AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ಲೈದುಬೈ ವಿಮಾನ ದಾಳಿ: ನಾನು ಬದುಕಬೇಕು, ಇಲ್ಲಿ ಸಾಯಲು ಇಷ್ಟವಿಲ್ಲ ಎಂದಿದ್ದ ಪೈಲಟ್ ಸ್ಮಿತ್: 45 ನಿಮಿಷ ರಕ್ತ ನಿಲ್ಲಿಸಲು ಹೋರಾಡಿದ್ದ ದಂತವೈದ್ಯ

ಫ್ಲೈದುಬೈ ವಿಮಾನದಲ್ಲಿ ಸಹ-ಪೈಲಟ್ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಪೈಲಟ್ ಸ್ಮಿತ್ ಮಚ್ಚರ್ ಅವರ ಜೀವವನ್ನು ಪ್ರಯಾಣಿಕ ದಂತವೈದ್ಯ ಡಾ. ಶೋಟಾ ಮುಸೇವ್ ರಕ್ಷಿಸಿದರು. 45 ನಿಮಿಷಗಳ ಕಾಲ ರಕ್ತಸ್ರಾವ ನಿಲ್ಲಿಸಲು ಹೋರಾಡಿದ ಮುಸೇವ್, ಸ್ಮಿತ್‌ಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ವಿಮಾನವು ಸೌದಿ ಅರೇಬಿಯಾದ ತಬೂಕ್‌ನಲ್ಲಿ ಸುರಕ್ಷಿತವಾಗಿ ಇಳಿದು, ಸ್ಮಿತ್‌ಗೆ ಚಿಕಿತ್ಸೆ ನೀಡಲಾಯಿತು. ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ಫ್ಲೈದುಬೈ ವಿಮಾನ ದಾಳಿ: ನಾನು ಬದುಕಬೇಕು, ಇಲ್ಲಿ ಸಾಯಲು ಇಷ್ಟವಿಲ್ಲ ಎಂದಿದ್ದ ಪೈಲಟ್ ಸ್ಮಿತ್: 45 ನಿಮಿಷ ರಕ್ತ ನಿಲ್ಲಿಸಲು ಹೋರಾಡಿದ್ದ ದಂತವೈದ್ಯ
ವೈದ್ಯImage Credit source: ABC News
ನಯನಾ ರಾಜೀವ್
|

Updated on: Oct 07, 2026 | 9:12 AM

Share

ಟೆಲ್ ಅವೀವ್, ಅಕ್ಟೋಬರ್ 07: ಫ್ಲೈದುಬೈ ವಿಮಾನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರ ಜೀವ ಉಳಿಸಲು ಸಹಾಯ ಮಾಡಿದ ಇಸ್ರೇಲಿ ದಂತವೈದ್ಯ ಡಾ. ಶೋಟಾ ಮುಸೇವ್, ಆ ವಿಮಾನದಲ್ಲಿನ ಭಯಾನಕ ಕ್ಷಣಗಳನ್ನು ವಿವರಿಸಿದ್ದಾರೆ. ಕಾಕ್‌ಪಿಟ್‌ನಿಂದ ಕಿರುಚಾಟ ಕೇಳಿದ ತಕ್ಷಣ ಮುಂದೆ ಓಡಿದ ಅವರು, ರಕ್ತಸ್ರಾವದಿಂದ ಬಳಲುತ್ತಿದ್ದ ಸ್ಮಿತ್‌ಗೆ ಸುಮಾರು 45 ನಿಮಿಷಗಳ ಕಾಲ ಪ್ರಾಥಮಿಕ ಚಿಕಿತ್ಸೆ ನೀಡಿದರು.

ರಕ್ತ ನಿಲ್ಲಿಸಲು ಟಿ-ಶರ್ಟ್ ಬಳಕೆ

ಡಾ. ಮುಸೇವ್ ಅವರ ಪ್ರಕಾರ, ಸ್ಮಿತ್ ಅವರ ತಲೆ ಮತ್ತು ಎಡಗೈಗೆ ಆಳವಾದ ಗಾಯಗಳಾಗಿದ್ದವು. ಗಾಯಗಳಿಂದ ಭಾರೀ ರಕ್ತಸ್ರಾವವಾಗುತ್ತಿತ್ತು. ರಕ್ತವನ್ನು ನಿಯಂತ್ರಿಸಲು ಅವರು ಟಿ-ಶರ್ಟ್‌ಗಳನ್ನು ಬಳಸಿ ಗಾಯದ ಮೇಲೆ ನಿರಂತರವಾಗಿ ಒತ್ತಡ ಹಾಕಿದರು. ಕ್ಯಾಬಿನ್ ಸಿಬ್ಬಂದಿಯಿಂದ ಐಸ್ ಪ್ಯಾಕ್‌ಗಳನ್ನು ಪಡೆದು ಗಾಯದ ಬಳಿ ಬಳಸಿದರು.

ಪ್ರತಿ ಬಾರಿ ರಕ್ತಸ್ರಾವವನ್ನು ಪರಿಶೀಲಿಸಲು ಒತ್ತಡ ಕಡಿಮೆ ಮಾಡಿದಾಗ ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಬರುತ್ತಿತ್ತು ಎಂದು ಅವರು ಹೇಳಿದ್ದಾರೆ. ಹೀಗಾಗಿ ಸುಮಾರು 45 ನಿಮಿಷಗಳ ಕಾಲ ಚಿಕಿತ್ಸೆ ಮುಂದುವರೆಸಿದರು. ತೀವ್ರ ನೋವಿನಲ್ಲಿದ್ದ ಸ್ಮಿತ್ ಪದೇಪದೇ ನಾನು ಬದುಕಬೇಕು, ಇಲ್ಲಿ ಸಾಯಲು ಬಯಸುವುದಿಲ್ಲ ಎಂದು ಹೇಳುತ್ತಿದ್ದರು ಎಂದು ಮುಸೇವ್ ತಿಳಿಸಿದ್ದಾರೆ.

ಅವರಿಗೆ ಧೈರ್ಯ ತುಂಬಿದ ವೈದ್ಯರು, ಭಯಪಡಬೇಡಿ, ನೀವು ನಿಮ್ಮ ಕುಟುಂಬದ ಬಳಿಗೆ ಮರಳುತ್ತೀರಿ. ನಾವು ಶೀಘ್ರದಲ್ಲೇ ಇಳಿಯಲಿದ್ದೇವೆ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ. ಸ್ಮಿತ್ ನೋವಿನಿಂದ ಕಿರುಚುತ್ತಿದ್ದರೂ, ಪರಿಸ್ಥಿತಿಯನ್ನು ಗಮನಿಸಿ ಅವರಿಗೆ ನೋವು ನಿವಾರಕ ಔಷಧಿ ನೀಡಲು ಮುಸೇವ್ ಹಿಂಜರಿದಿದ್ದರು. ಅವರನ್ನು ಎತ್ತುವುದರಿಂದ ಮತ್ತೆ ಹೆಚ್ಚಿನ ರಕ್ತಸ್ರಾವವಾಗಬಹುದು ಎಂಬ ಆತಂಕವೂ ಇತ್ತು ಎಂದು ಅವರು ಹೇಳಿದ್ದಾರೆ.

ಚಿಕಿತ್ಸೆಯ ವೇಳೆ ಸ್ಮಿತ್ ಅವರ ನಾಡಿಮಿಡಿತ ತೀವ್ರವಾಗಿ ಕಡಿಮೆಯಾಯಿತು. ಅವರ ತುಟಿಗಳು ನೀಲಿ ಬಣ್ಣಕ್ಕೆ ತಿರುಗಿದವು. ಆಗ ಪರಿಸ್ಥಿತಿ ಗಂಭೀರವಾಗಿರುವುದನ್ನು ಅರಿತ ಮುಸೇವ್, ನಾವು ಬೇಗನೆ ಇಳಿಯಬೇಕು. ಅವರಿಗೆ ಹೆಚ್ಚು ಸಮಯವಿಲ್ಲ ಎಂದು ಸಿಬ್ಬಂದಿಗೆ ತಿಳಿಸಿದ್ದಾರೆ.

ವಿಮಾನ ತಬೂಕ್‌ನಲ್ಲಿ ಸುರಕ್ಷಿತವಾಗಿ ಇಳಿದ ಬಳಿಕ ಸ್ಮಿತ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಯಿತು. ನಂತರ ಅವರನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಯುಎಇಗೆ ಸ್ಥಳಾಂತರಿಸಲಾಯಿತು.

ಮತ್ತಷ್ಟು ಓದಿ: ಇಸ್ರೇಲ್ ಮೇಲೆ ವಿಮಾನ ಅಪ್ಪಳಿಸುವುದೇ ನನ್ನ ಪ್ಲ್ಯಾನ್ ಆಗಿತ್ತು, ಸಾವಿಗೆ ಹೆದರಲ್ಲ: ಫ್ಲೈದುಬೈ ಸಹ-ಪೈಲಟ್ ಹಮ್ಮಾಮಿ ಸ್ಫೋಟಕ ತಪ್ಪೊಪ್ಪಿಗೆ

ಸ್ಮಿತ್ ಚೇತರಿಸಿಕೊಳ್ಳುತ್ತಿದ್ದಾರೆ

ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಪ್ರಕಾರ, ಕ್ಯಾಪ್ಟನ್ ಸ್ಮಿತ್ ಸ್ಥಿರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಕುಟುಂಬ, ವೈದ್ಯರು ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ರಾಯಭಾರ ಕಚೇರಿ ನಿರಂತರ ಸಂಪರ್ಕದಲ್ಲಿದೆ ಎಂದು ತಿಳಿಸಿದೆ.

ಫ್ಲೈದುಬೈ ವಿಮಾನದಲ್ಲಿ ಏನಾಯಿತು?

ಫ್ಲೈದುಬೈ FZ1073 ವಿಮಾನವು ದುಬೈಯಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದಾಗ ಕಾಕ್‌ಪಿಟ್‌ನಲ್ಲಿ ಗಂಭೀರ ಘಟನೆ ನಡೆದಿದೆ. ವರದಿಗಳ ಪ್ರಕಾರ, ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ಸ್ಮಿತ್ ಮೇಲೆ ದಾಳಿ ನಡೆಸಿದ್ದಾನೆ. ಕ್ರ್ಯಾಶ್ ಆಕ್ಸ್‌ನಿಂದ ನಡೆದ ದಾಳಿಯಲ್ಲಿ ಸ್ಮಿತ್ ಗಂಭೀರವಾಗಿ ಗಾಯಗೊಂಡಿದ್ದರು.

ಈ ವೇಳೆ ವಿಮಾನವು ಸುಮಾರು 34,000 ಅಡಿಯಿಂದ 17,000 ಅಡಿಗಿಂತ ಕೆಳಗೆ ವೇಗವಾಗಿ ಇಳಿಯಿತು. ಗಾಯಗೊಂಡಿದ್ದರೂ ಸ್ಮಿತ್ ಕಾಕ್‌ಪಿಟ್ ಬಾಗಿಲು ತೆರೆಯಲು ಪ್ರಯತ್ನಿಸಿದರು. ಬಳಿಕ ಪ್ರಯಾಣಿಕರು ಮತ್ತು ಸಿಬ್ಬಂದಿ ಒಳಗೆ ಪ್ರವೇಶಿಸಿ ಸಹ-ಪೈಲಟ್‌ನನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.

ವಿಮಾನದಲ್ಲಿದ್ದ ಇಬ್ಬರು ಆಫ್-ಡ್ಯೂಟಿ ಪೈಲಟ್‌ಗಳು ನಿಯಂತ್ರಣಕ್ಕೆ ಸಹಾಯ ಮಾಡಿದ್ದು, ಕೊನೆಗೆ ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ವಿಮಾನ ಸುರಕ್ಷಿತವಾಗಿ ಇಳಿಯಿತು. ಈ ಘಟನೆಯ ಹಿಂದಿನ ಉದ್ದೇಶ ಮತ್ತು ಸಹ-ಪೈಲಟ್‌ನ ಹಿನ್ನೆಲೆ ಕುರಿತು ತನಿಖೆ ಮುಂದುವರಿದಿದೆ. ಸ್ಮಿತ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿರುವುದು ಅವರ ಕುಟುಂಬ ಮತ್ತು ಸಹೋದ್ಯೋಗಿಗಳಿಗೆ ಸಮಾಧಾನ ತಂದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More