Marburg Virus: ಎಬೋಲಾ ಮಾದರಿಯ ಅಪಾಯಕಾರಿ, ಸಾಂಕ್ರಾಮಿಕ ಮಾರ್ಬರ್ಗ್ ವೈರಸ್ ಪತ್ತೆ – ಘಾನಾದಲ್ಲಿ ಎರಡನೆಯ ಸಾವು

Ghana Marburg Virus: ಇದು ಪಶ್ಚಿಮ ಆಫ್ರಿಕಾದಲ್ಲಿ ಮಾರ್ಬರ್ಗ್‌ ಸೋಂಕಿನಿಂದ ಸಾವನ್ನಪ್ಪಿರುವ ಎರಡನೆಯ ಪ್ರಕರಣವಷ್ಟೇ. ಈ ಪ್ರದೇಶದಲ್ಲಿ ವೈರಸ್‌ನ ಮೊದಲ ಪ್ರಕರಣವು ಕಳೆದ ವರ್ಷ ಗಿನಿಯಾದಲ್ಲಿ (Guinea) ಪತ್ತೆಯಾಗಿತ್ತು. ಅದಾದ ಬಳಿಕ ಯಾವುದೇ ಹೆಚ್ಚಿನ ಪ್ರಕರಣಗಳನ್ನು ಗುರುತಿಸಲಾಗಿಲ್ಲ.

Marburg Virus: ಎಬೋಲಾ ಮಾದರಿಯ ಅಪಾಯಕಾರಿ, ಸಾಂಕ್ರಾಮಿಕ ಮಾರ್ಬರ್ಗ್ ವೈರಸ್ ಪತ್ತೆ - ಘಾನಾದಲ್ಲಿ ಎರಡನೆಯ ಸಾವು
ಎಬೋಲಾ ಮಾದರಿಯ ಅಪಾಯಕಾರಿ, ಸಾಂಕ್ರಾಮಿಕ ಮಾರ್ಬರ್ಗ್ ವೈರಸ್ ಪತ್ತೆ, ಘಾನಾದಲ್ಲಿ ಎರಡನೆಯ ಸಾವು
Image Credit source: Twitter/Reuters
Updated By: ಸಾಧು ಶ್ರೀನಾಥ್​

Updated on: Jul 18, 2022 | 10:43 PM

ಮಾರ್ಬರ್ಗ್ ವೈರಸ್‌ನಿಂದಾಗಿ (Marburg virus) ಇಬ್ಬರು ಮೃತಪಟ್ಟಿರುವ ಪ್ರಕರಣಗಳು ಪತ್ತೆಯಾಗಿರುವುದಾಗಿ ಘಾನಾ (Ghana) ದೇಶವು ಅಧಿಕೃತವಾಗಿ ದೃಢಪಡಿಸಿದೆ. ಇದು ಎಬೋಲಾದಂತೆಯೇ (Ebola) ಹೆಚ್ಚು ಸಾಂಕ್ರಾಮಿಕ ಕಾಯಿಲೆಯಾಗಿದೆ ಎಂದು ಘಾನಾ ಆರೋಗ್ಯ ಸೇವಾ ಸಂಸ್ಥೆ (GHS) ತಿಳಿಸಿದೆ. ಸಾವನ್ನಪ್ಪಿದ ಇಬ್ಬರು ಈ ತಿಂಗಳ ಆರಂಭದಲ್ಲಿ ಪರೀಕ್ಷೆ ನಡೆಸಿದಾಗ ವೈರಸ್‌ಗೆ ಪಾಸಿಟೀವ್ ಆಗಿ ಕಂಡುಬಂದಿದ್ದರು ಎಂಬುದು ಆತಂಕಕಾರಿ.

ಘಾನಾದಲ್ಲಿ ನಡೆಸಿದ ಪರೀಕ್ಷೆಗಳು ಜುಲೈ 10 ರಂದು ಪಾಸಿಟೀವ್ ಬಂದವು. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಈ ಪ್ರಕರಣಗಳನ್ನು ದೃಢೀಕರಿಸಲು ಸೆನೆಗಲ್‌ ಪ್ರಯೋಗಾಲಯದಿಂದ ಫಲಿತಾಂಶಗಳನ್ನು ಪರಿಶೀಲಿಸಬೇಕಾಗಿತ್ತು.

“ಸೆನೆಗಲ್‌ನ ಡಾಕರ್‌ನಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಶ್ಚರ್‌ನಲ್ಲಿ ನಡೆಸಿದ ಹೆಚ್ಚಿನ ಪರೀಕ್ಷೆಯು ಫಲಿತಾಂಶಗಳನ್ನು ದೃಢೀಕರಿಸಿದೆ” ಎಂದು ಘಾನಾ ಆರೋಗ್ಯ ಸೇವಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಪತ್ತೆ ಹಚ್ಚಲಾದ ಪ್ರಕರಣಗಳಲ್ಲಿ ರೋಗಿಗಳನ್ನು ಎಲ್ಲಾ ಸಂಪರ್ಕಗಳಿಂದ ಪ್ರತ್ಯೇಕಗೊಳಿಸುವುದು ಸೇರಿದಂತೆ ವೈರಸ್ ಹರಡುವ ಯಾವುದೇ ಅಪಾಯವನ್ನು ಕಡಿಮೆ ಮಾಡಲು GHS ಕಾರ್ಯನಿರ್ವಹಿಸುತ್ತಾ ಇದೆ. ಯಾರೂಬ್ಬರೂ ಇಲ್ಲಿಯವರೆಗೆ ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ ಎಂದು ಅದು ಹೇಳಿದೆ.

“GHS ಆರೋಗ್ಯಾಧಿಕಾರಿಗಳು ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಸಂಭವನೀಯ ಸೋಂಕಿನ ದಾಳಿಯನ್ನು ತಡೆಗಟ್ಟಲು ಸಿದ್ಧತೆ ನಡೆಸಿದ್ದಾರೆ. ಇದು ಒಳ್ಳೆಯದು. ಏಕೆಂದರೆ ಕ್ಷಿಪ್ರ ಮತ್ತು ನಿರ್ಣಾಯಕ ಕ್ರಮವಿಲ್ಲದಿದ್ದರೆ, ಮಾರ್ಬರ್ಗ್ ಸೋಂಕು ಸುಲಭವಾಗಿ ಹಿಡಿತಕ್ಕೆ ಸಿಗದೆಹೋಗಬಹುದು” ಎಂದು ಆಫ್ರಿಕಾದ WHO ಪ್ರಾದೇಶಿಕ ನಿರ್ದೇಶಕ ಮ್ಯಾಟ್ಶಿಡಿಸೊ ಮೊಯೆಟಿ ಎಚ್ಚರಿಸಿದ್ದಾರೆ.

ದಕ್ಷಿಣ ಘಾನಾದ ಅಶಾಂತಿ ಪ್ರದೇಶದ ( Ashanti region) ಇಬ್ಬರೂ ರೋಗಿಗಳು ಆಸ್ಪತ್ರೆಯಲ್ಲಿ ಸಾಯುವ ಮೊದಲು ಅತಿಸಾರ, ಜ್ವರ, ವಾಕರಿಕೆ ಮತ್ತು ವಾಂತಿ ಸೇರಿದಂತೆ ರೋಗಲಕ್ಷಣಗಳನ್ನು ಹೊಂದಿದ್ದರು ಎಂದು WHO ತಿಳಿಸಿದೆ.

1967 ರಿಂದ ಹೆಚ್ಚಾಗಿ ದಕ್ಷಿಣ ಮತ್ತು ಪೂರ್ವ ಆಫ್ರಿಕಾದಲ್ಲಿ ಒಂದು ಡಜನ್ ಮಾರ್ಬರ್ಗ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. WHO ಪ್ರಕಾರ ಸೋಂಕು ತಳಿಗಳು (ವೈರಸ್ ಸ್ಟ್ರೈನ್) ಮತ್ತು ಪ್ರಕರಣಗಳ ನಿರ್ವಹಣೆ ಆಧಾರದ ಮೇಲೆ ಆಗ ಸೋಂಕಿನಿಂದಾದ ಸಾವಿನ ಪ್ರಮಾಣವು 24 % ರಿಂದ 88 % ವರೆಗೆ ವ್ಯತ್ಯಾಸಗೊಂಡಿದ್ದವು ಎಂದು indianexpress.com ವರದಿ ಮಾಡಿದೆ.

ಇದು ಹಣ್ಣಿನ ಬಾವಲಿಗಳಿಂದ ಜನರಿಗೆ ಹರಡುತ್ತದೆ ಮತ್ತು ಸೋಂಕಿತ ಜನರ ದೇಹದಿಂದ ಸ್ರವಿಸುವ ದ್ರವಗಳು, ಪದಾರ್ಥಗಳ ಮೇಲ್ಮೈ ಸ್ಪರ್ಶ ಮತ್ತು ವಸ್ತುಗಳ ನೇರ ಸಂಪರ್ಕದ ಮೂಲಕ ಮನುಷ್ಯರಲ್ಲಿ ಹರಡುತ್ತದೆ ಎಂದು WHO ಹೇಳುತ್ತದೆ.

Published On - 10:42 pm, Mon, 18 July 22