ತಾಲಿಬಾನಿ ಪ್ರಮುಖ ನಾಯಕರು (Taliban Leaders) ಅಫ್ಘಾನ್ ಹೊಸ ಸರ್ಕಾರ (Afghanistan) ರಚಿಸುವ ಬಗ್ಗೆ ಕಾಬೂಲ್‌ನಲ್ಲಿ ಸೇರಿ ಚರ್ಚೆ ನಡೆಸುತ್ತಿದ್ದಾರೆ. ಈ ಪ್ರಮುಖ ನಾಯಕರ ಪಟ್ಟಿಯಲ್ಲಿ ಹಕ್ಕಾನಿ ನೆಟ್ವರ್ಕ್ನ (Haqqai Network) ನಾಯಕರೂ ಭಾಗವಾಗಿದ್ದಾರೆ. ಹಕ್ಕಾನಿ ನೆಟ್ವರ್ಕ್ ಎಂಬುದು ಭಯೋತ್ಪಾದಕರ (Terrorists) ಸಾಲಿನಲ್ಲೇ ಅತಿಹೀನ ಮತ್ತು ಭಯಾನಕ ಸಂಘಟನೆ ಎಂದು ಗುರುತಿಸಿಕೊಂಡಿದೆ.
ಈ ಹಕ್ಕಾನಿಗಳು ಕಳೆದ ಕೆಲವು ವರ್ಷಗಳಲ್ಲಿ ವಿವಿಧ ಮಾರಣಾಂತಿಕ ದಾಳಿಗಳನ್ನು ನಡೆಸಿರುವ ಆರೋಪ ಹೊತ್ತುಕೊಂಡಿದ್ದಾರೆ. ನಾಗರಿಕರ, ಸರ್ಕಾರಿ ಅಧಿಕಾರಿಗಳ ಹಾಗೂ ವಿದೇಶಿ ಶಕ್ತಿಗಳ ಜೀವಹಾನಿ ಮಾಡಿರುವ ಆಪಾದನೆಯೂ ಹಕ್ಕಾನಿಗಳ ಮೇಲಿದೆ. ಈಗ ತಾಲಿಬಾನ್ ವಶಪಡಿಸಿಕೊಂಡಿರುವ ಅಫ್ಘಾನಿಸ್ತಾನದಲ್ಲಿ ಹಕ್ಕಾನಿಗಳು ಪವರ್ಫುಲ್ ಆಟಗಾರರಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂಬುದು ಕಳವಳಕಾರಿ ಬೆಳವಣಿಗೆಯಾಗಿದೆ.
ಹಕ್ಕಾನಿ ಗ್ರೂಪ್ನ ಹಿನ್ನೆಲೆ ಏನು?
ಹಕ್ಕಾನಿ ನೆಟ್ವರ್ಕ್ ಅನ್ನು ಜಲಾಲುದ್ದೀನ್ ಹಕ್ಕಾನಿ ಎಂಬಾತ ಸ್ಥಾಪಿಸಿದ್ದಾನೆ. ಸೋವಿಯತ್ ವಿರೋಧಿ ಜಿಹಾದ್ ಮೂಲಕ 1980ರ ಸಮಯದಲ್ಲಿ ಪ್ರಾಮುಖ್ಯತೆ ಪಡೆದ ಈತ ಯುನೈಟೆಡ್ ಸ್ಟೇಟ್ಸ್ ಹಾಗೂ ಅದರ ಮಿತ್ರ ರಾಷ್ಟ್ರವಾಗಿ ಆಗ ಗುರುತಿಸಿಕೊಂಡಿದ್ದ ಪಾಕಿಸ್ತಾನಕ್ಕೆ ಬೇಕಾದವನಾಗಿ ಕಾಣಿಸಿಕೊಂಡಿದ್ದ. ಸೋವಿಯತ್ ಬಿಡುಗಡೆ ವೇಳೆ ಜಲಾಲುದ್ದೀನ್ ಹಕ್ಕಾನಿ, ಒಸಾಮಾ ಬಿನ್ ಲಾಡೆನ್ ಜೊತೆಗೂ ಆಪ್ತನಾಗಿ ಕಾಣಿಸಿಕೊಂಡಿದ್ದ.
ಬಳಿಕ, 1996 ರಲ್ಲಿ ತಾಲಿಬಾನಿಗಳು ಅಫ್ಘಾನಿಸ್ತಾನ ವಶಪಡಿಸಿಕೊಂಡಾಗ ಅವರ ಜೊತೆಗೂ ಹಕ್ಕಾನಿ ಕಾಣಿಸಿಕೊಂಡಿದ್ದ. 2001ರ ವರೆಗೆ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಆಡಳಿತ ನಡೆಸಿದ್ದರು. ಆ ವೇಳೆ, ಇಸ್ಲಾಮಿಸ್ಟ್ ಆಳ್ವಿಕೆಯನ್ನು ಈತನೇ ನೋಡಿಕೊಂಡಿದ್ದ. ಬಳಿಕ, 2001ರಲ್ಲಿ ಯುಎಸ್ ನೇತೃತ್ವದ ಸೇನೆ ಅಫ್ಘಾನ್ ಆಡಳಿತ ಪಡೆದುಕೊಂಡಿತ್ತು.
ಜಲಾಲುದ್ದೀನ್ ಹಕ್ಕಾನಿ ದೀರ್ಘಕಾಲದ ಅನಾರೋಗ್ಯದ ಬಳಿಕ 2018 ರಲ್ಲಿ ಸಾವನ್ನಪ್ಪಿದ್ದ. ಆತನ ಮರಣವನ್ನು ತಾಲಿಬಾನ್ ಘೋಷಿಸಿತ್ತು. ಬಳಿಕ, ಸಿರಾಜುದ್ದೀನ್ ಈ ನೆಟ್ವರ್ಕ್ನ ಮುಖ್ಯಸ್ಥನಾಗಿ ಆಡಳಿತ ವಹಿಸಿದ್ದ.
ಮುಖ್ಯವಾಗಿ ಪೂರ್ವ ಅಫ್ಘಾನಿಸ್ತಾನದಲ್ಲಿ ಮತ್ತು ಪಾಕಿಸ್ತಾನದ ಗಡಿಭಾಗಗಳಲ್ಲಿ ಈ ಗುಂಪು ಸಕ್ರಿಯವಾಗಿದೆ. ಹಾಗೂ ತಾಲಿಬಾನ್ ನಾಯಕತ್ವದಲ್ಲಿ ಹಕ್ಕಾನಿ ನೆಟ್ವರ್ಕ್ ಹೆಚ್ಚು ಸಕ್ರಿಯ ಮತ್ತು ಕಾಣಿಸಿಕೊಂಡಿದೆ. 2015ರಲ್ಲಿ ಸಿರಾಜುದ್ದೀನ್ ಹಕ್ಕಾನಿ ತಾಲಿಬಾನ್ನ ಪ್ರಮುಖ ನಾಯಕನಾಗಿಯೂ ಗುರುತಿಸಿಕೊಂಡಿದ್ದ.
ಸಿರಾಜುದ್ದೀನ್ ಹಕ್ಕಾನಿಯ ಕಿರಿಯ ಸಹೋದರ ಅನಸ್ ಎಂಬಾತನನ್ನು ಅಫ್ಘಾನ್ನ ಹಿಂದಿನ ಸರ್ಕಾರ ಜೈಲಿಗೆ ಅಟ್ಟಿತ್ತು ಹಾಗೂ ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಆದರೆ, ನಂತರ 2019ರಲ್ಲಿ ಆತನನ್ನು ಅಫ್ಘಾನ್ ಕಸ್ಟಡಿಯಿಂದ ಬಿಡುಗಡೆಗೊಳಿಸಲಾಗಿತ್ತು. ಆತ ಕಳೆದ ವಾರಾಂತ್ಯದಲ್ಲಿ ಅಫ್ಘಾನಿಸ್ತಾನದ ಪತನ ಆಗುತ್ತಿದ್ದಂತೆ, ಅಫ್ಘನ್ ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯಿ ಮತ್ತು ಮುಖ್ಯಸ್ಥ ಅಬ್ದುಲ್ಲಾ ಅಬ್ದುಲ್ಲಾ ಜೊತೆಗೆ ಮಾತುಕತೆ ನಡೆಸಿದ್ದಾನೆ.
ಹಕ್ಕಾನಿ ನೆಟ್ವರ್ಕ್ನ ದಾಳಿಗಳು
ಹಕ್ಕಾನಿ ನೆಟ್ವರ್ಕ್ ಕೈಗೊಂಡ ಮಾನವ ವಿರೋಧಿ ಚಟುವಟಿಕೆಗಳು, ಭಯಾನಕ ದಾಳಿಗಳು ಅಫ್ಘಾನಿಸ್ತಾನವನ್ನು ಕಳೆದ ಎರಡು ದಶಕಗಳ ಕಾಲ ಕಾಡಿದೆ. ಅವರನ್ನು ಯುನೈಟೆಡ್ ನೇಷನ್ಸ್ ವಿದೇಶಿ ಭಯೋತ್ಪಾದಕ ಗುಂಪು ಎಂದು ಗುರುತಿಸಿದೆ. ಹಕ್ಕಾನಿಗಳು ಆತ್ಮಾಹುತಿ ಬಾಂಬ್ ದಾಳಿ, ಕಾರ್ ಹಾಗೂ ಟ್ರಕ್ಗಳಲ್ಲಿ ಸ್ಫೋಟಕಗಳನ್ನು ಇರಿಸಿ ದಾಳಿ ಮಾಡುವುದು ಮತ್ತು ಮಿಲಿಟರಿ ಪಡೆ, ನೆಲೆಗಳ ಮೇಲೆ ದಾಳಿ ನಡೆಸಿ ಕುಖ್ಯಾತಿ ಪಡೆದುಕೊಂಡಿದ್ದಾರೆ.
2013ರಲ್ಲಿ ಪೂರ್ವ ಅಫ್ಘಾನಿಸ್ತಾನದ ಭಾಗದಲ್ಲಿ ಹಕ್ಕಾನಿ ಟ್ರಕ್ ಒಂದನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಸುಮಾರು 28 ಟನ್ಗಳಷ್ಟು ಸ್ಫೋಟಕಗಳು ತುಂಬಿದ್ದವು. ಈ ಬಗ್ಗೆ, ಯುಎಸ್ ರಾಷ್ಟ್ರದ ಭಯೋತ್ಪಾದಕ ವಿರೋಧಿ ಕೇಂದ್ರ ಮಾಹಿತಿ ನೀಡಿದೆ.
2008ರ ವೇಳೆಗೆ ಅಫ್ಘಾನ್ ಅಧ್ಯಕ್ಷನಾಗಿದ್ದ ಕರ್ಜಾಯಿ ಹತ್ಯೆಯ ಯೋಜನೆ ರೂಪಿಸಿದ್ದು, ಪಶ್ಚಿಮ ಅಫ್ಘಾನಿಸ್ತಾನ ಅಧಿಕಾರಿಗಳು ಮತ್ತು ನಾಗರಿಕರನ್ನು ಅಪಹರಣ ನಡೆಸಿದ ಆರೋಪವೂ ಹಕ್ಕಾನಿಗಳ ಮೇಲಿದೆ.
ಪಾಕಿಸ್ತಾನಿ ಮಿಲಿಟರಿ ಮೂಲದ ಜೊತೆಗೆ ದೀರ್ಘಕಾಲಿಕ ಸಂಬಂಧ ಹೊಂದಿರುವ ಬಗ್ಗೆಯೂ ಮಾಹಿತಿ ಲಭ್ಯವಿದೆ. ಆದರೆ, ಪಾಕಿಸ್ತಾನ ಈ ಆರೋಪ ತಳ್ಳಿಹಾಕಿದೆ. ಹಕ್ಕಾನಿಗಳು ತಾಲಿಬಾನಿ ಸೇನೆಗೂ ಬಹಳ ಕೊಡುಗೆ ನೀಡಿದೆ. ಮತ್ತು ಯುದ್ಧ ಸನ್ನದ್ಧ ಸೇನೆ ಇದಾಗಿದೆ ಎಂದು ಯುಎನ್ ಮಾನಿಟರ್ಸ್ ಜೂನ್ ವರದಿಯಲ್ಲಿ ತಿಳಿಸಿದೆ. ಈ ನೆಟ್ವರ್ಕ್ ತಾಲಿಬಾನ್ ಹಾಗೂ ಅಲ್ ಖೈದಾ ನಡುವಿನ ಪ್ರಮುಖ ಸಂಪರ್ಕ ಕೊಂಡಿ ಎಂದೂ ಹೇಳಲಾಗುತ್ತದೆ.
ತಾಲಿಬಾನ್ ಆಡಳಿತದಲ್ಲಿ ಇವರದ್ದೇನು ಪಾತ್ರ?
ಇದೀಗ ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರಗಾಮಿ ಸಂಘಟನೆ ವಶಪಡಿಸಿಕೊಂಡಿದೆ. ಹಕ್ಕಾನಿಗಳು ಕೂಡ ತಾಲಿಬಾನ್ ರಾಜಕೀಯ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಕನಿಷ್ಠ ಇಬ್ಬರು ಹಕ್ಕಾನಿ ನಾಯಕರು ಸದ್ಯ ಕಾಬೂಲ್‌ನಲ್ಲಿ ಇದ್ದಾರೆ ಎಂದು ಹೇಳಲಾಗಿದೆ. ಮುಂದಿನ ಸರ್ಕಾರ ರಚಿಸುವ ಮಾತುಕತೆಗಳು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಹಕ್ಕಾನಿ ನಾಯಕರು ಕಾಬೂಲ್‌ನಲ್ಲಿ ಬೀಡುಬಿಟ್ಟಿದ್ದಾರೆ.
ಬಂಧನದಿಂದ ಬಿಡುಗಡೆಗೊಂಡ ಅನಸ್ ಹಕ್ಕಾನಿ ಕರ್ಜಾಯಿ ಜೊತೆ ಮಾತುಕತೆ ನಡೆಸಿದ್ದು ಒಂದೆಡೆಯಾದರೆ, ಇತ್ತ ಆತನ ಸಂಬಂಧಿ ಖಲೀಲ್ ಹಕ್ಕಾನಿ ಕಾಬೂಲ್ ನಗರದಲ್ಲಿ ಪ್ರಾರ್ಥನೆಯ ನೇತೃತ್ವ ವಹಿಸಿರುವುದು ಕಂಡುಬಂದಿದೆ.
ಸಿರಾಜುದ್ದಿನ್ ಹಾಗೂ ಖಲೀಲ್ ಹಕ್ಕಾನಿ, ಮಿಲಿಯನ್ ಡಾಲರ್ ಬೌಂಟೀಸ್ ಆಫರ್ನೊಂದಿಗೆ ಅಮೆರಿಕದ ವಾಂಟೆಂಡ್ ಪಟ್ಟಿಯಲ್ಲಿ ಇರುವ ಉಗ್ರಗಾಮಿಗಳಾಗಿದ್ದಾರೆ. ಈ ನಡುವೆ, ಅವರ ಸಹಾಯವನ್ನೇ ಅಮೆರಿಕ ಕೇಳಿದೆ ಎಂದೂ ವರದಿಗಳು ಲಭ್ಯವಾಗಿದೆ.
ಇದನ್ನೂ ಓದಿ: ಅಮೆರಿಕ ಘೋಷಿತ ಜಾಗತಿಕ ಉಗ್ರಗಾಮಿ ಖಲೀಲ್ ಹಕ್ಕಾನಿ ಕಾಬೂಲ್‌ನಲ್ಲಿ ರಾಜಾರೋಷವಾಗಿ ಓಡಾಟ
ವಾಯುಸೇನೆ ವಿಮಾನದಲ್ಲಿ ಆಫ್ಘನ್‌ನಿಂದ ಭಾರತಕ್ಕೆ ವಾಪಸಾದ 107 ಭಾರತೀಯರು