Qatar minimum wage law: ಕತಾರ್ನಲ್ಲಿ ಜಾರಿಗೆ ಬಂತು ಕನಿಷ್ಠ ವೇತನದ ಹೊಸ ಕಾನೂನು
ಕತಾರ್ ದೇಶದಲ್ಲಿ ವಲಸಿಗ ಕಾರ್ಮಿಕರ ಸಂಖ್ಯೆಯು ವಿಪರೀತ ಹೆಚ್ಚು. ಆ ದೇಶದಲ್ಲಿ ಈಗ ಕನಿಷ್ಠ ವೇತನದ ಹೊಸ ಕಾನೂನು ತರಲಾಗಿದೆ. ಶನಿವಾರದಿಂದ ಜಾರಿ ಆಗುತ್ತಿರುವ ಆ ಕಾನೂನಿನ ಪ್ರಕಾರ, ಕಾರ್ಮಿಕರೊಬ್ಬರಿಗೆ ನೀಡುವ ಕನಿಷ್ಠ ವೇತನ ಎಷ್ಟು ಗೊತ್ತಾ?
ಕತಾರ್ನಲ್ಲಿ ಶನಿವಾರದಿಂದ (ಮಾರ್ಚ್ 20, 2021) ಹೊಸ ಕನಿಷ್ಠ ವೇತನ ಕಾನೂನು ಜಾರಿಗೆ ಬಂದಿದೆ. ಇದರಿಂದ ಲಕ್ಷಾಂತರ ಸಂಖ್ಯೆಯ ವಲಸಿಗ ಕಾರ್ಮಿಕರಿಗೆ ಅನುಕೂಲ ಆಗಲಿದೆ. ಹೊಸ ಕಾನೂನಿನ ಪ್ರಕಾರ, ಎಲ್ಲ ಸಿಬ್ಬಂದಿಯು ಕನಿಷ್ಠ ತಿಂಗಳ ವೇತನ 1000 ಕತಾರ್ ರಿಯಾಲ್ (19,900 ರೂಪಾಯಿ) ಪಡೆಯಲಿದ್ದಾರೆ. ಒಂದು ವೇಳೆ ಉದ್ಯೋಗದಾತರೇ ಉಳಿದುಕೊಳ್ಳುವುದಕ್ಕೆ ಮನೆ ಹಾಗೂ ಆಹಾರ ನೀಡದಿದ್ದಲ್ಲಿ, ಮನೆಗೆ 500 ರಿಯಾಲ್ (9950 ರೂಪಾಯಿ) ಮತ್ತು ಆಹಾರಕ್ಕೆ 300 ರಿಯಾಲ್ (5968 ರೂಪಾಯಿ) ಹೆಚ್ಚುವರಿಯಾಗಿ ಪಡೆಯುತ್ತಾರೆ. 4,00,000ಕ್ಕೂ ಹೆಚ್ಚು ಕಾರ್ಮಿಕರು ಅಥವಾ ಶೇಕಡಾ 20ರಷ್ಟು ಖಾಸಗಿ ವಲಯದವರು ಈ ಹೊಸ ಕಾನೂನಿನಿಂದ ನೇರವಾಗಿ ಅನುಕೂಲ ಪಡೆಯಲಿದ್ದಾರೆ ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ತಿಳಿಸಿದೆ.
ಕತಾರ್ನ ಒಟ್ಟು ಜನಸಂಖ್ಯೆ 27 ಲಕ್ಷ. ಆದರೆ ಅದರಲ್ಲಿ ಅಲ್ಲಿನ ನಾಗರಿಕರು ಎಂದಿರುವುದು ಕೇವಲ 3,00,000 ಮಾತ್ರ. ಕತಾರ್ ಸರ್ಕಾರದ ಮಾಹಿತಿಯ ಪ್ರಕಾರ, ಈಗಾಗಲೇ 5000ಕ್ಕೂ ಹೆಚ್ಚು ಕಂಪೆನಿಗಳು ಹೊಸ ವೇತನ ಪದ್ಧತಿಯನ್ನು ಅಳವಡಿಸಿಕೊಂಡಿದ್ದು, ಹೊಸ ಕಾನೂನು ಜಾರಿಗೆ ಬದ್ಧವಾಗಿದ್ದಾರೆ. ಈಚಿನ ವರ್ಷಗಳಲ್ಲಿ ಕತಾರ್ನಲ್ಲಿ ಸರಣಿಯಾಗಿ ಕಾರ್ಮಿಕ ಕಾನೂನುಗಳ ಸುಧಾರಣೆ ಮಾಡಲಾಗಿದೆ. ಕಳೆದ ವರ್ಷ ಆಗಸ್ಟ್ನಲ್ಲಿ ಪ್ರಮುಖವಾದ ಘೋಷಣೆಯೊಂದನ್ನು ಅಲ್ಲಿನ ಸರ್ಕಾರ ಮಾಡಿತು. ಅದರ ಪ್ರಕಾರ, ಉದ್ಯೋಗಿ ಕೆಲಸ ಬದಲಿಸಬೇಕಿದ್ದಲ್ಲಿ ಉದ್ಯೋಗದಾತರ ಅನುಮತಿ ಪಡೆಯಬೇಕೆಂದೇನೂ ಇಲ್ಲ.
ಅದಕ್ಕೂ ಮುಂಚೆ ಕತಾರ್ನ “ಕಫಲಾ” ಅಥವಾ ಪ್ರಾಯೋಜಿತ ವ್ಯವಸ್ಥೆ ಅಡಿಯಲ್ಲಿ ಕಾರ್ಮಿಕರು ತಮ್ಮ ಉದ್ಯೋಗ ಬದಲಿಸುವ ಮುಂಚೆ ಉದ್ಯೋಗದಾತರ ಅನುಮತಿ ಪಡೆಯಬೇಕಿತ್ತು. ಆಗ ಕಾರ್ಮಿಕರು ತಮಗೆ ಉದ್ಯೋಗ ನೀಡಿದವರಿಂದ ಶೋಷಣೆಗೆ ಒಳಗಾಗುತ್ತಿದ್ದರು. ಆದರೆ ಇನ್ನೂ ತಮಗೆ ಉದ್ಯೋಗ ಬದಲಾವಣೆ ವೇಳೆ ಬೆದರಿಕೆ, ಆತಂಕ ಹಾಗೂ ಶೋಷಣೆ ನಿಂತಿಲ್ಲ ಎಂದು ಕೆಲವು ಕಾರ್ಮಿಕರು ಮಾಧ್ಯಮವೊಂದರ ಬಳಿ ಹೇಳಿಕೊಂಡಿದ್ದಾರೆ. ಎಷ್ಟೋ ಮಂದಿ ಕಾರ್ಮಿಕರನ್ನು ಜೈಲಿಗೆ ಕಳಿಸುವ ಹಾಗೂ ಗಡೀಪಾರು ಮಾಡುವುದರೊಂದಿಗೆ ಪ್ರಹಸನ ಕೊನೆಯಾಗುವ ಉದಾಹರಣೆಗಳು ಈಗಲೂ ಇವೆ.
2022ನೇ ಇಸವಿಯ ಫುಟ್ಬಾಲ್ ವಿಶ್ವಕಪ್ ಆಯೋಜಿಸುವ ಅವಕಾಶವು 2010ರಲ್ಲಿ ಕತಾರ್ಗೆ ದೊರೆಯಿತು. ಆಗಿನಿಂದ ಆ ದೇಶದಲ್ಲಿ ವಲಸಿಗ ಕಾರ್ಮಿಕರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬ ಬಗ್ಗೆ ಗಮನ ಹೆಚ್ಚು ನೀಡಲಾಗುತ್ತಿದೆ. 2018ರಲ್ಲಿ ಕತಾರ್ನಲ್ಲಿ ಬಹುತೇಕ ವಲಸಿಗ ಕಾರ್ಮಿಕರಿಗೆ ಹೊರಹೋಗುವ ವೀಸಾ ಇಲ್ಲದಿದ್ದರೂ ದೇಶವನ್ನು ಬಿಟ್ಟು ಹೋಗುವುದಕ್ಕೆ ಅನುವು ಮಾಡಿಕೊಡಲು ಕಾನೂನು ತಿದ್ದುಪಡಿ ಮಾಡಲಾಯಿತು. ಕತಾರ್ನ ವಿಶ್ವಕಪ್ ಆಯೋಜಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಸನ್ ಅಲ್- ಥವದಿ ಮಾತನಾಡಿ, ಈ ವಿಶ್ವಕಪ್ನಿಂದ ಕತಾರ್ ಮತ್ತು ವಿಶ್ವದ ಇತರ ಭಾಗಗಳ ಕಾರ್ಮಿಕ ಹಕ್ಕುಗಳಿಗೆ ಸಂಬಂಧಿಸಿದಂತೆ ಅನೂಹ್ಯ ಬದಲಾವಣೆಗಳಾಗುತ್ತವೆ ಎಂದಿದ್ದಾರೆ.
ಇದನ್ನೂ ಓದಿ: TCS employees salary hike: FY22ಕ್ಕೆ ಉದ್ಯೋಗಿಗಳ ವೇತನ ಹೆಚ್ಚಳ ಘೋಷಿಸಿದ ಮೊದಲ ಕಂಪೆನಿ ಟಿಸಿಎಸ್