Melbourne: ಆಸ್ಟ್ರೇಲಿಯಾದ ಇಸ್ಕಾನ್ ದೇಗುಲದಲ್ಲಿ ಖಲಿಸ್ತಾನಿಗಳ ಉಪದ್ರವ; ಭಾರತವನ್ನು ಹೀಗಳೆಯುವ ಗೋಡೆ ಬರಹ

| Updated By: ರಶ್ಮಿ ಕಲ್ಲಕಟ್ಟ

Updated on: Jan 23, 2023 | 7:35 PM

ಕಳೆದ 15 ದಿನಗಳಲ್ಲಿ ಹಿಂದೂ ದೇಗುಲಗಳ ಮೇಲೆ ನಡೆದ 3ನೇ ದಾಳಿ ಇದಾಗಿದೆ. ಜನವರಿ 12, ಜನವರಿ 17ರಂದು ಈ ಹಿಂದೆ ಇದೇ ಮಾದರಿಯಲ್ಲಿ ದೇಗುಲಗಳ ಮೇಲೆ ಆಕ್ಷೇಪಾರ್ಹ ಬರಹಗಳನ್ನು ಬರೆಯಲಾಗಿತ್ತು. ಈ ಘಟನೆಗಳಿಂದ ಎಚ್ಚೆತ್ತಿದ್ದ ಇಸ್ಕಾನ್ ದೇಗುಲದ ಆಡಳಿತ ಮಂಡಳಿಯು ಸ್ವಯಂ ಪ್ರೇರಿತರಾಗಿ ಭದ್ರತೆಯನ್ನು ಹೆಚ್ಚಿಸಿಕೊಂಡಿತ್ತು.

Melbourne: ಆಸ್ಟ್ರೇಲಿಯಾದ ಇಸ್ಕಾನ್ ದೇಗುಲದಲ್ಲಿ ಖಲಿಸ್ತಾನಿಗಳ ಉಪದ್ರವ; ಭಾರತವನ್ನು ಹೀಗಳೆಯುವ ಗೋಡೆ ಬರಹ
ಆಸ್ಟ್ರೇಲಿಯಾ ಮೆಲ್ಬೋರ್ನ್ ನಗರದ ಇಸ್ಕಾನ್ ದೇಗುಲದ ಮೇಲೆ ಕಾಣಿಸಿಕೊಂಡ ಖಲಿಸ್ತಾನಿಗಳ ಬರಹ
Follow us on

ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ಖಲಿಸ್ತಾನಿ ಸಂಘಟನೆಗಳು (Pro Khalistan) ದಿನದಿಂದ ದಿನಕ್ಕೆ ಪ್ರಬಲವಾಗುತ್ತಿವೆ. ಹಿಂದೂ ದೇಗುಲಗಳು ಹಾಗೂ ಶ್ರದ್ಧಾತಾಣಗಳ ಮೇಲೆ ಆಕ್ಷೇಪಾರ್ಹ ಬರಹಗಳನ್ನು ಬರೆಯುವುದು, ಹಿಂದೂಗಳನ್ನು ಛೇಡಿಸುವುದು ಆಗಾಗ ವರದಿಯಾಗುತ್ತಲೇ ಇದೆ. ಇದೀಗ ಆಸ್ಟ್ರೇಲಿಯಾದ ಪ್ರಮುಖ ನಗರ ಮೆಲ್ಬೋರ್ನ್​ನಲ್ಲಿ (Melbourne) ಇಂಥದ್ದೇ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ನಗರದಲ್ಲಿರುವ ಇಸ್ಕಾನ್​ (ISKON) ಸಂಸ್ಥೆಯ ರಾಧಾಕೃಷ್ಣ ದೇಗುಲದ ಮೇಲೆ ಆಕ್ಷೇಪಾರ್ಹ ಮತ್ತು ಅವಮಾನಕಾರಿ ಬರಹಗಳನ್ನು ಬರೆಯಲಾಗಿದೆ. ಪದೇಪದೆ ನಡೆಯುತ್ತಿರುವ ಇಂಥ ಬೆಳವಣಿಗೆಗಳಿಂದ ಜನರು ಭಯಭೀತರಾಗಿದ್ದಾರೆ.

ಕಳೆದ 15 ದಿನಗಳಲ್ಲಿ ಹಿಂದೂ ದೇಗುಲಗಳ ಮೇಲೆ ನಡೆದ 3ನೇ ದಾಳಿ ಇದಾಗಿದೆ. ಜನವರಿ 12, ಜನವರಿ 17ರಂದು ಈ ಹಿಂದೆ ಇದೇ ಮಾದರಿಯಲ್ಲಿ ದೇಗುಲಗಳ ಮೇಲೆ ಆಕ್ಷೇಪಾರ್ಹ ಬರಹಗಳನ್ನು ಬರೆಯಲಾಗಿತ್ತು. ಈ ಘಟನೆಗಳಿಂದ ಎಚ್ಚೆತ್ತಿದ್ದ ಇಸ್ಕಾನ್ ದೇಗುಲದ ಆಡಳಿತ ಮಂಡಳಿಯು ಸ್ವಯಂ ಪ್ರೇರಿತರಾಗಿ ಭದ್ರತೆಯನ್ನು ಹೆಚ್ಚಿಸಿಕೊಂಡಿತ್ತು.

ಇಸ್ಕಾನ್ ದೇಗುಲಗಳು ಹಾಗೂ ಹರೇಕೃಷ್ಣ ಚಳವಳಿ ಆಸ್ಟ್ರೇಲಿಯಾದಲ್ಲಿ ಜನಪ್ರಿಯವಾಗಿದೆ. ಈ ಚಿಂತನೆಯನ್ನು ಅಲ್ಲಿ ‘ಭಕ್ತಿಯೋಗ ಪಂಥ’ ಎಂದು ಕರೆಯುತ್ತಾರೆ. ಸೋಮವಾರ ನಸುಕಿನಲ್ಲಿ ದೇಗುಲದ ಗೋಡೆಗಳ ಮೇಲೆ ‘ಖಲಿಸ್ತಾನ್ ಜಿಂದಾಬಾದ್’ ಮತ್ತು ‘ಹಿಂದೂಸ್ತಾನ್ ಮುರ್ದಾಬಾದ್’ ಘೋಷಣೆಗಳು ಕಾಣಿಸಿದವು. ತಕ್ಷಣ ದೇಗುಲ ಆಡಳಿತ ಮಂಡಳಿ ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದರು.

ಘಟನೆ ಕುರಿತು ಆಘಾತ ವ್ಯಕ್ತಪಡಿಸಿರುವ ಇಸ್ಕಾನ್​ನ ಸಂವಹನ ವಿಭಾಗದ ನಿರ್ದೇಶಕ ಭಕ್ತ ದಾಸ್, ‘ಪವಿತ್ರ ಸ್ಥಳಗಳಿಗೆ ಅಗೌರವ ತೋರಿಸುವುದು, ಅವಹೇಳನ ಮಾಡುವುದನ್ನು ಒಪ್ಪಲು ಆಗುವುದಿಲ್ಲ’ ಎಂದಿದ್ದಾರೆ. ಆಸ್ಟ್ರೇಲಿಯಾದಲ್ಲಿರುವ ಭಾರತೀಯರು ಅಲ್ಲಿನ ಪೊಲೀಸರ ನಿಷ್ಕ್ರಿಯತೆಯ ಬಗ್ಗೆಯೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಈ ಮೊದಲು ಇಂಥದ್ದೇ ಎರಡು ಘಟನೆಗಳು ನಡೆದಿದ್ದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹಿಂದೂಗಳ ವಿರುದ್ಧ ದ್ವೇಷ ಹರಡುವ ವ್ಯವಸ್ಥಿತ ಷಡ್ಯಂತ್ರ ಅವ್ಯಾಹತವಾಗಿ ನಡೆಯುತ್ತಿದೆ’ ಎಂದು ಇಸ್ಕಾನ್​ನ ಶ್ರದ್ಧಾಳು ಮತ್ತು ಮೆಲ್ಬೋರ್ನ್​ ನಿವಾಸಿ ಶಿವೇಶ್ ಪಾಂಡೆ ಹೇಳಿದ್ದಾರೆ. ಅವರ ಹೇಳಿಕೆಯನ್ನು ‘ಆಜ್​ತಕ್’ ಹಿಂದಿ ಜಾಲತಾಣ ವರದಿ ಮಾಡಿದೆ.

‘ಘಟನೆಯ ಕುರಿತು ಪೊಲೀಸರು ಈವರೆಗೆ ಪ್ರತಿಕ್ರಿಯಿಸಿಲ್ಲ. ಆದರೆ ಎಲ್ಲ ಪಕ್ಷಗಳ ರಾಜಕೀಯ ನಾಯಕರೂ ಖಂಡಿಸಿದ್ದಾರೆ. ವಿಶ್ವದಲ್ಲಿ ಮುಖ್ಯವಾಗಿ ಭಾರತದಲ್ಲಿ ಸಿಖ್ ಧರ್ಮ ಅಪಾಯದಲ್ಲಿದೆ ಎಂಬ ಅಪಪ್ರಚಾರವು ಆಸ್ಟ್ರೇಲಿಯಾದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಹಿಂದೂ ಸಮುದಾಯಕ್ಕೆ ಬೆದರಿಕೆ ಹಾಕುವ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಿವೆ. ಹಿಂದೂಗಳನ್ನು ಕೊಲ್ಲಬೇಕು ಎಂದು ಕೆಲವರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಇದರ ತೀವ್ರತೆ ಮತ್ತು ಸಣ್ಣದರಲ್ಲಿ ಚಿವುಟದರಿಂದ ಅದು ಎಷ್ಟು ದೊಡ್ಡ ಸಮಸ್ಯೆಯಾಗಬಹುದು ಎಂಬ ಬಗ್ಗೆ ಆಸ್ಟ್ರೇಲಿಯಾ ಆಡಳಿತಕ್ಕೆ ಅರಿವಿಲ್ಲ’ ಎಂದು ‘ದಿ ಆಸ್ಟ್ರೇಲಿಯಾ ಟುಡೆ’ ತನ್ನ ವರದಿಯಲ್ಲಿ ಹೇಳಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾದ ಮೆಲ್ಬೊರ್ನ್​ ನಗರದಲ್ಲಿ ಸಿಖ್ ಪ್ರತ್ಯೇಕತಾವಾದಿಗಳಿಂದ ಹಿಂದೂ ದೇಗುಲದ ಮೇಲೆ ದಾಳಿ

ಮತ್ತಷ್ಟು ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:01 am, Mon, 23 January 23