
ಟೆಹ್ರಾನ್, ಜನವರಿ 26: ಟೆಹ್ರಾನ್‌ನಲ್ಲಿ ಕೆಲವು ವಾರಗಳಿಂದ ಸರ್ಕಾರದ ವಿರುದ್ಧ ಪ್ರತಿಭಟನೆಗಳು ಹೆಚ್ಚಾಗಿವೆ. ಇದರಿಂದ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿಭಟನಾಕಾರರ ಮೇಲೆ ಇಸ್ಲಾಮಿಕ್ ಆಡಳಿತದ ಹಿಂಸಾತ್ಮಕ ಕ್ರಮಗಳ ನಡುವೆ ಇರಾನ್ ಹಾಗೂ ಅಮೆರಿಕದ ನಡುವೆ ಯುದ್ಧ ಉಂಟಾಗುವ ಭೀತಿ ಎದುರಾಗಿದೆ. ಇದರ ಬೆನ್ನಲ್ಲೇ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Khamenei) ಟೆಹ್ರಾನ್‌ನ ಬಂಕರ್‌ನಲ್ಲಿ ಅಡಗಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಮೆರಿಕ ಇರಾನ್ ಮೇಲೆ ದಾಳಿ ನಡೆಸುವ ಅಪಾಯವಿದೆ ಎಂಬ ಸೂಚನೆ ಲಭ್ಯವಾಗುತ್ತಿದ್ದಂತೆ ಖಮೇನಿ ರಹಸ್ಯವಾದ ಸ್ಥಳಕ್ಕೆ ಶಿಫ್ಟ್ ಆಗಿದ್ದಾರೆ. ಈ ರಹಸ್ಯವಾದ ಸ್ಥಳ ಕೋಟೆಯನ್ನು ಒಳಗೊಂಡಿದ್ದು, ಸುರಂಗ ಮಾರ್ಗಗಳೂ ಇವೆ ಎನ್ನಲಾಗಿದೆ.
ದಿ ಟೈಮ್ಸ್ ಆಫ್ ಇಸ್ರೇಲ್, ಇರಾನ್ ಇಂಟರ್ನ್ಯಾಷನಲ್ ಪ್ರಕಟಿಸಿದ ವರದಿಯ ಪ್ರಕಾರ, ಟೆಹ್ರಾನ್ ಮೇಲೆ ಅಮೆರಿಕದ ದಾಳಿಯ ಅಪಾಯ ಹೆಚ್ಚಾಗಿದೆ ಎಂದು ಇರಾನ್ ಹಿರಿಯ ಅಧಿಕಾರಿಗಳು ನಿರ್ಣಯಿಸಿದ ನಂತರ ಖಮೇನಿ ಭೂಗತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ ಎನ್ನಲಾಗಿದೆ. ಖಮೇನಿ ಇರುವ ಬಂಕರ್ ಇರಾನ್‌ನ ಸರ್ವೋಚ್ಚ ನಾಯಕನ ಭದ್ರತೆಗಾಗಿ ವಿನ್ಯಾಸಗೊಳಿಸಲಾದ ಸುರಂಗ ಮಾರ್ಗಗಳ ವ್ಯವಸ್ಥೆಯನ್ನು ಹೊಂದಿದೆ ಎಂದು ವರದಿಯಾಗಿದೆ. ಆದರೆ, ಇರಾನ್‌ನ ಅಧಿಕಾರಿಗಳು ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.
ಇದನ್ನೂ ಓದಿ: ಇರಾನ್ ಹಿಂದೆ ಸರಿಯುವುದಿಲ್ಲ, ಟ್ರಂಪ್ ಪದಚ್ಯುತಿ ಖಚಿತ; ಸುಪ್ರೀಂ ನಾಯಕ ಖಮೇನಿ ಪ್ರತಿಜ್ಞೆ
ಖಮೇನಿ ತಲೆಮರೆಸಿಕೊಂಡಿದ್ದರೂ ಅವರ ಮೂರನೇ ಮಗ ಮಸೌದ್ ಖಮೇನಿ ತನ್ನ ತಂದೆಯ ಕಚೇರಿಯಲ್ಲಿ ದೈನಂದಿನ ಕಾರ್ಯಾಚರಣೆಗಳನ್ನು ವಹಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಪ್ರತಿಭಟನಾಕಾರರ ಮೇಲಿನ ಹಿಂಸಾತ್ಮಕ ದಮನದ ಬಗ್ಗೆ ಇರಾನ್‌ನ ಹಿರಿಯ ನಾಯಕತ್ವದ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಬೆದರಿಕೆಗಳನ್ನು ಒಡ್ಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇರಾನ್ನಲ್ಲಿ ಯುದ್ಧದ ಭೀತಿ ಎದುರಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ