ಲೆಬನಾನ್​ಗೆ ಭೇಟಿ ನೀಡದಂತೆ ಭಾರತೀಯರಿಗೆ ಸಲಹೆ ನೀಡಿದ ರಾಯಭಾರ ಕಚೇರಿ

|

Updated on: Sep 26, 2024 | 2:17 PM

ಇತ್ತೀಚಿನ ವೈಮಾನಿಕ ದಾಳಿಗಳು ಮತ್ತು ಸಂವಹನ ಸಾಧನಗಳಲ್ಲಿ ಸ್ಫೋಟಗಳ ಘಟನೆಯ ನಂತರ ಮುಂದಿನ ಸೂಚನೆ ಬರುವವರೆಗೂ ಲೆಬನಾನ್‌ಗೆ ಪ್ರಯಾಣಿಸದಂತೆ ಬೈರುತ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಬುಧವಾರ ಸಲಹಾ ಸೂಚನೆ ನೀಡಿದೆ.

ಲೆಬನಾನ್​ಗೆ ಭೇಟಿ ನೀಡದಂತೆ ಭಾರತೀಯರಿಗೆ ಸಲಹೆ ನೀಡಿದ ರಾಯಭಾರ ಕಚೇರಿ
ಲೆಬನಾನ್
Follow us on

ಲೆಬನಾನ್‌ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರಾಯಭಾರ ಕಚೇರಿ ಸಲಹೆಯನ್ನು ನೀಡಿದೆ. ಇದರಲ್ಲಿ ಭಾರತೀಯ ನಾಗರಿಕರು ಎಚ್ಚರಿಕೆ ವಹಿಸುವಂತೆ ಮತ್ತು ಸಂಘರ್ಷ ಪೀಡಿತ ದೇಶಕ್ಕೆ ಪ್ರಯಾಣಿಸದಂತೆ ಸೂಚಿಸಲಾಗಿದೆ. ಮುಂದಿನ ಸೂಚನೆ ಬರುವವರೆಗೆ ಲೆಬನಾನ್‌ಗೆ ಪ್ರಯಾಣಿಸದಂತೆ ಬೈರುತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಬಲವಾಗಿ ಸಲಹೆ ನೀಡಿದೆ. ಲೆಬನಾನ್‌ನಲ್ಲಿ ಇತ್ತೀಚಿನ ವೈಮಾನಿಕ ದಾಳಿಗಳು ಮತ್ತು ಸಂವಹನ ಸಾಧನಗಳಲ್ಲಿ ಸ್ಫೋಟಗಳು ಸಂಭವಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಲೆಬನಾನ್‌ನಲ್ಲಿ ನೆಲೆಸಿರುವ ಭಾರತೀಯ ನಾಗರಿಕರು ಕೂಡಲೇ ದೇಶವನ್ನು ತೊರೆಯುವಂತೆ ಭಾರತೀಯ ರಾಯಭಾರಿ ಕಚೇರಿ ಸೂಚಿಸಿದೆ. ಅಲ್ಲಿಯೇ ಇರಬೇಕಾದವರು ತೀವ್ರ ಎಚ್ಚರಿಕೆ ವಹಿಸುವಂತೆ ಮತ್ತು ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ. ಇದರೊಂದಿಗೆ ಅಲ್ಲಿ ವಾಸಿಸುವ ನಾಗರಿಕರು ತಮ್ಮ ಚಟುವಟಿಕೆಗಳನ್ನು ಮಿತಿಗೊಳಿಸುವಂತೆ ಕೇಳಿಕೊಳ್ಳಲಾಗಿದೆ.

ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಮನವಿ ಮಾಡಲಾಗಿದೆ. ಲೆಬನಾನ್‌ನಲ್ಲಿ ಇಸ್ರೇಲ್‌ನ ಇತ್ತೀಚಿನ ಮಿಲಿಟರಿ ದಾಳಿಯಲ್ಲಿ ಕನಿಷ್ಠ 558 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದೆ. ಇಸ್ರೇಲ್ ಲೆಬನಾನ್‌ನಲ್ಲಿ ಹಿಜ್ಬುಲ್ಲಾಗಳನ್ನು ಗುರಿಯಾಗಿಸಿ ದಾಳಿ ಮಾಡುವುದನ್ನು ಮುಂದುವರೆಸಿದೆ ಎಂಬುದು ಗಮನಾರ್ಹ.

ಮತ್ತಷ್ಟು ಓದಿ:  ಲೆಬನಾನ್​ನಲ್ಲಿ 400ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಇಸ್ರೇಲ್​ನ ರಾಕೆಟ್ ದಾಳಿ ಹೇಗಿತ್ತು

ಆಸ್ಟ್ರೇಲಿಯಾವು ತನ್ನ ಪ್ರಜೆಗಳಿಗೆ ಹೇಳಿದ್ದೇನು?
ಲೆಬನಾನ್‌ನಲ್ಲಿ ಇಸ್ರೇಲ್‌ ಸೇನಾ ಕಾರ್ಯಾಚರಣೆ ನಡೆಸುವ ಆತಂಕ ಎದುರಾಗಿದೆ. ಬೈರೂತ್‌ ವಿಮಾನ ನಿಲ್ದಾಣ ಸ್ಥಗಿತಗೊಳ್ಳುವ ಸಾಧ್ಯತೆ ಇರುವುದರಿಂದ, ತಕ್ಷಣವೇ ಲೆಬನಾನ್‌ ತೊರೆಯುವಂತೆ ತನ್ನ ಪ್ರಜೆಗಳಿಗೆ ಆಸ್ಟ್ರೇಲಿಯಾ ಕರೆ ನೀಡಿದೆ.

ಕಳೆದ ವರ್ಷ ಗಾಜಾದಲ್ಲಿ ಇಸ್ರೇಲ್‌ ಮತ್ತು ಹಮಾಸ್‌ ನಡುವೆ ಯುದ್ಧ ಆರಂಭವಾದಾಗಿಂದ ಲೆಬನಾನಿನ ಹಿಜ್ಬುಲ್ಲಾ ಸಂಘಟನೆ ಮತ್ತು ಇಸ್ರೇಲ್‌ ಪಡೆ ನಡುವೆ ನಿರಂತರವಾಗಿ ಗುಂಡಿನ ಚಕಮಕಿ ನಡೆಯುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಗಡಿಯಾಚೆಗಿನ ಸಂಘರ್ಷ ತೀವ್ರಗೊಂಡಿದೆ. ಲೆಬನಾನ್‌ನಲ್ಲಿ ಸೇನಾ ಕಾರ್ಯಾಚರಣೆ ಮುಂದುವರಿಸುವ ಸಾಧ್ಯತೆಯ ಬಗ್ಗೆ ಇಸ್ರೇಲ್‌ ಸೇನಾ ಪಡೆ ಮುಖ್ಯಸ್ಥ ಹೇಳಿಕೆ ನೀಡಿದ್ದು, ಆತಂಕ ಮೂಡಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ