
ಟೆಲ್ ಅವೀವ್ ಅಕ್ಟೋಬರ್ 25: ನಡೆಯುತ್ತಿರುವ ಯುದ್ಧದ ಮಧ್ಯೆ, ಬಂಧಿತ ಹಮಾಸ್ ಭಯೋತ್ಪಾದಕರ (Hamas terrorists)
ವಿಚಾರಣೆಯ ವಿಡಿಯೊವನ್ನು ಇಸ್ರೇಲಿ ಭದ್ರತಾ ಪಡೆಗಳು ಸಾಮಾಜಿಕ ಮಾಧ್ಯಮದಲ್ಲಿ (social media) ಬಿಡುಗಡೆ ಮಾಡಿದ್ದು, ನಾಗರಿಕರನ್ನು ಅಪಹರಿಸಿ ಗಾಜಾಕ್ಕೆ (Gaza) ಕರೆತಂದವರಿಗೆ ಅವರಿಗೆ $ 10,000 ನಗದು ಮತ್ತು ಅಪಾರ್ಟ್ಮೆಂಟ್ ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು ಎಂದು ಈ ಉಗ್ರರು ಹೇಳಿದ್ದಾರೆ. ಅಕ್ಟೋಬರ್ 7 ರಿಂದ ಹಮಾಸ್ ಭಯೋತ್ಪಾದಕರು ಹಲವಾರು ವಿದೇಶಿ ಪ್ರಜೆಗಳು ಸೇರಿದಂತೆ 222 ನಾಗರಿಕರನ್ನು ಅಪಹರಿಸಿ ಒತ್ತೆಯಾಳಾಗಿ ಇರಿಸಿದ್ದಾರೆ.
ಇಸ್ರೇಲಿ ಪಡೆಗಳು ಇತ್ತೀಚೆಗೆ ಆರು ಹಮಾಸ್ ಭಯೋತ್ಪಾದಕರ ವಿಚಾರಣೆಯ ಹಲವಾರು ವಿಡಿಯೊ ತುಣುಕುಗಳನ್ನು ಬಿಡುಗಡೆ ಮಾಡಿದೆ. ಅವರನ್ನು ಅಕ್ಟೋಬರ್ 7 ರಂದು ವಿನಾಶ ಮತ್ತು ಸಾಮೂಹಿಕ ಹತ್ಯೆಯಲ್ಲಿ ಭಾಗವಹಿಸಿದ್ದಕ್ಕಾಗಿ ಬಂಧಿಸಲಾಯಿತು. ಮಹಿಳೆಯರು ಮತ್ತು ಮಕ್ಕಳೊಂದಿಗೆ ವೃದ್ಧರು ಸೇರಿದಂತೆ ಅನೇಕ ನಾಗರಿಕರನ್ನು ಕೊಲ್ಲಲು ಮತ್ತು ಅಪಹರಿಸಲು ಅವರಿಗೆ ಸೂಚಿಸಲಾಗಿದೆ ಎಂದು ಹಮಾಸ್ ಭಯೋತ್ಪಾದಕರು ಹೇಳುತ್ತಿರುವುದು ವಿಡಿಯೊದಲ್ಲಿದೆ. ನಮ್ಮ ಕಮಾಂಡರ್ಗಳು ಗಾಜಾದಲ್ಲಿ ಉಳಿದುಕೊಂಡಿರುವಾಗ ಜನರನ್ನು ಕೊಲ್ಲಲು ಮತ್ತು ಅಪಹರಿಸಲು ನಮ್ಮನ್ನು ಕಳುಹಿಸಲಾಗಿದೆ ಎಂದು ಅವರಲ್ಲೊಬ್ಬ ಹೇಳಿದ್ದಾನೆ.
“ಯಾರು ನಾಗರಿಕನನ್ನು ಅಪಹರಿಸಿ ಅವರನ್ನು ಗಾಜಾಕ್ಕೆ ಮರಳಿ ಕರೆತರುತ್ತಾರೋ ಅವರಿಗೆ $10,000 ಮತ್ತು ಅಪಾರ್ಟ್ಮೆಂಟ್ ಬಹುಮಾನವಾಗಿ ಸಿಗುತ್ತದೆ” ಎಂದು ಮತ್ತೊಬ್ಬ ಭಯೋತ್ಪಾದಕ ಬಹಿರಂಗಪಡಿಸಿದ್ದಾನೆ. “ನಾವು ದಾಳಿ ಮಾಡಿದ ಪಟ್ಟಣಗಳ ಮೇಲೆ ಹಿಡಿತ ಸಾಧಿಸಲು ಯೋಜಿಸಿದ್ದೇವೆ. ನಿವಾಸಿಗಳನ್ನು ಕೊಂದು ಅಪಹರಣ ಮಾಡಿದ ನಂತರ ಪಟ್ಟಣದ ಪ್ರಮುಖ ಜಂಕ್ಷನ್ಗಳಲ್ಲಿ ಸ್ಥಾನಗಳನ್ನು ಪಡೆದುಕೊಳ್ಳಲು ನಮಗೆ ತಿಳಿಸಲಾಯಿತು, ”ಎಂದು ಅವರು ಹೇಳಿದರು.
ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಲು ತಮ್ಮ ಕಮಾಂಡರ್ಗಳಿಂದ ಸ್ಪಷ್ಟ ಸೂಚನೆಗಳನ್ನು ಹೊಂದಿದ್ದರು ಎಂದು ಇನ್ನೊಬ್ಬ ಭಯೋತ್ಪಾದಕ ಬಹಿರಂಗಪಡಿಸಿದ್ದಾನೆ. “ಒಬ್ಬ ಮಹಿಳೆಯ ದೇಹ ನೆಲದ ಮೇಲೆ ಬಿದ್ದಿತ್ತು. ನಾನು ಅವಳನ್ನು ಗುಂಡು ಹಾರಿಸಿದೆ ಆದರೆ ನನ್ನ ಕಮಾಂಡರ್ ಗುಂಡುಗಳನ್ನು ವ್ಯರ್ಥ ಮಾಡಿದ್ದಕ್ಕಾಗಿ ನನ್ನ ಮೇಲೆ ಕೂಗಾಡಿದ. ಇಸ್ರೇಲಿ ನಾಗರಿಕರು ಮತ್ತು ಸೈನಿಕರ ನಡುವೆ ವ್ಯತ್ಯಾಸ ಮಾಡಬೇಡಿ ಎಂದು ನಮಗೆ ತಿಳಿಸಲಾಯಿತು. ನಿವಾಸಿಗಳನ್ನು ಕೊಂದ ನಂತರ ನಾವು ಕನಿಷ್ಠ ಎರಡು ಮನೆಗಳನ್ನು ಸುಟ್ಟು ಹಾಕಿದ್ದೇವೆ” ಎಂದು ಉಗ್ರ ಹೇಳಿದ್ದಾನೆ.
ಇದನ್ನೂ ಓದಿ: ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಕ್ಕೆ ನಟಿಯ ಬಂಧನ
ಇಸ್ಲಾಂನಲ್ಲಿ ಮಕ್ಕಳು ಮತ್ತು ಮಹಿಳೆಯರನ್ನು ಕೊಲ್ಲಲು ಅನುಮತಿಸಲಾಗಿದೆಯೇ ಎಂದು ಕೇಳಿದಾಗ, , “ಇಲ್ಲ, ಇಸ್ಲಾಂ ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲಲು ಅನುಮತಿಸುವುದಿಲ್ಲ” ಎಂದು ಉಗ್ರ ಉತ್ತರಿಸಿದ್ದಾನೆ. ಅಕ್ಟೋಬರ್ 7 ರಂದು ನಡೆದ ಹತ್ಯಾಕಾಂಡದ ಸಂದರ್ಭದಲ್ಲಿ ತಾನು ಹಲವಾರು ಸಾಕುಪ್ರಾಣಿಗಳನ್ನು ಕೊಂದಿರುವುದಾಗಿಯೂ ಆ ಉಗ್ರ ಬಹಿರಂಗಪಡಿಸಿದ್ದಾನೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:59 pm, Wed, 25 October 23