ಹಿಂದೂ ದೇವಾಲಯಗಳನ್ನು ವಶ ಪಡಿಸಿಕೊಳ್ಳಲು ಮುಂದಾದ ಸರ್ಕಾರ: ಹಿಂದೂ ಜನ ಜಾಗೃತಿ ಸಮಿತಿ ಆಕ್ರೋಶ
ಖಾಸಗಿ ದೇವಾಲಯಗಳನ್ನು ಧಾರ್ಮಿಕ ದತ್ತಿ ಇಲಾಖೆ ಸುಪರ್ದಿಗೆ ತೆಗೆದುಕೊಳ್ಳಲು ಮುಜರಾಯಿ ಇಲಾಖೆ ಮುಂದಾದ ಹಿನ್ನೆಲೆ ಹಿಂದೂ ಜನ ಜಾಗೃತಿ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರದ ವಿರುದ್ಧ ಹಿಂದೂ ಜನ ಜಾಗೃತಿ ಸಮಿತಿಯಿಂದ ರಾಜ್ಯ ಮಟ್ಟದ ದೇವಾಲಯ ಅಧಿವೇಶನ ಮಾಡಲಾಗುತ್ತಿದ್ದು, ರಾಜ್ಯದ ಒಂದು ಸಾವಿರ ದೇವಾಲಯಗಳ ಅರ್ಚಕರು ಭಾಗಿಯಾಗಿದ್ದಾರೆ.
ಬೆಂಗಳೂರು, ಡಿಸೆಂಬರ್ 16: ಹಿಂದೂ ದೇವಾಲಯ (Hindu temples) ಗಳನ್ನು ರಾಜ್ಯ ಸರ್ಕಾರ ವಶ ಪಡಿಸಿಕೊಳ್ಳಲು ಮುಂದಾಗಿದೆ. ಸದ್ಯ ಈ ವಿಚಾರವಾಗಿ ಹಿಂದೂ ಜನ ಜಾಗೃತಿ ಸಮಿತಿ ರಾಜ್ಯ ಸಂಚಾಲಕ ಮೋಹನ್ ಗೌಡ ಪ್ರತಿಕ್ರಿಯಿಸಿದ್ದು, ಹಿಂದೂ ದೇಗುಲಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನಾವು ಇದನ್ನು ಸಹಿಸುವುದಿಲ್ಲ. 162 ಖಾಸಗಿ ದೇಗುಲಕ್ಕೆ ನೋಟಿಸ್ ಕೊಟ್ಟು ಮುಜರಾಯಿ ವ್ಯಾಪ್ತಿಗೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಕೆಲ ದೇಗುಲದ ಡೆಮಾಲಿಷನ್ಗೂ ಆದೇಶ ಕೊಡಲಾಗಿದೆ ಎಂದು ಹೇಳಿದ್ದಾರೆ.
ಸರ್ಕಾರಕ್ಕೆ ನಾವು ಮುಜರಾಯಿ ವ್ಯಾಪ್ತಿಯ ದೇಗುಲವನ್ನು ಸ್ವತಂತ್ರಗೊಳಿಸಲು ಒತ್ತಡ ಹೇರಲಿದ್ದೇವೆ. ಈ ಬಗ್ಗೆ ಕಾನೂನು ಮೂಲಕ ಹೋರಾಟ ಮಾಡುತ್ತೇವೆ. ರಾಜ್ಯ ಖಾಸಗಿ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡುವ ಬಗ್ಗೆ ತೀರ್ಮಾನ ಮಾಡುತ್ತೇವೆ. ಈಗಾಗಲೇ ಮಹಾರಾಷ್ಟ್ರದ 300 ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಯಾಗಿದೆ. ಇಲ್ಲೂ ಜಾರಿ ಮಾಡುತ್ತೇವೆ. ಸಾತ್ವಿಕ ಉಡುಪು ಧರಿಸಿ ಬರಬೇಕು. ಜೀನ್ಸ್, ಟೀ ಶರ್ಟ್, ಶಾರ್ಟ್ಸ್ ಧರಿಸಿ ಬರುವಂತಿಲ್ಲ ಎಂಬ ನಿಯಮ ಜಾರಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರಕ್ಕೆ ಘಂಟೆ, ಪೂಜೆ ಸಾಮಾಗ್ರಿ ಕಳಿಸಿದ ಬಗ್ಗೆ ಕಾರಣ ಬಿಚ್ಚಿಟ್ಟ ಬೆಂಗಳೂರು ಉದ್ಯಮಿ
ರಾಜ್ಯದ ಖಾಸಗಿ ದೇವಾಲಯಗಳನ್ನು ಧಾರ್ಮಿಕ ದತ್ತಿ ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳಲು ಮುಜರಾಯಿ ಇಲಾಖೆ ಮುಂದಾಗಿದೆ. ಈಗಾಗಲೇ ಸಾಕಷ್ಟು ದೇವಾಲಯಗಳಿಗೆ ಮುಜರಾಯಿ ಇಲಾಖೆಯ ಅಧಿಕಾರಿಗಳು ತೆರಳಿ ನಿಮ್ಮ ದೇವಾಲಯವನ್ನು ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ವಶಕ್ಕೆ ಪಡೆದುಕೊಳ್ಳಲಿದೆ. ನೀವು ನಿಮ್ಮ ದೇವಾಲಯವನ್ನು ಬಿಟ್ಟು ಕೊಡಬೇಕೆಂದು ಹೇಳಿದ್ದಾರಂತೆ.
ಈ ಹಿನ್ನೆಲೆಯಲ್ಲಿ ನಾಳೆ ರಾಜ್ಯದ ಎಲ್ಲಾ ಖಾಸಗಿ ದೇವಾಲಯಗಳ ಅರ್ಚಕರು ಸೇರಿ ತಮ್ಮ ಆಕ್ರೋಶ ವ್ಯಕ್ತಪಡಿಸಲಿದ್ದಾರೆ. ನಾವು ಯಾವುದೇ ಕಾರಣಕ್ಕೂ ನಮ್ಮ ದೇವಾಲಯಗಳನ್ನು ಮುಜರಾಯಿ ಇಲಾಖೆಗೆ ಬಿಟ್ಟು ಕೊಡುವುದಿಲ್ಲ. ನಮ್ಮ ದೇವಾಲಯಗಳನ್ನು ನಾವೇ ನಡೆಸಿಕೊಂಡು ಹೋಗುತ್ತೇವೆ ಎಂದು ತಮ್ಮ ವಾದ ಮಂಡಿಸಲಿದ್ದಾರೆ.
ಇದನ್ನೂ ಓದಿ: ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ ಕರ್ನಾಟಕದ ಹೊಯ್ಸಳ ದೇವಾಲಯಗಳು, ಮೋದಿ ಸಂತಸ
ಈ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಡ್ರೆಸ್ ಕೋಡ್ ಬಗ್ಗೆ ತೀರ್ಮಾನವಾಗಲಿದೆ. ರಾಜ್ಯದ ಒಂದು ಸಾವಿರ ಖಾಸಗಿ ದೇವಾಲಯಗಳಲ್ಲಿ ಹೆಣ್ಣು ಮಕ್ಕಳು, ಗಂಡು ಮಕ್ಕಳು ಶಾರ್ಟ್ಸ್, ತುಂಡು ಬಟ್ಟೆಗಳನ್ನು ಧರಿಸಿ ಬರುವಂತಿಲ್ಲ ಎಂಬ ಕಡ್ಡಾಯ ಬೋರ್ಡ್ಗಳನ್ನು ದೇವಾಲಯಗಳಲ್ಲಿ ಹಾಕುವುದು, ಹಿಂದೂ ದೇವಾಲಯಗಳನ್ನು ಹಿಂದೂಗಳಿಗೆ ಬಿಟ್ಟು ಕೊಡಬೇಕು. ಹಿಂದೂ ದೇವಸ್ಥಾನದಲ್ಲಿ ಬರುವ ಹಣವನ್ನು ಸರ್ಕಾರ ಹಿಂದೂಗಳಿಗೆ ಖರ್ಚು ಮಾಡಬೇಕೇಂಬ ನಿಯಮಗಳು ಸೇರಿದಂತೆ ಪ್ರಮುಖ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.