ಪಾಕ್​​​ ಸರ್ಕಾರವನ್ನು ಟೀಕಿಸಲು ಮೋದಿಯವರ ಹಳೇ ಭಾಷಣದ ವಿಡಿಯೊ ಬಳಸಿದ ಇಮ್ರಾನ್​​​ ಖಾನ್​​​ ಬೆಂಬಲಿಗರು

| Updated By: ರಶ್ಮಿ ಕಲ್ಲಕಟ್ಟ

Updated on: Jan 16, 2023 | 6:59 PM

ಇಮ್ರಾನ್ ಖಾನ್ ಅಧಿಕಾರದಲ್ಲಿದ್ದಾಗ ಮೋದಿ ಈ ಮಾತನ್ನು ಹೇಳಿದ್ದರು. ಆದರೆ ಪಾಕಿಸ್ತಾನವು ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವಾಗ ಷರೀಫ್ ನೇತೃತ್ವದ ಸರ್ಕಾರದ ಮೇಲೆ ದಾಳಿ ಮಾಡಲು ಪಿಟಿಐ ಬೆಂಬಲಿಗರು ಈ ವಿಡಿಯೊ  ಹಂಚಿಕೊಳ್ಳಲು ಪ್ರಾರಂಭಿಸಿದ್ದಾರೆ

ಪಾಕ್​​​ ಸರ್ಕಾರವನ್ನು ಟೀಕಿಸಲು ಮೋದಿಯವರ ಹಳೇ ಭಾಷಣದ ವಿಡಿಯೊ ಬಳಸಿದ ಇಮ್ರಾನ್​​​ ಖಾನ್​​​ ಬೆಂಬಲಿಗರು
ನರೇಂದ್ರ ಮೋದಿ
Follow us on

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಭಾಷಣದ ಹಳೆಯ ವಿಡಿಯೊವೊಂದು ಪಾಕಿಸ್ತಾನದಲ್ಲಿ (Pakistan) ಟ್ರೆಂಡಿಂಗ್ ಆಗಿದೆ. ಇಮ್ರಾನ್ ಖಾನ್ (Imran Khan) ಅವರ ಪಕ್ಷ, ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ನಾಯಕರು, ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಶೆಹಬಾಜ್ ಷರೀಫ್ (Shehbaz Sharif) ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರಧಾನಿ ಮೋದಿಯ ವಿಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.2019 ರ ಸಾರ್ವತ್ರಿಕ ಚುನಾವಣೆಯ ಪ್ರಚಾರದ ವೇಳೆ ರಾಜಸ್ಥಾನದ ಬಾರ್ಮರ್‌ನಲ್ಲಿ ಪ್ರಧಾನಿ ಮೋದಿ ಮಾಡಿದ ಭಾಷಣದ ವಿಡಿಯೊ ಇದು. ನಾವು ಪಾಕಿಸ್ತಾನದ ದುರಹಂಕಾರವನ್ನು ನಾಶಪಡಿಸಿದ್ದೇವೆ, ಅವರನ್ನು ಭಿಕ್ಷಾಟನೆಯ ತಟ್ಟೆಯೊಂದಿಗೆ ಜಗತ್ತಿನಾದ್ಯಂತ ಸುತ್ತುವಂತೆ ಮಾಡಿದ್ದೇವೆ ಎಂದು ಎಂದು ಪ್ರಧಾನಿ ಮೋದಿ ಹೇಳುತ್ತಿರುವುದು ವಿಡಿಯೊದಲ್ಲಿದೆ. ಮೋದಿ ಅವರು ಪಾಕಿಸ್ತಾನದ ಪರಮಾಣು ದಾಳಿಯ ಬೆದರಿಕೆಗಳನ್ನು ಉಲ್ಲೇಖಿಸಿ ಮೋದಿ, ನಾವು ಪಾಕಿಸ್ತಾನದ ಬೆದರಿಕೆಗಳಿಗೆ ಹೆದರುವುದನ್ನು ನಿಲ್ಲಿಸಿದ್ದೇವೆ. ಅವರು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೆ, ನಾವೇನೂ ಅವುಗಳನ್ನು ದೀಪಾವಳಿಗಾಗಿ ತೆಗೆದಿರಿಸಿಲ್ಲ ಎಂದು ಹೇಳುತ್ತಿರುವುದು ವಿಡಿಯೊದಲ್ಲಿದೆ. ಇಮ್ರಾನ್ ಖಾನ್ ಅಧಿಕಾರದಲ್ಲಿದ್ದಾಗ ಮೋದಿ ಈ ಮಾತನ್ನು ಹೇಳಿದ್ದರು. ಆದರೆ ಪಾಕಿಸ್ತಾನವು ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವಾಗ ಷರೀಫ್ ನೇತೃತ್ವದ ಸರ್ಕಾರದ ಮೇಲೆ ದಾಳಿ ಮಾಡಲು ಪಿಟಿಐ ಬೆಂಬಲಿಗರು ಈ ವಿಡಿಯೊ  ಹಂಚಿಕೊಳ್ಳಲು ಪ್ರಾರಂಭಿಸಿದ್ದಾರೆ. ಕಳೆದ ವರ್ಷ ಅವಿಶ್ವಾಸ ನಿರ್ಣಯದ ನಂತರ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಲಾಗಿತ್ತು.

ಈ ವಿಡಿಯೊವನ್ನು ಪಾಕಿಸ್ತಾನದ ಮಾಜಿ ಸಚಿವ ಮತ್ತು ಇಮ್ರಾನ್ ಖಾನ್ ನೇತೃತ್ವದ ಪಕ್ಷದ ಹಿರಿಯ ನಾಯಕ ಅಜಂ ಖಾನ್ ಸ್ವಾತಿ ಅವರು ಹಂಚಿಕೊಂಡಿದ್ದಾರೆ.

ವಿಡಿಯೊ ಜೊತೆಗಿನ ಟ್ವೀಟ್‌ನಲ್ಲಿ, ಪಾಕಿಸ್ತಾನ ಸರ್ಕಾರವು ನಾಚಿಕೆಪಡಬೇಕು ಮತ್ತು ಆಡಳಿತ ಬದಲಾವಣೆಗೆ ಕರೆ ನೀಡಬೇಕೆಂದು ಹೇಳಿದ್ದಾರೆ. ಕಾಮೆಂಟ್‌ಗಳ ವಿಭಾಗದಲ್ಲಿ ಹಲವರು ಪಾಕಿಸ್ತಾನದ ಸೇನೆಯನ್ನು ಕಟುವಾಗಿ ಟೀಕಿಸಿದ್ದಾರೆ, ಇದು ದೇಶವನ್ನು ಅವನತಿಗೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.

ಪಿಟಿಐ ಬೆಂಬಲಿಗರು ಕ್ಲಿಪ್ ಅನ್ನು ಹಂಚಿಕೊಂಡಿರುವ ವ್ಯಂಗ್ಯವನ್ನು ಎತ್ತಿ ತೋರಿಸಿರುವವರಲ್ಲಿ ಪತ್ರಕರ್ತೆ ನೈಲಾ ಇನಾಯತ್ “ತಮಾಷೆಯ ಸಂಗತಿಯೆಂದರೆ ಪ್ರಸ್ತುತ ಸರ್ಕಾರಕ್ಕೆ ಹೇಳಲು ಪಿಟಿಐ ಇದನ್ನು ಹಂಚಿಕೊಳ್ಳುವುದು, ಮೋದಿ ನಿಮ್ಮ ಬಗ್ಗೆ ಏನು ಹೇಳುತ್ತಿದ್ದಾರೆಂದು ನೋಡಿ. ಈ ವಿಡಿಯೊ ಇಮ್ರಾನ್ ಖಾನ್ ಸರ್ಕಾರದಲ್ಲಿದ್ದಾಗ ಏಪ್ರಿಲ್ 2019ರದ್ದಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.


ಈ ಹಿಂದೆ ಪಿಟಿಐ ನಾಯಕ ಇಮ್ರಾನ್ ಖಾನ್ ಭ್ರಷ್ಟಾಚಾರದ ಕುರಿತು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಗುರಿಯಾಗಿಸಿಕೊಂಡು ಪ್ರಧಾನಿ ಮೋದಿಯನ್ನು ಹೊಗಳಿದ್ದರು. “ಜಗತ್ತಿನಲ್ಲಿ ನವಾಜ್ ಹೊರತುಪಡಿಸಿ ಬೇರೆ ಯಾವುದೇ ನಾಯಕರಿಗೆ ಶತಕೋಟಿ ಮೌಲ್ಯದ ಆಸ್ತಿ ಇಲ್ಲ. ಒಂದು ದೇಶದ ಪ್ರಧಾನಿ ಅಥವಾ ನಾಯಕನಿಗೆ ದೇಶದ ಹೊರಗೆ ಕೋಟ್ಯಂತರ ಮೌಲ್ಯದ ಆಸ್ತಿ ಇದೆ ಎಂದು ಹೇಳಿ. ನಮ್ಮ ನೆರೆಯ ದೇಶದಲ್ಲಿಯೂ ಸಹ, ಭಾರತದ ಹೊರಗೆ ಪ್ರಧಾನಿ ಮೋದಿ ಎಷ್ಟು ಆಸ್ತಿ ಹೊಂದಿದ್ದಾರೆ?” ಎಂದು ಅವರು ಸೆಪ್ಟೆಂಬರ್‌ನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಹೇಳಿದ್ದರು.

ವಿದೇಶಿ ವಿನಿಮಯ ಮೀಸಲು ವೇಗವಾಗಿ ಖಾಲಿಯಾಗುತ್ತಿದ್ದು ಭಾರೀ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವ ಪಾಕಿಸ್ತಾನ, ಅಂತಾರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ ಮಾತುಕತೆ ನಡೆಸುತ್ತಿದೆ ಮತ್ತು ಸಹಾಯಕ್ಕಾಗಿ ಮಿತ್ರ ರಾಷ್ಟ್ರಗಳ ಬಳಿಗೆ ಹೋಗಿದೆ.

ಇದನ್ನೂ ಓದಿ:Job Loss: ಈ ವರ್ಷ ನಿರುದ್ಯೋಗಿಗಳಾಗಿರಲಿದ್ದಾರೆ 21 ಕೋಟಿ ಜನ; ವಿಶ್ವಸಂಸ್ಥೆ ವರದಿ

ಪರಮಾಣು ಶಕ್ತಿಯಾಗಿರುವ ದೇಶವೊಂದು ಭಿಕ್ಷೆ ಬೇಡುವುದು ನಾಚಿಕೆಗೇಡಿನ ಸಂಗತಿ ಎಂದು ಪಾಕ್ ಪ್ರಧಾನಿ ಷರೀಫ್ ಇತ್ತೀಚೆಗೆ ಹೇಳಿದ್ದಾರೆ. ಪಾಕಿಸ್ತಾನದ ಆರ್ಥಿಕ ಸವಾಲುಗಳನ್ನು ಎದುರಿಸಲು ವಿದೇಶಿ ಸಾಲಗಳನ್ನು ಹುಡುಕುವುದು ಸರಿಯಾದ ಪರಿಹಾರವಲ್ಲ, ಏಕೆಂದರೆ ಸಾಲಗಳನ್ನು ಹಿಂತಿರುಗಿಸಬೇಕಾಗುತ್ತದೆ ಎಂದಿದ್ದರು ಅವರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ