ಪ್ರಸಕ್ತ ವರ್ಷಾಂತ್ಯದಲ್ಲಿ ಚುನಾವಣೆ ಎದುರಿಸಲಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಕೊವಿಡ್-19 ನಿಯಂತ್ರಿಸುವಲ್ಲಿ ತಮ್ಮ ಸರಕಾರದಿಂದ ಆಗಿರುವ ವೈಫಲ್ಯ ಮುಳುವಾಗುವ ಲಕ್ಷಣಗಳು ನಿಚ್ಚಳವಾಗಿ ಕಾಣುತ್ತಿವೆ.
ಆಘಾತಕಾರಿ ಸಂಗತಿಯೆಂದರೆ, ಕೊರೊನಾ ವೈರಸ್ ಅಮೆರಿಕಾದಲ್ಲಿ ಹಬ್ಬಲಾರಂಭಿಸಿದ ದಿನದಿಂದ ಇಂದಿನ ಗಂಭೀರ ಸ್ಥಿತಿ ತಲುಪುವವರೆಗೂ ಟ್ರಂಪ್ ಅದನ್ನು ಕಡೆಗಾಣಿಸುತ್ತಲೇ ಇದ್ದಾರೆ. ಸೋಂಕಿನ ಪ್ರಾಥಮಿಕ ಹಂತದಿಂದಲೂ ಅದೊಂದು ಸಾಮಾನ್ಯ ನೆಗಡಿಯಂಥ ರೋಗ ಎನ್ನುತ್ತಾ ಉಡಾಫೆ ಮಾಡಿದರು. ನಿಮಗೆ ಗೊತ್ತಿರಬಹುದು, ಅವರು ತೀರ ಇತ್ತೀಚಿನವರೆಗೆ ಮಾಸ್ಕ್ ಕೂಡ ಧರಿಸುತ್ತಿರಲಿಲ್ಲ!
ಸಾವುಗಳ ಸಂಖ್ಯೆ ಜಾಸ್ತಿಯಾಗುತ್ತಾ ಹೋದಾಗಲೂ ಟ್ರಂಪ್ ನಿರ್ಲಕ್ಷ್ಯದ ಮಾತುಗಳನ್ನಾಡುವುದು ಬಿಡಲಿಲ್ಲ. ಅವರ ವಿರೋಧಿಗಳು ಅದರಲ್ಲೂ ವಿಶೇಷವಾಗಿ ಚುನಾವಣೆಯಲ್ಲಿ ಅವರ ಪ್ರತಿಸ್ಫರ್ಧಿಗಳಾಗಿರುವ ಡೆಮೊಕ್ರಾಟಿಕ್ ಪಕ್ಷದ ಜೊ ಬಿಡೆನ್ ಹಾಗೂ ಭಾರತೀಯ ಮೂಲದ ಕಮಲ ಹ್ಯಾರಿಸ್ ಮತ್ತು ಮಾಜಿ ಅದ್ಯಕ್ಷ ಬರಾಕ್ ಒಬಾಮಾ ಅವರ ಪತ್ನಿ ಮಿಷೆಲ್ ಒಬಾಮಾ ಸತತವಾಗಿ ಟೀಕಿಸುತ್ತಾ ಮುಸುಡಿಗೆ ತಿವಿದರೂ ಟ್ರಂಪ್ ತಮ್ಮ ಹುಚ್ಚು ಧೋರಣೆಯನ್ನು ಬದಲಿಸಲಿಲ್ಲ.
ಕೊನೆಗೊಮ್ಮೆ, ಕೊವಿಡ್ ಸಂಬಂಧಿತ ಸಾವಿನ ಸಂಖ್ಯೆ ಲಕ್ಷ ದಾಟದು ಅಂತ ಹೇಳಿ ದೇಶದ ನಾಗರಿಕರಲ್ಲಿ ಭರವಸೆ ಮೂಡಿಸುವ ಪ್ರಯತ್ನ ಟ್ರಂಪ್ ಮಾಡಿದರು. ಆದರೀಗ ಅದು ಅವರಿಗೆ ತಿರುಗುಬಾಣವಾಗಿ ಪರಿಣಮಿಸಿದೆ. ಇವತ್ತು ಅಂದರೆ, ಬುಧವಾರದಂದು ಅಮೆರಿಕಾದಲ್ಲಿ ಕೊವಿಡ್ಗೆ ಸಂಬಂಧಿಸಿದ ಸಾವುಗಳ ಸಂಖ್ಯೆ 1,75,000 ದಾಟಿದೆ. ನಾಳೆ ಟ್ರಂಪ್ ಸಾವಿನ ಸಂಖ್ಯೆ 2 ಲಕ್ಷ ದಾಟದು ಎಂದು ಹೇಳಿದರೂ ಆಶ್ಚರ್ಯಪಡಬೇಕಿಲ್ಲ.
ಅಂದಹಾಗೆ, ವಿಶ್ವದಲ್ಲಿ ಕೊವಿಡ್-19 ಪ್ರಕಣಗಳ ಸಂಖ್ಯೆ 22 ಕೋಟಿಗೂ ಮೀರಿದ್ದು, 7,84,876 ಜನ ಬಲಿಯಾಗಿದ್ದಾರೆ.