
ಇಸ್ಲಾಮಾಬಾದ್, ಮೇ 15: ಆಪರೇಷನ್ ಸಿಂಧೂರ್(Operation Sindoor) ಅಡಿಯಲ್ಲಿ ಪಾಕಿಸ್ತಾನದಲ್ಲಿ ಭಾರತೀಯ ವಾಯುಪಡೆ ನಡೆಸಿದ ಕಾರ್ಯಾಚರಣೆ ಬಳಿಕ ಕಿರಾನಾ ಬೆಟ್ಟಗಳಲ್ಲಿ ವಿಕಿರಣಗಳು ಸೋರಿಕೆಯಾಗುತ್ತಿದೆ ಎನ್ನುವ ಮಾಹಿತಿ ಹರಿದಾಡಿತ್ತು ಆದರೆ ಅದು ಸುಳ್ಳು ಎಂದು ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆಯಾದ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ(IAEA) ಸ್ಪಷ್ಟಪಡಿಸಿದೆ.
ಪಾಕಿಸ್ತಾನದ ಯಾವುದೇ ಪರಮಾಣು ಸ್ಥಾವರದಿಂದ ವಿಕಿರಣ ಸೋರಿಕೆ ಅಥವಾ ಹೊರಸೂಸುವಿಕೆಯ ಯಾವುದೇ ಘಟನೆ ಸಂಭವಿಸಿಲ್ಲ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಪತ್ರಿಕಾ ವಿಭಾಗದ ಫ್ರೆಡೆರಿಕ್ ಡಹ್ಲ್ ಟೈಮ್ಸ್ ಆಫ್ ಇಂಡಿಯಾದ ಪ್ರಶ್ನೆಗೆ ಇಮೇಲ್ ಮೂಲಕ ನೀಡಿದ ಪ್ರತಿಕ್ರಿಯೆ ನೀಡಿದ್ದಾರೆ.
ಈ ಮೊದಲು ಕೆಲವು ಸಾಮಾಜಿಕ ಮಾಧ್ಯಮಗಳು ಹಾಗೂ ವಿದೇಶಿ ಮಾಧ್ಯಮ ಸಂಸ್ಥೆಗಳು ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗಿದೆ ಎನ್ನಲಾದ ಕಿರಾನಾ ಬೆಟ್ಟಗಳನ್ನು ಗುರಿಯಾಗಿಸಿ ಭಾರತ ದಾಳಿ ನಡೆಸಿತ್ತು ಎನ್ನುವ ಸುದ್ದಿಯನ್ನು ಬಿತ್ತರಿಸಿದ್ದವು.
ಭಾರತೀಯ ಸೇನೆಯೂ ಈ ಹೇಳಿಕೆ ತಿರಸ್ಕರಿಸಿತ್ತು
ಭಾರತೀಯ ವಾಯುಪಡೆಯ ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ಮಾರ್ಷಲ್ ಎ.ಕೆ. ಭಾರ್ತಿ ಕೂಡ ಈ ಹೇಳಿಕೆಯನ್ನು ಸಂಪೂರ್ಣವಾಗಿ ನಿರಾಕರಿಸಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಿರಾನಾ ಬೆಟ್ಟಗಳಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದ್ದಕ್ಕಾಗಿ ಧನ್ಯವಾದಗಳು. ನಮಗೆ ಇದರ ಬಗ್ಗೆ ತಿಳಿದಿರಲಿಲ್ಲ. ನಾವು ಕಿರಾನಾ ಬೆಟ್ಟಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಎಂದು ನಕ್ಕಿದ್ದರು.
ಮತ್ತಷ್ಟು ಓದಿ: ಇದು ಟಾಪ್ ಸೀಕ್ರೆಟ್… ಆಪರೇಷನ್ ಸಿಂದೂರದಿಂದ ಹಲವರ ಬಣ್ಣ ಬಯಲು; ಅಮೆರಿಕ ನಡುಗಲು ನಿಜ ಕಾರಣ ಏನು ಗೊತ್ತಾ?
ಅಮೆರಿಕದ ಮೌನ
ಮೇ 13 ರಂದು ವಾಷಿಂಗ್ಟನ್ ಡಿಸಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅಮೆರಿಕದ ವಿದೇಶಾಂಗ ಇಲಾಖೆಯ ಪ್ರಧಾನ ಉಪ ವಕ್ತಾರ ಥಾಮಸ್ ಪಿಗೋಟ್ ಅವರ ಬಳಿ, ವಿಕಿರಣ ಸೋರಿಕೆ ವರದಿಗಳ ನಂತರ ಅಮೆರಿಕವು ಪಾಕಿಸ್ತಾನಕ್ಕೆ ಯಾವುದೇ ತಂಡವನ್ನು ಕಳುಹಿಸಿದೆಯೇ ಎಂದು ಕೇಳಲಾಯಿತು. ಈ ಸಮಯದಲ್ಲಿ ನಾನು ಅದರ ಬಗ್ಗೆ ಏನೂ ಹೇಳಲಾರೆ ಎಂದು ಹೇಳಿ ಪಿಗ್ಗಾಟ್ ಪ್ರತಿಕ್ರಿಯಿಸಲು ನಿರಾಕರಿಸಿದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮವನ್ನು ಅಮೆರಿಕ ಸ್ವಾಗತಿಸಿತು ಮತ್ತು ಎರಡೂ ದೇಶಗಳ ನಡುವೆ ನೇರ ಸಂವಾದವನ್ನು ಪ್ರತಿಪಾದಿಸಿತು.
ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ವದಂತಿಗಳು
ಆಪರೇಷನ್ ಸಿಂಧೂರ್ ಅಡಿಯಲ್ಲಿ, ಭಾರತವು ಸರ್ಗೋಧಾ ಮತ್ತು ನೂರ್ ಖಾನ್ ವಾಯುನೆಲೆಗಳು ಸೇರಿದಂತೆ ಪಾಕಿಸ್ತಾನದ ಹಲವಾರು ಮಿಲಿಟರಿ ಸ್ಥಾಪನೆಗಳ ಮೇಲೆ ನಿಖರವಾದ ವಾಯುದಾಳಿಗಳನ್ನು ನಡೆಸಿತು. ದಾಳಿಯ ನಂತರ, ಸರ್ಗೋಧದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಕಿರಾನ ಬೆಟ್ಟಗಳ ಮೇಲೆ ದಾಳಿ ನಡೆದಿದೆ ಮತ್ತು ವಿಕಿರಣ ಸೋರಿಕೆ ಸಂಭವಿಸಿದೆ ಎಂಬ ವದಂತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿತ್ತು. US B350 AMS ವಿಮಾನವು ಪಾಕಿಸ್ತಾನದ ವಾಯುಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಇದಲ್ಲದೆ, ಈಜಿಪ್ಟ್‌ನಿಂದ ಬೋರಾನ್ (ವಿಕಿರಣವನ್ನು ನಿಯಂತ್ರಿಸುವ ಅಂಶ) ಹೊತ್ತೊಯ್ಯುವ ವಿಮಾನವು ಪಾಕಿಸ್ತಾನವನ್ನು ತಲುಪುವ ಬಗ್ಗೆಯೂ ವದಂತಿಗಳಿವೆ.
ಆದರೆ ಈ ಎಲ್ಲಾ ಅಂತೆಕಂತೆಗಳನ್ನು IAEA ನಿರಾಕರಿಸಿದೆ. ಭಾರತೀಯ ಅಧಿಕಾರಿಗಳು ಮತ್ತು ಪಾಕಿಸ್ತಾನ ಸರ್ಕಾರ ಕೂಡ ತಿರಸ್ಕರಿಸಿವೆ. ಪಾಕಿಸ್ತಾನ ಸರ್ಕಾರದಿಂದ ಬಂದ ರೇಡಿಯೋಲಾಜಿಕಲ್ ಸೇಫ್ಟಿ ಬುಲೆಟಿನ್ ಎಂದು ಹೇಳಲಾದ ವೈರಲ್ ದಾಖಲೆಯೂ ನಕಲಿ ಎಂದು ಕಂಡುಬಂದಿದೆ.
ಭಾರತ-ಪಾಕಿಸ್ತಾನ ಒಪ್ಪಂದ
1988 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಪರಮಾಣು ಸೌಲಭ್ಯಗಳ ಮೇಲೆ ದಾಳಿ ಮಾಡದ ಒಪ್ಪಂದಕ್ಕೆ ಸಹಿ ಹಾಕಲಾಗಿತು. ಇದರ ಅಡಿಯಲ್ಲಿ, ಎರಡೂ ದೇಶಗಳು ಪರಸ್ಪರರ ಪರಮಾಣು ಸೌಲಭ್ಯಗಳ ಮೇಲೆ ದಾಳಿ ಮಾಡದಿರಲು ಬದ್ಧವಾಗಿವೆ.
ಪಾಕಿಸ್ತಾನದ ಕಿರಾನಾ ಬೆಟ್ಟಗಳಲ್ಲಿರುವ ಪರಮಾಣು ಸಂಗ್ರಹಣಾ ಸೌಲಭ್ಯವನ್ನು ಭಾರತ ಗುರಿಯಾಗಿಸಿಕೊಂಡಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಹೇಳಿಕೆಗಳು ಬರುತ್ತಿವೆ . ಸರ್ಗೋಧಾದಲ್ಲಿರುವ ಮುಷಾಫ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡ ವರದಿಗಳು ಬಂದಾಗ ಈ ಹೇಳಿಕೆಗಳು ಪ್ರಾರಂಭವಾದವು.
ಕಿರಾನಾ ಬೆಟ್ಟಗಳ ಪ್ರದೇಶವು ಸರ್ಗೋಧದಿಂದ ಕೇವಲ 7 ಕಿಲೋಮೀಟರ್ ದೂರದಲ್ಲಿದೆ. ಭಾರತದ ದಾಳಿಯು ಪಾಕಿಸ್ತಾನದ ಪರಮಾಣು ಸೌಲಭ್ಯಗಳಿಗೆ ಹಾನಿ ಮಾಡಿದೆ ಎಂದು ಸಹ ಹೇಳಲಾಗಿತ್ತು. ಕೆಲವು ಜನರು ವಿಕಿರಣ ಸೋರಿಕೆಯ ಬಗ್ಗೆಯೂ ಹೇಳಿಕೆಗಳನ್ನು ನೀಡಿದರು ಮತ್ತು ವಿಮಾನವು ಈಜಿಪ್ಟ್‌ನಿಂದ ಬೋರಾನ್ ಕೋಶಗಳನ್ನು ತಂದಿದೆ ಎಂದು ಹೇಳಿದರು. ಆದಾಗ್ಯೂ, ಪರಮಾಣು ಶಕ್ತಿ ಸಂಸ್ಥೆಯ ಹೇಳಿಕೆಯು ವಿಕಿರಣ ಸೋರಿಕೆಯನ್ನು ಸುಳ್ಳು ಎಂದು ಹೇಳಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:27 am, Thu, 15 May 25