ಪ್ರಧಾನಿ ಮೋದಿಗೆ ನಮಸ್ಕರಿಸಿದ ಪಪುವಾ ನ್ಯೂ ಗಿನಿಯಾ ಪ್ರಧಾನಿ ಜೇಮ್ಸ್ ಮರಾಪೆ ಬಗ್ಗೆ ತಿಳಿದಿರದ ಐದು ಸಂಗತಿಗಳು
ಸೂರ್ಯಾಸ್ತದ ನಂತರ ಬರುವ ವಿಶ್ವದ ಯಾವುದೇ ನಾಯಕರಿಗೆ ಪಪುವಾ ನ್ಯೂ ಗಿನಿಯಾ (Papua New Guinea) ದೇಶವು ಸಾಮಾನ್ಯವಾಗಿ ಸ್ವಾಗತ ನೀಡುವುದಿಲ್ಲ. ಆದರೆ, ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ವಿಶೇಷ ವಿನಾಯಿತಿ ನೀಡಲಾಗಿದೆ. ಜಪಾನ್‌ನ ಹಿರೋಷಿಮಾದಲ್ಲಿ ನಡೆದ ಗ್ರೂಪ್ ಆಫ್ ಸೆವೆನ್ (ಜಿ7) ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ರಾಷ್ಟ್ರಗಳ ಪ್ರವಾಸದ ಭಾಗವಾಗಿ ಪಪುವಾ ನ್ಯೂ ಗಿನಿಯಾಗೆ ಭೇಟಿ ನೀಡಿದ್ದಾರೆ.
ಪೋರ್ಟ್ ಮೊರೆಸ್ಬಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರನ್ನು ಪಪುವಾ ನ್ಯೂ ಗಿನಿಯಾ ಪ್ರಧಾನಿ ಜೇಮ್ಸ್ ಮರಾಪೆ (James Marape) ಅವರು ಆತ್ಮೀಯವಾಗಿ ಸ್ವಾಗತಿಸಿದರು. ಅಚ್ಚರಿ ಎಂಬಂತೆ, ಜೇಮ್ಸ್ ಮರಾಪೆ ಅವರು ಪ್ರಧಾನಿ ಮೋದಿಯವರ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು. ಇಷ್ಟೊಂದು ಸರಳತೆ ಮೆರೆದ ಜೇಮ್ಸ್ ಮರಾಪೆ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಐದು ಸಂಗತಿಗಳು ಇಲ್ಲಿವೆ ನೋಡಿ.
- 52 ವರ್ಷ ವಯಸ್ಸಿನ ಜೇಮ್ಸ್ ಮರಾಪೆ ಅವರು 2019 ರಿಂದ ಪಪುವಾ ನ್ಯೂ ಗಿನಿಯಾ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು PANGU Pati ರಾಜಕೀಯ ಪಕ್ಷಕ್ಕೆ ಸೇರಿದವರು. ಈ ದೇಶದಲ್ಲಿ ಸೂರ್ಯಾಸ್ತದ ನಂತರ ದೇಶಕ್ಕೆ ಭೇಟಿ ನೀಡುವ ಯಾವುದೇ ನಾಯಕರಿಗೆ ಸ್ವಾಗತ ನೀಡುವುದಿಲ್ಲ, ಆದಾಗ್ಯೂ, ದೇಶದಕ್ಕೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿ ಮೋದಿ ಅವರಿಗೆ ಜೇಮ್ಸ್ ಮರಾಪೆ ಅವರು ವಿನಾಯಿತಿ ನೀಡಿದ್ದಾರೆ.
- ಪಪುವಾ ನ್ಯೂಗಿನಿಯಾದ ರಾಷ್ಟ್ರೀಯ ಸಂಸತ್ತಿನ ಅಧಿಕೃತ ವೆಬ್‌ಸೈಟ್ ಪ್ರಕಾರ, ಮರಾಪೆ ಅವರು 1993 ರಲ್ಲಿ ಪಪುವಾ ನ್ಯೂ ಗಿನಿಯಾ ವಿಶ್ವವಿದ್ಯಾನಿಲಯದಿಂದ ಕಲಾ ವಿಭಾಗಲ್ಲಿ ಪದವಿ ಪಡೆದರು. ಅಲ್ಲದೆ, ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
- ಮರಾಪೆ ಅವರು ದ್ವೀಪ ರಾಷ್ಟ್ರದ 8 ನೇ ಪ್ರಧಾನ ಮಂತ್ರಿಯಾಗಿದ್ದಾರೆ. ಶಿಕ್ಷಣ ಮತ್ತು ಹಣಕಾಸು ಸೇರಿದಂತೆ ಅನೇಕ ಮಹತ್ವದ ಕ್ಯಾಬಿನೆಟ್ ಸ್ಥಾನಗಳನ್ನು ಅಲಂಕರಿಸಿದ್ದರು. ಜೊತೆಗೆ, ಸಾರಿಗೆ ಸಂಸದೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಅಂತರ-ಸರ್ಕಾರಿ ಸಂಬಂಧಗಳ ಸಂಸದೀಯ ರೆಫರಲ್ ಸಮಿತಿಯಲ್ಲೂ ಇದ್ದರು.
- ಮರಾಪೆ ಅವರು ಈ ಹಿಂದೆ 2001 ರಿಂದ 2006 ರವರೆಗೆ ಸಿಬ್ಬಂದಿ ನಿರ್ವಹಣಾ ಇಲಾಖೆಯೊಂದಿಗೆ ಕಾರ್ಯನೀತಿ ಸಹಾಯಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 2019ರ 20 ಏಪ್ರಿಲ್ ತಿಂಗಳಲ್ಲಿ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ PANGU PATI ಪಕ್ಷಕ್ಕೆ ಸೇರಿದರು. ಇದೇ ಸಮಯದಲ್ಲಿ ಪಕ್ಷದ ನಾಯಕತ್ವವನ್ನೂ ನೀಡಲಾಯಿತು.
- ದಿ ಗಾರ್ಡಿಯನ್ ಪ್ರಕಾರ, 2020 ರಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ಮರಾಪೆ ಸರ್ಕಾರವನ್ನು ಉರುಳಿಸುವ ಪ್ರಯತ್ನ ನಡೆದಿತ್ತು. ಆದರೆ ಈ ಪ್ರಯತ್ನವು ಅಂತಿಮವಾಗಿ ವಿಫಲವಾಗಿತ್ತು.
ಇದನ್ನೂ ಓದಿ: Modi and James Marape: ಪ್ರಧಾನಿ ಮೋದಿ ಕಾಲು ಮುಟ್ಟಿ ನಮಸ್ಕರಿಸಿದ ಪಪುವಾ ನ್ಯೂ ಗಿನಿಯಾ ಪ್ರಧಾನಿ ಜೇಮ್ಸ್ ಮರಾಪೆ
ಜಪಾನ್‌ನ ಹಿರೋಷಿಮಾದಲ್ಲಿ ನಡೆದ ಗ್ರೂಪ್ ಆಫ್ ಸೆವೆನ್ (ಜಿ7) ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ರಾಷ್ಟ್ರಗಳ ಪ್ರವಾಸದ ಭಾಗವಾಗಿ ಪಪುವಾ ನ್ಯೂ ಗಿನಿಯಾಗೆ ಭೇಟಿ ನೀಡಿದ್ದಾರೆ. ರಾಷ್ಟ್ರದೊಂದಿಗೆ ಭಾರತದ ಸಂಬಂಧವನ್ನು ಹೆಚ್ಚಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ