ಫ್ಲೈದುಬೈ ಪ್ರಕರಣ: ತಮ್ಮ ವಿರುದ್ಧದ ಆರೋಪ ತಳ್ಳಿಹಾಕಿದ ಇರಾನ್, ಕಟ್ಟುಕಥೆ ಎಂದ ವಿದೇಶಾಂಗ ಸಚಿವಾಲಯ
ದುಬೈ-ಟೆಲ್ ಅವೀವ್ ಫ್ಲೈದುಬೈ FZ1073 ವಿಮಾನ ಘಟನೆಗೆ ತಮ್ಮ ಯಾವುದೇ ಸಂಬಂಧವಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಈ ಆರೋಪಗಳು ಕಟ್ಟುಕಥೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಇಸ್ರೇಲ್, ಯುರೋಪಿಯನ್ ರಾಷ್ಟ್ರಗಳು ಗಾಜಾ ಪರಿಸ್ಥಿತಿಯಿಂದ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿವೆ ಎಂದು ಇರಾನ್ ಆರೋಪಿಸಿದೆ. ಕ್ಯಾಪ್ಟನ್ ಸ್ಮಿತ್ ಮಚ್ಚರ್ ಧೈರ್ಯದಿಂದ ಸಹ-ಪೈಲಟ್ ಅನ್ನು ಹತ್ತಿಕ್ಕಿದ ಈ ಪ್ರಕರಣದ ತನಿಖೆ ಮುಂದುವರಿದಿದೆ.

ಟೆಲ್ ಅವೀವ್, ಅಕ್ಟೋಬರ್ 05: ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ FZ1073 ವಿಮಾನದಲ್ಲಿ ನಡೆದ ಘಟನೆಗೆ ಹಾಗೂ ಇರಾನ್‌ಗೆ ಯಾವುದೇ ಸಂಬಂಧವಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಇರಾನ್ ವಿರುದ್ಧದ ಆರೋಪಗಳು ಆಧಾರರಹಿತವಾಗಿದ್ದು, ಇದನ್ನು ಕಟ್ಟುಕಥೆ ಎಂದು ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕೈ ಹೇಳಿದ್ದಾರೆ. ಇಸ್ರೇಲ್ ಮತ್ತು ಕೆಲವು ಯುರೋಪಿಯನ್ ರಾಷ್ಟ್ರಗಳು ಗಾಜಾದಲ್ಲಿನ ಪರಿಸ್ಥಿತಿಯಿಂದ ಗಮನ ಬೇರೆಡೆ ಸೆಳೆಯಲು ಇಂತಹ ಆರೋಪಗಳನ್ನು ಮಾಡುತ್ತಿವೆ ಎಂದು ಬಕೈ ಆರೋಪಿಸಿದ್ದಾರೆ.
ಟ್ರಂಪ್ ಹೇಳಿಕೆಯಿಂದ ಹೆಚ್ಚಿದ ಚರ್ಚೆ
ಫ್ಲೈದುಬೈ ವಿಮಾನದಲ್ಲಿನ ಘಟನೆಗೆ ಇರಾನ್ ನಂಟು ಇರಬಹುದೇ ಎಂಬ ಪ್ರಶ್ನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮಗೆ ದೊರೆತ ಮಾಹಿತಿಯ ಆಧಾರದ ಮೇಲೆ ‘ಹೌದು’ ಎಂದು ಹೇಳಿದ್ದರು. ಆದರೆ ಈ ಬಗ್ಗೆ ತನಿಖೆ ನಡೆಯುತ್ತಿದೆ ಮತ್ತು ಯಾವುದೇ ಅಂತಿಮ ಸಾಕ್ಷ್ಯವನ್ನು ಅವರು ನೀಡಿಲ್ಲ. ಇದೇ ಕಾರಣಕ್ಕೆ ಇರಾನ್‌ನ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಬಂದಿತ್ತು. ಆದರೆ ಸದ್ಯಕ್ಕೆ ಇರಾನ್ ನಂಟು ಇದೆ ಎಂಬುದು ದೃಢಪಟ್ಟಿಲ್ಲ. ಘಟನೆಯ ಹಿನ್ನೆಲೆ ಮತ್ತು ಸಹ-ಪೈಲಟ್‌ನ ಉದ್ದೇಶದ ಬಗ್ಗೆ ತನಿಖೆ ಮುಂದುವರೆದಿದೆ.
ನೆತನ್ಯಾಹು ಹೇಳಿದ್ದೇನು?
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಒಮಾನಿ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ಇಸ್ಲಾಮಿಕ್ ಮೂಲಭೂತವಾದದ ಪ್ರಭಾವಕ್ಕೆ ಒಳಗಾಗಿದ್ದ ಎಂದು ಆರೋಪಿಸಿದ್ದಾರೆ. ಈ ಘಟನೆ ಹಿಂದೆ ಯಾರಾದರೂ ಇದ್ದಾರೆಯೇ ಎಂಬುದನ್ನೂ ತನಿಖೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ಓದಿ: ಇಸ್ರೇಲ್ ಮೇಲೆ ವಿಮಾನ ಅಪ್ಪಳಿಸುವುದೇ ನನ್ನ ಪ್ಲ್ಯಾನ್ ಆಗಿತ್ತು, ಸಾವಿಗೆ ಹೆದರಲ್ಲ: ಫ್ಲೈದುಬೈ ಸಹ-ಪೈಲಟ್ ಹಮ್ಮಾಮಿ ಸ್ಫೋಟಕ ತಪ್ಪೊಪ್ಪಿಗೆ
ಘಟನೆಯ ಸಂದರ್ಭದಲ್ಲಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಗಾಯಗೊಂಡಿದ್ದರೂ ಕಾಕ್‌ಪಿಟ್ ಬಾಗಿಲು ತೆರೆಯಲು ಯಶಸ್ವಿಯಾದರು. ಬಳಿಕ ಪ್ರಯಾಣಿಕರು ಮತ್ತು ಸಿಬ್ಬಂದಿ ಸಹ-ಪೈಲಟ್‌ನನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಇಬ್ಬರು ಆಫ್-ಡ್ಯೂಟಿ ಪೈಲಟ್‌ಗಳು ವಿಮಾನದ ನಿಯಂತ್ರಣ ವಹಿಸಿಕೊಂಡು ಸೌದಿ ಅರೇಬಿಯಾದ ತಬೂಕ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದರು.
ನೆತನ್ಯಾಹು ಸ್ಮಿತ್ ಮಚ್ಚರ್ ಅವರ ಧೈರ್ಯವನ್ನು ಶ್ಲಾಘಿಸಿ ಅವರನ್ನು ರಿಯಲ್ ಹೀರೋ ಎಂದು ಕರೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯುಎಇ, ಸೌದಿ ಅರೇಬಿಯಾ ಮತ್ತು ಇತರ ಅಧಿಕಾರಿಗಳ ತನಿಖೆ ಮುಂದುವರಿದಿದ್ದು, ಇರಾನ್‌ನ ಯಾವುದೇ ನಂಟು ಇದೆಯೇ ಎಂಬ ಪ್ರಶ್ನೆಗೂ ತನಿಖೆಯಲ್ಲೇ ಉತ್ತರ ಸಿಗಬೇಕಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




