ನವಜೋತ್​ ಸಿಂಗ್ ಸಿಧು ಬಿಟ್ಟು ಹೋದ ಜಾಗವನ್ನು ಇಮ್ರಾನ್ ಖಾನ್​ ತುಂಬಲಿ; ಪಾಕ್​ ಮಾಜಿ ಪ್ರಧಾನಿಯ ಮಾಜಿ ಪತ್ನಿಯಿಂದ ವ್ಯಂಗ್ಯ

| Updated By: Lakshmi Hegde

Updated on: Apr 14, 2022 | 2:58 PM

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್​ ನನಗೆ ಹಿರಿಯ ಸಹೋದರನಂತೆ. ನಾನು ಪಾಕಿಸ್ತಾನಕ್ಕೆ ಹೋದಾಗ ತುಂಬ ಪ್ರೀತಿಯಿಂದ ಬರಮಾಡಿಕೊಂಡರು ಎಂದು ಹೇಳಿದ್ದರು. ಅವರ ಈ ವಿಡಿಯೋ ಸಿಕ್ಕಾಪಟೆ ವಿವಾದ ಸೃಷ್ಟಿಸಿತ್ತು.

ನವಜೋತ್​ ಸಿಂಗ್ ಸಿಧು ಬಿಟ್ಟು ಹೋದ ಜಾಗವನ್ನು ಇಮ್ರಾನ್ ಖಾನ್​ ತುಂಬಲಿ; ಪಾಕ್​ ಮಾಜಿ ಪ್ರಧಾನಿಯ ಮಾಜಿ ಪತ್ನಿಯಿಂದ ವ್ಯಂಗ್ಯ
ರೇಹಮ್ ಖಾನ್​
Follow us on

ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್​ರ ಮಾಜಿ ಪತ್ನಿ ರೇಹಮ್​ ಖಾನ್ ತನ್ನ ಮಾಜಿ ಪತಿಯ ವಿರುದ್ಧ ನಿರಂತರವಾಗಿ ಟೀಕೆ ಮಾಡುತ್ತಲೇ ಇದ್ದಾರೆ. ಇದೀಗ ಮತ್ತೊಮ್ಮೆ ಇಮ್ರಾನ್​ ವಿರುದ್ಧ ವ್ಯಂಗ್ಯ ಮಾಡಿದ್ದು, ಅವರೊಬ್ಬ ಭ್ರಮೆಯ ವ್ಯಕ್ತಿ ಎಂದು ಹೇಳಿದ್ದಾರೆ. ಇಮ್ರಾನ್​ ಖಾನ್​ಗೆ ಬಾಲಿವುಡ್​ನಲ್ಲಿ (ಭಾರತದ ಹಿಂದಿ ಚಲನಚಿತ್ರ ಕ್ಷೇತ್ರ) ಒಂದು ಅವಕಾಶ ಕೊಡಬೇಕು.  ಕಪಿಲ್ ಶರ್ಮಾ ಶೋನಿಂದ ನವಜೋತ್​ ಸಿಂಗ್ ಸಿಧು (ಕಾಂಗ್ರೆಸ್ ನಾಯಕ) ಎದ್ದು ಹೋದ ಬಳಿಕ ಆ ಸ್ಥಾನವನ್ನು ಇನ್ನೂ ಸರಿಯಾಗಿ ಯಾರಿಗೂ ತುಂಬಲು ಸಾಧ್ಯವಿಲ್ಲ. ಇಮ್ರಾನ್ ಖಾನ್ ಒಬ್ಬರು ಅದ್ಭುತ ಹಾಸ್ಯ ಕಲಾವಿದ (ಕಮೆಡಿಯನ್​). ಹೀಗಾಗಿ ಈಗ ಅಧಿಕಾರ ಕಳೆದುಕೊಂಡು ಖಾಲಿ ಇರುವ ಇಮ್ರಾನ್​ರನ್ನು ಅಲ್ಲಿ ಕೂರಿಸಬಹುದು. ಅಷ್ಟೇ ಅಲ್ಲ, ಇಮ್ರಾನ್ ಖಾನ್ ಹಾಗೂ ಸಿಧು ತುಂಬ ಒಳ್ಳೆಯ ಸ್ನೇಹಿತರು ಕೂಡ ಎಂದು ವ್ಯಂಗ್ಯಮಾಡಿದ್ದಾರೆ.

ಈ ಹಿಂದೆಯೂ ರೇಹಮ್ ಖಾನ್​ ತನ್ನ ಮಾಜಿ ಪತಿಯ ವಿರುದ್ಧ ಕಿಡಿ ಕಾರಿದ್ದರು. ಇಮ್ರಾನ್ ಖಾನ್​ಗೆ ಹುಚ್ಚು ಹಿಡಿದಿದೆ. ಯಾರ ಸಲಹೆಯನ್ನೂ ಆತ ಕೇಳುವುದಿಲ್ಲ. ಹಾಗೊಮ್ಮೆ ನನ್ನ ಮಾತು ಕೇಳಿದ್ದಿದ್ದರೆ, ನಾನ್ಯಾಕೆ ಅವರನ್ನು ಬಿಟ್ಟು ಬರುತ್ತಿದ್ದೆ.  ಸದಾ ಹೊಗಳಿಕೆಯನ್ನು ಕೇಳಲು ಬಯಸುವ ವ್ಯಕ್ತಿ ಅವರು. ಮುಖಸ್ತುತಿ ಮಾಡುತ್ತಲೇ ಇರಬೇಕು. ಎಲ್ಲ ಒಳ್ಳೆಯ ಕೆಲಸಕ್ಕೂ ತನ್ನ ಹೆಸರು ಮುಂದಿರಬೇಕು, ಪ್ರತಿಯೊಬ್ಬರೂ ತನ್ನನ್ನು ಹೊಗಳುತ್ತಲೇ ಇರಬೇಕು ಎಂಬ ವ್ಯಕ್ತಿತ್ವ ಇಮ್ರಾನ್​ದು ಎಂದು ಹೇಳಿದ್ದರು.

ದೊಡ್ಡಣ್ಣನಂತೆ ಎಂದಿದ್ದ ಸಿಧು !

ಇದು ನೆನಪಿರಬಹುದು. ಪಂಜಾಬ್​ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ಪ್ರಧಾನಿ ತನ್ನ ಹಿರಿಯ ಅಣ್ಣನಂತೆ ಎಂದು ಹೇಳಿದ್ದರು.  ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್​ ನನಗೆ ಹಿರಿಯ ಸಹೋದರನಂತೆ. ನಾನು ಪಾಕಿಸ್ತಾನಕ್ಕೆ ಹೋದಾಗ ತುಂಬ ಪ್ರೀತಿಯಿಂದ ಬರಮಾಡಿಕೊಂಡರು ಎಂದು ಹೇಳಿದ್ದರು. ಅವರ ಈ ವಿಡಿಯೋ ಸಿಕ್ಕಾಪಟೆ ವಿವಾದ ಸೃಷ್ಟಿಸಿತ್ತು. ಅದಕ್ಕೂ ಮೊದಲು ಸಿಧು, ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್​ ಬಾಜ್ವಾರನ್ನು ಅಪ್ಪಿಕೊಂಡಿದ್ದರು. ಈ ಬಗ್ಗೆ ಬಿಜೆಪಿಯ ನಾಯಕರಷ್ಟೇ ಅಲ್ಲ, ಕಾಂಗ್ರೆಸ್​ನ ಕೆಲವು ಹಿರಿಯ ನಾಯಕರೂ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಹಾಗೇ, ಪಂಜಾಬ್​ನಲ್ಲಿ ಈ ಬಾರಿ ಕಾಂಗ್ರೆಸ್​ ಸೋಲಿಗೆ ಸಿಧು ಕಾರಣ..ಹಾಗೇ ಪಾಕಿಸ್ತಾನದಲ್ಲಿ ಪಿಟಿಐ ನೇತೃತ್ವದ ಸರ್ಕಾರ ಪತನಗೊಳ್ಳಲು ಇಮ್ರಾನ್ ಖಾನ್ ಕಾರಣ. ಇವರಿಬ್ಬರ ಮಧ್ಯೆ ತುಂಬ ಸಾಮ್ಯತೆಯಿದೆ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಹುಟ್ಟಿಕೊಂಡಿತ್ತು.

ಇದನ್ನೂ ಓದಿ: ‘ಧರಮ್ ಸಂಸದ್​​’ನಲ್ಲಿ ಯಾವುದೇ ಸಮುದಾಯದ ವಿರುದ್ಧ ದ್ವೇಷ ವ್ಯಕ್ತಪಡಿಸಲಾಗಿಲ್ಲ: ಸುಪ್ರೀಂಕೋರ್ಟ್​ನಲ್ಲಿ ದೆಹಲಿ ಪೊಲೀಸ್

Published On - 2:58 pm, Thu, 14 April 22