ಕೊರೊನಾ ಸೋಂಕಿನ ಪ್ರಸರಣ, ಪ್ರಮಾಣ ಚೀನಾದ ಹಾಂಗ್ಕಾಂಗ್ನಲ್ಲಿ(Hong Kong) ಅತ್ಯಂತ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಒಮಿಕ್ರಾನ್ ಸೋಂಕಿನ (Omicron) ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಆಸ್ಪತ್ರೆಗಳಲ್ಲಿ ರೋಗಿಗಳು ಹೆಚ್ಚುತ್ತಿದ್ದಾರೆ. ಹೀಗಾಗಿ ಹಾಂಗ್ಕಾಂಗ್ನಲ್ಲಿ ಶೂನ್ಯ ಕೊವಿಡ್ ನೀತಿಯಲ್ಲಿ ಸಡಿಲಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಕಟ್ಟುನಿಟ್ಟಿನ ಕ್ರಮಗಳು ಮುಂದುವರಿದಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಚೀನಾದಲ್ಲಿ ಹಾಂಗ್ಕಾಂಗ್ ಸೇರಿ ಎಲ್ಲ ನಗರಗಳಲ್ಲೂ ಕೊವಿಡ್ 19 ನಿಯಂತ್ರಣಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸೋಂಕಿನ ಸಂಖ್ಯೆಯಲ್ಲಿ ತುಸು ಹೆಚ್ಚಳ ಕಂಡುಬಂದರೂ ಸಾಮೂಹಿಕ ಕ್ವಾರಂಟೈನ್, ಸೋಂಕಿತರ ಸಂಪರ್ಕಕ್ಕೆ ಬಂದವರ ಟ್ರ್ಯಾಕ್ ಮಾಡುವುದು, ಸಾಮಾಜಿಕ ಅಂತರ ಪಾಲನೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಕ್ರಮಗಳನ್ನೆಲ್ಲ ಕಳೆದು ಎರಡು ವರ್ಷಗಳಿಂದಲೂ ಕಟ್ಟುನಿಟ್ಟಾಗಿ ಹೇರಲಾಗಿದ್ದು, ಜನರೂ ಕೂಡ ಪಾಲಿಸುತ್ತಿದ್ದಾರೆ.
ಆದರೆ ಡಿಸೆಂಬರ್ನಲ್ಲಿ ಹಾಂಗ್ಕಾಂಗ್ನಲ್ಲಿ ಒಮಿಕ್ರಾನ್ ಸೋಂಕಿನ ಹೆಚ್ಚಳದ ಜತೆ ಕೊವಿಡ್ 19 ಪ್ರಸರಣವೂ ಮಿತಿಮೀರಿದೆ. ದಿನದಲ್ಲಿ ದಾಖಲಾಗುವ ಕೊರೊನಾ ಸೋಂಕಿತರ ಸಂಖ್ಯೆಯು ಕಳೆದ ಎರಡು ವಾರಗಳ ಹಿಂದಿನಿಗಿಂತ ಈಗ 13 ಪಟ್ಟು ಹೆಚ್ಚಳವಾಗಿದೆ. ಜನವರಿ ಅಂತ್ಯದ ಹೊತ್ತಿಗೆ ದಿನದಲ್ಲಿ 100 ಕೊರೊನಾ ಕೇಸ್ಗಳು ದಾಖಲಾಗುತ್ತಿದ್ದವು. ಆದರೆ ಇಂದು 1530 ಪ್ರಕರಣಗಳು ದಾಖಲಾಗಿವೆ ಎಂದು ಸ್ಥಳೀಯ ಮಾಧ್ಯಮಗಳೇ ವರದಿ ಮಾಡಿವೆ.
ಹಾಂಗ್ ಕಾಂಗ್ನ ನಾಯಕಿ ಕ್ಯಾರಿ ಲ್ಯಾಮ್ ಕೂಡ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಒಮಿಕ್ರಾನ್ ಮತ್ತು ಕೊವಿಡ್ ಅತ್ಯಂತ ಆಕ್ರಮಣಕಾರಿಯಾಗಿ ಹರಡುತ್ತಿದೆ. ಇಡೀ ನಗರ ಕೊವಿಡ್ 19 ಒಮಿಕ್ರಾನ್ ಅಲೆಯಲ್ಲಿ ಮುಳುಗುತ್ತಿದೆ. ನಿಯಂತ್ರಣಕ್ಕೆ ಸಂಬಂಧಪಟ್ಟು ಯಾವೆಲ್ಲ ಕ್ರಮ ಕೈಗೊಳ್ಳಬೇಕು ಎಂದು ಚೀನಾ ಸರ್ಕಾರದ ಅಧಿಕಾರಿಗಳು, ಮುಖಂಡರೊಂದಿಗೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಹಾಂಗ್ಕಾಂಗ್ನಲ್ಲಿ ಮಾರ್ಚ್ ಅಂತ್ಯದ ವೇಳೆಗೆ 28 ಸಾವಿರ ಪ್ರಕರಣಗಳು ದಿನವೊಂದಕ್ಕೆ ಪತ್ತೆಯಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಹಿಜಾಬ್ ಧರಿಸಿ ಶಾಲೆಗೆ ಬಂದ ವಿದ್ಯಾರ್ಥಿನಿ ಮುಖದ ಮೇಲೆ ‘ಅಪ್ನಾ ಟೈಮ್ ಆಯೇಗಾ’ ಅಂತ ಬರೆಯಲಾದ ಮಾಸ್ಕ್!