
ಮಾಸ್ಕೋ, ಮಾರ್ಚ್ 24: ರಷ್ಯಾದ ಮಾಸ್ಕೋ ನಗರದ ಕ್ರೋಕಸ್ ಸಿಟಿ ಹಾಲ್ನಲ್ಲಿ ಉಗ್ರಗಾಮಿಗಳು ಶುಕ್ರವಾರ ನಡೆಸಿದ ದಾಳಿಯಲ್ಲಿ (terror attack) 150ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದು ಭಯೋತ್ಪಾದಕರ ಕೃತ್ಯ ಎಂದು ರಷ್ಯಾ ಘೋಷಿಸಿದೆಯಾದರೂ ಯಾವ ಉಗ್ರ ಸಂಘಟನೆಯವರು ಎಂದು ಖಾತ್ರಿಯಾಗಿಲ್ಲ. ರಷ್ಯಾ ಈ ಕೃತ್ಯ ಸಂಬಂಧ 11 ಜನರನ್ನು ಬಂಧಿಸಿದ್ದು, ಇದರಲ್ಲಿ ನಾಲ್ವರು ಶಂಕಿತ ದಾಳಿಕೋರರಿದ್ದಾರೆ. ಆದರೂ ಕೂಡ ಇವರು ಯಾರೆಂದು ಇನ್ನೂ ಖಚಿತವಾಗಿಲ್ಲ. ಕೆಲ ದಾಳಿಕೋರರು ಉಕ್ರೇನ್ನತ್ತ ಹೋಗಿರುವ ಶಂಕೆ ಇದೆ. ಮಾಸ್ಕೋ ಉಗ್ರ ದಾಳಿಯಲ್ಲಿ ಉಕ್ರೇನ್ ನಂಟು ಇದೆ ಎಂಬುದು ರಷ್ಯಾದ ಅನುಮಾನ. ಇದೇ ವೇಳೆ ಇಸ್ಲಾಮಿಕ್ ಸ್ಟೇಟ್ ಸಂಘಟನೆ (ISIS-K) ತಾನೇ ಈ ದಾಳಿ ನಡೆಸಿದ್ದು ಎಂದು ಘಂಟಾಘೋಷವಾಗಿ ಹೇಳಿಕೊಳ್ಳುತ್ತಿದೆ. ದಾಳಿ ಘಟನೆಯ ವಿಡಿಯೋ ಮತ್ತು ಫೋಟೋಗಳನ್ನು ಐಸಿಸ್ ಬಿಡುಗಡೆ ಮಾಡಿದೆ. ಅಮೆರಿಕ ಕೂಡ ಐಸಿಸ್ ಈ ಕೃತ್ಯದ ಹಿಂದಿರಬಹುದು ಎಂದು ಅನುಮಾನಿಸಿದೆ.
ಇಸ್ಲಾಮಿಕ್ ಸ್ಟೇಟ್ನ ಆಫ್ಘಾನಿಸ್ತಾನ ಘಟಕವಾದ ಐಎಸ್ಐಎಸ್-ಕೆ ಈ ಕೃತ್ಯ ಎಸಗಿರುವುದಾಗಿ ಹೇಳಿಕೊಂಡಿದೆ. ಅಫ್ಘಾನಿಸ್ತಾನದಲ್ಲಿ ಇದು ತಾಲಿಬಾನ್ ವಿರುದ್ಧ ನಿರಂತರ ಹೋರಾಟದಲ್ಲಿದೆ. ಪಾಕಿಸ್ತಾನದ ತಾಲಿಬಾನ್ ಸಂಘಟನೆಯಿಂದ ಸಿಡಿದು ಹೊರಬಂದ ಬಂಡುಕೋರರೂ ಇಸ್ಲಾಮಿಕ್ ಸ್ಟೇಟ್ಗೆ ಸೇರಿದ್ದಾರೆ.
ಇದನ್ನೂ ಓದಿ: ಮಾಸ್ಕೋದಲ್ಲಿ ಭಯೋತ್ಪಾದಕ ದಾಳಿ, ಶೌಚಾಲಯದಲ್ಲಿ 28 ಶವಗಳು ಪತ್ತೆ
ಐಸಿಸ್ ಖೋರಾಸಾನ್ ಗುಂಪು ಅಥವಾ ಅಫ್ಗಾನಿಸ್ತಾನ ಐಸಿಸ್ನವರು ರಷ್ಯಾವನ್ನು ಗುರಿ ಮಾಡಿದ್ದು ಇದೇ ಮೊದಲಲ್ಲ. 2022ರಲ್ಲಿ ಅಫ್ಗಾನಿಸ್ತಾನದ ಕಾಬೂಲ್ನಲ್ಲಿರುವ ರಷ್ಯನ್ ರಾಯಭಾರ ಕಚೇರಿಯ ಮೇಲೆ ಆತ್ಮಹತ್ಯಾ ದಾಳಿ ನಡೆಸಿತ್ತು.
ರಷ್ಯಾವನ್ನು ಐಸಿಸ್ ಕಟ್ಟರ್ ಶತ್ರು ಎಂಬಂತೆ ನೋಡುತ್ತದೆ. ಮುಸ್ಲಿಮ್ ರಾಷ್ಟ್ರಗಳ ನೆಲವನ್ನು ರಷ್ಯಾ ಅತಿಕ್ರಮಿಸುತ್ತದೆ ಎಂಬುದು ಒಂದು ವಾದ. ಹಾಗೆಯೇ ಮುಸ್ಲಿಮರನ್ನು ರಷ್ಯಾ ತುಳಿಯುತ್ತದೆ ಎನ್ನುವ ಆಕ್ರೋಶವೂ ಇದೆ. ಹಿಂದೆ ಅಫ್ಘಾನಿಸ್ತಾನವನ್ನು ಆಕ್ರಮಿಸಲು ರಷ್ಯಾ ಯತ್ನಿಸಿತ್ತು. ಸಿರಿಯಾ ನಾಗರಿಕ ಯುದ್ಧದಲ್ಲಿ ಅಮೆರಿಕ, ಇರಾನ್ನಂತೆ ರಷ್ಯಾ ಕೂಡ ಐಸಿಸ್ ವಿರುದ್ಧ ಕಾರ್ಯಾಚರಣೆ ನಡೆಸಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ಗೆ ರಷ್ಯಾ ಬೆಂಬಲ ನೀಡುತ್ತಿದೆ. ಇದು ರಷ್ಯಾವನ್ನು ದೊಡ್ಡ ಶತ್ರುವಿನಂತೆ ಐಸಿಸ್ ನೋಡಲು ಕಾರಣ.
ಇದನ್ನೂ ಓದಿ: ಮಾಸ್ಕೋ ದಾಳಿ ‘ಅನಾಗರಿಕ ಭಯೋತ್ಪಾದಕ ಕೃತ್ಯ’ ಎಂದ ಪುಟಿನ್; ಮಾರ್ಚ್ 24 ರಂದು ಶೋಕಾಚರಣೆ
ರಷ್ಯಾದಲ್ಲಿ ಮುಸ್ಲಿಮರ ಜನಸಂಖ್ಯೆ 2 ಕೋಟಿಯಷ್ಟಿದೆ. ಹೆಚ್ಚಿನ ಆ ಜನಸಂಖ್ಯೆ ಚೆಚನ್ಯಾ ಸೇರಿದಂತೆ ಉತ್ತರ ಕೌಕೇಶಿಯಾ ಪ್ರದೇಶದಲ್ಲಿ ಕೇಂದ್ರಿತವಾಗಿದೆ. ಇಲ್ಲಿ ಇಸ್ಲಾಮಿಕ್ ಸ್ಟೇಟ್ಗೆ ಹೆಚ್ಚಿನ ಫೈಟರ್ ಸಿಕ್ಕಿದ್ದಾರೆ. ರಷ್ಯಾ ಜೊತೆ ಇಲ್ಲಿನ ಬಂಡುಕೋರರು ಇತ್ತೀಚಿನ ದಶಕಗಳಲ್ಲಿ ಎರಡು ಬಾರಿ ಯುದ್ಧ ನಡೆಸಿದ್ದಾರೆ. ಇಲ್ಲಿಯ ಮುಸ್ಲಿಮ್ ಧರ್ಮೀಯರ ಆಚರಣೆ ಮೇಲೆ ನಿರ್ಬಂಧ, ಅವರನ್ನು ಗುರಿ ಮಾಡಿ ಕ್ರಮ ಕೈಗೊಳ್ಳುವುದು, ಭಯೋತ್ಪಾದನೆ ಹೆಸರಿನಲ್ಲಿ ಮುಸ್ಲಿಮರ ವಿರುದ್ಧ ಕಾರ್ಯಾಚರಣೆ ನಡೆಸುವುದು ಇವೇ ಮುಂತಾದ ವಿಷಯದಲ್ಲಿ ರಷ್ಯಾ ಮೇಲೆ ಐಸಿಸ್ ಉರಿದುಬೀಳುತ್ತಿದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ