ಬೈರೂತ್: ಗ್ರಿಡ್ ವೈಫಲ್ಯದಿಂದ ಲೆಬನಾನ್ ದೇಶದಲ್ಲಿ ವಿದ್ಯುತ್ ಕಡಿತವಾಗಿದೆ. ಇಡೀ ದೇಶ ಕತ್ತಲಲ್ಲಿ ಮುಳುಗಿದ್ದು ಆರ್ಥಿಕ ಸಂಕಷ್ಟ ಎದುರಾಗಿದೆ. ದೇಶದ ಅತಿದೊಡ್ಡ ವಿದ್ಯುತ್ ಉತ್ಪಾದನಾ ಘಟಕಗಳಾದ ದೇರ್ ಅಮ್ಮಾರ್ ಮತ್ತು ಝಹ್ರಾನಿ ಇಂಧನ ಕೊರತೆಯಿಂದ ಸ್ಥಗಿತಗೊಂಡಿವೆ. ಪವರ್ ಗ್ರಿಡ್ ಭಾನುವಾರ ಮಧ್ಯಾಹ್ನದಿಂದ ಕಡಿತಗೊಂಡಿದೆ. ಮುಂದಿನ ಕೆಲ ದಿನಗಳವರೆಗೆ ಮತ್ತೆ ಕಾರ್ಯಾರಂಭ ಮಾಡುವುದು ಕಷ್ಟ ಎಂದು ಲೆಬನಾನ್ನ ಹಿರಿಯ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಕಳೆದ 18 ತಿಂಗಳುಗಳಿಂದ ಲೆಬನಾನ್ ಆರ್ಥಿಕ ಸಂಕಷ್ಟ ಮತ್ತು ಇಂಧನ ಕೊರತೆ ಎದುರಿಸುತ್ತಿದೆ. ಈ ಸಂಕಷ್ಟದಿಂದಾಗ ದೇಶದ ಅರ್ಧದಷ್ಟು ಜನಸಂಖ್ಯೆ ಬಡತನ ಅನುಭವಿಸುವಂತಾಗಿದೆ. ಲೆಬನಾನ್ನ ಕರೆನ್ಸಿ ಮೌಲ್ಯ ಕುಸಿದಿದೆ. ಪರಿಸ್ಥಿತಿ ನಿಭಾಯಿಸಲು ವಿಫಲರಾದ ರಾಜಕಾರಿಣಿಗಳ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ವಿದೇಶಿ ಮೀಸಲು ನಿಧಿಯ ಕೊರತೆಯಿಂದಾಗಿ ಇಂಧನ ಪೂರೈಕೆದಾರರಿಗೆ ಹಣ ಪಾವತಿಸಲು ಸಾಧ್ಯವಾಗಿಲ್ಲ.
ಸರ್ಕಾರವು ವಿದ್ಯುತ್ ಪೂರೈಕೆಯಲ್ಲಿ ವೈಫಲ್ಯ ಅನುಭವಿಸುತ್ತಿರುವುದರಿಂದ ಲೆಬನಾನ್ ಜನರು ಡೀಸೆಲ್ ಜನರೇಟರ್ಗಳನ್ನು ವಿದ್ಯುತ್ಗಾಗಿ ನೆಚ್ಚಿಕೊಂಡಿದ್ದಾರೆ. ಇಂಧನ ಕೊರತೆಯಿಂದಾಗಿ ಜನರೇಟರ್ ಬಳಕೆಯೂ ಸಾಧ್ಯವಾಗುತ್ತಿಲ್ಲ, ವೆಚ್ಚವೂ ದುಬಾರಿಯಾಗುತ್ತಿದೆ. ಇತ್ತೀಚೆಗೆ ದೇಶವ್ಯಾಪಿ ಸಂಪೂರ್ಣ ವಿದ್ಯುತ್ ಕಡಿತಗೊಳ್ಳುವ ಮೊದಲು ದೇಶದ ಹಲವು ಭಾಗಗಳಲ್ಲಿ ದಿನಕ್ಕೆ ಕೇವಲ ಎರಡು ಗಂಟೆ ಮಾತ್ರ ವಿದ್ಯುತ್ ಪೂರೈಕೆಯಾಗುತ್ತಿತ್ತು.
ದೇಶದ ಒಟ್ಟು ವಿದ್ಯುತ್ ಬೇಡಿಕೆಯ ಪೈಕಿ ಶೇ 40ರಷ್ಟು ಪ್ರಮಾಣವನ್ನು ಪೂರೈಸುತ್ತಿದ್ದ ಎರಡು ಪ್ರಮುಖ ವಿದ್ಯುತ್ ಉತ್ಪಾದನಾ ಘಟಕಗಳು ಸ್ಥಗಿತಗೊಂಡಿರುವುದನ್ನು ಲೆಬನಾನ್ನ ವಿದ್ಯುತ್ ವಿತರಣಾ ಕಂಪನಿಯೂ ದೃಢಪಡಿಸಿದೆ. ಈ ಘಟಕಗಳು ಸ್ಥಗಿತಗೊಂಡ ನಂತರ ದೇಶವ್ಯಾಪಿ ವಿದ್ಯುತ್ ವಿತರಣಾ ಜಾಲ ಕುಸಿದಿದೆ. ಮತ್ತೆ ಪೂರೈಕೆ ಸರಿಯಾಗಲು ಹಲವು ದಿನಗಳೇ ಬೇಕಾಗಬಹುದು ಎಂದು ಹೇಳಿದೆ. ವಿದ್ಯುತ್ ಜಾಲ ಕುಸಿತದಿಂದ ಸಿಟ್ಟಿಗೆದ್ದಿರುವ ನಾಗರಿಕರು ದೇಶದ ಉತ್ತರ ಭಾಗದ ಪ್ರಮುಖ ನಗರ ಹಾಲ್ಬಾದಲ್ಲಿ ವಿದ್ಯುತ್ ವಿತರಣಾ ಕಂಪನಿಯ ಎದುರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆಯಲ್ಲಿ ಟೈರ್ಗಳನ್ನು ಸುಟ್ಟು ರಸ್ತೆತಡೆ ಚಳವಳಿಗೆ ಮುಂದಾಗಿದ್ದಾರೆ.
ಬೈರೂತ್ನಲ್ಲಿ ಆಗಸ್ಟ್ 2020ರಲ್ಲಿ ಸಂಭವಿಸಿದ ಬೃಹತ್ ಸ್ಫೋಟದಿಂದ ಆದ ಆಘಾತದಿಂದ ಲೆಬನಾನ್ ಇಂದಿಗೂ ಚೇತರಿಸಿಕೊಂಡಿಲ್ಲ. ಸ್ಫೋಟದಲ್ಲಿ 219 ಮಂದಿ ಮೃತಪಟ್ಟು, 7,000 ಮಂದಿ ಸಾವನ್ನಪ್ಪಿದ್ದರು. ಸ್ಫೋಟದ ನಂತರ ಆಡಳಿತಾರೂಢ ಸರ್ಕಾರವು ಅಧಿಕಾರದಿಂದ ಕೆಳಗೆ ಇಳಿದಿತ್ತು. ರಾಜಕೀಯವಾಗಿ ನಿರ್ವಾತ ವಾತಾವರಣ ಉಂಟಾಗಿತ್ತು. ಹಿಂದಿನ ಸರ್ಕಾರ ಆಡಳಿತದಿಂದ ಹಿಂದೆ ಸರಿದ ಸುಮಾರು ಒಂದು ವರ್ಷದ ನಂತರ ಅಂದರೆ ಕಳೆದ ಸೆಪ್ಟೆಂಬರ್ನಲ್ಲಿ ಪ್ರಧಾನ ಮಂತ್ರಿಯಾಗಿ ನಜಿಬ್ ಮಿಕಾಟಿ ಅಧಿಕಾರ ಸ್ವೀಕರಿಸಿದ್ದರು.
ಲೆಬನಾನ್ನಲ್ಲಿ ಸಕ್ರಿಯವಾಗಿ ಉಗ್ರಗಾಮಿ ಸಂಘಟನೆ ಹೆಜ್ಬುಲ್ಲಾ ಕಳೆದ ತಿಂಗಳು ಇರಾನ್ನಿಂದ ಇಂಧನವನ್ನು ತರಿಸಿಕೊಟ್ಟಿತ್ತು. ಹೆಜ್ಬುಲ್ಲಾ ವಿರೋಧಿ ಬಣವು ಈ ಪ್ರಯತ್ನವನ್ನು ಶಂಕೆಯಿಂದ ನೋಡುತ್ತಿದ್ದು, ತನ್ನ ಪ್ರಭಾವ ವಿಸ್ತರಿಸಿಕೊಳ್ಳಲು ಈ ಸಂಘಟನೆ ಇಂಧನ ಸಂಕಷ್ಟವನ್ನು ಬಳಸಿಕೊಳ್ಳುತ್ತಿದೆ ಎಂದು ದೂರುತ್ತಿದೆ.
ತಮ್ಮ ಸಂಕಷ್ಟ ಪರಿಸ್ಥಿತಿಯಲ್ಲಿ ಟ್ವಿಟರ್ನಲ್ಲಿ ಲೆಬನಾನ್ ಜನರು ಹಂಚಿಕೊಳ್ಳುತ್ತಿದ್ದಾರೆ.
In case you’re wondering, this is what it looks like inside a Lebanese private generator hub. 300+ flats getting all their power from here. Those who can’t afford the bills (millions of LLP per month) have nothing during this blackout, and only 1-2 hours when the grid is on. pic.twitter.com/LPQEFKj30Z
— Anna Foster (@annaefoster) October 9, 2021
ಇದನ್ನೂ ಓದಿ: ಲೆಬನಾನ್ ರಾಜಧಾನಿಯಲ್ಲಿ ಭಾರಿ ಸ್ಫೋಟ
ಇದನ್ನೂ ಓದಿ: ಕಲ್ಲಿದ್ದಲು ಬಿಕ್ಕಟ್ಟು: ಕತ್ತಲಲ್ಲಿ ಮುಳುಗಲಿವೆ ಈ ರಾಜ್ಯಗಳು, ದೀರ್ಘ ಪವರ್ ಕಟ್ ನಿರೀಕ್ಷಿತ