ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಹಿಂದೂ ದೇವಾಲಯ(Hindu Temple)ದ ಮೇಲೆ ಖಲಿಸ್ತಾನಿ ಬೆಂಬಲಿಗರು ಮತ್ತೆ ದಾಳಿ ನಡೆಸಿದ್ದಾರೆ. ದೇವಸ್ಥಾನದ ಫಲಕಕ್ಕೆ ಕಪ್ಪು ಬಣ್ಣ ಬಳಿಯಲಾಗಿದೆ, ದೇವಾಲಯವನ್ನು ಅಪವಿತ್ರಗೊಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಶೇರಾವಾಲಿ ದೇವಾಲಯವು ಕ್ಯಾಲಿಫೋರ್ನಿಯಾದ ಹೇವರ್ಡ್ ನಗರದಲ್ಲಿದೆ. ಅದೇ ಪ್ರದೇಶದಲ್ಲಿ ಸ್ವಾಮಿನಾರಾಯಣ ದೇವಸ್ಥಾನವೂ ಇದ್ದು, ಎರಡು ವಾರಗಳ ಹಿಂದೆ ಖಾಲಿಸ್ತಾನ್ ಬೆಂಬಲಿಗರು ಇದೇ ರೀತಿ ದಾಳಿ ನಡೆಸಿದ್ದರು.
ಹಿಂದೂ ಅಮೇರಿಕನ್ ಫೌಂಡೇಶನ್ (HAF) ಸಹ ಸಾಮಾಜಿಕ ಮಾಧ್ಯಮದಲ್ಲಿ ಬರಹದ ಚಿತ್ರವನ್ನು ಹಂಚಿಕೊಂಡಿದೆ. ಫೌಂಡೇಶನ್ ಘಟನೆಗೆ ಸಂಬಂಧಿಸಿದಂತೆ ಪೊಲೀಸರೊಂದಿಗೆ ಸಂಪರ್ಕದಲ್ಲಿದೆ ಖಾಲಿಸ್ತಾನ್ ಬೆಂಬಲಿಗರು ಮತ್ತು ಹಿಂದೂ ವಿರೋಧಿ ಬೆದರಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇವಾಲಯಗಳ ಭದ್ರತೆಗಾಗಿ ಕ್ಯಾಮೆರಾಗಳು ಮತ್ತು ಅಲಾರಾಂ ಸಿಸ್ಟಮ್‌ಗಳನ್ನು ಸ್ಥಾಪಿಸಲು ಮನವಿ ಮಾಡಿದ್ದಾರೆ.
ಎರಡು ವಾರಗಳ ಹಿಂದೆ, ಡಿಸೆಂಬರ್ 23 ರಂದು, ಖಲಿಸ್ತಾನ್ ಬೆಂಬಲಿಗರು ಕ್ಯಾಲಿಫೋರ್ನಿಯಾದ ನೆವಾರ್ಕ್ ನಗರದಲ್ಲಿ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದರು. ದೇವಾಲಯದ ಗೋಡೆಗಳ ಮೇಲೆ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದ್ವೇಷಪೂರಿತ ಘೋಷಣೆಗಳನ್ನು ಬರೆಯಲಾಗಿತ್ತು.
ಆ ವೇಳೆ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಉಗ್ರರು ಮತ್ತು ಪ್ರತ್ಯೇಕತಾವಾದಿಗಳಿಗೆ ಜಾಗ ನೀಡಬಾರದು ಎಂದು ಪುನರುಚ್ಚರಿಸಿದ್ದರು. ಇದಕ್ಕೂ ಮೊದಲು ಡಿಸೆಂಬರ್ 27 ರಂದು ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸರ್ರೆ ನಗರದ ಪ್ರಮುಖ ಹಿಂದೂ ಉದ್ಯಮಿಯೊಬ್ಬರ ಮನೆಯ ಮೇಲೆ ಗುಂಡುಗಳನ್ನು ಹಾರಿಸಲಾಗಿತ್ತು.
ಮತ್ತಷ್ಟು ಓದಿ: ಕೆನಡಾದಲ್ಲಿ ಹಿಂದೂ ದೇವಾಲಯದ ಅಧ್ಯಕ್ಷರ ಮನೆ ಮೇಲೆ ಖಲಿಸ್ತಾನಿ ಬೆಂಬಲಿಗರಿಂದ ಗುಂಡಿನ ದಾಳಿ
ದಾಳಿ ನಡೆದ ಮನೆ ಸರ್ರೆಯ ಲಕ್ಷ್ಮೀ ನಾರಾಯಣ ದೇವಸ್ಥಾನದ ಅಧ್ಯಕ್ಷ ಸತೀಶ್ ಕುಮಾರ್ ಅವರ ಹಿರಿಯ ಪುತ್ರನಿಗೆ ಸೇರಿದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಆದರೆ ಬುಲೆಟ್‌ನಿಂದ ಮನೆಗೆ ಹಾನಿಯಾಗಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ