ಇರಾನ್ ಹಿಂದೆ ಸರಿಯುವುದಿಲ್ಲ, ಟ್ರಂಪ್ ಪದಚ್ಯುತಿ ಖಚಿತ; ಸುಪ್ರೀಂ ನಾಯಕ ಖಮೇನಿ ಪ್ರತಿಜ್ಞೆ

ಇರಾನ್ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಇಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಪ್ರತಿಭಟನಾಕಾರರ ಮೇಲೆ ಕಠಿಣ ಕ್ರಮ ಮುಂದುವರಿಯುತ್ತದೆ ಎಂದು ಎಚ್ಚರಿಸಿದ್ದಾರೆ. ಈ ವೇಳೆ ಪ್ರೇಕ್ಷಕರಲ್ಲಿ ಒಬ್ಬರು "ಅಮೆರಿಕಕ್ಕೆ ಸಾವು!" ಎಂದು ಕೂಗಿದ್ದಾರೆ. ಖಮೇನಿ ಭಾಷಣದ ಹೈಲೈಟ್ಸ್ ಇಲ್ಲಿದೆ.

ಇರಾನ್ ಹಿಂದೆ ಸರಿಯುವುದಿಲ್ಲ, ಟ್ರಂಪ್ ಪದಚ್ಯುತಿ ಖಚಿತ; ಸುಪ್ರೀಂ ನಾಯಕ ಖಮೇನಿ ಪ್ರತಿಜ್ಞೆ
Khamenei

Updated on: Jan 09, 2026 | 7:15 PM

ಟೆಹ್ರಾನ್, ಜನವರಿ 9: ಇಂದು ಇರಾನ್​ ದೇಶವನ್ನುದ್ದೇಶಿಸಿ ಮಾತನಾಡಿದ ಇರಾನ್​​ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Khamenei), ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಎಚ್ಚರಿಕೆ ನೀಡಿದ್ದಾರೆ. ದುರಹಂಕಾರ ಮತ್ತು ಹೆಮ್ಮೆಯಿಂದ ಕುಳಿತು ಇಡೀ ಪ್ರಪಂಚದ ಮೇಲೆ ತೀರ್ಪು ನೀಡುವ ಟ್ರಂಪ್ ಬಗ್ಗೆ ಹೇಳುವುದಾದರೆ, ಸಾಮಾನ್ಯವಾಗಿ ವಿಶ್ವದ ನಿರಂಕುಶಾಧಿಕಾರಿಗಳು ಮತ್ತು ದುರಹಂಕಾರಿ ಶಕ್ತಿಗಳಾದ ಫರೋ, ನಿಮ್ರೋಡ್, ರೆಜಾ ಖಾನ್, ಮೊಹಮ್ಮದ್ ರೆಜಾ ಮತ್ತು ಅವರಂಥವರು ದುರಹಂಕಾರದ ಉತ್ತುಂಗದಲ್ಲಿದ್ದಾಗಲೇ ಅವರ ಪತನವಾಯಿತು ಎಂಬುದನ್ನು ಟ್ರಂಪ್ ತಿಳಿಯುವುದು ಒಳ್ಳೆಯದು. ಅದೇ ರೀತಿ ಟ್ರಂಪ್ ಅವರನ್ನೂ ಅಧಿಕಾರದಿಂದ ಉರುಳಿಸಲಾಗುತ್ತದೆ ಎಂದು ಹೇಳಿದ್ದಾರೆ.

“ಇಸ್ಲಾಮಿಕ್ ಗಣರಾಜ್ಯವು ಲಕ್ಷಾಂತರ ಜನರ ರಕ್ತದಿಂದ ಅಧಿಕಾರಕ್ಕೆ ಬಂದಿತು. ನಮ್ಮ ದೇಶ ಟ್ರಂಪ್ ರೀತಿಯ ವಿಧ್ವಂಸಕರ ಮುಂದೆ ಎಂದಿಗೂ ಹಿಂದೆ ಸರಿಯುವುದಿಲ್ಲ” ಎಂದು ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಹೇಳಿದ್ದಾರೆ.

ಇದನ್ನೂ ಓದಿ: ಅಮೆರಿಕ ದೊಡ್ಡ ತಪ್ಪು ಮಾಡಿದೆ, ತಕ್ಕ ಶಿಕ್ಷೆ ಅನುಭವಿಸಲಿದೆ: ಇರಾನ್ ಸುಪ್ರೀಂ ನಾಯಕ ಖಮೇನಿ

ಪ್ರತಿಭಟನಾಕಾರರು ಟ್ರಂಪ್ ಅವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಖಮೇನಿ, “ಪ್ರತಿಭಟನಾಕಾರರು ಟ್ರಂಪ್ ಅವರನ್ನು ಸಂತೋಷಪಡಿಸಲು ಬಯಸುತ್ತಾರೆ. ಟ್ರಂಪ್​ಗೆ ದೇಶವನ್ನು ಹೇಗೆ ನಡೆಸಬೇಕೆಂದು ತಿಳಿದಿದ್ದರೆ ಅವರು ತಮ್ಮದೇ ಆದ ದೇಶವನ್ನು ನಡೆಸುತ್ತಿದ್ದರು. ಬೇರೆ ದೇಶಕ್ಕೆ ನುಗ್ಗುತ್ತಿರಲಿಲ್ಲ” ಎಂದು ಹೇಳಿದ್ದಾರೆ.

ಇರಾನ್‌ನ ಕರೆನ್ಸಿ ರಿಯಾಲ್ ಯುಎಸ್ ಡಾಲರ್ ವಿರುದ್ಧ ದಾಖಲೆಯ ಕನಿಷ್ಠ ಮಟ್ಟವನ್ನು ತಲುಪಿದ ನಂತರ ಡಿಸೆಂಬರ್ 28ರಂದು ಭುಗಿಲೆದ್ದ ಪ್ರತಿಭಟನೆಗಳು ರಾಷ್ಟ್ರವ್ಯಾಪಿ ಹರಡಿವೆ ಮತ್ತು ಹಿಂಸಾತ್ಮಕವಾಗಿವೆ. ಈ ಘಟನೆಯಿಂದ 42 ಜನರು ಸಾವನ್ನಪ್ಪಿದ್ದಾರೆ ಮತ್ತು 2,270ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ