ಹಾಂಕಾಂಗ್ನಲ್ಲಿ ಆಸ್ತಿ ಖರೀದಿ ಮಾಡೋದು ಬಲು ದುಬಾರಿ. ಆದರೆ ಬಾಡಿಗೆಯಲ್ಲೂ ಕೆಲ ದಿನಗಳ ಹಿಂದೆ ಅಲ್ಲೊಂದು ಹೊಸ ದಾಖಲೆಯೇ ಆಗಿದೆ. ಇದನ್ನು ನೋಡಿದರೆ ಏನೋ ಕೊರೊನಾ ಬಿಕ್ಕಟ್ಟಿನಿಂದ ಚೇತರಿಕೆ ಆದಂತೆ ಕಾಣಿಸ್ತಿದೆ ಅಂದುಕೊಳ್ಳಬಹುದು. ಅಷ್ಟಕ್ಕೂ ಅಲ್ಲಿ ಏನಾಗಿದೆ ಅಂದರೆ, ವಾರ್ಫ್ ಹೋಲ್ಡಿಂಗ್ ಲಿಮಿಟೆಡ್ನಿಂದ ವಿಲಾಸಿ ಮನೆಯೊಂದನ್ನು ತಿಂಗಳಿಗೆ 1.35 ಮಿಲಿಯನ್ ಹಾಂಕಾಂಗ್ ಡಾಲರ್ ಲೆಕ್ಕಕ್ಕೆ ಬಾಡಿಗೆಗೆ ನೀಡಲಾಗಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕೆಂದರೆ, ತಿಂಗಳಿಗೆ 1,25,92,696. ಹೌದು, ನೀವು ಸರಿಯಾಗಿ ಓದುತ್ತಿದ್ದೀರಿ; 11 ಪ್ಲಾಂಟೇಷನ್ ರಸ್ತೆ ಪ್ರಾಜೆಕ್ಟ್ನಲ್ಲಿ ನೀಡಿರುವ ವಿಲಾಸಿ ಮನೆಯ ಬಾಡಿಗೆ 1.26 ಕೋಟಿ ರೂಪಾಯಿ ಆಗುತ್ತದೆ. ವರ್ಷಕ್ಕೆ 15 ಕೋಟಿ ರೂಪಾಯಿ ಆಗುತ್ತದೆ ಅಂದುಕೊಳ್ಳಿ. ಆದರೆ ಇಷ್ಟು ದೊಡ್ಡ ಮೊತ್ತಕ್ಕೆ ಬಾಡಿಗೆಗೆ ಪಡೆದ ಆ ಶ್ರೀಮಂತರು ಯಾರು ಎಂಬ ಮಾಹಿತಿ ಬಯಲಾಗಿಲ್ಲ.
ಹಾಂಕಾಂಗ್ನಲ್ಲಿ ಮನೆಯೊಂದಕ್ಕೆ ಪಾವತಿಸಿರುವ ಅತಿ ದೊಡ್ಡ ಮೊತ್ತ ಇದು ಎನ್ನಲಾಗಿದೆ. ಅದ್ಯಾರೋ ಪುಣ್ಯಾತ್ಮರಿಗೆ ತಾವಂದುಕೊಂಡಂತೆ ಮನೆಯನ್ನು ಖರೀದಿ ಮಾಡುವುದಕ್ಕೆ ಸಿಕ್ಕಿರುವುದಿಲ್ಲ. ಅದಕ್ಕಾಗಿಯೇ ತಾತ್ಕಾಲಿಕವಾಗಿ ಬಾಡಿಗೆ ಮನೆಯಲ್ಲಿ ಇದ್ದು, ತಮಗೆ ಬೇಕಾದಂಥ ಮನೆ ಸಿಕ್ಕ ಮೇಲೆ ಖರೀದಿಸೋಣ ಅಂದುಕೊಂಡಿರಬೇಕು ಎನ್ನುತ್ತಾರೆ ಸ್ಥಳೀಯ ರಿಯಲ್ ಎಸ್ಟೇಟ್ ತಜ್ಞರು.
10,804 ಚದರಡಿಯ ಮನೆ
10,804 ಚದರಡಿಯ ಈ ಮನೆ ವಿಕ್ಟೋರಿಯಾ ಕಡಲ ಕಡೆಗೆ ಮುಖ ಮಾಡಿ ನಿಂತಿದೆ. ಈ ಮನೆಯಲ್ಲಿ ಖಾಸಗಿ ಗ್ಯಾರೇಜ್, ಉದ್ಯಾನ, ಎಲಿವೇಟರ್ ಇದೆ. 11 ಪ್ಲಾಂಟೇಷನ್ ರಸ್ತೆಯಲ್ಲಿ ಇರುವ 7 ಮನೆಗಳಲ್ಲಿ ನಾಲ್ಕನ್ನು ಮಾರುವ ಆಲೋಚನೆ ವಾರ್ಫ್ ಹೋಲ್ಡಿಂಗ್ ಲಿಮಿಟೆಡ್ದು. ಉಳಿದಿದ್ದನ್ನು ಬಾಡಿಗೆ ಆದಾಯಕ್ಕೆ ಇಟ್ಟುಕೊಳ್ಳುತ್ತದಂತೆ. ಹಾಂಕಾಂಗ್ನಲ್ಲಿ ಮನೆಗಳ ಲಭ್ಯತೆಯೇ ಕಡಿಮೆ. ಇದರ ಜತೆಗೆ ವಿಲಾಸಿ ಮನೆಗಳ ಮಾರಾಟಕ್ಕೆ ಡೆವಲಪರ್ಗಳಿಗೆ ತುಂಬ ಸಮಯ ಹಿಡಿಸುತ್ತದೆ. ಆದ್ದರಿಂದ ಕೆಲವು ಆಸ್ತಿಗಳನ್ನು ಬಾಡಿಗೆಗೆ ನೀಡಲಾಗುತ್ತದೆ ಎನ್ನುತ್ತಾರೆ ನೈಟ್ ಫ್ರಾಂಕ್ ಎಲ್ಎಲ್ಪಿಯ ಕಾರ್ಯ ನಿರ್ವಾಹಕ ನಿರ್ದೇಶಕ ಥಾಮಸ್ ಲ್ಯಾಮ್.
ಈಚೆಗೆ ಹಾಂಕಾಂಗ್ನಲ್ಲಿ ಹೈ ಎಂಡ್ ವಸತಿ ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಅಪಾರ್ಟ್ಮೆಂಟ್ ಮತ್ತು ಭೂಮಿಯ ಮಾರಾಟ ಆಗಿದೆ. ಕಳೆದ ತಿಂಗಳು ಸಿಕೆ ಅಸೆಟ್ ಹೋಲ್ಡಿಂಗ್ಸ್ ಲಿಮಿಟೆಡ್ನಿಂದ 459 ಮಿಲಿಯನ್ ಹಾಂಕಾಂಗ್ ಡಾಲರ್ಗೆ (ಭಾರತದ ರೂಪಾಯಿ ಲೆಕ್ಕದಲ್ಲಿ 428 ಕೋಟಗೂ ಹೆಚ್ಚು) ಮಾರಲಾಗಿದ್ದು, ಇದು ಏಷ್ಯಾದಲ್ಲೇ ಇಂಥ ಆಸ್ತಿಗೆ ದೊರೆತ ದಾಖಲೆ ಬೆಲೆಯಾಗಿದೆ.
ಇದನ್ನೂ ಓದಿ: ತೀವ್ರ ಸ್ವರೂಪ ಪಡೆದ ‘ಡ್ರ್ಯಾಗನ್’ ವಿರುದ್ಧದ ಆಕ್ರೋಶ..!