ಕೂಡಲೇ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಶರಣಾಗಿ: ಉಕ್ರೇನ್​ ಸೈನಿಕರಿಗೆ ಎಚ್ಚರಿಕೆ ನೀಡಿದ ರಷ್ಯಾ

| Updated By: Lakshmi Hegde

Updated on: Apr 19, 2022 | 5:36 PM

ಮರಿಯುಪೋಲ್​​ನಿಂದ ರಷ್ಯಾ ಸೈನಿಕರ ಗಮನ ಡಾನ್ಬಾಸ್​ನತ್ತ ತಿರುಗಿದೆ. ತುಂಬ ದಿನಗಳಿಂದ ಡಾನ್ಬಾಸ್​ಗೆ ಪ್ರವೇಶಿಸಲು ಅವರು ಕಾಯುತ್ತಿದ್ದರು. ಇದೀಗ ಅಲ್ಲಿ ಕಾಲಿಟ್ಟಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಕ್ಸಿ ತಿಳಿಸಿದ್ದಾರೆ.

ಕೂಡಲೇ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಶರಣಾಗಿ: ಉಕ್ರೇನ್​ ಸೈನಿಕರಿಗೆ ಎಚ್ಚರಿಕೆ ನೀಡಿದ ರಷ್ಯಾ
ಸಾಂದರ್ಭಿಕ ಚಿತ್ರ
Follow us on

ತಕ್ಷಣವೇ ಶಸ್ತ್ರಾಸ್ತ್ರ ತ್ಯಜಿಸಿ ಎಂದು ರಷ್ಯಾ, ಉಕ್ರೇನ್​ ಸೈನಿಕರಿಗೆ ಹೇಳಿದೆ. ನಿನ್ನೆಯಿಂದ ಉಕ್ರೇನ್​ನ ಬಂಡುಕೋರರ ಹಿಡಿತದಲ್ಲಿರುವ  ಡಾನ್ಬಾಸ್​ನಲ್ಲಿ ರಷ್ಯಾ ಸೇನೆಯ ಆಕ್ರಮಣ ಶುರುವಾಗಿದೆ. ಅದಾದ ಕೆಲವೇ ಹೊತ್ತಲ್ಲಿ, ಮರಿಯುಪೋಲ್​​ ರಕ್ಷಣೆಗೆ ನಿಂತಿರುವ ಉಕ್ರೇನ್​ ಸೈನಿಕರಿಗೆ ರಷ್ಯಾ ಈ ಎಚ್ಚರಿಕೆ ನೀಡಿತ್ತು. ಆದರೆ ಉಕ್ರೇನ್​ ಸೈನ್ಯ ಶಸ್ತ್ರ ತ್ಯಜಿಸುವುದಿಲ್ಲ. ಡಾನ್ಬಾಸ್ ಪ್ರದೇಶದಲ್ಲಿ ರಷ್ಯಾ ನಿನ್ನೆಯಿಂದ ಯುದ್ಧ ಶುರುಮಾಡಿದೆ. ಆದರೆ ಅದನ್ನು ವಶಪಡಿಸಿಕೊಳ್ಳಲು ನಾವು ಬಿಡುವುದಿಲ್ಲ. ರಷ್ಯಾ ಏನನ್ನೂ ಪಡೆಯಲು ಸಾಧ್ಯವಿಲ್ಲ. ಏನೇ ಮಾಡಿದರೂ ರಷ್ಯಾ ಯುದ್ಧ ಗೆಲ್ಲಲು ಆಗುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ ಸಲಹೆಗಾರ ಒಲೆಕ್ಸಿ ಅರೆಸ್ಟೋವಿಚ್ ಹೇಳಿದ್ದಾರೆ.

ಇನ್ನೊಂದೆಡೆ ರಷ್ಯಾ ತಾನು ಯುದ್ಧದಲ್ಲಿ ಗೆಲುವು ಸಾಧಿಸುತ್ತಿರುವುದಾಗಿ ಹೇಳಿಕೊಂಡಿದೆ.  ಉಕ್ರೇನ್​ ಸೈನಿಕರನ್ನು ಹಿಮ್ಮೆಟ್ಟಿಸುತ್ತಿದ್ದೇವೆ. ಡೊನೆಟ್ಸ್ಕ್ ಪ್ರದೇಶದಲ್ಲಿ ಉಕ್ರೇನ್​ನ ಮಿಗ್​ 29 ಜೆಟ್​​ನ್ನು ಹೊಡೆದುರುಳಿಸಿದ್ದೇವೆ ಎಂದು ರಷ್ಯಾ ಅಧಿಕಾರಿಗಳು ಹೇಳಿದ್ದಾಗಿ ರಾಯಿಟರ್ಸ್ ವರದಿ ಮಾಡಿದೆ. ಹಾಗೇ, ಮರಿಯುಪೋಲ್​​ನ ಅಜೋವ್ಸ್ಟಾಲ್ ಉಕ್ಕಿನ ಗಿರಣಿಯಲ್ಲಿ ತಂಗಿರುವ ಉಕ್ರೇನ್​ ಸೈನಿಕರು ಮಂಗಳವಾರ ರಾತ್ರಿಯೊಳಗೆ ಶರಣಾಗುವಂತೆ ರಷ್ಯಾದ ಕರ್ನಲ್ ಜನರಲ್​ ಮಿಖಾಯಿಲ್ ಮಿಜಿಂಟ್ಸೆವ್ ಗಡುವು ನೀಡಿದ್ದಾರೆ ಎನ್ನಲಾಗಿದೆ.

ಇನ್ನು ಮರಿಯುಪೋಲ್​​ನಿಂದ ರಷ್ಯಾ ಸೈನಿಕರ ಗಮನ ಡಾನ್ಬಾಸ್​ನತ್ತ ತಿರುಗಿದೆ. ತುಂಬ ದಿನಗಳಿಂದ ಡಾನ್ಬಾಸ್​ಗೆ ಪ್ರವೇಶಿಸಲು ಅವರು ಕಾಯುತ್ತಿದ್ದರು. ಇದೀಗ ಅಲ್ಲಿ ಕಾಲಿಟ್ಟಿದ್ದಾರೆ. ರಷ್ಯಾ ಸೈನಿಕರು ಅದೆಷ್ಟೇ ಜನರು ಬರಲಿ, ನಾವು ಹೋರಾಡುತ್ತೇವೆ ಎಂದು ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ ತಿಳಿಸಿದ್ದಾರೆ.  ಸೋಮವಾರ ಲ್ವಿವ್​ನಲ್ಲಿ ರಷ್ಯಾ ನಡೆಸಿದ ಕ್ಷಿಪಣಿ ದಾಳಿಗೆ ಸುಮಾರು 4 ಮಂದಿ ಮೃತಪಟ್ಟಿದ್ದಾರೆ. ಯುದ್ಧಪೀಡಿತ ಉಕ್ರೇನ್​ನಿಂದ ಇಲ್ಲಿಯವರೆಗೆ 4 ಮಿಲಿಯನ್​​ಗಳನ್ನು ಜನರನ್ನು ಸ್ಥಳಾಂತರ ಮಾಡಲಾಗಿದೆ. ಅಂದರೆ ಅವರಿಗೆ ಮಾನವೀಯ ಕಾರಿಡಾರ್ ರಚಿಸಿಕೊಟ್ಟು ಬೇರೆಡೆಗೆ ಹೋಗಲು ಅನುಕೂಲ ಮಾಡಿಕೊಡಲಾಗಿದೆ. ಆದರೆ ಈಗೀಗ ಯುದ್ಧ ತೀವ್ರತೆ ಹೆಚ್ಚುತ್ತಿದ್ದು, ನಾಗರಿಕರನ್ನು ಬೇರೆಡೆಗೆ ಸ್ಥಳಾಂತರ ಮಾಡುವುದೂ ತೊಡಕಾಗುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ಕಂಬದ ಮೇಲೆ ಮರ ಉರುಳಿ ರಾತ್ರಿಯಿಡೀ ವಿದ್ಯುತ್ ಪೂರೈಕೆ ಸ್ಥಗಿತಗೊಂಡಾಗ ಬೆಸ್ಕಾಂ ಹೇಳಿದ್ದು ಕೆಲಸ ನಡೀತಿದೆ!