ಬೆಂಗಳೂರು ಜುಲೈ 19: ಸೌದಿ ಅರೇಬಿಯಾದಲ್ಲಿ (Saudi Arabia) ಜೈಲಿನಲ್ಲಿರುವ ಭಾರತೀಯ ಪ್ರಜೆಗೆ ಕಾನೂನು ಸಹಾಯದ ಕುರಿತು ಕರ್ನಾಟಕ ಹೈಕೋರ್ಟ್ (Karnataka High Court) ಕೇಂದ್ರ ಸರ್ಕಾರದಿಂದ ಉತ್ತರ ಕೇಳಿದೆ. ಜೈಲಿನಲ್ಲಿರುವ ವ್ಯಕ್ತಿಗೆ ಮೇಲ್ಮನವಿಯಲ್ಲಿ ತನ್ನ ಆಯ್ಕೆಯ ವಕೀಲರನ್ನು ನೇಮಿಸಲು ಅವಕಾಶವನ್ನು ಒದಗಿಸಲಾಗುತ್ತದೆಯೇ ಮತ್ತು ಈ ನಿಟ್ಟಿನಲ್ಲಿ ಸರ್ಕಾರವು ಅವರಿಗೆ ಸಹಾಯ ಮಾಡುತ್ತದೆಯೇ ಎಂದು ಹೈಕೋರ್ಟ್ ಸೋಮವಾರ ಕೇಂದ್ರವನ್ನು ಕೇಳಿದೆ. ಸೌದಿ ಅರೇಬಿಯಾದಲ್ಲಿನ ಸ್ಥಳೀಯ ಕಾನೂನುಗಳ ವ್ಯಾಪ್ತಿ ಮತ್ತು ಭಾರತದಿಂದ ತನಿಖಾ ವರದಿಯನ್ನು ಅಲ್ಲಿನ ನ್ಯಾಯಾಲಯಗಳಲ್ಲಿ ಸಲ್ಲಿಸಬಹುದೇ ಎಂಬ ಮಾಹಿತಿಯನ್ನು ಕೂಡಾ ಅದು ಕೇಳಿದೆ.
ಭಾರತದಲ್ಲಿ ಪೊಲೀಸ್ ತನಿಖೆ ಪೂರ್ಣಗೊಳ್ಳುವವರೆಗೆ ಸೌದಿ ಅರೇಬಿಯಾದಲ್ಲಿ ಮೇಲ್ಮನವಿಯ ವಿಚಾರಣೆಯನ್ನು ಮುಂದೂಡಲು ಭಾರತೀಯ ರಾಜತಾಂತ್ರಿಕ ವಿನಂತಿಯನ್ನು ಮಾಡಬಹುದೇ ಎಂದು ನ್ಯಾಯಾಲಯವು ಕೇಳಿದ್ದು, ಅರ್ಜಿಯ ವಿಚಾರಣೆಯನ್ನು ಆಗಸ್ಟ್ 8ಕ್ಕೆ ಮುಂದೂಡಲಾಗಿದೆ.
ಮಂಗಳೂರಿನ ಶೈಲೇಶ್ ಅವರು ಅಲ್ಲಿನ ದೊರೆ ಮತ್ತು ಇಸ್ಲಾಂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ಮಾಡಿದ್ದಾರೆ ಎಂಬ ಆರೋಪದ ಮೇಲೆ ಅವರು ಕೆಲಸ ಮಾಡುತ್ತಿದ್ದ ಸೌದಿ ಅರೇಬಿಯಾದಲ್ಲಿ ಶಿಕ್ಷೆಗೊಳಗಾಗಿ ಜೈಲಿನಲ್ಲಿದ್ದಾರೆ.
ಫೆಬ್ರವರಿ 12 ಮತ್ತು 13, 2020 ರಂದು ಮಾಡಿದ ಪೋಸ್ಟ್‌ಗಳು ಫೇಸ್‌ಬುಕ್‌ನಲ್ಲಿನ ನಕಲಿ ಪ್ರೊಫೈಲ್‌ನಿಂದ ಮಾಡಲ್ಪಟ್ಟಿದೆ. ಸೌದಿ ಅರೇಬಿಯಾದ ಅಧಿಕಾರಿಗಳಿಗೆ ಪುರಾವೆ ನೀಡಲು ಸ್ಥಳೀಯ ಪೊಲೀಸರು ವಿಫಲರಾಗಿದ್ದಾರೆ ಎಂದು ಅವರ ಪತ್ನಿ ಕವಿತಾ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ತನಿಖೆಗೆ ಸಹಕರಿಸದಿದ್ದಕ್ಕೆ ಸ್ಥಳೀಯ ಪೊಲೀಸರು ಫೇಸ್‌ಬುಕ್‌ನ್ನೂ ದೂಷಿಸಿದ್ದಾರೆ.
ಇದನ್ನೂ ಓದಿ: China: ಚೀನಾದಲ್ಲಿ ಜಿಡಿಪಿ ದರ ನಿರೀಕ್ಷೆಗಿಂತ ಕಡಿಮೆ; ನಿರುದ್ಯೋಗ ದಾಖಲೆ ಮಟ್ಟಕ್ಕೆ ಏರಿಕೆ
ಶೈಲೇಶ್ ಅವರು ಭಾರತ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಯನ್ನು ಬೆಂಬಲಿಸಿ ಪೋಸ್ಟ್ ಹಾಕಿದ್ದರು. ಬೆದರಿಕೆ ಕರೆ ಬಂದಿದ್ದು, ಖಾತೆಯನ್ನು ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ, ಸೌದಿ ರಾಜ ಮತ್ತು ಇಸ್ಲಾಂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್ ಅನ್ನು ಅಪ್ಲೋಡ್ ಮಾಡಲಾಗಿದೆ.
ಶೈಲೇಶ್ ಅವರನ್ನು ಸೌದಿ ಅರೇಬಿಯಾದಲ್ಲಿ ಬಂಧಿಸಲಾಗಿತ್ತು, ವಿಚಾರಣೆ ನಡೆಸಿ 15 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ತನ್ನ ಹೆಸರಿನಲ್ಲಿ ಪೋಸ್ಟ್ ಅನ್ನು ಅಪ್‌ಲೋಡ್ ಮಾಡಲು ನಕಲಿ ಫೇಸ್‌ಬುಕ್ ಖಾತೆಯನ್ನು ಬಳಸಲಾಗಿದೆ ಎಂದು ಪತಿ ತನಗೆ ತಿಳಿಸಿದ್ದಾನೆ ಎಂದು ಆರೋಪಿಸಿ ಅವರ ಪತ್ನಿ ಭಾರತದಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ. ಅವರನ್ನು ಫೆಬ್ರವರಿ 23, 2020 ರಂದು ಬಂಧಿಸಿ ಜೈಲಿಗೆ ಹಾಕಲಾಗಿತ್ತು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ