೆ ಅನುಭವಿಸಿದ್ದಾರೆ.
ಚಾಮರಾಜನಗರ/ಮಂಡ್ಯ, ಸೆಪ್ಟೆಂಬರ್ 29: ಕರ್ನಾಟಕದಲ್ಲಿ ಧಾರಾಕಾರ ಮಳೆಯಿಂದಾಗಿ ಜನಜೀವನ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ. ಮಂಡ್ಯ ನಗರದಲ್ಲಿ ಸುರಿದ ಭಾರಿ ಮಳೆಗೆ ಹಲವು ರಸ್ತೆಗಳು ಜಲಾವೃತವಾಗಿದ್ದು, ಮಹಾವೀರ ವೃತ್ತ ಸಂಪೂರ್ಣವಾಗಿ ನೀರಿನಿಂದ ಆವೃತವಾಗಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಅಲ್ಲದೆ, ನಗರದ ಹಲವೆಡೆ ಮನೆಗಳಿಗೂ ನೀರು ನುಗ್ಗಿ ನಿವಾಸಿಗಳಿಗೆ ತೊಂದರೆಯಾಗಿದೆ. ಮತ್ತೊಂದೆಡೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿಯೂ ಭಾರಿ ಮಳೆಯಾಗಿದ್ದು, ಸಾಲು ಸಾಲು ಅವಾಂತರಗಳು ನಡೆದಿವೆ. ಹುಬ್ಬೇಹುಣಸೆ ಕೆರೆ ಹಾಗೂ ಸ್ವಾಮಿಹಳ್ಳ ತುಂಬಿ ಹರಿದು ಸೇತುವೆಗಳು ಜಲಾವೃತವಾಗಿವೆ. ಮುಖ್ಯ ರಸ್ತೆಯಲ್ಲಿ ನೀರು ಹೊಳೆಯಂತೆ ಹರಿದಿದೆ. ಮಳೆ ಆರ್ಭಟಕ್ಕೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಭೂಕುಸಿತ ಸಂಭವಿಸಿದೆ. ಸಣ್ಣ ಬಂಡೆಕಲ್ಲುಗಳು ಮತ್ತು ಮಣ್ಣು ರಸ್ತೆಗಳ ಮೇಲೆ ಕುಸಿದು ಬಿದ್ದಿದ್ದು, ಮುಖ್ಯ ರಸ್ತೆ ಕೆಸರುಮಯವಾಗಿದೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿ, ಭಕ್ತಾದಿಗಳು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
