ಇಬ್ರಾಹಿಂ ರೈಸಿ ನಿಧನ: ಇರಾನ್​​ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊಹಮ್ಮದ್ ಮೊಖ್ಬರ್

|

Updated on: May 20, 2024 | 11:54 AM

Mohammad Mokhber: ಇರಾನ್​ ಅಧ್ಯಕ್ಷ ಇಬ್ರಾಹಿಂ ರೈಸಿ ಹೆಲಿಕಾಪ್ಟರ್ ಪತನದಿಂದ ಸಾವನ್ನಪ್ಪಿದ್ದಾರೆ. ಇದೀಗ ಇರಾನ್​ ಅಧ್ಯಕ್ಷರಾಗಿ ಮೊಹಮ್ಮದ್ ಮೊಖ್ಬರ್ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಈ ಮೊಹಮ್ಮದ್ ಮೊಖ್ಬರ್ ಯಾರು? ಅವರಿಗೂ ಇರಾನ್​ ಅಧ್ಯಕ್ಷ ಇಬ್ರಾಹಿಂ ರೈಸಿ ಏನು ಸಂಬಂಧ, ಇವರ ಇತಿಹಾಸ ಏನು? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ

ಇಬ್ರಾಹಿಂ ರೈಸಿ ನಿಧನ: ಇರಾನ್​​ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊಹಮ್ಮದ್ ಮೊಖ್ಬರ್
Follow us on

ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಭಾನುವಾರ ಪತನಗೊಂಡಿದ್ದು, ಇಬ್ರಾಹಿಂ ರೈಸಿ (Ebrahim Raisi) ಸಜೀವದಹನವಾಗಿದ್ದಾರೆ ಎಂದು ಹೇಳಲಾಗಿದೆ. ಇನ್ನು ಈ ಹೆಲಿಕಾಪ್ಟರ್​ ಭಾನುವಾರ ಪತನಗೊಂಡಿದ್ದು, ಇದರಲ್ಲಿ ಅಧ್ಯಕ್ಷ ಇಬ್ರಾಹಿಂ ರೈಸಿ ಸೇರಿದಂತೆ ಎಲ್ಲರೂ ಮೃತಪಟ್ಟಿರುವುದಾಗಿ ಇರಾನ್‌ ಮಾಧ್ಯಮಗಳು ವರದಿ ಮಾಡಿವೆ. ಇದೀಗ ಇಬ್ರಾಹಿಂ ರೈಸಿ ಸಾವಿನ ನಂತರ ಇರಾನ್​​ನಲ್ಲಿ ಆಡಳಿತ ಚುಕ್ಕಾಣಿಯನ್ನು ಉಪಾಧ್ಯಕ್ಷ ಮೊಹಮ್ಮದ್ ಮೊಖ್ಬರ್ (Mohammad Mokhber) ಅವರು ವಹಿಸಿಕೊಂಡಿದ್ದಾರೆ. ಇರಾನ್​​ ಸಂವಿಧಾನದ ಪ್ರಕಾರ ಅಧ್ಯಕ್ಷರು ಸಾವನ್ನಪ್ಪಿದರೆ, ಅವರ ನಂತರ ಉಪಧ್ಯಾಕ್ಷರು ಅಲ್ಲಿ ಮುಂದುವರಿಯುತ್ತಾರೆ.

ನಿನ್ನೆ ರಾತ್ರಿ ಇರಾನ್-ಅಜೆರ್ಬೈಜಾನಿ ಗಡಿಯಲ್ಲಿರುವ ಕ್ವಿಜ್ ಖಲಾಸಿ ಅಣೆಕಟ್ಟಿನ ಉದ್ಘಾಟನೆಯ ನಂತರ ಇರಾನಿನ ನಗರವಾದ ತಬ್ರಿಜ್‌ಗೆ ತೆರಳುತ್ತಿದ್ದ ವೇಳೆ ಹೆಲಿಕಾಪ್ಟರ್ ಅಪಘಾತಗೊಂಡಿದೆ. ಈ ಅಪಘಾತದಲ್ಲಿ ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದುಲ್ಲಾಹಿಯಾನ್ ಕೂಡ ಸಾವನಪ್ಪಿದ್ದಾರೆ ಎಂದು ಹೇಳಲಾಗಿದೆ. ಇನ್ನು ಇಬ್ರಾಹಿಂ ರೈಸಿ ಸಾವಿನ ನಂತರ ಉಪಾಧ್ಯಕ್ಷ ಮೊಹಮ್ಮದ್ ಮೊಖ್ಬರ್ ಇರಾನ್​​ನಲ್ಲಿ ಆಡಳಿತ ನಡೆಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಉಪಾಧ್ಯಕ್ಷ ಮೊಹಮ್ಮದ್ ಮೊಖ್ಬರ್ ಅವರು ಇಬ್ರಾಹಿಂ ರೈಸಿ ಅವರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದು, ಆಡಳಿತದಲ್ಲಿ ಗಮನಾರ್ಹ ಕೆಲಸವನ್ನು ಮಾಡಿದ್ದಾರೆ. ಹಾಗೂ ರಾಜಕೀಯ ಅನುಭವನ್ನು ಹೊಂದಿದ್ದಾರೆ. ಈ ಹಿಂದೆ ಅವರು ಸರ್ಕಾರಿ ಸ್ವಾಮ್ಯದ ಸೆಟಾಡ್‌ನ ಮುಖ್ಯಸ್ಥರಾಗಿದ್ದರು. ಹಾಗೂ ಅಂತರರಾಷ್ಟ್ರೀಯ ಕಾನೂನು ಮತ್ತು ನಿರ್ವಹಣೆಯಲ್ಲಿ ಉನ್ನತ ಪದವಿಗಳನ್ನು ಪಡೆದಿದ್ದಾರೆ.

ಮೊಹಮ್ಮದ್ ಮೊಖ್ಬರ್, ಪಾರ್ಲಿಮೆಂಟರಿ ಸ್ಪೀಕರ್ ಮೊಹಮ್ಮದ್ ಬಾಕರ್ ಖಲಿಬಾಫ್ ಮತ್ತು ನ್ಯಾಯಾಂಗ ಮುಖ್ಯಸ್ಥ ಘೋಲ್ಲಾಮ್‌ಹೊಸ್ಸೇನ್ ಮೊಹ್ಸೇನಿ ಎಝೆಯ್ ಅವರನ್ನು ಒಳಗೊಂಡಿರುವ ಮಂಡಳಿಯು 50 ದಿನಗಳಲ್ಲಿ ಹೊಸ ಅಧ್ಯಕ್ಷೀಯ ಚುನಾವಣೆ ನಡೆಸಲಿದ್ದಾರೆ. ಇದಕ್ಕೂ ಮುನ್ನ ಮೊಹಮ್ಮದ್ ಮೊಖ್ಬರ್ ಅವರೇ ಈ ಸ್ಥಾನದಲ್ಲಿ ಮುಂದುವರಿಯಬಹುದು ಎಂದು ಎಲ್ಲ ನಾಯಕರ ವಿಶ್ವಾಸ ಹಾಗೂ ಬೆಂಬಲವನ್ನು ಪಡೆದರೆ ಅವರೇ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಭಾರತ ಇರಾನ್​ನೊಂದಿಗಿದೆ, ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನಕ್ಕೆ ಮೋದಿ ಸಂತಾಪ

ಮೊಹಮ್ಮದ್ ಮೊಖ್ಬರ್, ಸೆಪ್ಟೆಂಬರ್ 1, 1955 ರಂದು ಜನಿಸಿದರು. ಇರಾನ್‌ನ ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಬಗ್ಗೆ ಆಳವಾಗಿ ತಿಳಿದುಕೊಂಡಿದ್ದಾರೆ. 2021ರಲ್ಲಿ ಇರಾನ್​​ ಮೊದಲ ಉಪಾಧ್ಯಕ್ಷರಾಗಿ ನೇಮಕಗೊಂಡರು. ಇದು ಇರಾನ್​​ ಇತಿಹಾಸಲ್ಲೇ ಮೊದಲು. 1979 ರ ಇಸ್ಲಾಮಿಕ್ ಕ್ರಾಂತಿಯ ನಂತರ ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳನ್ನು ನಿರ್ವಹಿಸಲು ರಚಿಸಲಾದ ಸೆಟಾಡ್‌ನಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಇದರ ಜತೆಗೆ ಅವರ ಮೇಲೆ ಕೆಲವೊಂದು ಅರೋಪ ಹಾಗೂ ವಿವಾದಗಳು ಕೂಡ ಇತ್ತು. 2010ರಲ್ಲಿ, ಯುರೋಪಿಯನ್ ಯೂನಿಯನ್ ಅವರನ್ನು ಪರಮಾಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ನಿರ್ಬಂಧನೆಯಲ್ಲಿಟ್ಟಿತ್ತು. ಎರಡು ವರ್ಷಗಳ ನಂತರ ಈ ಪಟ್ಟಿಯಿಂದ ಅವರನ್ನು ತೆಗೆದು ಹಾಕಲಾಗಿತ್ತು.

ಇನ್ನು ಉಪಾಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರವು ಕೂಡ ಅವರ ಮೇಲೆ ಅನೇಕ ಆರೋಪಗಳು ಇತ್ತು. ಅವರು ಕೂಡ ಅಧ್ಯಕ್ಷ ಸ್ಥಾನದ ಆಕ್ಷಾಂಕೆ ಕೂಡ ಹೌದು ಎಂದು ಹೇಳಲಾಗಿದೆ. ಇದೀಗ ಆರೋಪದ ನಡುವೆ ಅವರು ಇರಾನ್​​​ ಅಧ್ಯಕ್ಷರಾಗಿ ಮುಂದುವರಿಯುವುದು ಸವಾಲಿನ ಪ್ರಶ್ನೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ