Pokhara Air Crash ಪೋಖರಾದಲ್ಲಿ ನಡೆದದ್ದು ನೇಪಾಳದಲ್ಲಿ 30 ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ವಿಮಾನ ಅಪಘಾತ

| Updated By: ರಶ್ಮಿ ಕಲ್ಲಕಟ್ಟ

Updated on: Jan 15, 2023 | 7:33 PM

ಸಾವಿಗೀಡಾದ ಪ್ರಯಾಣಿಕರಲ್ಲಿ ಐವರು ಭಾರತೀಯರು, ನಾಲ್ವರು ರಷ್ಯನ್ನರು ಮತ್ತು ಒಬ್ಬರು ಐರಿಶ್, ಇಬ್ಬರು ದಕ್ಷಿಣ ಕೊರಿಯಾದವರು, ಒಬ್ಬರು ಆಸ್ಟ್ರೇಲಿಯನ್, ಒಬ್ಬರು ಫ್ರೆಂಚ್ ಮತ್ತು ಒಬ್ಬ ಅರ್ಜೆಂಟೀನಾದ ಪ್ರಜೆಯೂ ಸೇರಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ

Pokhara Air Crash ಪೋಖರಾದಲ್ಲಿ ನಡೆದದ್ದು ನೇಪಾಳದಲ್ಲಿ 30 ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ವಿಮಾನ ಅಪಘಾತ
ಪೋಖರಾದಲ್ಲಿ ವಿಮಾನ ಪತನ
Follow us on

ನೇಪಾಳದ ಪೋಖರಾದಲ್ಲಿ (Pokhara air crash) ದೇಶೀಯ ವಿಮಾನ ಅಪಘಾತಕ್ಕೀಡಾಗಿ ಕನಿಷ್ಠ 67 ಜನರು ಸಾವನ್ನಪ್ಪಿದ್ದಾರೆ, ಇದು ಮೂರು ದಶಕಗಳಲ್ಲಿ ಸಂಭವಿಸಿದ ದೇಶದ ಅತ್ಯಂತ ಭೀಕರ ವಿಮಾನ ಅಪಘಾತವಾಗಿದೆ. ರಾಜಧಾನಿ ಕಠ್ಮಂಡುವಿನಿಂದ (Kathmandu) 72 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಪತನಗೊಂಡ ನಂತರ ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿದೆ. ನಾವು 31 ಶವಗಳನ್ನು ಆಸ್ಪತ್ರೆಗೆ ಕಳುಹಿಸಿದ್ದೇವೆ ಮತ್ತು ಇನ್ನೂ 33 ಶವಗಳನ್ನು ಕಮರಿಯಿಂದ ಹೊರತೆಗೆಯುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೊಸ ಏಜೆನ್ಸಿ ರಾಯಿಟರ್ಸ್‌ಗೆ ತಿಳಿಸಿದರು. ಪೋಖಾರಾದ ವಿಮಾನ ನಿಲ್ದಾಣಬಳಿಯ ಎರಡು ಬೆಟ್ಟಗಳ ನಡುವೆ ಇರುವ ಕಮರಿಯ ಸ್ಥಳವನ್ನು ತಲುಪಲು ರಕ್ಷಣಾ ಕಾರ್ಯಕರ್ತರು ಕಷ್ಟಪಡುತ್ತಿದ್ದಾರೆ ಎಂದು ಹೇಳಿದರು.

ಸಾವಿಗೀಡಾದ ಪ್ರಯಾಣಿಕರಲ್ಲಿ ಐವರು ಭಾರತೀಯರು, ನಾಲ್ವರು ರಷ್ಯನ್ನರು ಮತ್ತು ಒಬ್ಬರು ಐರಿಶ್, ಇಬ್ಬರು ದಕ್ಷಿಣ ಕೊರಿಯಾದವರು, ಒಬ್ಬರು ಆಸ್ಟ್ರೇಲಿಯನ್, ಒಬ್ಬರು ಫ್ರೆಂಚ್ ಮತ್ತು ಒಬ್ಬ ಅರ್ಜೆಂಟೀನಾದ ಪ್ರಜೆಯೂ ಸೇರಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್ ಫ್ಲೈಟ್ ರಾಡಾರ್ 24 ಟ್ವಿಟರ್‌ನಲ್ಲಿ ಯೇತಿ ಏರ್‌ಲೈನ್ಸ್ ವಿಮಾನವು 15 ವರ್ಷ ಹಳೆಯದು ಎಂದು ಹೇಳಿದೆ.
ಈ ಅಪಘಾತವು 1992 ರಿಂದ ನೇಪಾಳದಲ್ಲಿ ನಡೆದ ಅತೀ ದೊಡ್ಡ ಅಪಘಾತ ಎಂದು ಏವಿಯೇಷನ್ ಸೇಫ್ಟಿ ನೆಟ್‌ವರ್ಕ್‌ನ ಡೇಟಾ ತೋರಿಸಿದೆ. 1992 ರಲ್ಲಿ ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ ಏರ್‌ಬಸ್ A300 ಕಠ್ಮಂಡು ಬಳಿ ಬೆಟ್ಟಕ್ಕೆ ಅಪ್ಪಳಿಸಿದ್ದು, ವಿಮಾನದಲ್ಲಿದ್ದ ಎಲ್ಲಾ 167 ಜನರು ಸಾವನ್ನಪ್ಪಿದರು.

ಇದನ್ನೂ ಓದಿ: Nepal Aircraft Crash: ನೇಪಾಳದ ಪೋಖರಾ ವಿಮಾನ ನಿಲ್ದಾಣದಲ್ಲಿ 72 ಪ್ರಯಾಣಿಕರಿದ್ದ ವಿಮಾನ ಪತನ

ಅಪಘಾತದ ಕಾರಣವನ್ನು ತನಿಖೆ ಮಾಡಲು ನೇಪಾಳ ಸರ್ಕಾರವು ಸಮಿತಿಯನ್ನು ರಚಿಸಿದೆ. 45 ದಿನಗಳಲ್ಲಿ ವರದಿ ಮಾಡುವ ನಿರೀಕ್ಷೆಯಿದೆ ಎಂದು ಹಣಕಾಸು ಸಚಿವ ಬಿಷ್ಣು ಪೌಡೆಲ್ ಹೇಳಿದ್ದಾರೆ.

ನೇಪಾಳದಲ್ಲಿ ವಿಮಾನ ಅಥವಾ ಹೆಲಿಕಾಪ್ಟರ್ ಅಪಘಾತದಲ್ಲಿ 2000 ರಿಂದ ಕನಿಷ್ಠ 309 ಜನರು ಸಾವನ್ನಪ್ಪಿದ್ದಾರೆ. ಇದಕ್ಕೂ ಮುನ್ನ ಸುರಕ್ಷತೆಯ ಕಾಳಜಿಯನ್ನು ಉಲ್ಲೇಖಿಸಿ ಯುರೋಪಿಯನ್ ಯೂನಿಯನ್ 2013 ರಿಂದ ನೇಪಾಳಿ ವಿಮಾನಯಾನ ಸಂಸ್ಥೆಗಳನ್ನು ತನ್ನ ವಾಯುಪ್ರದೇಶದಿಂದ ನಿಷೇಧಿಸಿತ್ತು.

ಅವಶೇಷಗಳಲ್ಲಿ ಬೆಂಕಿ ಹೊತ್ತಿಕೊಂಡಿರುವುದರಿಂದ ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಗಿದೆ ಎಂದು ನೇಪಾಳಿ ಪತ್ರಕರ್ತ ದಿಲೀಪ್ ಥಾಪಾ ಎನ್​​ಡಿಟಿವಿಗೆ ತಿಳಿಸಿದ್ದಾರೆ. ಅಪಘಾತದ ನಂತರ ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಅವರು ತುರ್ತು ಕ್ಯಾಬಿನೆಟ್ ಸಭೆಯನ್ನು ಕರೆದಿದ್ದು ನೇಪಾಳ ಸರ್ಕಾರವು ಘಟನೆಯ ತನಿಖೆಗಾಗಿ ಐದು ಸದಸ್ಯರ ತನಿಖಾ ಆಯೋಗವನ್ನು ರಚಿಸಿದೆ.

ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ (CAAN) ಪ್ರಕಾರ, ವಿಮಾನವು ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 10:33 ಕ್ಕೆ ಟೇಕ್ ಆಫ್ ಆಗಿತ್ತು. ವಿಮಾನವು ಪೋಖರಾ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಮೀಪದಲ್ಲಿದ್ದಾಗ ಸೇಟಿ ನದಿಯ ದಡದಲ್ಲಿರುವ ನದಿಯ ಕಮರಿಗೆ ಅಪ್ಪಳಿಸಿತು. ಟೇಕ್-ಆಫ್ ಆದ ಸುಮಾರು 20 ನಿಮಿಷಗಳ ನಂತರ ಅಪಘಾತ ಸಂಭವಿಸಿದೆ. ಬದುಕುಳಿದವರು ಇದ್ದಾರೆಯೇ ಎಂಬುದು ನಮಗೆ ಈಗ ತಿಳಿದಿಲ್ಲ ಎಂದು ಏರ್‌ಲೈನ್‌ನ ವಕ್ತಾರ ಸುದರ್ಶನ್ ಬರ್ತೌಲಾ ಸುದ್ದಿ ಸಂಸ್ಥೆ ಎಎಫ್‌ಪಿಗೆ ತಿಳಿಸಿದರು.

ವಿಮಾನ ಪತನವಾಗುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ರಕ್ಷಣಾ ಕಾರ್ಯಕರ್ತರು ಅದನ್ನು ನಂದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ವಿಮಾನ ಅಪಘಾತದಲ್ಲಿ ಜೀವಹಾನಿಗೆ ಸಂತಾಪ ಸೂಚಿಸಿದ್ದಾರೆ. ನೇಪಾಳದಲ್ಲಿ ಸಂಭವಿಸಿ ವಿಮಾನ ಅಪಘಾತದಲ್ಲಿ ಜೀವಹಾನಿ ಅತ್ಯಂತ ದುರದೃಷ್ಟಕರ. ನನ್ನ ಪ್ರಾರ್ಥನೆಗಳು ದುಃಖಿತರ ಕುಟುಂಬಗಳೊಂದಿಗೆ ಇವೆ. ಓಂ ಶಾಂತಿ” ಎಂದು ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ