AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜರ್ಮನಿಯಲ್ಲಿ ಭಾರತೀಯ ಸಂಘಟನೆಗಳ ಹೊಸ ಒಕ್ಕೂಟ; ಎರಡು ದೇಶಗಳ ಬಾಂಧವ್ಯ ಹೆಚ್ಚಿಸಲು ಒಗ್ಗೂಡಿದ ಭಾರತೀಯರು

India Federation of Germany Launched: ಜರ್ಮನಿಯಲ್ಲಿರುವ ಭಾರತೀಯ ಸಮುದಾಯವನ್ನು ಒಂದೇ ವೇದಿಕೆಗೆ ತರುವ ಉದ್ದೇಶದಿಂದ 'ಇಂಡಿಯಾ ಫೆಡರೇಶನ್ ಆಫ್ ಜರ್ಮನಿ' (IFG) ಸಂಸ್ಥೆ ಸ್ಥಾಪನೆಯಾಗಿದೆ. ಚಿತ್ರಾ ವಿಶ್ವನಾಥ್ ನೇತೃತ್ವದಲ್ಲಿ, ಜರ್ಮನಿಯ 3 ಲಕ್ಷಕ್ಕೂ ಹೆಚ್ಚು ಭಾರತೀಯರ ಧ್ವನಿಯಾಗಿ ಈ ಒಕ್ಕೂಟ ಕಾರ್ಯನಿರ್ವಹಿಸಲಿದೆ. ಭಾರತ ಮತ್ತು ಜರ್ಮನಿ ನಡುವೆ ಸಾಂಸ್ಕೃತಿಕ, ಆರ್ಥಿಕ ಸೇತುವೆಯಾಗಿ ಕಾರ್ಯನಿರ್ವಹಿಸುವ ಮೂಲಕ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದು ಇದರ ಗುರಿ.

ಜರ್ಮನಿಯಲ್ಲಿ ಭಾರತೀಯ ಸಂಘಟನೆಗಳ ಹೊಸ ಒಕ್ಕೂಟ; ಎರಡು ದೇಶಗಳ ಬಾಂಧವ್ಯ ಹೆಚ್ಚಿಸಲು ಒಗ್ಗೂಡಿದ ಭಾರತೀಯರು
ಜರ್ಮನಿಯಲ್ಲಿರುವ ಭಾರತೀಯ ಸಮುದಾಯImage Credit source: https://www.linkedin.com/in/chitra-viswanath
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 31, 2026 | 11:17 AM

Share

ನವದೆಹಲಿ, ಮೇ 31: ಭಾರತ ಮತ್ತು ಜರ್ಮನಿ ದೇಶಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಜರ್ಮನಿಯಲ್ಲಿ ನೆಲೆಸಿರುವ ಭಾರತೀಯ ಮೂಲದ ಸಮುದಾಯ ಅತ್ಯಂತ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಜರ್ಮನಿಯ ಸ್ಟಟ್‌ಗಾರ್ಟ್‌ನಲ್ಲಿ (Stuttgart) ವಾಸಿಸುತ್ತಿರುವ ಪ್ರಮುಖ ಆವಿಷ್ಕಾರಕಿ ಹಾಗೂ ನೈತಿಕ ಎಐ (Ethical AI) ತಜ್ಞೆ ಚಿತ್ರಾ ವಿಶ್ವನಾಥ್ ಮತ್ತು ಜರ್ಮನಿಯ ಭಾರತೀಯ ಸಮುದಾಯದ ಮುಖಂಡರು ಸೇರಿ ‘ಇಂಡಿಯಾ ಫೆಡರೇಶನ್ ಆಫ್ ಜರ್ಮನಿ’ (India Federation of Germany – IFG) ಸಂಸ್ಥೆಯನ್ನು ಅಧಿಕೃತವಾಗಿ ಪ್ರಾರಂಭಿಸಿದ್ದಾರೆ.

ಜರ್ಮನಿಯಲ್ಲಿರುವ 16 ಫೆಡರಲ್ ರಾಜ್ಯಗಳ 100ಕ್ಕೂ ಹೆಚ್ಚು ಭಾರತೀಯ ಸಂಘಟನೆಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಈ ಒಕ್ಕೂಟವನ್ನು (Bundesverband der Indischen Vereinigungen e.V.) ಸ್ಥಾಪಿಸಲಾಗಿದೆ. ಪ್ರಸ್ತುತ ಜರ್ಮನಿಯಲ್ಲಿ 3 ಲಕ್ಷಕ್ಕೂ ಅಧಿಕ ಭಾರತೀಯ ಮೂಲದ ಜನರಿದ್ದು, ಅಲ್ಲಿನ ಆರ್ಥಿಕತೆಗೆ ವಾರ್ಷಿಕ ಸುಮಾರು 15 ಬಿಲಿಯನ್ ಯುರೋ (ಸುಮಾರು 1.66 ಲಕ್ಷ ಕೋಟಿ ರೂಗೂ ಹೆಚ್ಚು) ಕೊಡುಗೆ ನೀಡುತ್ತಿದ್ದಾರೆ. ಈ ಬೃಹತ್ ಸಮುದಾಯದ ಸಾಮೂಹಿಕ ಧ್ವನಿಯಾಗಿ ‘ಇಂಡಿಯಾ ಫೆಡರೇಶನ್ ಆಫ್ ಜರ್ಮನಿ’ ಕೆಲಸ ಮಾಡಲಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಜರ್ಮನಿಯ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ (Friedrich Merz) ಅವರ ನಾಯಕತ್ವದಲ್ಲಿ ಉಭಯ ದೇಶಗಳ ನಡುವೆ ಆರ್ಥಿಕ ಮತ್ತು ಕಾರ್ಯತಂತ್ರದ ಸಹಕಾರ ಆಳವಾಗುತ್ತಿರುವ ಈ ಸಂದರ್ಭದಲ್ಲಿ, ಈ ಒಕ್ಕೂಟವು ಎರಡು ದೇಶಗಳ ನಡುವೆ ಸಾಂಸ್ಕೃತಿಕ ಹಾಗೂ ಆರ್ಥಿಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ.

ಇದನ್ನೂ ಓದಿ: ಸಿಂಧೂ ನದಿ ಒಪ್ಪಂದದ ಬಿಕ್ಕಟ್ಟು: ಪಾಕಿಸ್ತಾನದ ಕರಾಚಿಯಲ್ಲಿ ತೀವ್ರ ಜಲಕ್ಷಾಮ, ರಾಜಕೀಯ ಕೆಸರೆರಚಾಟ

28 ವರ್ಷಗಳ ರೋಚಕ ಪಯಣ: ಚಿತ್ರಾ ವಿಶ್ವನಾಥ್ ಅವರ ವೈಯಕ್ತಿಕ ಯಶೋಗಾಥೆ

ಈ ಐತಿಹಾಸಿಕ ಕ್ಷಣವನ್ನು ತಮ್ಮ ಲಿಂಕ್ಡ್​ಇನ್ ತಾಣದಲ್ಲಿ ಹಂಚಿಕೊಳ್ಳುತ್ತಾ ಚಿತ್ರಾ ವಿಶ್ವನಾಥ್ ಅವರು ಜರ್ಮನಿಯ ಜೀವನದ ನೆನಪುಗಳನ್ನು ಮೆಲುಕು ಹಾಕಿದ್ದಾರೆ:

28 ವರ್ಷಗಳ ಹಿಂದೆ, ನವೆಂಬರ್ ತಿಂಗಳ ಕೊರೆಯುವ ಚಳಿಯಲ್ಲಿ ಕೇವಲ ಆತ್ಮವಿಶ್ವಾಸ ಮತ್ತು ‘ಭಾರತೀಯ ಮೌಲ್ಯಗಳನ್ನು’ ಹೊತ್ತು ಒಬ್ಬ ಸಾಮಾನ್ಯ ಯುವತಿಯಾಗಿ ತಾನು ಜರ್ಮನಿಗೆ ಕಾಲಿಟ್ಟಿದ್ದು, ಅಲ್ಲಿ ಅಂತರರಾಷ್ಟ್ರೀಯ ಮಾಸ್ಟರ್ಸ್ ಪದವಿಯ ಮೊದಲ ಬ್ಯಾಚ್‌ನಲ್ಲಿ ವಿದ್ಯಾರ್ಥಿಯಾಗಿ ತಮ್ಮ ವಿದ್ಯಾಭ್ಯಾಸ ಆರಂಭಿಸಿದ್ದನ್ನು ಚಿತ್ರಾ ಸ್ಮರಿಸಿದ್ದಾರೆ.

ಚಿತ್ರಾ ಅವರು ಜರ್ಮನಿಯ ಪ್ರಸಿದ್ಧ ‘ಬಾಷ್’ (Bosch) ಕಂಪನಿಯಲ್ಲಿ 25 ವರ್ಷಗಳ ಕಾಲ ಸುದೀರ್ಘ ಹಾಗೂ ಯಶಸ್ವಿ ವೃತ್ತಿಜೀವನವನ್ನು ಪೂರೈಸಿದ್ದಾರೆ. ತಮ್ಮ ಪತಿ ಮಂಜುನಾಥ್ ಗುಬ್ಬಿ ಅವರೊಂದಿಗೆ ಕಳೆದ 27 ವರ್ಷಗಳಿಂದ ಜರ್ಮನಿಯಲ್ಲಿ ಸುಭದ್ರ ಕುಟುಂಬವನ್ನು ಕಟ್ಟಿದ್ದಾರೆ. ತಮ್ಮ ಹೆಣ್ಣುಮಕ್ಕಳನ್ನು ಜರ್ಮನ್ ಶಿಕ್ಷಣ ವ್ಯವಸ್ಥೆಯಲ್ಲಿ ಯಶಸ್ವಿಯಾಗಿ ಬೆಳೆಸುತ್ತಲೇ, ತಮ್ಮ ಸನಾತನ ಧರ್ಮದ ಮೂಲ ಮೌಲ್ಯಗಳನ್ನು ಅವರು ಕಾಪಾಡಿಕೊಂಡು ಬಂದಿದ್ದಾರೆ.

ಚಿತ್ರಾ ವಿಶ್ವನಾಥ್ ಅವರ ಲಿಂಕ್ಡ್​ಇನ್ ಪೋಸ್ಟ್

ಇದೀಗ ತಮ್ಮ ಎರಡೂ ತಾಯ್ನಾಡುಗಳ (ಭಾರತ ಮತ್ತು ಜರ್ಮನಿ) ಸೇವೆಗಾಗಿ ಮಾರ್ಚ್ ತಿಂಗಳಿನಿಂದ ಅವರು ಈ ಹೊಸ ಸಾಮಾಜಿಕ ಜವಾಬ್ದಾರಿಗೆ ಧುಮುಕಿದ್ದಾರೆ. ಸಿದ್ಧಾರ್ಥ್ ಮುದ್ಗಲ್ ನೇತೃತ್ವದ ತಂಡದೊಂದಿಗೆ ಸೇರಿ ಜರ್ಮನಿಯಲ್ಲಿರುವ ಭಾರತೀಯ ಸಮುದಾಯವನ್ನು ಒಗ್ಗೂಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಒಂದಾ ನೀವು ಭಯೋತ್ಪಾನೆ ನಾಶ ಮಾಡಬೇಕು, ಇಲ್ಲವೇ ಸಿಂಧೂ ನೀರಿನ ಆಸೆ ಬಿಡಬೇಕು, ವಿಶ್ವಸಂಸ್ಥೆಯಲ್ಲಿ ಪಾಕ್​​​ಗೆ ಭಾರತ ಎಚ್ಚರಿಕೆ

“ಇದು ಕೇವಲ ಒಂದು ಸಂಸ್ಥೆಯಲ್ಲ, ಇದೊಂದು ಚಳುವಳಿ. ಜಾಗತಿಕ ಮಟ್ಟದಲ್ಲಿ ಭವಿಷ್ಯವು ಸಹಭಾಗಿತ್ವ ಮತ್ತು ಪರಸ್ಪರ ಸಂಪರ್ಕದ ಮೇಲೆಯೇ ನಿಂತಿದೆ. ಇದರಲ್ಲಿ ಅನಿವಾಸಿ ಭಾರತೀಯರು (Diaspora) ಅತ್ಯಂತ ಪ್ರಮುಖ ಪಾತ್ರ ವಹಿಸಲಿದ್ದಾರೆ” ಎಂದು ಹೇಳುತ್ತಾರೆ ಚಿತ್ರಾ ವಿಶ್ವನಾಥ್.

ಈ ಒಕ್ಕೂಟದ ಸ್ಥಾಪನೆಯು ಜರ್ಮನಿಯಲ್ಲಿ ಭಾರತದ ಹೆಮ್ಮೆಯನ್ನು ಮತ್ತಷ್ಟು ಎತ್ತಿಹಿಡಿಯುವುದಲ್ಲದೆ, ಮುಂದಿನ ದಿನಗಳಲ್ಲಿ ಭಾರತ-ಜರ್ಮನಿ ದ್ವಿಪಕ್ಷೀಯ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನೆರವಾಗುವ ನಿರೀಕ್ಷೆಯಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More