ಬೀಜಿಂಗ್: ಈಶಾನ್ಯ ಚೀನಾದಲ್ಲಿನ (northeastern China) ರೆಸ್ಟೋರೆಂಟ್‌ನಲ್ಲಿ(restaurant) ಬುಧವಾರ ಭಾರೀ ಅಗ್ನಿ ಅವಘಡ (Fire) ಸಂಭವಿಸಿದ್ದು 17 ಮಂದಿ ಸುಟ್ಟು ಭಸ್ಮವಾಗಿದ್ದಾರೆ. ಮೂವರಿಗೆ ಗಾಯಗಳಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಮಧ್ಯಾಹ್ನ 12.40ಕ್ಕೆ ಇಲ್ಲಿನ ಚಾಂಗ್ಚುನ್ ನಗರದ ರೆಸ್ಟೋರೆಂಟ್‌ನಲ್ಲಿ ಬೆಂಕಿ ಹೊತ್ತಿಕೊಂಡಿತು ಎಂದು ಸ್ಥಳೀಯ ಸರ್ಕಾರ ವೈಬೊ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಶೋಧ ಕಾರ್ಯ ಮತ್ತು ರಕ್ಷಣಾ ಕಾರ್ಯವನ್ನು 3 ಗಂಟೆಗೆ ಮುಗಿಸಿವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು ಆವರ ಆರೈಕೆ ಮಾಡಲಾಗುತ್ತಿದೆ ಎಂದು ಪ್ರಕಟಣೆ ಹೇಳಿದೆ. ಈ ಅಗ್ನಿ ಅವಘಡಕ್ಕೆ ಕಾರಣ ಏನು ಎಂಬುದನ್ನು ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚೀನಾದಲ್ಲಿ ಆಗಾಗ್ಗೆ ಬೆಂಕಿ ಅವಘಡಗಳು ಸಂಭವಿಸುತ್ತಲೇ ಇರುತ್ತವೆ.ಈ ತಿಂಗಳ ಆರಂಭದಲ್ಲಿ, ಕೇಂದ್ರ ನಗರವಾದ ಚಾಂಗ್ಶಾದಲ್ಲಿ ಭಾರಿ ಬೆಂಕಿಯು ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿ ಚೀನಾ ಟೆಲಿಕಾಂನ ಕಚೇರಿಯನ್ನು ಹೊಂದಿರುವ ಗಗನಚುಂಬಿ ಕಟ್ಟಡದಲ್ಲಿ ಕಾಣಿಸಿಕೊಂಡಿತು. ಆದರೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಕಳೆದ ವರ್ಷ ಜುಲೈನಲ್ಲಿ, ಈಶಾನ್ಯ ಜಿಲಿನ್ ಪ್ರಾಂತ್ಯದಲ್ಲಿ ಗೋದಾಮಿನಲ್ಲಿ ಬೆಂಕಿಹೊತ್ತಿಕೊಂಡಿದ್ದು 15 ಜನರು ಸಾವನ್ನಪ್ಪಿದರು ಮತ್ತು 25 ಜನರು ಗಾಯಗೊಂಡರು ಎಂದು ರಾಜ್ಯ ಮಾಧ್ಯಮ ವರದಿಗಳು ತಿಳಿಸಿವೆ. ಅದಕ್ಕೂ ಒಂದು ತಿಂಗಳ ಮೊದಲು, ಮಧ್ಯ ಹೆನಾನ್ ಪ್ರಾಂತ್ಯದ ಸಮರ ಕಲೆಗಳ ಶಾಲೆಯಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಮಕ್ಕಳು ಸೇರಿದಂತೆ 18 ಮಂದಿ ಸಾವಿಗೀಡಾಗಿದ್ದರು.
Published On - 3:02 pm, Wed, 28 September 22