ಫ್ಲೋರಿಡಾ: ಭಂಡತನದ ಪರಮಾವಧಿಯನ್ನೇ ಮೀರಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕಾರ್ ಅನ್ನು ಯಾಮಾರಿಸಿದ್ದ ಖದೀಮನೊಬ್ಬ ಈಗ ಕಂಬಿ ಹಿಂದೆ ಹೋದ ಘಟನೆ ಅಮೆರಿಕದ ಫ್ಲೊರಿಡಾದಲ್ಲಿ ಸಂಭವಿಸಿದೆ.
ಹೌದು ಅಮೆರಿಕದ ಫ್ಲೋರಿಡಾದ ಕ್ಯಾಸಿ ವಿಲಿಯಮ್ ಕೆಲ್ಲಿ ಎನ್ನುವ 42 ವರ್ಷದ ವ್ಯಕ್ತಿ 1,40,000 ಅಮೆರಿಕನ್ ಡಾಲರ್ ಬೆಲೆಯ ಪಾಷ್ ಕಾರ್‌ನ್ನು ನಕಲಿ ಚೆಕ್ ಕೊಟ್ಟು ಖರೀದಿಸಿದ್ದಾನೆ. ಬುಧವಾರ ಡೆಸ್ಟಿನ್ ನಗರದ ಪಾಷ್ ಕಾರ್ ಶೋರೂಂಗೆ ತೆರಳಿರುವ ಕ್ಯಾಸಿ ವಿಲಿಯಮ್ ಕೆಲ್ಲಿ 1,40,000 ಬೆಲೆಯ ಚೆಕ್‌ನ್ನು ನೀಡಿ ಕಾರ್ ಅನ್ನು ಖರೀದಿಸಿದ್ದಾನೆ. ನಂತರ ಪಾಷ್ ಕಾರ್ ಅನ್ನು ಅಲ್ಲಿಂದ ತೆಗೆದುಕೊಂಡು ಹೋಗಿದ್ದಾನೆ.
ನಕಲಿ ಚೆಕ್ ಮನೆಯಲ್ಲಿಯೇ ಕಂಪ್ಯೂಟರ್‌ನಲ್ಲಿ ಪ್ರಿಂಟ್ ಮಾಡಿದ್ದು..
ಕೆಲ್ಲಿಯ ಖತರ್ನಾಕ್ ಕೆಲಸ ಇಲ್ಲಿಗೆ ನಿಂತಿಲ್ಲ. ಕಾರ್ ಎಗರಿಸಿದ ಮೇಲೆ ರೋಲೆಕ್ಸ್ ವಾಚ್ ಮೇಲೆ ಅವನ ಕಣ್ಣು ಬಿದ್ದಿದೆ. ಸೀದಾ ರೋಲೆಕ್ಸ್ ಶೋರೂಂಗೆ ಹೋಗಿ 61,521 ಅಮೆರಿಕನ್ ಡಾಲರ್ ಬೆಲೆಯ ಮೂರು ವಾಚ್‌ಗಳನ್ನು ಖರೀದಿಸಿದ್ದಾನೆ. ನಂತರ ಇದಕ್ಕೆ ಅವೇ ನಕಲಿ ಚೆಕ್ ನೀಡಿದ್ದಾನೆ. ಆದ್ರೆ ಈ ರೋಲೆಕ್ಸ್ ಶೋರೂಂ ಮಾಲೀಕ ಮಾತ್ರ ವಾಚ್‌ಗಳನ್ನು ತಕ್ಷಣಕ್ಕೆ ಕೊಟ್ಟಿಲ್ಲ. ತಾಳಿ ಚೆಕ್ ಕ್ಯಾಶ್ ಆಗಲಿ ಆಗ ಕೊಡುತ್ತೇವೆ ಅಂತಾ ಚೆಕ್‌ನ್ನು ಬ್ಯಾಂಕ್‌ಗೆ ಕಳಿಸಿದ್ದಾನೆ. ಆಗ ಅದು ನಕಲಿ ಚೆಕ್ ಅಂತಾ ಗೊತ್ತಾಗಿದೆ.
ತಕ್ಷಣವೇ ಆತ ವಾಲ್ಟನ್ ಕೌಂಟಿ ಶರೀಫ್‌ಗೆ ದೂರು ನೀಡಿದ್ದಾನೆ. ಯಾವಾಗ ಪೊಲೀಸರು ಬಂದು ತದಕಿ ವಿಚಾರಣೆ ಮಾಡಿದರೋ ಆಗ ಕೆಲ್ಲಿ ಸತ್ಯ ಬಾಯಿಬಿಟ್ಟಿದ್ದಾನೆ. ಚೆಕ್ ಅಸಲಿಯಲ್ಲ ಮನೆಯಲ್ಲಿಯೇ ಕಂಪ್ಯೂಟರ್‌ನಲ್ಲಿ ಪ್ರಿಂಟ್ ಮಾಡಿದ್ದು ಅಂತಾ ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವಾಲ್ಟನ್ ಕೌಂಟಿ ಪೊಲೀಸರು, ಕೆಲ್ಲಿಯನ್ನು ಈಗ ಕಂಬಿ ಹಿಂದೆ ಕಳಿಸಿದ್ದಾರೆ.
Published On - 1:47 pm, Thu, 6 August 20